ಕನ್ನಡ ನಾಮ ಫಲಕ ಕಡ್ಡಾಯಗೊಳಿಸಿ

23

Get real time updates directly on you device, subscribe now.


ತುಮಕೂರು: ಕರ್ನಾಟಕದಲ್ಲಿ ಕನ್ನಡ ನಾಮ ಫಲಕಗಳನ್ನು ಕಡ್ಡಾಯಗೊಳಿಸುವಂತೆ ಒತ್ತಾಯಿಸಿ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸುತ್ತಿರುವ ಕರವೇ ಕಾರ್ಯಕರ್ತರು, ಮುಖಂಡರ ಬಂಧನ ವಿರೋಧಿಸಿ ಹಾಗೂ ತುಮಕೂರು ನಗರದಲ್ಲಿರುವ ಅಂಗಡಿ ಮುಂಗಟ್ಟುಗಳ ನಾಮಫಲಕವನ್ನು ಕಡ್ಡಾಯವಾಗಿ ಕನ್ನಡದಲ್ಲಿ ಬರೆಸುವಂತೆ ಒತ್ತಾಯಿಸಿ ಕನ್ನಡಸೇನೆ ಜಿಲ್ಲಾಧ್ಯಕ್ಷ ಧನಿಯ ಕುಮಾರ್ ನೇತೃತ್ವದಲ್ಲಿ ವಿವಿಧ ಕನ್ನಡಪರ ಸಂಘಟನೆಗಳ ಮುಖಂಡರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಕನ್ನಡ ಸೇನೆ ಜಿಲ್ಲಾಧ್ಯಕ್ಷ ಧನಿಯ ಕುಮಾರ್, ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ, ಇಲ್ಲಿನ ನೆಲ, ಜಲ ಬಳಸಿಕೊಂಡು ತಮ್ಮ ಉದ್ಯಮ ಬೆಳೆಸುತ್ತಿರುವ ಬೇರೆ ರಾಜ್ಯಗಳ ಮಂದಿಗೆ ಕನ್ನಡ ಭಾಷೆ ಮಾತ್ರ ಬೇಡ ಎನ್ನುವುದು ತರವಲ್ಲ, ಕರ್ನಾಟಕ ಸರಕಾರದ ಕರ್ನಾಟಕ ಶಾಪ್ಸ್ ಅಂಡ್ ಎಸ್ಟಾಬಿಷ್ ಮೆಂಟ್ ಆಕ್ಟ್ ಕಲಂ 12 ಎ ಅಡಿಯಲ್ಲಿ ಎಲ್ಲಾ ಅಂಗಡಿ ಮುಂಗಟ್ಟುಗಳ ನಾಮಫಲಕ ಶೇ.60 ರಷ್ಟು ದಪ್ಪನಾಗಿ ಕನ್ನಡದಲ್ಲಿ, ಇತರೆ ಭಾಷೆಯಲ್ಲಿ ಶೇ.40ರಷ್ಟು ಇರಲಿ ಎಂಬ ನಿಯಮವಿದೆ, ಇದನ್ನು ಜಾರಿ ಮಾಡದ ಹಿನ್ನೆಲೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ನಾರಾಯಣ ಗೌಡರ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ನಡೆದ ಪ್ರತಿಭಟನೆಯ ವೇಳೆ ಪೊಲೀಸರು ಕನ್ನಡ ಕಾರ್ಯಕರ್ತರನ್ನು ಬಂಧಿಸಿದ್ದಾರೆ, ಸರಕಾರ ಅವರ ಮೇಲೆ ಹಾಕಿರುವ ಕೇಸನ್ನು ಕೂಡಲೇ ರದ್ದು ಮಾಡಿ ಅವರನ್ನು ಬಿಡುಗಡೆ ಮಾಡಬೇಕು ಎಂಬುದು ನಮ್ಮ ಒತ್ತಾಯವಾಗಿದೆ ಎಂದರು.

ತುಮಕೂರು ಅತಿ ವೇಗವಾಗಿ ಬೆಳೆಯುತ್ತಿರುವ ನಗರವಾಗಿದೆ, ಇಲ್ಲಿಗೆ ಎಲ್ಲಾ ಭಾಷಿಕರು ಬಂದು ತಮ್ಮ ವ್ಯಾಪಾರ ವಹಿವಾಟು ನಡೆಸುತಿದ್ದಾರೆ, ಆದರೆ ಬಹುತೇಕರು ತಮ್ಮ ಅಂಗಡಿ ಮುಂಗಟ್ಟುಗಳ ಮುಂದೆ ಹಾಕಿರುವ ನಾಮ ಫಲಕದಲ್ಲಿ ಕನ್ನಡದ ಬಳಕೆ ಬಗ್ಗೆ ನಿರ್ಲಕ್ಷ ತೋರಿದ್ದು, ಇದು ಖಂಡನೀಯ, ಮುಂದಿನ 15ದ ಅಂದರೆ 2024ರ ಜನವರಿ 15ರೊಳಗೆ ಕನ್ನಡ ನಾಮಫಲಕ ಪ್ರದರ್ಶಿಸಿದ ಅಂಗಡಿ ಮುಂಗಟ್ಟುಗಳ ಮಾಲೀಕರು ಆಗಿರುವ ನೂನ್ಯತೆ ಸರಿಪಡಿಸಿಕೊಳ್ಳದಿದ್ದರೆ ಬೆಂಗಳೂರಿನ ರೀತಿ ತುಮಕೂರು ನಗರದಲ್ಲಿಯೂ ಕನ್ನಡ ಸಂಘಟನೆಗಳು ಬೀದಿಗಳಿದು ಕಾರ್ಯಾಚರಣೆ ನಡೆಸಲಿವೆ ಎಂದು ಧನಿಯಕುಮಾರ್ ತಿಳಿಸಿದರು.
ಮನವಿ ಸ್ವೀಕರಿಸಿದ ಎಡಿಸಿ ಶಿವಾನಂದ ಬಿ.ಕರಾಳೆ ಅವರು ಪಾಲಿಕೆಯ ಮೂಲಕ ನಗರದಲ್ಲಿರುವ ಎಲ್ಲಾ ಅಂಗಡಿ ಮುಂಗಟ್ಟುಗಳ ಮಾಲೀಕರು ಕರ್ನಾಟಕ ಶಾಪ್ಸ್ ಅಂಡ್ ಎಸ್ಟಾಬಿಷ್ ಮೆಂಟ್ ಕಾಯ್ದೆ 1963 ಕಲಂ 2ಎ ಅನ್ವಯ ತಮ್ಮ ಅಂಗಡಿ ಮುಂಗಟ್ಟುಗಳ ನಾಮ ಫಲಕಗಳನ್ನು ಪರಿಷ್ಕರಿಸಿಕೊಳ್ಳಲು ಸೂಚನೆ ನೀಡುವುದಾಗಿ ಭರವಸೆ ನೀಡಿದರು.

ಈ ವೇಳೆ ಕನ್ನಡ ಸಂಘಟನೆಗಳ ಮುಖಂಡರಾದ ಕನ್ನಡ ಪ್ರಕಾಶ್, ಹಿರಿಯ ಕ್ರೀಡಾಪಟು ಟಿ.ಕೆ.ಆನಂದ್, ಪಿ.ಎನ್.ರಾಮಯ್ಯ, ರಕ್ಷಿತ್ ಕರಿಮಣ್ಣೆ, ಶಬ್ಬೀರ ಅಹಮದ್, ರಾಮಚಂದ್ರ ರಾವ್, ಮಹಿಳಾ ಘಟಕದ ಸುಕನ್ಯ ಮತ್ತಿತ್ತರರು ಪಾಲ್ಗೊಂಡಿದ್ದರು.

Get real time updates directly on you device, subscribe now.

Comments are closed.

error: Content is protected !!