ಮಧುಗಿರಿ: ಪಟ್ಟಣದ ಕೆಲ ವಾರ್ಡ್ಗಳಲ್ಲಿ ನೀರಿನ ಅಭಾವ ಹೆಚ್ಚಾಗಿ ಕೊಳವೆ ಬಾವಿಯ ನೀರಿಗೆ ಅವಲಂಬಿತರಾದರೆ ಕೆಲವರು ಖಾಸಗಿ ಟ್ಯಾಂಕರ್ ಗಳತ್ತಾ ಮೋರೆ ಹೋಗುತ್ತಿರುವುದು ಕಂಡು ಬರುತ್ತಿದೆ.
ಪಟ್ಟಣದ ಮಧ್ಯ ಭಾಗದಲ್ಲಿ ಹಾಗೂ ಕೆಲವು ವಾರ್ಡ್ಗಳಲ್ಲಿ ನೀರಿನ ಅಭಾವ ಎದುರಾಗಿದ್ದು ನಾಗರಿಕರು ನೀರಿಗಾಗಿ ಜಗಳವಾಡುತ್ತಿರುವ ಘಟನೆಗಳು ಕಂಡು ಬರುತ್ತಿದೆ, ಈ ಹಿಂದೆ ಎರಡು ದಿನಕ್ಕೆ ಒಮ್ಮೆ ಕೊಳಾಯಿಗಳ ಮೂಲಕ ನೀರು ಹರಿಸಲಾಗುತ್ತಿತ್ತು, ಆದರೆ ಈಗ ವಾರಕ್ಕೊಮ್ಮೆ, ಹದಿನೈದು ದಿನಗಳಿಗೊಮ್ಮೆ ಒಂದು ಘಂಟೆ ಕಾಲ ಕೊಳವೆ ಬಾವಿಯ ನೀರು ಹರಿಸಲಾಗುತ್ತಿದೆ.
ಕಳೆದ ವರ್ಷ ಹೆಚ್ಚು ಮಳೆಯಾಗಿದ್ದರಿಂದ ಕೆರೆ ನೀರು ಯಥೇಚ್ಚವಾಗಿ ಸಂಗ್ರಹಣೆಯಾಗಿದ್ದರಿಂದ ಹೇಮಾವತಿ ನದಿಯ ನೀರಿನ ಬಗ್ಗೆ ಅಷ್ಟಾಗಿ ಗಮನಹರಿಸಿರಲಿಲ್ಲದ ಪರಿಣಾಮ ಬಳ್ಳಾಪುರದ ಪಂಪ್ ಹೌಸ್ ನಲ್ಲಿ ಬೃಹತ್ ಮೋಟಾರು ಪಂಪ್ಗಳನ್ನು ಯಾರೋ ಅಪರಿಚಿತರು ಕಳವು ಮಾಡಿದ್ದರು.
ಕೆ.ಎನ್.ರಾಜಣ್ಣನವರು ಮತ್ತೆ ಆಯ್ಕೆಯಾದ ನಂತರ ಪಟ್ಟಣಕ್ಕೆ ನಿಗದಿತ ಪ್ರಮಾಣದ ನೀರು ಹರಿಸಿಕೊಳ್ಳುವ ಸಲುವಾಗಿ ಕಳವು ಮಾಡಲಾಗಿರುವ ಮೋಟಾರು ಪಂಪ್ ಗಳ ಖರೀದಿಗಾಗಿ ಟೆಂಡರ್ ಪ್ರಕ್ರಿಯೆ ಸಂಪೂರ್ಣ ಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು, ಕಾಮಗಾರಿಯು ಆರಂಭವಾಗಿ ಸಿದ್ದಾಪುರದ ಕೆರೆಗೆ ನೀರು ಹರಿಸಲು ಈಗಾಗಲೇ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ.
ಸಿಹಿ ನೀರು ಬಾವಿ ಬಳಿ ಕಳೆದ ಹದಿನೈದು ದಿನಗಳಿಂದ ನೀರು ಸರಬರಾಜು ಆಗಿಲ್ಲದ ಪರಿಣಾಮ ಸ್ಥಳೀಯರು ಪುರಸಭೆಯ ಅಧಿಕಾರಿಗಳ ವಿರುದ್ಧ ಹಿಡಿ ಶಾಪ ಹಾಕುತ್ತಿದ್ದ ಹಿನ್ನೆಲೆಯಲ್ಲಿ ಮುಖ್ಯಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಿದ್ದರು ನೀರಿನ ದಾಹ ಇನ್ನೂ ತೀರಿಲ್ಲ.
ಶ್ರೀನಿವಾಸ ಬಡಾವಣೆಯಲ್ಲಿ ಇದ್ದಂತಹ ಕೊಳವೆಬಾವಿ ಕೆಟ್ಟು ನಿಂತಿದ್ದು ನಾಗರಿಕರು ಹಲವು ದಿನಗಳಿಂದ ನೀರಿನ ಅಭಾವ ಎದುರಿಸುತ್ತಿರುವ ಬಗ್ಗೆ ಉಪ ವಿಭಾಗಾಧಿಕಾರಿ ರಿಷಿ ಆನಂದ್ ಹಾಗೂ ಪುರಸಭೆಯ ಮುಖ್ಯಾಧಿಕಾರಿ ಸುರೇಶ್ ಖುದ್ದು ಸ್ಥಳಕ್ಕೆ ಭೇಟಿ ನೀಡಿ ಪ್ರತ್ಯೇಕವಾಗಿ ವಸತಿ ಗೃಹಗಳ ಬಳಿಯಿರುವ ಕೊಳವೆ ಬಾವಿಯಿಂದ ಪೈಪ್ ಲೈನ್ ಅಳವಡಿಸುವುದಾಗಿ ಜನರಿಗೆ ಭರವಸೆ ನೀಡಿದ್ದರು ಸಹ ಪೈಪ್ ಲೈನ್ ಕಾಮಗಾರಿ ಇನ್ನೂ ಆರಂಭವಾಗಿಲ್ಲ.
ಪಟ್ಟಣದ ಕೊತ್ವಾಲ್ ಗಲ್ಲಿ ಹಾಗೂ ದೊಡ್ಡಹಟ್ಟಿ, ದೊಡ್ಡಪೇಟೆ, ಸಿದ್ದನಾಯಕನ ಗಲ್ಲಿ, ಚಿನ್ನಪ್ಪನ ಗಲ್ಲಿ, ಕವಾಡಿಗರ ಬೀದಿ, ಹಳೇ ತಾಲೂಕು ಕಚೇರಿಯ ರಸ್ತೆ ಸಮೀಪದ ಮನೆಗಳಿಗೆ ಕಳೆದ ಹತ್ತು ದಿನಗಳಿಂದ ನೀರಿನ ಅಭಾವ ಉಂಟಾಗಿದ್ದು ಕೆರೆಯಲ್ಲಿ ನೀರಿಲ್ಲದಂತಾಗಿರುವುದರಿಂದ ಇನ್ನೂ ಎಷ್ಟೂ ದಿನಗಳ ಕಾಲ ಕೊಳವೆ ಬಾವಿಗಳಿಂದ ನೀರು ಹರಿಸಲು ಸಾಧ್ಯವೆನ್ನುತ್ತಿದ್ದಾರೆ ಕೆಲವರು.
ಈ ಹಿಂದೆ ಕಾಣೆಯಾಗಿದ್ದ ನೀರು ಸರಬರಾಜು ಮಾಡುವ ಖಾಸಗಿ ಟ್ಯಾಂಕರ್ ಗಳು ಈಗ ಪಟ್ಟಣದಲ್ಲಿ ಸದ್ದು ಮಾಡುತ್ತಿದ್ದು, ಖಾಸಗಿ ಟ್ಯಾಂಕರ್ ನೀರಿಗಾಗಿ ಐದು ನೂರು ವ್ಯಯಿಸಬೇಕಾದ ಅನಿರ್ವಾಯತೆ ಜನರಿಗೆ ಉಂಟಾಗಿದ್ದು ಟ್ಯಾಂಕರ್ ಹಾವಳಿ ಹೆಚ್ಚಾಗಿರುವುದು ಕಂಡು ಬರುತ್ತಿದೆ.
ಸಿದ್ದಾಪುರ ಕೆರೆಯಲ್ಲಿ ನೀರು ಸಂಪೂರ್ಣ ಖಾಲಿಯಾಗಿರುವುದರಿಂದ ಕೆಲ ಕೊಳವೆ ಬಾವಿಗಳಿಂದ ನೀರು ಪೂರೈಕೆಯಾಗುತ್ತಿದ್ದರು ಸಹ ನೀರಿನ ಅಭಾವ ಮಾತ್ರ ದಿನೇ ದಿನೇ ಹೆಚ್ಚಾಗುತ್ತಲೆ ಇದೆ, ಸಂಬಂಧಪಟ್ಟ ಅಧಿಕಾರಿಗಳು ಯಾವ ಕ್ರಮ ಕೈಗೊಳ್ಳುತ್ತಾರೋ ಕಾದು ನೋಡಬೇಕು.
Comments are closed.