ಸಿರಿಧಾನ್ಯ ಸೇವಿಸಿ ಆರೋಗ್ಯ ಕಾಪಾಡಿಕೊಳ್ಳಿ: ಪರಂ

35

Get real time updates directly on you device, subscribe now.


ತುಮಕೂರು: ರೈತರು ತಾವು ಬೆಳೆದ ಸಿರಿಧಾನ್ಯಗಳನ್ನು ಹಾಗೆಯೇ ಮಾರಾಟ ಮಾಡದೆ ಮೌಲ್ಯವರ್ಧನೆ ಮಾಡಿ ಉತ್ತಮ ವಾಣಿಜ್ಯ ಬೆಲೆಗೆ ಮಾರಾಟ ಮಾಡುವಂತಾಗಬೇಕು ಎಂದು ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕೃಷಿ ಇಲಾಖೆ ಸಹಯೋಗದಲ್ಲಿ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಸಿರಿಧಾನ್ಯ ಹಬ್ಬ ಹಾಗೂ ಸಿರಿಧಾನ್ಯ ಉತ್ಪಾದಕರು ಮತ್ತು ಮಾರುಕಟ್ಟೆಗಾರರ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಸಿರಿ ಧಾನ್ಯಗಳು ಒಣಭೂಮಿಯ ಬೆಳೆಯಾಗಿದ್ದು, ಕಡಿಮೆ ಮಳೆ ಬೀಳುವ ಪ್ರದೇಶಗಳಲ್ಲೂ ಬೆಳೆಯಬಹುದಾದ ಬರಗಾಲದ ಬೆಳೆಗಳಾಗಿವೆ, ರಾಗಿ, ಸಾಮೆ, ಬರಗೂ, ನವಣೆ, ಹಾರಕ, ಕೊರಲೆ ಸಿರಿಧಾನ್ಯಗಳು ಗಾತ್ರದಲ್ಲಿ ಕಿರಿದಾದರೂ ಅಧಿಕ ಪೌಷ್ಟಿಕಾಂಶವುಳ್ಳ ಧಾನ್ಯಗಳಾಗಿವೆ ಎಂದು ತಿಳಿಸಿದರು.
ಈ ಮೇಳದಲ್ಲಿ ವಿವಿಧ ರೀತಿಯ ಸಿರಿಧಾನ್ಯಗಳ ಪದಾರ್ಥಗಳು ಮತ್ತು ಉತ್ಪನ್ನಗಳಿಗೆ ಸಂಬಂಧಪಟ್ಟಂತೆ ಸುಮಾರು 50 ಮಳಿಗೆಗಳಲ್ಲಿ ವಸ್ತು ಪ್ರದರ್ಶನ ಮತ್ತು ಮಾರಾಟ ಮಾಡಲು ಅವಕಾಶ ಮಾಡಿಕೊಡಲಾಗಿದೆ ಎಂದು ತಿಳಿಸಿದರು.

1980ರಲ್ಲಿ ಭಾರತ ಸರ್ಕಾರ ಜಾರಿಗೆ ತಂದ ಹೊಸ ಕೃಷಿ ನೀತಿಯಿಂದಾಗಿ ನಮ್ಮ ದೇಶದಲ್ಲಿ ಹಲವಾರು ಬೆಳೆ ಬೆಳೆಯುವುದರ ಮೂಲಕ ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬನೆಯಾಯಿತು ಎಂದು ಹೇಳಿದರು.
ರಾಜ್ಯ ಮಟ್ಟದಲ್ಲಿ ಅಂತಾರಾಷ್ಟ್ರೀಯ ಸಿರಿಧಾನ್ಯ ಮತ್ತು ಸಾವಯವ ಮೇಳ 2024ನ್ನು ಜನವರಿ 5 ರಿಂದ 7ರ ವರೆಗೆ ಅರಮನೆ ಮೈದಾನದಲ್ಲಿ ಆಯೋಜಿಸಲಾಗಿದ್ದು, ಎಲ್ಲಾ ರೈತರು ಇದರ ಸದುಪಯೋಗ ಪಡಿಸಿಕೊಳ್ಳಬೇಕೆಂದು ತಿಳಿಸಿದರು.
ಇತ್ತೀಚಿನ ದಿನಗಳಲ್ಲಿ ಮನುಷ್ಯರು ಶಾರೀರಿಕ ಮತ್ತು ಮಾನಸಿಕ ಕಾಯಿಲೆಗಳಿಗೆ ಒಳಗಾಗುತ್ತಿದ್ದಾರೆ, ನಾನು ಕೂಡ ರೈತ ಕುಟುಂಬದಿಂದ ಬಂದವನು, ನಮ್ಮ ಮನೆಯಲ್ಲೂ ಬೇಕಾಗುವಷ್ಟು ಸಿರಿಧಾನ್ಯ ಬೆಳೆಯಲಾಗುತ್ತಿತ್ತು, ಆಗ ಈ ಬೆಳೆಗಳಿಗೆ ಯಾವುದೇ ರೀತಿಯ ವಾಣಿಜ್ಯ ಮೌಲ್ಯ ಇರಲಿಲ್ಲ, ಆದರೆ ಇಂದು ಸಿರಿಧಾನ್ಯಗಳಿಗೆ ಮತ್ತು ಅದರ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ತುಂಬಾ ಬೇಡಿಕೆ ಇದೆ ಎಂದು ಹೇಳಿದರು.
ರಾಗಿ ಬೆಳೆಯನ್ನು ಆಫ್ರಿಕಾ ದೇಶದಲ್ಲಿ ಹೆಚ್ಚಾಗಿ ಬೆಳೆಯುತ್ತಿದ್ದರು, ಆ ಬೆಳೆ ನಮ್ಮ ದೇಶದಲ್ಲಿ ಬೆಳೆಯಲು ಆರಂಭಿಸಲಾಯಿತು, ನಮ್ಮ ರಾಜ್ಯದ ಹಳೇ ಮೈಸೂರು ಭಾಗದಲ್ಲಿ ಹೆಚ್ಚಾಗಿ ರಾಗಿ ಬೆಳೆಯನ್ನು ಇಂದಿಗೂ ಬೆಳೆಯುತ್ತಿದ್ದಾರೆ ಎಂದು ತಿಳಿಸಿದರು.

ಹಲವು ಮಾರುಕಟ್ಟೆ ಕೇಂದ್ರಗಳಲ್ಲಿ ಒಂದೇ ರೀತಿಯ ನಿಗದಿತ ಬೆಲೆಯನ್ನೂ ರೈತರಿಗೆ ನೀಡುತ್ತಿಲ್ಲ, ಹಲವಾರು ಮಾರುಕಟ್ಟೆಗಳಲ್ಲಿ ರಾಗಿ ಖರೀದಿ ಮಾಡಿ ಆರು ತಿಂಗಳಾದರೂ ರೈತರ ಖಾತೆಗೆ ಹಣ ಪಾವತಿ ಮಾಡದೇ ವಿಳಂಬ ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿ ರೈತರ ಪರವಾದ ಸರ್ಕಾರ ನಮ್ಮದಾಗಿದೆ, ರೈತರು ಆಂತಕ ಪಡುವ ಅಗತ್ಯವಿಲ್ಲ ಎಂದು ಹೇಳಿದರು.
ಆಫ್ರಿಕಾ ಖಂಡದಲ್ಲಿರುವ ಅನೇಕ ದೇಶಗಳಲ್ಲಿ ಇಂದಿಗೂ ಆಹಾರ ಸಮಸ್ಯೆ ಎದುರಿಸುತ್ತಿದ್ದಾರೆ, ಆದರೆ ಇಂದು ನಮ್ಮ ಭಾರತ ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬನೆ ಪಡೆದಿದೆ ಹಾಗೂ ಇಂದು ಅನೇಕ ಆಹಾರ ಪದಾರ್ಥಗಳನ್ನು ಹೊರ ದೇಶಗಳಿಗೆ ರಪ್ತು ಮಾಡಲಾಗುತ್ತಿದೆ ಎಂದು ಹೇಳಿದರು.

ಮುಂದಿನ ದಿನಗಳಲ್ಲಿ ಜಿಲ್ಲೆಯ ಎಲ್ಲಾ ವಸತಿ ನಿಲಯಗಳಲ್ಲಿ ವಿದ್ಯಾರ್ಥಿಗಳಿಗೆ ಸಿರಿಧಾನ್ಯ ಉತ್ಪನ್ನಗಳನ್ನು ನೀಡಲಾಗುವುದು. ಇದರಿಂದ ಸಿರಿಧಾನ್ಯ ಬೆಳೆಯುವ ರೈತರಿಗೆ ಉತ್ತೇಜನ ನೀಡಿದಂತೆ ಆಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಲ್ಲಾ ಪಂಚಾಯತ್ ಸಿಇಒ ಜಿ.ಪ್ರಭು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್.ಕೆ.ವಿ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ.ರಮೇಶ್, ಪಾಪಣ್ಣ ಸೇರಿದಂತೆ ಮತ್ತಿತರರು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!