ಕುಣಿಗಲ್: ಪುರಸಭೆ ಪಟ್ಟಣದಲ್ಲಿ ನೈರ್ಮಲ್ಯ ನಿರ್ವಹಣೆ ನಿಟ್ಟಿನಲ್ಲಿ ವಿಫಲವಾಗಿರುವ ಬಗ್ಗೆ ವಿವಿಧ ಸಂಘ, ಸಂಸ್ಥೆ ಪದಾಧಿಕಾರಿಗಳು ಮುಖ್ಯಾಧಿಕಾರಿಗಳ ಮುಂದೆಯೆ ಪರಿಸರ ಅಭಿಯಂತರರನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು.
ಪುರಸಭೆಯ 2024- 25ನೇ ಸಾಲಿನ ಬಜೆಟ್ ಪೂರ್ವ ತಯಾರಿಗೆ ಸಂಘ, ಸಂಸ್ಥೆ ಪದಾಧಿಕಾರಿಗಳ ಸಭೆ ಬುಧವಾರ ಮಧ್ಯಾಹ್ನ ಪುರಸಭೆ ಆಡಳಿತಾಧಿಕಾರಿಗಳ ಕೊಠಡಿಯಲ್ಲಿ ಕರೆಯಲಾಗಿತ್ತು, ಸಭೆಯಲ್ಲಿ ಮೊದಲಿಗೆ ಪುರಸಭೆಗೆ ಕಂದಾಯ ವೃದ್ಧಿಗೆ ಪೂರಕವಾಗಿ ಪಟ್ಟಣದಲ್ಲಿ ಪುರಸಭೆ ವತಿಯಿಂದಲೆ ಜಾಹಿರಾತು ಪ್ರಕಟಣೆ ಫಲಕ ಅಳವಡಿಸಲು, ಸಾವಿರಾರು ಮಳಿಗೆ ಇದ್ದರೂ ಕೆಲವೆ ಮಳಿಗೆಗೆ ಮಾತ್ರ ಉದ್ದಿಮೆ ಪರವಾನಗಿ ನೀಡಿದ್ದು ಎಲ್ಲಾ ಮಳಿಗೆಗೆ ಉದ್ದಿಮೆ ಪರವಾನಗಿ ನೀಡುವಂತೆ, ವಿವಿಧೆಡೆಯಲ್ಲಿ ನಿರ್ಮಿಸಲಾಗಿರುವ ಶೌಚಾಲಯಗಳನ್ನು ಸಾರ್ವಜನಿಕ ಬಳಕೆಗೆ ನೀಡುವಂತೆ, ವಿವಿಧ ರಸ್ತೆಗಳಿಗೆ ನಾಮಕರಣ ಮಾಡುವಂತೆ, ಪುರಸಭೆಯ ಹುಚ್ಚಮಾಸ್ತಿ ಗೌಡ ಸರ್ಕಲ್ ಅಭಿವೃದ್ಧಿಗೊಳಿಸುವಂತೆ, ಪಟ್ಟಣದಲ್ಲಿ ಉತ್ತಮ ಪರಿಸರ ಸಂರಕ್ಷಣೆ ನಿಟ್ಟಿನಲ್ಲಿ ಹಸಿರುಕರಣಕ್ಕೆ ಒತ್ತು ನೀಡಲು ಕ್ರಮ ಕೈಗೊಳ್ಳುವಂತೆ, ಪಾರ್ಕ್ಗಳಿದ್ದರೂ ಅಭಿವೃದ್ಧಿಯಾಗದ ಕಾರಣ ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಖಾಸಗಿ ಸಹ ಭಾಗಿತ್ವದಲ್ಲಿ ಕ್ರಮ ಕೈಗೊಳ್ಳುವಂತೆ ಸಲಹೆ ನೀಡಿದರು.
ಪಟ್ಟಣದ ಮುಖ್ಯರಸ್ತೆಯ ಫುಟ್ ಪಾತ್ ಗಳಲ್ಲಿ ಪೆಟ್ಟಿ ಅಂಗಡಿಗಳು ಹೆಚ್ಚಳವಾಗಿದ್ದು ಪುರಸಭೆ ಜಾಗದಲ್ಲಿ ಖಾಸಗಿಯವರು ಹಣ ವಸೂಲು ಮಾಡುವುದು ನಿಯಂತ್ರಿಸಿ ಪುರಸಭೆಯಿಂದಲೆ ಫುಡ್ ಪಾರ್ಕ್ ಸೇರಿದಂತೆ ವ್ಯಾಪಾರಕ್ಕೆ ಅನುವು ಮಾಡಿಕೊಡುವಂತೆ ಪಟ್ಟಣದ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲು ಸುಸಜ್ಜಿತ ಸಭಾಂಗಣ ನಿರ್ಮಿಸಲು ಸಲಹೆ ನೀಡಿದರು.
ನೈರ್ಮಲ್ಯ ಸಮಸ್ಯೆ ನಿರ್ವಹಣೆ ಆಗದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಮುಖಂಡರು, ಕೊವಿಡ್ ಅಲೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಹೋಟೆಲ್ ಗಳಲ್ಲಿ ಲೋಟಗಳನ್ನು ಬಿಸಿ ನೀರಿನಿಂದ ತೊಳೆಯುವಂತೆ, ಕೋಳಿ, ಮಾಂಸ ಕತ್ತರಿಸಿ ಮುಖ್ಯ ರಸ್ತೆಯಲ್ಲೆ ಹಾಗೆ ನೇತುಹಾಕಿ ಕತ್ತರಿಸುವವರು ಸ್ವಚ್ಛತೆ ಕಾಪಾಡದೆ ಧೂಳುಯುಕ್ತ ಮಾಂಸ ಮಾರಾಟ ಮಾಡುತ್ತಿದ್ದು ನಿಯಂತ್ರಿಸುವಂತೆ, ಸೊಳ್ಳೆ ಹಾವಳಿ ನಿಯಂತ್ರಿಸುವ ನಿಟ್ಟಿನಲ್ಲಿ ಫಾಗಿಂಗ್ ಮಷಿನ್ ಇದ್ದರೂ ಕ್ರಮಕೈಗೊಳ್ಳದ ಪರಿಸರ ಅಭಿಯಂತರ ಕ್ರಮಕ್ಕೆ ಖಂಡನೆ ವ್ಯಕ್ತಪಡಿಸಿದರಲ್ಲದೆ, ಬ್ಲೀಚಿಂಗ್ ಪೌಡರ್ ಟನ್ ಗಟ್ಟಲೆ ತರಿಸಿದರೂ ಅದನ್ನು ಪುರಸಭೆ ಸದಸ್ಯರ ಮನೆಗೆ ನೀಡುವ ಪರಿಪಾಠ ತಪ್ಪಿಸಿ ಅಗತ್ಯ ಜಾಗದಲ್ಲಿ ಸಿಂಪಡಿಸಲು ಕ್ರಮ ಕೈಗೊಳ್ಳುವಂತೆ ಪಟ್ಟಣದಲ್ಲಿ ಕಸದ ರಾಶಿ ಹೆಚ್ಚಳವಾಗುತ್ತಿದ್ದು ಕ್ರಮ ವಹಿಸುವಂತೆ, ಬಹಳಷ್ಟು ಹೋಟೆಲ್ ಗಳು ಉದ್ದಿಮೆ ಪರವಾನಗಿ ಇಲ್ಲದೆ, ಸ್ವಚ್ಛತೆ ಇಲ್ಲದೆ ನಿರ್ವಹಿಸುತ್ತಿದ್ದು ಕ್ರಮ ವಹಿಸುವಂತೆ ಆಗ್ರಹಿಸಿ, ಪರಿಸರ ಅಭಿಯಂತರ ಚಂದ್ರಶೇಖರ್ ಅವರನ್ನು ತರಾಟೆಗೆ ತೆಗೆದುಕೊಂಡರು.
ಮುಖ್ಯಾಧಿಕಾರಿ ಶಿವಪ್ರಸಾದ್ ಮಾತನಾಡಿ, ನೈರ್ಮಲ್ಯ ನಿರ್ವಹನೆಗೆ ಕ್ರಮ ಕೈಗೊಂಡು, ಬಜೆಟ್ ಪೂರ್ವಭಾವಿ ಅಗತ್ಯ ಅಂಶಗಳನ್ನು ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂಬ ಭರವಸೆ ನೀಡಿದರು. ವ್ಯವಸ್ಥಾಪಕಿ ಗೀತಾ, ಅಕೌಂಟೆಂಟ್ ರೂಪಾ, ಆರೋಗ್ಯ ನಿರೀಕ್ಷಕ ಮುನಿಸ್ವಾಮಿ, ಶ್ರೀಕಾಂತ ಇತರರು ಇದ್ದರು.
Comments are closed.