ಚಿಕ್ಕನಾಯಕನಹಳ್ಳಿ: ಪಟ್ಟಣದ ಪುರಸಭೆಗೆ ಬರಬೇಕಾದ ಲಕ್ಷಾಂತರ ಹಣ ಮಧ್ಯವರ್ತಿಯ ಪಾಲಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ, ಕರ್ನಾಟಕ ಬ್ಯಾಂಕ್ ನಕಲು ಮುದ್ರೆ ಮಾಡಿಕೊಂಡು ಪುರಸಭೆ ವ್ಯಾಪ್ತಿಯ ಆಸ್ತಿ ತೆರಿಗೆ ಹಣ ವಂಚನೆ ಮಾಡಿದ ಹಮಿದ್ ಪಾಷ ಎಂಬ ವ್ಯಕ್ತಿಯ ವಿರುದ್ಧ ಮೋಸಕ್ಕೊಳಗಾದ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪುರಸಭೆ ವ್ಯಾಪ್ತಿಯಲ್ಲಿನ ಆಸ್ತಿ ತೆರಿಗೆಯನ್ನು ಮಧ್ಯವರ್ತಿ ಕೆಲ ಪಟ್ಟಣದ ನಿವಾಸಿಗಳಿಂದ ಸಂಗ್ರಹಿಸಿ ಕರ್ನಾಟಕ ಬ್ಯಾಂಕ್ ನಲ್ಲಿರುವ ಪುರಸಭೆ ಖಾತೆಗೆ ಜಮಾ ಮಾಡದೆ ನಕಲಿ ಬ್ಯಾಂಕ್ ಮುದ್ರೆ ಸೃಷ್ಟಿಸಿಕೊಂಡು ವಂಚನೆ ಮಾಡಿದ ಘಟನೆ ಬಗ್ಗೆ ಮೋಸ ಹೋದ ಜನರು ಗುರುವಾರ ಪುರಸಭೆಗೆ ಬಂದು ಮಧ್ಯವರ್ತಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಏನಿದು ಪ್ರಕರಣ: ಹಮಿದ್ ಪಾಷ ಎಂಬ ವ್ಯಕ್ತಿ ಪುರಸಭೆಗೆ ಕಟ್ಟಬೇಕಾದ ಕಂದಾಯವನ್ನು ನಾನೇ ಕಟ್ಟಿಕೊಡುತ್ತೇನೆ ಎಂದು ಕೆಲವರಿಂದ ಹಣ ಪಡೆದು ಕಂದಾಯ ಕಟ್ಟದೆ, ಪುರಸಭೆಯ ಚಲನ್ ಗೆ ಕರ್ನಾಟಕ ಬ್ಯಾಂಕ್ ನಕಲಿ ಮುದ್ರೆ ಹಾಕಿ ಪುರಸಭೆಯ ಖಾತೆ ಪುಸ್ತಕದಲ್ಲಿ ನಮೂದಿಸುತ್ತಿದ್ದ ಎಂಬ ಆರೋಪ ಕೇಳಿ ಬರುತ್ತಿದೆ, ಪುರಸಭೆಗೆ ಬರಬೇಕಾದ ಹಣ ಮಧ್ಯವರ್ತಿಯ ಪಾಲಾಗಿರುವುದು ದುರಂತ.
ಈ ಬಗ್ಗೆ ಪುರಸಭೆ ಮುಖ್ಯಾಧಿಕಾರಿ ಮಂಜುಳಮ್ಮ ಪ್ರತಿಕ್ರಿಯಿಸಿ ಇದರ ಬಗ್ಗೆ ನನಗೆ ಲಿಖಿತವಾಗಿ ಯಾರು ದೂರು ನೀಡಿಲ್ಲ, ವಂಚನೆಯ ಬಗ್ಗೆ ನನ್ನ ಗಮನಕ್ಕೆ ಬಂದ ಕೂಡಲೇ ಪುರಸಭೆಯಿಂದ ಯಾರು ಸಹ ಮಧ್ಯವರ್ತಿಗಳಿಗೆ ಹಣ ನೀಡದೆ ತಾವೇ ಹಣವನ್ನು ಬ್ಯಾಂಕ್ ಗೆ ಸಂದಾಯ ಮಾಡಿ ಎಂದು ಪ್ರಕಟಣೆ ನೀಡಲಾಗಿದೆ ಎಂದರು.
ಪುರಸಭೆ ಸದಸ್ಯ ಸಿ.ಡಿ.ಸುರೇಶ್ ಮಾತನಾಡಿ, ಸಾರ್ವಜನಿಕರು ತಮ್ಮ ಆಸ್ತಿ ತೆರಿಗೆ ಕಟ್ಟುವಾಗ ಪುರಸಭೆ ಅಧಿಕಾರಿಗಳು ಅಥವಾ ತಮ್ಮ ವಾರ್ಡ್ ಸದಸ್ಯರ ಸಲಹೆ ಪಡೆದುಕೊಳ್ಳಬೇಕು, ಕಂದಾಯ ಕಟ್ಟಿದಾಗ ಮೂರು ರಸೀದಿ ನೀಡಲಾಗುತ್ತದೆ, ಒಂದನ್ನು ಬ್ಯಾಂಕ್ ಗೆ ನೀಡಬೇಕು, ಮತ್ತೊಂದನ್ನು ಪುರಸಭೆಗೆ ನೀಡಿ ಒಂದನ್ನು ಕಟ್ಟಿದ ವ್ಯಕ್ತಿ ಪಡೆಯಬೇಕು, ವಂಚನೆ ಮಾಡಿದ ವ್ಯಕ್ತಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
Comments are closed.