ದಸಂಸದ ಬೇರುಗಳನ್ನು ಗಟ್ಟಿಗೊಳಿಸೋಣ: ಶ್ರೀನಿವಾಸ್

507

Get real time updates directly on you device, subscribe now.

ತುಮಕೂರು: ದಲಿತ ಸಂಘರ್ಷ ಸಮಿತಿ ಎಂಬುದು ಒಂದು ಆಲದ ಮರವಿದ್ದಂತೆ, ನೂರಾರು ಸಂಖ್ಯೆಯಲ್ಲಿರುವ ದಲಿತ ಸಂಘರ್ಷ ಸಮಿತಿಯ ಬಣಗಳು ಒಗ್ಗೂಡುವ ಮೂಲಕ ಅದರ ಬೇರುಗಳನ್ನು ಗಟ್ಟಿಗೊಳಿಸುವ ಕೆಲಸವನ್ನು ನಾವೆಲ್ಲರೂ ಮಾಡಬೇಕಾಗಿದೆ ಎಂದು ಡಿಎಸ್ಎಸ್ ರಾಜ್ಯಾಧ್ಯಕ್ಷ ಹೆಣ್ಣೂರು ಶ್ರೀನಿವಾಸ್ ತಿಳಿಸಿದ್ದಾರೆ.
ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಂಡಿದ್ದ ದಲಿತ ಸಂಘರ್ಷ ಸಮಿತಿ ತುಮಕೂರು ತಾಲೂಕು ಘಟಕದ ಪುನರಚನೆ ಸಭೆಯಲ್ಲಿ ಭಾಗವಹಿಸಿ ಮಾತನಾಡಿ, ಬಿ.ಕೃಷ್ಣಪ್ಪ ಸ್ಥಾಪಿತ ದಲಿತ ಸಂಘರ್ಷ ಸಮಿತಿ ಹರಿಯುವ ನೀರು ಇದ್ದಂತೆ, ಅದನ್ನು ತಡೆಯಲು ಯಾರಿಗೂ ಸಾಧ್ಯವಿಲ್ಲ ಎಂದರು.
ಡಿಎಸ್ಎಸ್ ಎಂಬುದು ವ್ಯಕ್ತಿ ಕೇಂದ್ರಿತ ಸಂಸ್ಥೆಯಲ್ಲ, ಇದು ಚಳವಳಿ ಕೇಂದ್ರಿತ ಸಂಸ್ಥೆ, ಇದನ್ನು ಮರೆತಿದ್ದೆ ಡಿಎಸ್ಎಸ್ ಚಳವಳಿಗೆ ಹಿನ್ನೆಡೆಯಾಗಲು ಕಾರಣ, ಈಗಾಗಲೇ ಸಂಘಟನೆಯನ್ನು ಬಲಿಷ್ಠಗೊಳಿಸುವ ನಿಟ್ಟಿನಲ್ಲಿ ರಾಜ್ಯ ಸಮಿತಿ ಜಿಲ್ಲಾ ಉಸ್ತುವಾರಿಗಳನ್ನು ನೇಮಕ ಮಾಡಿದೆ, ಆಯಾಯ ಜಿಲ್ಲೆಯಲ್ಲಿ ನಡೆಯುವ ಹೋರಾಟಗಳು, ಜಿಲ್ಲಾ ಉಸ್ತುವಾರಿ ಮತ್ತು ಜಿಲ್ಲಾ ಪದಾಧಿಕಾರಿಗಳ ನಡುವಿನ ಸಮನ್ವಯದ ಪ್ರತೀಕವಾಗಬೇಕು, ಅವರು ತೆಗೆದುಕೊಳ್ಳುವ ನಿರ್ಣಯದಂತೆಯೇ ಕಾರ್ಯಕ್ರಮ ಜರುಗಬೇಕು, ತಮ್ಮ ಮಿತಿ ಮೀರಿ ಬರುವ ಯಾವುದೇ ಅಭಿಪ್ರಾಯಗಳಿಗೆ ಮನ್ನಣೆ ನೀಡಬಾರದೆಂದರು.
ತುಮಕೂರು ಜಿಲ್ಲೆಯಲ್ಲಿ ಕೊಟ್ಟ ಶಂಕರ್, ಕೇಬಲ್ ರಘು, ಗಾಂಧಿರಾಜ್, ಮರಳೂರು ಕೃಷ್ಣಮೂರ್ತಿ, ಸಿ.ಕೆ.ತಿಪ್ಪೇಸ್ವಾಮಿ, ಲಕ್ಷ್ಮಿಕಾಂತ್ ಹಾಗೂ ಪದಾಧಿಕಾರಿಗಳೊಂದಿಗೆ ಜಿಲ್ಲೆಯಾದ್ಯಂತ ಪ್ರವಾಸ ಮಾಡಿ ಮುಂದಿನ 25ರೊಳಗೆ ಎಲ್ಲಾ ಹಂತದ ಪದಾಧಿಕಾರಿಗಳ ಪಟ್ಟಿ ಬಿಡುಗಡೆ ಮಾಡಿ ಏಪ್ರಿಲ್ 26 ರಂದು 600 ಕ್ಕೂ ಹೆಚ್ಚು ಪದಾಧಿಕಾರಿಗಳನ್ನು ಒಳಗೊಂಡ ಸಭೆ ನಡೆಸಲು ತೀರ್ಮಾನಿಸಲಾಗಿದೆ, ಈ ಸಭೆ ಇಡೀ ರಾಜ್ಯಕ್ಕೆ ಒಂದು ಸ್ಪಷ್ಟ ಸಂದೇಶ ನೀಡಲಿದೆ ಎಂದು ಹೆಣ್ಣೂರು ಶ್ರೀನಿವಾಸ್ ತಿಳಿಸಿದರು.
ಡಿಎಸ್ಎಸ್ ತುಮಕೂರು ಜಿಲ್ಲಾ ಉಸ್ತುವಾರಿ ಸೂಲಿಕುಂಟೆ ರಮೇಶ್ ಮಾತನಾಡಿ, ಸಂಘಟನೆ, ಚಳವಳಿ ಎಂದರೆ ಕೇವಲ ಡಿಸಿ, ಎಸಿ ಕಚೇರಿ, ಪೊಲೀಸ್ ಠಾಣೆಗಳ ಮುಂದೆ ಪ್ರತಿಭಟನೆಗೆ ಸಿಮೀತವಲ್ಲ, ಯಾರು ತುಳಿತಕ್ಕೆ ಒಳಗಾಗಿದ್ದಾರೆ, ಯಾರು ಶೋಷಣೆಗೆ ಒಳಗಾಗಿದ್ದಾರೆ, ಅವಕಾಶ ವಂಚಿತರಿಗೆ ನ್ಯಾಯ ದೊರಕಿಸಿಕೊಡುವುದು, ಸಮಾನ ಹಕ್ಕುಗಳನ್ನು ದೊರಕಿಸುವುದು ಇದರ ಪ್ರಮುಖ ಉದ್ದೇಶವಾಗಿದೆ, ಚಳವಳಿ ನಿಂತ ನೀರಾಗಲು ಬಿಡಬಾರದು, ವ್ಯವಸ್ಥೆಯೊಂದಿಗೆ ರಾಜಿ ಮಾಡಿಕೊಳ್ಳದೆ ಶೋಷಿತ ಸಮಾಜವನ್ನು ಮುಖ್ಯವಾಹಿನಿಗೆ ತರಲು ಬಿ.ಕೃಷ್ಣಪ್ಪ ದಸಂಸ ಕಟ್ಟಿದರು, ಇದನ್ನು ನಾವೆಲ್ಲರೂ ಅರ್ಥ ಮಾಡಿಕೊಳ್ಳಬೇಕಾಗಿದೆ ಎಂದರು.
ನಿಟ್ಟೂರು ರಂಗಸ್ವಾಮಿ, ಕೊಟ್ಟ ಶಂಕರ್, ಕೇಬಲ್ ರಘು, ಗಾಂಧಿರಾಜ್, ನರಸಯ್ಯ, ಹೆಗ್ಗೆರೆ ಶ್ರೀನಿವಾಸ್, ಮರಳೂರು ಕೃಷ್ಣಮೂರ್ತಿ, ಸಿ.ಕೆ.ತಿಪ್ಪೇಸ್ವಾಮಿ, ಲಕ್ಷ್ಮಿಕಾಂತ್ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!