ತುಮಕೂರು: ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಯುವ ಜನತೆಯ ಸಬಲೀಕರಣಕ್ಕೆ ವಿದ್ಯಾರ್ಹತೆಯ ಜೊತೆಗೆ ಮಾರುಕಟ್ಟೆ ಬಯಸುವ ವಿಭಿನ್ನ ಕೌಶಲ್ಯ ಕರಗತ ಮಾಡಿಕೊಳ್ಳುವ ಅವಶ್ಯಕತೆಯಿದೆ ಎಂದು ಕೌಶಲ್ಯ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಮುರಳೀಧರ ಹಾಲಪ್ಪ ಹೇಳಿದರು.
ತುಮಕೂರು ವಿಶ್ವ ವಿದ್ಯಾಲಯ ಕಲಾ ಕಾಲೇಜಿನ ವಾಣಿಜ್ಯ ಶಾಸ್ತ್ರ ಮತ್ತು ನಿರ್ವಹಣಾ ವಿಭಾಗ ಆಯೋಜಿಸಿದ್ದ ಕೌಶಲ್ಯಅಭಿಯಾನ ಯುವ ಸಬಲೀಕರಣ ಕುರಿತ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಇಂದು ಉನ್ನತ ಹುದ್ದೆಯಲ್ಲಿರುವ ಅನೇಕರು ಗ್ರಾಮೀಣ ಭಾಗದಲ್ಲಿ ವಿದ್ಯಾಭ್ಯಾಸ ಮಾಡಿ ಬಂದವರೇ ಆಗಿದ್ದು, ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಗುರಿಯನ್ನಿಟ್ಟುಕೊಂಡು ವಿದ್ಯಾಭ್ಯಾಸ ಮಾಡಿದರೆ ಕನಸು ನನಸಾಗುವುದರಲ್ಲಿ ಯಾವುದೇ ಸಂಶಯವಿಲ್ಲ, ಅವಕಾಶಗಳ ಸದ್ಬಳಕೆಯಿಂದ ಯಶಸ್ಸು ನಿಮ್ಮದಾಗುತ್ತದೆ ಎಂದು ತಿಳಿಸಿದರು.
ತುಮಕೂರು ವಿಶ್ವ ವಿದ್ಯಾಲಯದ ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು ಮಾತನಾಡಿ, ಸಂಶೋಧನೆಗೆ ಒತ್ತು ಕೊಟ್ಟು ನಮ್ಮ ವಿವಿಯ ಹಾಗೂ ಇಂಗ್ಲೆಡ್ ನ ಬರ್ಮಿಂಗ್ಹ್ಯಾಮ್ ವಿಶ್ವ ವಿದ್ಯಾಲಯದ ಸಂಶೋಧನಾರ್ಥಿಗಳು, ವಿದ್ಯಾರ್ಥಿಗಳು ವಿನಿಮಯ ಆಧಾರಿತ ಪದ್ಧತಿ ಅನುಸರಿಸಲು ಮುಂದಾಗಿದೆ, ಈ ಅಧ್ಯಯನ ಮಾರ್ಗಕ್ಕೆ 10000 ಯುಕೆ ಪೌಂಡ್ ಗಳ ವೇತನ ದೊರೆಯಲಿದೆ ಎಂದು ತಿಳಿಸಿದರು.
ವಿಶ್ವ ವಿದ್ಯಾಲಯದಲ್ಲಿ ಶೇ.70 ರಷ್ಟು ವಿದ್ಯಾರ್ಥಿಗಳು ಗ್ರಾಮೀಣ ಭಾಗದಿಂದ ಬರುತ್ತಾರೆ, ಪ್ರತಿಭೆಗೆ ಕೊರತೆ ಇಲ್ಲದಿದ್ದರೂ ಕೌಶಲ್ಯ ತರಬೇತಿಯ ಅಗತ್ಯವಿದೆ, ಸೂಕ್ತ ವೇದಿಕೆಯ ಅಗತ್ಯವಿದೆ, ಕೈಗಾರಿಕೋದ್ಯಮಗಳ ಪರಿಚಯ, ಉದ್ಯಮಶೀಲಾಧಾರಿತ ಕಾರ್ಯಕ್ರಮ ಆಯೋಜಿಸುವ, ವಿದ್ಯಾರ್ಥಿಗಳಲ್ಲಿ ಉದ್ಯೋಗದ ಅವಶ್ಯಕತೆಯ ಅರಿವು ಮೂಡಿಸುವ ನಿಟ್ಟಿನಲ್ಲಿ ವಿವಿ ಮುನ್ನುಗ್ಗುತ್ತಿದೆ ಎಂದರು.
ಎಸ್ ಬಿ ಐ ಬ್ಯಾಂಕ್ ನ ಜಿಲ್ಲಾ ಮುಖ್ಯ ವ್ಯವಸ್ಥಾಪಕ ಪ್ರಕಾಶ್ ಮಾತನಾಡಿ, ಸರ್ಕಾರದಿಂದ ಬಹಳಷ್ಟು ಬ್ಯಾಂಕಿಂಗ್ ಪರೀಕ್ಷೆ ಆಯೋಜಿಸಲಾಗುತ್ತಿದೆ, ಪರೀಕ್ಷೆಗೆ ತರಬೇತಿ ಬಹಳ ಮುಖ್ಯ, ಉತ್ತೀರ್ಣರಾಗಲಿಲ್ಲ ಎಂದು ಎದೆಗುಂದುವುದು ಬೇಡ, ಪ್ರಯತ್ನ ಮಾಡಿ ಸಾಮರ್ಥ್ಯ ಹೆಚ್ಚಿಸಿಕೊಳ್ಳಿ, ಶಿಕ್ಷಣಕ್ಕೆ ಶೇ.4% ಬಡ್ಡಿ ದರದಲ್ಲಿ 30 ಲಕ್ಷದ ವರೆಗೂ ಬ್ಯಾಂಕ್ ಗಳಲ್ಲಿ ಸಾಲ ದೊರೆಯುತ್ತದೆ ಎಂದು ತಿಳಿಸಿದರು.
ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತುದಾರ ರಾಜೀವ್ ಪ್ರಕಾಶ್ ಮಾತನಾಡಿ, ನಿರುದ್ಯೋಗ ಸಮಸ್ಯೆ ಉಂಟಾಗುತ್ತಿರುವುದಕ್ಕೆ ಪ್ರಮುಖ ಕಾರಣ ಮಾಹಿತಿಯ ಕೊರತೆ, ಪ್ರಶ್ನೆ ಕೇಳುವ ಮೂಲಕ ಹೊಸ ಜಗತ್ತನ್ನು ಅರ್ಥೈಸಿಕೊಳ್ಳಬೇಕು, ಸಂವಹನ, ತಂತ್ರಜ್ಞಾನದ ಅರಿವಿದ್ದರೆ ಯಾವುದೇ ಪರೀಕ್ಷೆ ಎದುರಿಸಬಹುದು ಎಂದು ಹೇಳಿದರು
ಕಾರ್ಯಕ್ರಮದಲ್ಲಿ ವಿವಿ ಕುಲಸಚಿವೆ ನಾಹಿದಾ ಜಮ್ ಜಮ್, ಕಲಾ ಕಾಲೇಜಿನ ಪ್ರಾಂಶುಪಾಲ ಪ್ರೊ.ಬಿ.ಕರಿಯಣ್ಣ, ವಾಣಿಜ್ಯ ಶಾಸ್ತ್ರ ಮತ್ತು ನಿರ್ವಹಣಾ ವಿಭಾಗದ ಮುಖ್ಯಸ್ಥೆ ಡಾ.ಸಿ.ಶೋಭಾ, ಎಂ ಎಸ್ ಎಂ ಇ ನಿವೃತ್ತ ನಿರ್ದೇಶಕ ಬದ್ರಿನಾಥ್, ತುಮಕೂರು ಜಿಲ್ಲಾ ಪಂಚಾಯತ್ ಶಿಕ್ಷಣ ಅಧಿಕಾರಿ ಸುಧಾಕರ್, ರೂಟ್ ಸಿಟಿ ವ್ಯವಸ್ಥಾಪಕ ಪ್ರದೀಪ್ ಭಾಗವಹಿಸಿದ್ದರು.
Comments are closed.