ಕುವೆಂಪು ಚಿಂತನೆ ಆತ್ಮದಲ್ಲಿ ಸ್ಥಾಪಿತವಾಗಲಿ

37

Get real time updates directly on you device, subscribe now.


ತುಮಕೂರು: ಕುವೆಂಪು ಅವರ ಮನುಕುಲದ ಹಿತ, ಸರಳತೆ, ಲೋಕ ಕಲ್ಯಾಣ, ಅಹಿಂಸೆ ಹಾಗೂ ವೈಚಾರಿಕ ಚಿಂತನೆಗಳನ್ನು ಮೈಗೂಡಿಸಿಕೊಳ್ಳಬೇಕು ಮತ್ತು ಸಕಾರಾತ್ಮಕ ಚಿಂತನೆಗಳನ್ನು ಆತ್ಮದಲ್ಲಿ ಸ್ಥಾಪಿಸಿಕೊಳ್ಳಬೇಕು ಎಂದು ಹಿರಿಯ ಸಾಹಿತಿ ಪ್ರೊ.ಕಾಳೇಗೌಡ ನಾಗವಾರ ಹೇಳಿದರು.

ತುಮಕೂರು ವಿಶ್ವ ವಿದ್ಯಾಲಯದ ಕುವೆಂಪು ಅಧ್ಯಯನ ಪೀಠವು ಕರ್ನಾಟಕ ಲೇಖಕಿಯರ ಸಂಘದ ಜಿಲ್ಲಾ ಘಟಕದ ಸಹಯೋಗದಲ್ಲಿ ವಿಶ್ವ ಮಾನವ ದಿನಾಚರಣೆಯ ಅಂಗವಾಗಿ ಶುಕ್ರವಾರ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿ, ಮನುಜ ಮತ ವಿಶ್ವ ಪಥದಂತಹ ಮಹಾನ್ ಚಿಂತನೆಗಳನ್ನು ಸಾರಿದ ಕುವೆಂಪು ಅವರ ವಿಚಾರ ಪ್ರವಾಹವನ್ನು ಚರ್ಚೆಯ ಮೂಲಕ ಕೇಂದ್ರೀಕರಿಸುವ ಕೆಲಸಗಳಾಗಬೇಕು, ಕುವೆಂಪು ಅವರ ಚಿಂತನೆಗಳಲ್ಲಿ, ಬರೆವಣಿಗೆಯಲ್ಲಿ ಸಾಂಸ್ಕೃತಿಕ ಮಹತ್ವ, ಸಂವೇದನಾಶೀಲತೆ ನೆಲೆಸಿತ್ತು, ಬಸವಣ್ಣ, ಬುದ್ಧ, ಅಕ್ಕಮಹಾದೇವಿ, ಕುಮಾರವ್ಯಾಸ, ಹೀಗೆ ಕನ್ನಡ ಭಾಷಾ ಸಾಹಿತ್ಯಕ್ಕೆ ಪೂರಕವಾಗುವ ಎಲ್ಲಾ ಮಹನೀಯರ ಅಂಶಗಳನ್ನು ಕುವೆಂಪು ಅವರ ಸಾಹಿತ್ಯ ನೆಲೆಯಲ್ಲಿ ನಾವು ಕಾಣಬಹುದು ಎಂದರು.

ಕಾರ್ಯಕ್ರಮ ಉದ್ಘಾಟಿಸಿ ತುಮಕೂರು ವಿಶ್ವ ವಿದ್ಯಾಲಯದ ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು ಮಾತನಾಡಿ, ವಿದ್ಯಾರ್ಥಿಗಳ ಮನೋ ವಿಕಾಸಕ್ಕಾಗಿ ಕುವೆಂಪು ಅವರ ವಿಚಾರಧಾರೆಗಳು ಅವಶ್ಯಕ, ಅವರ ಚಿಂತನೆಗಳನ್ನು, ಪ್ರತಿ ಪದ ಪ್ರಯೋಗದ ಆಳ- ಅಗಲ ಅಧ್ಯಯನ ಮಾಡಿ ಅರಿವಿಗೆ ತಂದುಕೊಳ್ಳಬೇಕು ಎಂದು ಹೇಳಿದರು.

ವಿವಿ ಸ್ನಾತಕೋತ್ತರ ಕನ್ನಡ ಅಧ್ಯಯನ ಮತ್ತು ಸಂಶೋಧನ ವಿಭಾಗದ ಅಧ್ಯಕ್ಷ ಪ್ರೊ.ನಿತ್ಯಾನಂದ ಬಿ.ಶೆಟ್ಟಿ ಮಾತನಾಡಿ, ಕುವೆಂಪು ಅವರು ಲೋಕದ ಚಿಂತನೆಗಳನ್ನು ಭಾಷೆಯ ಮೂಲಕ ಪಲ್ಲಟಗೊಳಿಸುವ ಮಹತ್ಕಾರ್ಯ ಯಶಸ್ವಿಯಾಗಿ ನಿಭಾಯಿಸಿದ್ದರಿಂದ ಅವರ ಕೃತಿಗಳು ಆಧುನಿಕ ಚಿಂತನೆಗಳಲ್ಲಿ ಹಾಗೂ ವೈಚಾರಿಕವಾಗಿ ನೆಲೆಗೊಂಡವು ಎಂದು ತಿಳಿಸಿದರು.

ತುಮಕೂರು ವಿವಿ ಕುವೆಂಪು ಅಧ್ಯಯನ ಪೀಠದ ಸಂಯೋಜಕಿ ಡಾ.ಗೀತಾ ವಸಂತ, ಕರ್ನಾಟಕ ಲೇಖಕಿಯರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷೆ ಮಲ್ಲಿಕಾ ಬಸವರಾಜು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!