ಕುಣಿಗಲ್: ಪಟ್ಟಣದ ಇತಿಹಾಸ ಪ್ರಸಿದ್ದ ಕುದುರೆ ಫಾರಂ ಹಾಗೆಯೆ ಉಳಿಸಿಕೊಂಡು ಅಭಿವೃದ್ಧಿ ಗೊಳಿಸುವಂತೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಅವರು ರಾಜ್ಯದ ಮುಖ್ಯ ಮಂತ್ರಿಗಳಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ.
ಪಟ್ಟಣದ ಹೃದಯ ಭಾಗದಲ್ಲಿರುವ ನೂರಾರು ವರ್ಷ ಇತಿಹಾಸ ಇರುವ ಕುದುರೆ ಫಾರಂ ನೂರಾರು ಎಕರೆ ವಿಸ್ತೀರ್ಣದಲ್ಲಿದ್ದು, ಸದರಿ ಪ್ರದೇಶ ಪಶು ಸಂಗೋಪನೆ ಇಲಾಖೆಯ ಮಾಲೀಕತ್ವದಲ್ಲಿದ್ದು ವಿವಿಧ ಕಂಪನಿಗಳಿಗೆ ಗುತ್ತಿಗೆ ಆಧಾರದ ಮೇಲೆ ನೀಡಿ ನಿರ್ವಹಣೆ ಮಾಡಲಾಗುತ್ತಿತ್ತು, ಇತ್ತೀಚೆಗೆ ಗುತ್ತಿಗೆ ಅವಧಿ ಮುಗಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಸದರಿ ಕುದುರೆ ಫಾರಂ ಪ್ರದೇಶದಲ್ಲಿ ಇಂಟಿಗ್ರೇಟೆಡ್ ಸಿಟಿ ಮಾಡಲು ಮುಂದಾಗಿದೆ ಎಂದು ಸಚಿವರು ಪ್ರಸ್ತಾಪಿಸಿದ ಹಿನ್ನೆಲೆಯಲ್ಲಿ ಸ್ಥಳೀಯ ವಿವಿಧ ಸಂಘಟನೆಗಳು ಸೇರಿದಂತೆ ಜೆಡಿಎಸ್, ಬಿಜೆಪಿ ಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿ, ಕುದುರೆ ಫಾರಂ ಪ್ರದೇಶವನ್ನು ಹಾಗೆ ಉಳಿಸಿಕೊಂಡು ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಸರ್ಕಾರದ ಗಮನ ಸೆಳೆಯಲು ಪಾರಂಪರಿಕ ಕುದುರೆ ಫಾರಂ ಉಳಿಸಿ ಹೋರಾಟ ಸಮಿತಿ ರಚಿಸಿಕೊಂಡು ವಿವಿಧ ಸಚಿವರು, ಶಾಸಕರಿಗೆ ಮನವಿ ನೀಡಿ ಕುದುರೆ ಫಾರಂ ಉಳಿಸಲು ವಿನೂತನ ಹೋರಾಟಕ್ಕೆ ಮುಂದಾಗಿದ್ದಾರೆ, ಕಳೆದ ಗುರುವಾರ ತಾಲೂಕು ಜೆಡಿಎಸ್ ಅಧ್ಯಕ್ಷ ಜಗದೀಶ್ ನೇತೃತ್ವದಲ್ಲಿ ಸಮಿತಿಯ ವಿವಿಧ ಪದಾಧಿಕಾರಿಗಳು ಬೆಂಗಳೂರಿನಲ್ಲಿ ಮಾಜಿ ಪ್ರಧಾನಿ ದೇವೇಗೌಡರನ್ನು ಭೇಟಿ ಮಾಡಿ ಕುದುರೆ ಫಾರಂ ಉಳಿಸುವ ನಿಟ್ಟಿನಲ್ಲಿ ಮನವಿ ಸಲ್ಲಿಸಿ, ಮುಖ್ಯಮಂತ್ರಿಗಳಿಗೆ ಫಾರಂ ಉಳಿಸುವಂತೆ ಒತ್ತಾಯಿಸಬೇಕೆಂದು ಮನವಿ ಮಾಡಿದ್ದರ ಮೇರೆಗೆ ಮಾಜಿ ಪ್ರಧಾನಿ ದೇವೆಗೌಡರು, ಕುಣಿಗಲ್ ಪಟ್ಟಣದ ಕುದುರೆ ಫಾರಂ ಉಳಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳಿಗೆ ಪತ್ರಬರೆದಿದ್ದು, ಪತ್ರದಲ್ಲಿ ರಾಜ್ಯ ಸರ್ಕಾರ ಕುದುರೆ ಫಾರಂನಲ್ಲಿ ಇಂಟಿಗ್ರೇಟೆಡ್ ಟೌನ್ ಶಿಪ್ ನಿರ್ಮಾಣ ಕೈಬಿಡುವಂತೆ, ವಿಶ್ವಕ್ಕೆ ಹಲವು ಉತ್ತಮ ತಳಿಯ ಕುದುರೆ ನೀಡಿರುವ ಕುದುರೆ ಫಾರಂ ಜಾಗ ಉಳಿಸುವಂತೆ, ಕುದುರೆ ಫಾರಂನಲ್ಲಿ ಕುದುರೆ ತಳಿ ಸಂಶೋಧನ ಕೇಂದ್ರ ಸ್ಥಾಪಿಸಿ, ಟಿಪ್ಪು ಸುಲ್ತಾನರ ಕಾಲದಲ್ಲಿ ಆರಂಭವಾಗಿರುವ ಕುದುರೆ ಪಾರಂನ್ನು ಪಾರಂಪರಿಕ ತಾಣ ಎಂದು ಘೋಷಿಸುವಂತೆ ಒತ್ತಾಯಿಸಿದ್ದಾರೆ.
ಮಾಜಿ ಪ್ರಧಾನಿಗಳು ರಾಜ್ಯದ ಮುಖ್ಯಮಂತ್ರಿಗಳಿಗೆ ಬರೆದಿರುವ ಪತ್ರವನ್ನು ತಾಲೂಕು ಜೆಡಿಎಸ್ ಘಟಕ ಬಿಡುಗಡೆ ಮಾಡಿ ಕುದುರೆ ಫಾರಂ ಉಳಿವಿಗೆ ಮತ್ತಷ್ಟು ಪರಿಣಾಮಕಾರಿ ಹೋರಾಟ ನಡೆಸುವುದಾಗಿ ಹೇಳಿದೆ.
Comments are closed.