ತುಮಕೂರು: ಕಲ್ಪತರುನಾಡು ತುಮಕೂರು ನಗರದಲ್ಲಿ ಎರಡು ದಿನಗಳ ಕಾಲ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಹಮ್ಮಿಕೊಳ್ಳಲಾಗಿರುವ ಅಕ್ಷರ ನುಡಿ ಜಾತ್ರೆಗೆ ವಿದ್ಯುಕ್ತ ಚಾಲನೆ ದೊರೆಯಿತು.
ನಗರದಲ್ಲಿ ಕನ್ನಡದ ಸಾಹಿತ್ಯ ತೇರು ಎಳೆಯಲು ನಡೆದಿರುವ 15ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ರಾಷ್ಟ್ರ ಧ್ವಜಾರೋಹಣ, ನಾಡ ಧ್ವಜಾರೋಹಣ ಹಾಗೂ ಕಸಾಪ ಧ್ವಜಾರೋಹಣ ನೆರವೇರಿಸುವ ಮೂಲಕ ಚಾಲನೆ ನೀಡಲಾಯಿತು.
ನಗರದ ಟೌನ್ ಹಾಲ್ ವೃತ್ತದಲ್ಲಿರುವ ಮಹಾನಗರ ಪಾಲಿಕೆ ಆವರಣದಲ್ಲಿ 15ನೇ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಡಾ.ಹೆಚ್.ಎಸ್.ಶಿವಪ್ರಕಾಶ್ ಅವರನ್ನು ಶಾಸಕ ಜ್ಯೋತಿಗಣೇಶ್ ಹಾಗೂ ಜಿಲ್ಲಾ ಕಸಾಪ ಅಧ್ಯಕ್ಷರಾದ ಕೆ.ಎಸ್. ಸಿದ್ದಲಿಂಗಪ್ಪ ಅವರು ಆತ್ಮೀಯವಾಗಿ ಬರ ಮಾಡಿಕೊಂಡರು.
ಈ ಬಾರಿ ಬೆಳ್ಳಿರಥದಲ್ಲಿ ಸಮ್ಮೇಳನಾಧ್ಯಕ್ಷರು ಕೂರದೆ ಭುವನೇಶ್ವರಿ ತಾಯಿಯ ಭಾವಚಿತ್ರ ಇಡಲಾಗಿದ್ದು, ಸಮ್ಮೇಳನಾಧ್ಯಕ್ಷರು ಕಾಲ್ನಡಿಗೆಯಲ್ಲಿ ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದ್ದು ವಿಶೇಷವಾಗಿತ್ತು.
ಟೌನ್ ಹಾಲ್ ವೃತ್ತದಲ್ಲಿ ಸಮ್ಮೇಳನಾಧ್ಯಕ್ಷರ ಕಾಲ್ನಡಿಗೆಯ ಮೆರವಣಿಗೆ ಹಾಗೂ ತಾಯಿ ಭುವನೇಶ್ವರಿ ಭಾವಚಿತ್ರ ಮೆರವಣಿಗೆಗೆ ಸಿದ್ದಗಂಗಾ ಮಠಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ಕನ್ನಡದ ಬಾವುಟ ತೋರುವ ಮೂಲಕ ಚಾಲನೆ ನೀಡಿದರು.
ಕನ್ನಡತನ ಉಳಿಯಲಿ
ನಂತರ ಮಾತನಾಡಿದ ಶ್ರೀಗಳು, ಎಲ್ಲರಲ್ಲೂ ಕನ್ನಡದ ಮನಸ್ಸುಗಳು ಬೆಳೆಯಬೇಕು, ಕನ್ನಡ ತನ ಉಳಿಯಬೇಕು, ಕನ್ನಡ ಅಭಿಮಾನ ಬೆಳೆಸಬೇಕು, ಕನ್ನಡ ಉಳಿಸುವ ಕಾರ್ಯ ಇಂತಹ ಕನ್ನಡದ ಉತ್ಸವಗಳಿಂದಾಗಬೇಕು ಎಂದು ಹೇಳಿದರು.
ಪ್ರತಿಯೊಬ್ಬರೂ ಓದುವುದು, ಬರೆಯುವುದು, ವ್ಯವಹಾರ ಮಾಡುವುದು ಕನ್ನಡದಲ್ಲೇ ಎಂಬ ಭಾವನೆ ಬೆಳೆಯಬೇಕು, ಆಗ ಕನ್ನಡ ಭಾಷೆ ಮತ್ತಷ್ಟು ಅಭಿವೃದ್ಧಿಯಾಗಲಿದೆ ಎಂದರು.
15ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸಮ್ಮೇಳನಾಧ್ಯಕ್ಷರಾಗಿರುವ ಡಾ.ಹೆಚ್.ಎಸ್. ಶಿವಪ್ರಕಾಶ್ ಅವರು ತುಮಕೂರಿನವರೇ, ಆಂಗ್ಲ ಭಾಷಾ ಪ್ರಾಧ್ಯಾಪಕರಾಗಿದ್ದರೂ ಕನ್ನಡದ ಕಟ್ಟಾಳು ಆಗಿದ್ದಾರೆ, ಇವರನ್ನು 15ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷರನ್ನಾಗಿ ಆಯ್ಕೆ ಮಾಡಿರುವುದು ಅತ್ಯಂತ ಅರ್ಥಪೂರ್ಣವಾಗಿದೆ ಎಂದರು.
ಟೌನ್ ಹಾಲ್ ವೃತ್ತದಿಂದ ಆರಂಭವಾದ ಸಮ್ಮೇಳನಾಧ್ಯಕ್ಷರ ಮೆರವಣಿಗೆಯಲ್ಲಿ ಕನ್ನಡ ಸಾಹಿತ್ಯ, ಪರಂಪರೆ, ಗ್ರಾಮೀಣ ಸೊಗಡನ್ನು ಬಿಂಬಿಸುವ ಜಾನಪದ ಕಲಾ ಮೇಳಗಳಾದ ಆನೆ ಕುಣಿತ, ಕೋಲಾಟ, ವೀರಗಾಸೆ, ನಂದಿಧ್ವಜ, ಡೊಳ್ಳು ಕುಣಿತ, ಸೋಮನ ಕುಣಿತ, ನಾಸಿಕ್ ಡೋಲು, ನಾದಸ್ವರ, ಗಾರುಡಿ ಗೊಂಬೆ, ಕೋಳಿ ನೃತ್ಯ ಸೇರಿದಂತೆ ವಿವಿಧ ಕಲಾ ಪ್ರಕಾರಗಳಿಂದ ಅತ್ಯಾಕರ್ಷಕ ಪ್ರದರ್ಶನ ನಡೆಯಿತು, ಮೆರವಣಿಗೆ ಸಾಗಿದ ರಸ್ತೆಯ ಉದ್ದಕ್ಕೂ ಕನ್ನಡದ ಡಿಂಡಿಮ ಮೊಳಗಿತು.
ಮಹಾನಗರ ಪಾಲಿಕೆಯಿಂದ ಆರಂಭವಾದ ಮೆರವಣಿಗೆಯು ಬಿಜಿಎಸ್ ವೃತ್ತ, ಎಂ.ಜಿ.ರಸ್ತೆ, ಗುಂಚಿ ಸರ್ಕಲ್, ಜಿಲ್ಲಾಧಿಕಾರಿ ಕಚೇರಿ ಮುಂಭಾಗದ ಡಾ.ಅಂಬೇಡ್ಕರ್ ಬೀದಿ ಮಾರ್ಗವಾಗಿ ಸಾಹಿತ್ಯ ಸಮ್ಮೇಳನ ನಡೆಯುವ ಗಾಜಿನ ಮನೆಯಲ್ಲಿ ಭವ್ಯವಾಗಿ ಸಿದ್ಧಗೊಳಿಸಿದ್ದ ಪ್ರಧಾನ ವೇದಿಕೆಗೆ ತಲುಪಿತು.
ಗುಂಚಿ ಸರ್ಕಲ್ ಗೆ ಮೆರವಣಿಗೆ ಆಗಮಿಸಿದ ಸಂದರ್ಭದಲ್ಲಿ ಪದ್ಮಶ್ರೀ ಡಾ.ಬಿ.ಶಿವಮೂರ್ತಿ ಶಾಸ್ತ್ರಿಗಳ ಪುತ್ಥಳಿಗೆ ಸಮ್ಮೇಳನಾಧ್ಯಕ್ಷ ಡಾ.ಹೆಚ್.ಎಸ್.ಶಿವಪ್ರಕಾಶ್ ಮಾಲಾರ್ಪಣೆ ಮಾಡಿ ಗೌರವ ಸಮರ್ಪಿಸಿದರು.
ಸಮ್ಮೇಳನಾಧ್ಯಕ್ಷರ ಮೆರವಣಿಗೆ ವೇದಿಕೆಗೆ ಬರುತ್ತಿದ್ದಂತೆ ನೆರೆದಿದ್ದ ಸಾಹಿತಿಗಳು, ಸಾಹಿತ್ಯಾಸಕ್ತರು, ಕನ್ನಡಾಭಿಮಾನಿಗಳು ಹಾಗೂ ವಿದ್ಯಾರ್ಥಿಗಳ ಹರ್ಷೋದ್ಘಾರ ಮುಗಿಲು ಮುಟ್ಟಿತು.
ಸಮ್ಮೇಳಾಧ್ಯಕ್ಷರ ಮೆರವಣಿಗೆಗೂ ಮುನ್ನ ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ. ಕರಾಳೆ ರಾಷ್ಟ್ರ ಧ್ವಜಾರೋಹಣ, ಉಪ ಮೇಯರ್ ಟಿ.ಕೆ. ನರಸಿಂಹ ಮೂರ್ತಿ ನಾಡ ಧ್ವಜಾರೋಹಣ ಹಾಗೂ ಪರಿಷತ್ತಿನ ಧ್ವಜಾರೋಹಣವನ್ನು ಜಿಲ್ಲಾ ಕಸಾಪ ಅಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ ನೆರವೇರಿಸಿದರು.
ಸಮ್ಮೇಳನಾಧ್ಯಕ್ಷರ ಮೆರವಣಿಗೆಯಲ್ಲಿ ಶಾಸಕ ಜ್ಯೋತಿಗಣೇಶ್, ಮೇಯರ್ ಪ್ರಭಾವತಿ ಸುಧೀಶ್ವರ್, ಧನಿಯಾಕುಮಾರ್, ಪಾಲಿಕೆ ಸದಸ್ಯ ರಮೇಶ್ ಸೇರಿದಂತೆ ಕಸಾಪ ಪದಾಧಿಕಾರಿಗಳು, ಸಾಹಿತಿಗಳು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
Comments are closed.