ಕುಣಿಗಲ್: ವಿದ್ಯಾರ್ಥಿ ಜೀವನದಲ್ಲಿ ಯುವ ವಿದ್ಯಾರ್ಥಿಗಳು ಮೊಬೈಲ್ ಫೋನ್ ಗಳನ್ನು ಅಗತ್ಯಕ್ಕೆ ತಕ್ಕಂತೆ ಮಾತ್ರ ಬಳಸಬೇಕು, ಇದರ ಬಗ್ಗೆ ಹೆಚ್ಚಿನ ಗೀಳು ಹಚ್ಚಿಸಿಕೊಂಡಲ್ಲಿ ಜೀವನದಲ್ಲಿ ಸಾಕಷ್ಟು ಸಮಸ್ಯೆ ಎದುರಿಸಬೇಕಾಗುತ್ತದೆ ಎಂದು ಚಲನ ಚಿತ್ರನಟ ವಿಜಯ ರಾಘವೇಂದ್ರ ಹೇಳಿದರು.
ಪಟ್ಟಣದಲ್ಲಿ ಸರ್ವೋದಯ ಶಾಲೆ ಮತ್ತು ಪದವಿ ಪೂರ್ವ ಕಾಲೇಜು ಹಮ್ಮಿಕೊಂಡಿದ್ದ ಸರ್ವೋದಯ ಸಂಭ್ರಮ- 2023 ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, ಪೋಷಕರು ತಮ್ಮ ಮಕ್ಕಳು ಉತ್ತಮ ಶಿಕ್ಷಣ ಹೊಂದಿ ಉತ್ತಮ ಜೀವನ ನಿರ್ವಹಣೆ ಮಾಡಲೆಂದು ತಮ್ಮ ನೋವು, ಕಷ್ಟಗಳನ್ನು ಸಹಿಸಿಕೊಂಡು ಮಕ್ಕಳನ್ನು ಶಾಲೆಗೆ ಕಳಿಸುತ್ತಾರೆ, ಶಾಲೆಯಲ್ಲಿ ಶಿಕ್ಷಕರು ವಿದ್ಯಾರ್ಥಿಗಳ ಜೀವನ ಸದೃಢಗೊಳಿಸುವ ನಿಟ್ಟಿನಲ್ಲಿ ಶ್ರಮಿಸುತ್ತಾರೆ, ಆದರೆ ವಿದ್ಯಾರ್ಥಿಗಳು ಪೋಷಕರ ಕಷ್ಟ, ಶಿಕ್ಷಕರ ಶ್ರಮ ಎರಡನ್ನು ಗಮನದಲ್ಲಿ ಇಟ್ಟುಕೊಂಡು ಇವರ ನಿರೀಕ್ಷೆಗೆ ಚ್ಯುತಿ ಬಾರದ ಹಾಗೆ ಗುರಿ ಮುಟ್ಟಬೇಕಿದೆ, ಮೊಬೈಲ್ ಫೋನ್ ಬಳಕೆ ವಿದ್ಯಾರ್ಥಿ ಜೀವನಕ್ಕೆ ಪೂರಕವಾಗಿರಬೇಕು ಹೊರತು ಮಾರಕವಾಗಬಾರದು, ಯುವ ವಿದ್ಯಾರ್ಥಿಗಳು ಈಬಗ್ಗೆ ಹೆಚ್ಚು ಎಚ್ಚರ ವಹಿಸಬೇಕು, ವಿದ್ಯಾರ್ಥಿ ಜೀವನದಲ್ಲಿ ಫೋನ್ ಬಳಕೆಯಿಂದ ಮನಸು ಬೇರೆಡೆ ಹರಿದು ಪೋಷಕರ, ಶಿಕ್ಷಕರ ಶ್ರಮ ವ್ಯರ್ಥಗೊಳಿಸಬಾರದು ಎಂದರು.
ಶಾಸಕ ಡಾ.ರಂಗನಾಥ್ ಮಾತನಾಡಿ, ಶಿಕ್ಷಕರು ವಿದ್ಯಾರ್ಥಿಗಳ ಉತ್ತಮ ಜೀವನಕ್ಕಾಗಿ ವಿವಿಧ ರೀತಿಯಲ್ಲಿ ವಿದ್ಯಾರ್ಥಿಗಳಿಗೆ ತಿಳಿಹೇಳುತ್ತಾರೆ, ಕಠಿಣವಾಗಿ ವರ್ತಿಸುತ್ತಾರೆ, ಹಾಗೆ ವೈದ್ಯರು ಸಹ ರೋಗಿಯ ಅರೊಗ್ಯ ರಕ್ಷಣೆ ನಿಟ್ಟಿನಲ್ಲಿ ಕಠೋರವಾಗಿ ನಡೆದುಕೊಳ್ಳುತ್ತಾರೆ, ಎರಡು ಉದ್ದೇಶವೂ ಒಳ್ಳೆಯದೆ ಆಗಿರುತ್ತದೆ, ಶಿಕ್ಷಕರು ಮಕ್ಕಳ ಒಳ್ಳೆಯದಕ್ಕೆ ಶ್ರಮಿಸುವಾಗ ಪೋಷಕರು ಸಹ ಸಹಕಾರ ನೀಡಬೇಕು, ಇಬ್ಬರ ಸಹಕಾರದಿಂದ ಮಕ್ಕಳು ಶಿಕ್ಷಣವಂತರಾಗಿ ಉತ್ತಮ ಜೀವನ ರೂಪಿಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದರು.
ಶಿಕ್ಷಣ ಸಂಸ್ಥೆ ಅದ್ಯಕ್ಷ ಹೆಚ್.ವಿ.ನಾಗರಾಜ್ ಮಾತನಾಡಿ, ಶಿಕ್ಷಣ ಸಂಸ್ಥೆಯಿಂದ ಮಕ್ಕಳಿಗೆ ಗುಣಾತ್ಮಕ, ಪರಿಪೂರ್ಣ ಶಿಕ್ಷಣ ನೀಡಲು ಎಲ್ಲಾ ರೀತಿಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ಸಂಸ್ಥೆಯ ಉಪಾಧ್ಯಕ್ಷೆ ನಳಿನಿ ನಾಗರಾಜು, ನಿರ್ದೇಶಕ ಗೌರವ್, ಕ್ಷೇತ್ರ ಶಿಕ್ಷಣಾಧಿಕಾರಿ ಬೋರೇಗೌಡ ಇತರರು ಇದ್ದರು.
Comments are closed.