ಕೂಸಿನ ಮನೆ ಉದ್ಘಾಟಿಸಿದ ಗೃಹಮಂತ್ರಿ ಪರಮೇಶ್ವರ್

ಕೂಲಿ ಕಾರ್ಮಿಕರ ಮಕ್ಕಳ ಪೋಷಣೆಗಾಗಿ ಕೂಸಿನ ಮನೆ ಯೋಜನೆ

71

Get real time updates directly on you device, subscribe now.


ತುಮಕೂರು: ನರೇಗಾ ಯೋಜನೆಯಡಿ ಕೆಲಸ ಮಾಡುವ ಕೂಲಿ ಕಾರ್ಮಿಕರ 3 ವರ್ಷದೊಳಗಿನ ಮಕ್ಕಳ ಪೋಷಣೆಗಾಗಿ ಕೂಸಿನ ಮನೆ ಯೋಜನೆಯನ್ನು ಸರ್ಕಾರ ರೂಪಿಸಿದ್ದು, ಕಾರ್ಮಿಕ ಮಹಿಳೆ ಕೆಲಸದ ವೇಳೆಯಲ್ಲಿ ತನ್ನ ಮಗುವನ್ನು ಕೂಸಿನ ಮನೆಯಲ್ಲಿ ಬಿಟ್ಟು ನೆಮ್ಮದಿಯಿಂದ ಕೆಲಸ ಮಾಡಬಹುದು ಎಂದು ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ ತಿಳಿಸಿದರು.
ತುಮಕೂರು ತಾಲ್ಲೂಕು ದೇವಲಾಪುರ ಗ್ರಾಮ ಪಂಚಾಯತಿಯ ಕಾಡುಸಿದ್ದಯ್ಯನಪಾಳ್ಯ ಗ್ರಾಮದಲ್ಲಿ ಕೂಸಿನ ಮನೆ ಉದ್ಘಾಟಿಸಿ ಮಾತನಾಡಿ, ರಾಜ್ಯದಲ್ಲೇ ಪ್ರಪ್ರಥಮವಾಗಿ ಕೂಸಿನ ಮನೆ ಯೋಜನೆಯನ್ನು ಜಿಲ್ಲೆಯಲ್ಲಿ ಪ್ರಾರಂಭಿಸಲಾಗುತ್ತಿದೆ, ಪ್ರಸ್ತುತ ಜಿಲ್ಲೆಯ 175 ಗ್ರಾಮ ಪಂಚಾಯತಿಗಳಲ್ಲಿ ಕೂಸಿನ ಮನೆಗಳನ್ನು ಗುರುತಿಸಲಾಗಿದ್ದು, ಒಂದು ತಿಂಗಳೊಳಗಾಗಿ ಎಲ್ಲಾ 330 ಪಂಚಾಯತಿಗಳಲ್ಲಿಯೂ ಕೂಸಿನ ಮನೆ ಪ್ರಾರಂಭಿಸಲು ಸಚಿವರು ಜಿಲ್ಲಾ ಪಂಚಾಯಿತಿಗೆ ನಿರ್ದೇಶನ ನೀಡಿದರು.

ಕೂಸಿನ ಮನೆಗೆ ದಾಖಲಾದ ಪ್ರತಿ ಮಗುವಿಗೆ ದಿನವೊಂದಕ್ಕೆ ಸ್ಥಳೀಯ ಆಹಾರ ಪದ್ಧತಿಗೆ ಅನುಗುಣವಾಗಿ ಪೌಷ್ಠಿಕಾಂಶ ಒಳನ್ನೊಳಗೊಂಡ ಸಮತೋಲನ ಆಹಾರ ನೀಡಲಾಗುವುದು, ಜಿಲ್ಲಾ ಸಮಿತಿ ನೀಡಿರುವ ಆಹಾರದ ಪಟ್ಟಿಯನ್ವಯ ಬೆಳಗಿನ ಉಪಹಾರ, ಮಧ್ಯಾಹ್ನ ಬಿಸಿಯೂಟ ಹಾಗೂ ಸಂಜೆ ಲಘು ಉಪಹಾರ ಸೇರಿದಂತೆ 3 ಬಾರಿ ಆಹಾರ ತಯಾರಿಸಿ ಮಕ್ಕಳಿಗೆ ನೀಡಲಾಗುವುದು ಎಂದು ತಿಳಿಸಿದರು.
ಆಯ ವ್ಯಯ ಮಂಡನೆ ಸಂದರ್ಭದಲ್ಲಿ ಘೋಷಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕೂಸಿನ ಮನೆ ಯೋಜನೆಯ ಕನಸು ನನಸಾಗಿದೆ, ಗ್ರಾಮಾಂತರ ಪ್ರದೇಶದ ಮಹಿಳೆಯರಿಗೆ ವಿಶೇಷ ಆದ್ಯತೆ ನೀಡಿ ಸಮಾಜದ ಮುಖ್ಯ ವಾಹಿನಿಗೆ ತರಬೇಕೆಂಬ ಉದ್ದೇಶದಿಂದ ರೂಪಿಸಿರುವ ಕೂಸಿನ ಮನೆ ಸೌಲಭ್ಯವನ್ನು ಗ್ರಾಮೀಣ ಕೂಲಿ ಕಾರ್ಮಿಕರು ಸದುಪಯೋಗ ಪಡಿಸಿಕೊಂಡಾಗ ಮಾತ್ರ ಯೋಜನೆ ಸಾರ್ಥಕ ಕಾಣುತ್ತದೆ ಎಂದು ತಿಳಿಸಿದರು.
ಕೂಸಿನ ಮನೆಯಲ್ಲಿ ಗೌರವಧನ ಆಧಾರದ ಮೇಲೆ ಮಕ್ಕಳ ಪೋಷಣೆಗಾಗಿ ಕೇರ್ ಟೇಕರ್ ಗಳನ್ನು ನೇಮಿಸಲಾಗುವುದು, ಜಿಲ್ಲೆಯಲ್ಲಿ ಈಗಾಗಲೇ 1400 ಕೇರ್ ಟೇಕರ್ ಗಳನ್ನು ಗುರುತಿಸಲಾಗಿದ್ದು, 700 ಕೇರ್ ಟೇಕರ್ ಗಳಿಗೆ ತರಬೇತಿ ನೀಡಲಾಗಿದೆ, ಕೇರ್ ಟೇಕರ್ ಗಳು ಕೂಸಿನ ಮನೆಯಲ್ಲಿ ಮಕ್ಕಳನ್ನು ಪ್ರಾಮಾಣಿಕವಾಗಿ ಮಮತೆ ವಾತ್ಸಲ್ಯದಿಂದ ಆರೈಕೆ ಮಾಡಬೇಕು ಎಂದು ಕಿವಿಮಾತು ಹೇಳಿದರು.
ಪೌಷ್ಠಿಕ ಆಹಾರದಿಂದ ಮಗುವಿನ ಮಾನಸಿಕ ಹಾಗೂ ದೈಹಿಕ ಬೆಳವಣಿಗೆ ಉತ್ತಮವಾಗುತ್ತದೆ, ಈ ನಿಟ್ಟಿನಲ್ಲಿ ಪ್ರತಿ ದಿನ ಪ್ರತಿ ಮಗುವಿಗೆ ತಲಾ 12 ರೂ. ಖರ್ಚಿನಲ್ಲಿ ಪೌಷ್ಠಿಕ ಆಹಾರ ಪೂರೈಕೆ ಮಾಡಲಾಗುವುದು, ಆರೋಗ್ಯದಾಯಕ ಮಕ್ಕಳು ವಿದ್ಯಾವಂತರಾಗಿ ಮುಂದೊಂದು ದಿನ ತಮ್ಮ ಕುಟುಂಬದ ಬಡತನ ದೂರ ಮಾಡಲಿದ್ದಾರೆ ಎಂಬ ವಿಶ್ವಾಸವಿದೆ ಎಂದರು.

ಗ್ರಾಮೀಣ ಪ್ರದೇಶದವರು ಅದರಲ್ಲೂ ಮಹಿಳೆಯರನ್ನು ಸಬಲರನ್ನಾಗಿ ಮಾಡುವ ದೃಷ್ಟಿಯಿಂದ ಸರ್ಕಾರ ಜಾರಿಗೆ ತಂದಿರುವ 5 ಗ್ಯಾರಂಟಿ ಯೋಜನೆಗಳೂ ಯಶಸ್ಸು ಕಂಡಿವೆ, ಈವರೆಗೂ ಶಕ್ತಿ ಯೋಜನೆಯಡಿ ಜಿಲ್ಲೆಯ 3.50 ಕೋಟಿ ಮಹಿಳೆಯರು ಉಚಿತ ಪ್ರಯಾಣದ ಸೌಲಭ್ಯ ಪಡೆದಿದ್ದಾರೆ, ಅನ್ನಭಾಗ್ಯ ಯೋಜನೆಯಡಿ 5,96,000 ಫಲಾನುಭವಿಗಳಿಗೆ ಸೌಲಭ್ಯ ವಿತರಿಸಲು 163 ಕೋಟಿ ರೂ. ಖರ್ಚು ಮಾಡಲಾಗಿದೆ, ಮಹಿಳಾ ಸಬಲೀಕರಣಕ್ಕಾಗಿ ಗೃಹಲಕ್ಷ್ಮಿ ಯೋಜನೆ ಮೂಲಕ ಕುಟುಂಬದ ಯಜಮಾನಿಗೆ ಪ್ರತಿ ತಿಂಗಳು ಪಾವತಿಸಲಾಗುತ್ತಿರುವ 2,000 ಹಣವನ್ನು ಒಡವೆ- ವಸ್ತ್ರಕ್ಕೆಂದು ದುಂದು ವೆಚ್ಚ ಮಾಡದೆ ಮನೆಯ ಖರ್ಚು, ಮಕ್ಕಳ ವಿದ್ಯಾಭ್ಯಾಸಕ್ಕೆ ವ್ಯಯಿಸಬೇಕು ಎಂದು ತಿಳಿಸಿದರಲ್ಲದೆ ಈವರೆಗೆ ಗೃಹಲಕ್ಷ್ಮಿ ಯೋಜನೆಯಡಿ ಜಿಲ್ಲೆಯ 5,77,000 ಮಹಿಳೆಯರ ಖಾತೆಗೆ 346 ಕೋಟಿ ಹಣ ಜಮೆ ಮಾಡಲಾಗಿದೆ, ಗ್ಯಾರಂಟಿ ಯೋಜನೆಗಳಿಂದ ಸರ್ಕಾರಕ್ಕೆ ಆರ್ಥಿಕ ಹೊರೆಯಾದರೂ ಯೋಜನೆಗೆ ಸಂಬಂಧಿಸಿದಂತೆ ಬರುವ ಟೀಕೆ ಟಿಪ್ಪಣಿಗಳಿಗೆ ಚಿಂತಿಸುವುದಿಲ್ಲ, ರಾಜ್ಯದ ಜನತೆ ನೆಮ್ಮದಿಯಿಂದ ಬದುಕಬೇಕೆಂಬುದೇ ನಮ್ಮ ಸರ್ಕಾರದ ಉದ್ದೇಶವೆಂದು ತಿಳಿಸಿದರು.
ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಮಾತನಾಡಿ, ಮಹಿಳೆ ಆರ್ಥಿಕವಾಗಿ ಸಬಲಳಾಗಬೇಕಾದರೆ ದುಡಿದು ಗಳಿಸಬೇಕು, ಆದರೆ ತಾಯಿಯಾದ ನಂತರ ಮಗುವಿನ ಲಾಲನೆ ಪಾಲನೆಯೊಂದಿಗೆ ಸುಮಾರು ವರ್ಷ ಕಳೆಯಬೇಕಾದ ಅನಿವಾರ್ಯತೆ ಅವಳಿಗಿರುತ್ತದೆ, ತಾಯಿ ತನ್ನ ಮಗುವನ್ನು ಬಿಟ್ಟು ನೆಮ್ಮದಿಯಿಂದ ದುಡಿಯಲು ಸಾಧ್ಯವಿಲ್ಲ ಎಂಬುದನ್ನು ಮನಗಂಡು ಕೂಸಿನ ಮನೆ ಎಂಬ ಮಹತ್ವಾಕಾಂಕ್ಷಿ ಯೋಜನೆ ಜಾರಿಗೆ ತಂದಿದ್ದು, ಕೂಲಿ ಕಾರ್ಮಿಕ ಮಹಿಳೆಯರು ಈ ಯೋಜನೆಯ ಸದುಪಯೋಗ ಪಡೆಯಬೇಕೆಂದು ಮನವಿ ಮಾಡಿದರು.

ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜಿ.ಪ್ರಭು ಮಾತನಾಡಿ, ನರೇಗಾ ಕೂಲಿ ಕಾರ್ಮಿಕರು ದುಡಿಮೆ ವೇಳೆಯಲ್ಲಿ ಅವರ ಹಸುಗೂಸನ್ನು ನೋಡಿಕೊಳ್ಳುವುದು ಹಾಗೂ ಮಗುವಿಗೆ ಸಮಗ್ರ ಆರೋಗ್ಯ ಭದ್ರತೆ ಒದಗಿಸುವುದು ಕೂಸಿನ ಮನೆಯ ಮೂಲ ಉದ್ದೇಶ, ಜಿಲ್ಲೆಯ ಆಯ್ದ 175 ಕೂಸಿನ ಮನೆಗಳಿಗೆ ಅಧಿಕೃತವಾಗಿ ಚಾಲನೆ ದೊರೆತಿದೆ, ಕೂಸಿನ ಮನೆಯಲ್ಲಿ ಅಗತ್ಯ ಮೂಲಭೂತ ಸೌಕರ್ಯದೊಂದಿಗೆ ಅಡುಗೆ ಕೋಣೆ, ಕಲಿಕಾ ಕೊಠಡಿ, ಮಕ್ಕಳ ಆಟಿಕೆ, ಕಲಿಕಾ ಸಾಮಗ್ರಿಗಳ ವ್ಯವಸ್ಥೆ ಮಾಡಲಾಗಿದೆಯಲ್ಲದೆ, ಮಕ್ಕಳ ವೈಯಕ್ತಿಕ ಸ್ವಚ್ಛತೆ, ಮಕ್ಕಳ ಸುರಕ್ಷತೆ ಮತ್ತು ರಕ್ಷಣೆಗೆ ಆದ್ಯತೆ ನೀಡಲಾಗಿದೆ ಎಂದು ತಿಳಿಸಿದರು.
ದೇವಲಾಪುರ ಗ್ರಾಮ ಪಂಚಾಯತಿ ಅಧ್ಯಕ್ಷ ಸಿದ್ಧರಾಜು, ಉಪಾಧ್ಯಕ್ಷೆ ನೇತ್ರಾವತಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್, ವಿವಿಧ ಗ್ರಾಮ ಪಂಚಾಯತಿಗಳ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಹಾಗೂ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ಕೇರ್ ಟೇಕರ್ ಗಳು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!