ಸಪ್ತ ಸ್ವರಗಳಿಗೆ ಕುಲ ನೆಲದ ಸೋಂಕಿಲ್ಲ

45

Get real time updates directly on you device, subscribe now.


ತುಮಕೂರು: ಸಪ್ತ ಸ್ವರಗಳಿಗೆ ಕುಲ ನೆಲದ ಸೋಂಕಿಲ್ಲ, ಶಿಕ್ಷಣ, ಸಂಗೀತ, ಕ್ರೀಡೆ ಇವುಗಳನ್ನು ಎಲ್ಲರೂ ದಕ್ಕಿಸಿಕೊಳ್ಳಲು ಸಾಧ್ಯ ಎಂದು ನೆಲಮಂಗಲ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಡಾ.ಕೆ.ಶ್ರೀನಿವಾಸ ಮೂರ್ತಿ ತಿಳಿಸಿದರು.
ನಗರದ ಸಿದ್ದಾರ್ಥ ಪ್ರರ್ಥಮ ದರ್ಜೆ ಕಾಲೇಜಿನಲ್ಲಿ ರಂಗ ಕೀರ್ತನ ಸಂಪದ, ಮಲ್ಲಸಂದ್ರ ಇವರು ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ಬೆಂಗಳೂರು ಇವರ ಸಹಕಾರದಲ್ಲಿ ಆಯೋಜಿಸಿದ್ದ ಸಾಂಸ್ಕೃತಿಕ ಸಂಜೀವಿನಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಪಿ.ಕಾಳಿಂಗರಾಯರು, ಮೈಸೂರು ಅನಂತಸ್ವಾಮಿ, ಸಿ.ಅಶ್ವಥ್ ಅವರು ಕುಲ ನೆಲದ ಆಚೆಗೂ ಮೀರಿ ಸಂಗೀತ ತೆಗೆದುಕೊಂಡು ಹೋಗಿದ್ದಾರೆ, ಪುರಂದರದಾಸರು, ಕನಕದಾಸರ ಕೀರ್ತನೆ ಹಾಡುವ ಮೂಲಕ ದಾಸ ಸಾಹಿತ್ಯ ಉಜ್ವಲಗೊಳಿಸಿದ್ದಾರೆ ಎಂದರು.

ಯುವ ಜನತೆ ಇಂದು ಹೆಚ್ಚಾಗಿ ಸಿನಿಮಾ ಹಾಡುಗಳ ಕಡೆಗೆ ಹೆಚ್ಚು ಒಲವು ತೋರುತ್ತಿದೆ, ಆದರೆ ಅದಕ್ಕಿಂತಲೂ ಮಿಗಿಲಾದ ಭಾವಗೀತೆ, ಜಾನಪದ ಗೀತೆ, ವಚನಗಳ ಕಡೆಗು ಗಮನ ಹರಿಸಬೇಕಿದೆ, ಸುಗಮ ಸಂಗೀತ ಇಂದು ಬಹು ಜನರು ಅನುಭವಿಸುತ್ತಿರುವ ಮಧುಮೇಹ, ಅಧಿಕ ರಕ್ತ ದೊತ್ತಡದಂತಹ ಖಾಯಿಲೆಗಳಿಗೆ ಚಿಕಿತ್ಸಾ ರೂಪಕವಾಗಿ ಕೆಲಸ ಮಾಡಲಿದೆ ಎಂದು ಡಾ.ಕೆ.ಶೀನಿವಾಸಮೂರ್ತಿ ತಿಳಿಸಿದರು.
ತುಮಕೂರು ವಿವಿ ಸಮಾಜ ಕಾರ್ಯ ವಿಭಾಗದ ಪ್ರಾಧ್ಯಾಪಕ ಪ್ರೊ.ಬಿ.ರಮೇಶ್ ಮಾತನಾಡಿ, ಕಲೆ, ಸಾಹಿತ್ಯ, ಸಂಗೀತ ಇವುಗಳನ್ನು ಕೇವಲ ಮನರಂಜನಾ ದೃಷ್ಟಿಯಿಂದ ನೋಡುವುದರಿಂದ ಹೆಚ್ಚಿನ ಪ್ರಯೋಜನವಿಲ್ಲ, ಆದರೆ ಚಿಕಿತ್ಸಕ ದೃಷ್ಟಿಯಿಂದ ಹೆಚ್ಚು ಉಪಯೋಗವಿದೆ, ವಿದೇಶಗಳಲ್ಲಿ ಸಂಗೀತ ತೆರಪಿಯ ಬಹುದೊಡ್ಡ ಕೋರ್ಸ್ಗಳೇ ಇವೆ, ಮಕ್ಕಳ ಚಿಕಿತ್ಸೆ, ಮನೋರೋಗ, ಕ್ಯಾನ್ಸರ್, ಹೃದ್ರೋಗ ಸಂಬಂಧಿ ಹಾಗೂ ಹದಿ ಹರೆಯದ ಮಕ್ಕಳ ಚಿಕಿತ್ಸೆ ವೇಳೆ ಸಂಗೀತ ತೆರಪಿಗೆ ಹೆಚ್ಚಿನ ಮಹತ್ವ ನೀಡಲಾಗುತ್ತದೆ, ಸಂಗೀತ ಮತ್ತು ಶಿಕ್ಷಣಕ್ಕೆ ನಿಕಟ ಸಂಬಂಧವಿದೆ, ಯಾರು ಸಂಗೀಸಾಕ್ತರಾಗಿರುತ್ತಾರೋ, ಅವರ ಬೌದ್ಧಿಕ ಮಟ್ಟವೂ ಚೆನ್ನಾಗಿರುತ್ತದೆ, ಮನುಷ್ಯನಲ್ಲಿ ಧನಾತ್ಮಕ ಚಿಂತನೆ ಮೂಡಿಸಿ ಆಹ್ಲಾದಕರ ಸಾಂಸಾರಿಕ ಜೀವನಕ್ಕೆ ಸಂಗೀತ ಸಹಕಾರಿ ಯಾಗಲಿದೆ, ಹಾಗಾಗಿ ಸಂಗೀತವನ್ನು ಮನರಂಜನೆಯಾಗಿ ಗ್ರಹಿಸದೆ, ಚಿಕಿತ್ಸ ವಿಧಾನವಾಗಿ ಗ್ರಹಿಸಿದರೆ ಒಳ್ಳೆಯದೆಂದರು.

ತುಮಕೂರು ವಿವಿ ವಿಜ್ಞಾನ ಕಾಲೇಜಿನ ಕನ್ನಡ ಉಪನ್ಯಾಸಕ ಡಾ.ವೆಂಕಟರೆಡ್ಡಿ ರಾಮರೆಡ್ಡಿ ಮಾತನಾಡಿ, ಸಂಗೀತದಲ್ಲಿ ಜೀವ ದ್ರವ್ಯವಿದೆ, ಸಂಗೀತ ಮನಸ್ಸಿಗೆ ಆನಂದ ನೀಡುತ್ತದೆ, ಇದರಿಂದ ಮನುಷ್ಯನ ದೈಹಿಕ ಬೆಳೆವಣಿಗೆಯೂ ಸರಿಯಾಗಿ ಆಗಲಿದೆ, ರಂಗಕೀರ್ತನ ಸಂಸ್ಥೆಯ ಡಾ.ಲಕ್ಷ್ಮಣದಾಸ್ ಜನ ಕಥಾ ಕೀರ್ತನ ಎಂಬ ಹೊಸ ಪ್ರಕಾರವನ್ನೇ ಹುಟ್ಟು ಹಾಕುವ ಮೂಲಕ ಈ ಸಮಾಜದ ಸುಧಾರಣೆಗಾಗಿ ಹೋರಾಡಿದ ಅನೇಕರನ್ನು ಯುವ ಜನರಿಗೆ ಪರಿಚಯಿಸಿದ್ದಾರೆ ಎಂದರು.
ಸ್ವರಸಿಂಚನ ಸುಗಮ ಸಂಗೀತ, ಜನಪದ ಕಲಾ ಸಂಘದ ಕೆಂಕೆರೆ ಮಲ್ಲಿಕಾರ್ಜುನ್ ಮಾತನಾಡಿ, ಸ್ವರಸಿಂಚನ ಮತ್ತು ರಂಗಕೀರ್ತನ ಸಂಪದ ಎರಡು ಸಂಸ್ಥೆಗಳು ಒಂದಕ್ಕೊಂದು ಪೂರಕವಾಗಿ ಕೆಲಸ ನಿರ್ವಹಿಸುತ್ತಿವೆ, ಬೇರೆಲ್ಲಾ ಉದ್ಯೋಗಗಳಲ್ಲಿ ಆಯಾಯ ವರ್ಗದವರು ಗೌರವಿಸಿದರೆ ಕಲಾವಿದನಿಗೆ ಎಲ್ಲಾ ವರ್ಗದವರಿಂದಲೂ ಗೌರವ ಸಲ್ಲುತ್ತದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಿದ್ದಾರ್ಥ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ.ಪಿ.ಹೇಮಲತಾ ಮಾತನಾಡಿ, ಓರ್ವ ವ್ಯಕ್ತಿಯ ಬೆಳವಣಿಗೆಯಲ್ಲಿ ಸಂಗೀತ ಮಹತ್ವದ ಪಾತ್ರ ವಹಿಸುತ್ತದೆ, ಮನಸ್ಸಿನ ಏಕಾಗ್ರತೆ, ನೆನಪಿನ ಶಕ್ತಿ ಹೆಚ್ಚಿಸುವ ಸಂಗೀತವನ್ನು ನಾವೆಲ್ಲರೂ ಆಸ್ವಾದಿಸುವ ಗುಣ ಬೆಳೆಸಿಕೊಳ್ಳೋಣ ಎಂದರು.

ರಂಗಕೀರ್ತನ ಸಂಪದ, ಮಲ್ಲಸಂದ್ರ ಇದರ ಅಧ್ಯಕ್ಷ ಕಲಾಶ್ರೀ ಡಾ.ಲಕ್ಷ್ಮಣದಾಸ್ ಮಾತನಾಡಿ, ನಾನು ನಂಬಿದ ಸಂಗೀತ ನನಗೆ ಎಲ್ಲವನ್ನು ತಂದುಕೊಟ್ಟಿದೆ, ನನ್ನ ಹಲವಾರು ಕಾರ್ಯಕ್ರಮಗಳಿಗೆ ಸಿದ್ದಾರ್ಥ ಶಿಕ್ಷಣ ಸಂಸ್ಥೆ ಅವಕಾಶ ನೀಡಿ, ಪ್ರೋತ್ಸಾಹಿಸಿದೆ, ಇಂದಿನ ಕಾರ್ಯಕ್ರಮಕ್ಕೆ ನೆಲಮಂಗಲ ಕ್ಷೇತ್ರದ ಮಾಜಿ ಶಾಸಕ ಡಾ.ಕೆ.ಶ್ರೀನಿವಾಸಮೂರ್ತಿ ಆಗಮಿಸಿ, ಮಹಾ ಭಾರತದ ಕರ್ಣದ ಹಾಡೊಂದನ್ನು ಹಾಡುವ ಮೂಲಕ ಕಾರ್ಯಕ್ರಮಕ್ಕೆ ಮೆರುಗು ನೀಡಿದ್ದಾರೆ, ಇದಕ್ಕೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.

ಸಾಂಸ್ಕೃತಿಕ ಸಂಜೀವಿನಿ ಕಾರ್ಯಕ್ರಮದಲ್ಲಿ ದಿಬ್ಬೂರು ಮಂಜು ಮತ್ತು ತಂಡದವರಿಗೆ ಗೀತ ಗಾಯನ, ಜಿ.ಶೀಲಾ ನಾಯ್ಡು ಮತ್ತು ತಂಡದವರಿಂದ ಸಂಕೀರ್ತನ ಗಾಯನ, ಬಿ.ಎಸ್.ಶ್ರೀನಿವಾಸ ಮೂರ್ತಿ ಮತ್ತು ವೃಂದದವರಿಂದ ಭಕ್ತಿಗೀತೆಗಳ ಗಾಯನ ನಡೆಯಿತು.
ವೇದಿಕೆಯಲ್ಲಿ ಶೀಲಾ ನಾಯ್ಡು, ಶ್ರೀಸಿದ್ದಾರ್ಥ ಪ್ರಥಮ ದರ್ಜೆ ಕಾಲೇಜಿನ ಸಾಂಸ್ಕೃತಿಕ ವಿಭಾಗದ ಮುಖ್ಯಸ್ಥ ಪ್ರೊ.ರಮೇಶ್ ಮಣ್ಣೆ, ಉಪನ್ಯಾಸಕ ಶ್ರೀನಿವಾಸ ಮೂರ್ತಿ ಪಾಲ್ಗೊಂಡಿದ್ದರು.

Get real time updates directly on you device, subscribe now.

Comments are closed.

error: Content is protected !!