ಹಣದ ಅರ್ಹತೆ ಭ್ರಷ್ಟಚಾರಕ್ಕೆ ದಾರಿ: ಸಂತೋಷ್ ಹೆಗ್ಡೆ

ವಿದ್ಯಾರ್ಥಿಗಳು ಭ್ರಷ್ಟ ಮುಕ್ತ ಸಮಾಜ ನಿರ್ಮಾಣಕ್ಕೆ ಮುಂದಾಗಲಿ

42

Get real time updates directly on you device, subscribe now.


ತುಮಕೂರು: ಸಾಮಾಜಿಕ ಮೌಲ್ಯಗಳ ಕುಸಿತದ ಪರಿಣಾಮದಿಂದಾಗಿ ಲಂಚಕೋರತನ, ಭ್ರಷ್ಟಾಚಾರ ಹೆಚ್ಚಾಗಿದೆ, ಅರ್ಹತೆ ಇಲ್ಲದೆ ಮೇಲೆ ಬಂದ ಶ್ರೀಮಂತರ, ಅಧಿಕಾರ ವರ್ಗದವರ ಓಲೈಕೆಯಾಗುತ್ತಿದೆ, ಭವಿಷ್ಯ ಭಾರತದ ಪ್ರಜೆಗಳಾದ ವಿದ್ಯಾರ್ಥಿಗಳಿಂದ ಮಾತ್ರ ಭ್ರಷ್ಟಮುಕ್ತ ಸಮಾಜ ನಿರ್ಮಿಸಲು ಸಾಧ್ಯ ಎಂದು ಭಾರತ ಸರ್ವೋಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶ ಎನ್.ಸಂತೋಷ ಹೆಗ್ಡೆ ಹೇಳಿದರು.
ತುಮಕೂರು ವಿಶ್ವ ವಿದ್ಯಾಲಯದ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಘಟಕ, ವಿದ್ಯಾರ್ಥಿ ಕ್ಷೇಮಪಾಲನ ಘಟಕ ಮತ್ತು ಯೋಜನೆ, ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ ಮಂಡಳಿಗಳ ವತಿಯಿಂದ ಗುರುವಾರ ಆಯೋಜಿಸಿದ್ದ ಪ್ರಥಮ ಮತ್ತು ದ್ವಿತೀಯ ವರ್ಷದ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಪ್ರೇರಣಾ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
1950ರಲ್ಲಿ ನಡೆದ ಜೀಪ್ ಖರೀದಿಯ 50 ಲಕ್ಷ ಹಗರಣ, 1987ರಲ್ಲಿ ನಡೆದ 64 ಕೋಟಿಯ ಬೋಪೋರ್ಸ್ ಹಗರಣ, 2010ರಲ್ಲಿ ಆದ 70000 ಕೋಟಿಯ ಕಾಮನ್ ವೆಲ್ತ್ ಗೇಮ್ಸ್ ಹಗರಣ, 2004 ರಿಂದ 2009ರ ವರೆಗೂ ನಡೆದು 2012ರಲ್ಲಿ ಬೆಳಕಿಗೆ ಬಂದ 1 ಲಕ್ಷ 86 ಸಾವಿರ ಕೋಟಿಯ ಕೋಲ್ ಗೇಟ್ ಹಗರಣ, 1 ಲಕ್ಷ76 ಸಾವಿರಕೋಟಿಯ 2ಜಿ ಸ್ಪೆಕ್ಟ್ರಮ್ ಹೀಗೆ ನಾನಾ ತರಹದ ಹಗರಣಗಳಿಂದಾದ ಪರಿಣಾಮ ಭಾರತದ ಆರ್ಥಿಕತೆ ಕುಂಟಿತವಾಗಿ ಈ ನೆಲದ ಕಾನೂನಿಗೆ ತಲೆ ಭಾಗದ, ಭಯವಿಲ್ಲದ ಭ್ರಷ್ಟರ ಸಂಖ್ಯೆ ಏರಿತು ಎಂದು ತಿಳಿಸಿದರು.

ವಿದ್ಯಾರ್ಹತೆಯಿಂದ ಶ್ರೀಮಂತರಾಗಬೇಕು, ಉನ್ನತ ಸ್ಥಾನಕ್ಕೆ ಏರಬೇಕು, ಹಣದಿಂದ ಅರ್ಹತೆ ಪಡೆದಾಗಲೇ ಭ್ರಷ್ಟರಾಗಬೇಕೆಂಬ ಹುಳುಕು ಮನಸ್ಥಿತಿ ತಲೆದೋರುತ್ತದೆ, ದುರಾಸೆಯೇ ಎಲ್ಲಕ್ಕೂ ಕಾರಣವಾಗಿದೆ, ಭ್ರಷ್ಟಾಚಾರದಿಂದ ಸಮಾಜದಲ್ಲಿ ಪ್ರಾಮಾಣಿಕತೆಯ ವಿಷಯ ಮಾತನಾಡುವವನೇ ಪಾಪಿಯಂತಾಗಿದ್ದಾನೆ, ತೃಪ್ತಿಯ ಗುಣವೇ ಇಲ್ಲದ ಅಧಿಕಾರಿಗಳು, ಆಡಳಿತ ವರ್ಗದವರು ಹೆಚ್ಚಾಗಿದ್ದಾರೆ, ಕಾನೂನಿನ ವಿರುದ್ಧ ಹೋಗುವ ಅಪರಾಧಿಗಳಿಗೆ ಕಠಿಣ ಶಿಕ್ಷೆ ನಿಗದಿಪಡಿಸಬೇಕು ಎಂದರು.

ಪ್ರಾಮಾಣಿಕ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತದ ಸ್ಥಾನ ಕಳೆದ ಕೆಲವು ವರ್ಷಗಳಿಂದ ಕುಸಿಯುತ್ತಲೇ ಇದೆ, ರಾಜ್ಯವಾರು ಚುನಾಯಿತ ಪ್ರತಿನಿಧಿಗಳ ಶೇ.29 ರಷ್ಟು ಜನರ ಮೇಲೆ ಕ್ರಿಮಿನಲ್ ಮೊಕದ್ದಮೆ ಇವೆ, ಈ ವರ್ಗದವರೇ ಉನ್ನತ ಸ್ಥಾನ ಪಡೆದು ಆರ್ಥಿಕತೆಯ ಬಲವನ್ನು ದುರ್ಬಲವನ್ನಾಗಿಸುತ್ತಿದ್ದಾರೆ, ಸಮಾಜ ಬಯಸುವುದು ಇಂತಹ ಭ್ರಷ್ಟರನ್ನೆಎಂಬಂತಾಗಿದೆ, ಸರ್ಕಾರದಿಂದ ಸಂಬಳ ಪಡೆಯುವ ಪ್ರತಿಯೊಬ್ಬನೂ ಜನತಾ ಸೇವಕನೆ ಹೊರತು ಜನತಾ ಮಾಲೀಕನಲ್ಲ ಎಂದು ಹೇಳಿದರು.
ಮಾನವೀಯತೆ ಅಳವಡಿಸಿಕೊಂಡು ಮಾನವೀಯ ಪಥದಲ್ಲಿ ನಡೆಯಬೇಕು, ಆಡಳಿತದಲ್ಲಿ ಇರುವವರು ಸಮಾಜದ ಸಮಸ್ಯೆಗಳಿಗೆ ಸ್ಪಂದಿಸಿ ಪರಿಹಾರದ ಮಾರ್ಗ ಹುಡುಕುವ ಮನಸ್ಥಿತಿ ಹೊಂದಬೇಕು, ಸಹಾಯ ಅರಸಿ ಬಂದವರಿಗೆ ಲಂಚದ ಬೇಡಿಕೆ ಇಟ್ಟು ಹಣ ಹೊಂದಿಸುವ ಸಮಸ್ಯೆ ಹುಟ್ಟು ಹಾಕಬಾರದು ಎಂದರು.

ಕರ್ನಾಟಕ ಉಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶೆ ರತ್ನಕಲಾ ಮಾತನಾಡಿ, ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ವ್ಯವಸ್ಥೆ ಸಮಾಜದ ಏಳ್ಗೆಗಾಗಿ ಶ್ರಮ ವಹಿಸಬೇಕು, ಸರ್ಕಾರಿ ಕಚೇರಿಗಳಲ್ಲಿ ಲಂಚದ ಸ್ವರೂಪ, ಬೇಡಿಕೆ ದಿನದಿಂದ ದಿನ ತೀವ್ರವಾಗುತ್ತಿದೆ, ದಾಖಲೆಗಳು ಸರಿಯಿದ್ದರೂ ಅದನ್ನು ಮುಂದಿನ ಹಂತಕ್ಕೆ ಮುಟ್ಟಿಸಲು ಲಂಚದ ಬೇಡಿಕೆ ಹೆಚ್ಚಾಗಿದೆ, ಭ್ರಷ್ಟರನ್ನು ನೇರವಾಗಿ ಧಿಕ್ಕರಿಸುವ, ತಿರಸ್ಕರಿಸುವ ವ್ಯಕ್ತಿತ್ವ ಸಮಾಜದಲ್ಲಿ ಬೆಳೆಯಬೇಕು, ರಾಷ್ಟ್ರ ಪ್ರೇಮವೊಂದಿದ್ದರೆ ಪರಿಪೂರ್ಣ ವ್ಯಕ್ತಿತ್ವ ನಿರ್ಮಾಣವಾಗಲಿದೆ ಎಂದು ಹೇಳಿದರು.

ಪಾವಗಡದ ಶ್ರೀರಾಮಕೃಷ್ಣ ಸೇವಾಶ್ರಮದ ಅಧ್ಯಕ್ಷ ಸ್ವಾಮಿ ಜಪಾನಂದಜೀ, ವಿವಿ ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು, ಹಿರಿಯ ಸಿವಿಲ್ ನ್ಯಾಯಾಧೀಶೆ ನೂರುನ್ನೀಸಾ, ತುಮಕೂರು ವಿವಿಯ ಕುಲಸಚಿವರಾದ ನಾಹಿದಾ ಜಮ್ ಜಮ್, ಪರೀಕ್ಷಾಂಗ ಕುಲಸಚಿವ ಡಾ.ಪ್ರಸನ್ನಕುಮಾರ್.ಕೆ, ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಘಟಕದ ನಿರ್ದೇಶಕ ಪ್ರೊ.ಬಸವರಾಜ.ಜಿ, ಐಕ್ಯೂಎಸಿ ಘಟಕದ ನಿರ್ದೇಶಕ ಪ್ರೊ.ರಮೇಶ್.ಬಿ, ಪಿಎಂಇಬಿ ಘಟಕದ ನಿರ್ದೇಶಕ ಪ್ರೊ.ಬಿ.ಟಿ.ಸಂಪತ್ ಕುಮಾರ್, ವಿವಿ ಉದ್ಯೋಗಾಧಿಕಾರಿ ಪ್ರೊ.ಪರಶುರಾಮ.ಕೆ.ಜಿ, ಸಹಾಯಕಪ್ರಾಧ್ಯಾಪಕಿ ಡಾ.ಗೀತಾ ವಸಂತ, ಸ್ನಾತಕೋತ್ತರ ವಿಭಾಗಗಳ ಅಧ್ಯಾಪಕರು ಹಾಗೂ ಪ್ರಥಮ ವರ್ಷದ ಸ್ನಾತಕೋತ್ತರ ವಿದ್ಯಾರ್ಥಿಗಳು ಭಾಗವಹಿಸಿದ್ದರು.

Get real time updates directly on you device, subscribe now.

Comments are closed.

error: Content is protected !!