ತುಮಕೂರು: ಬಿದರಕಟ್ಟೆಯಲ್ಲಿ ನಿರ್ಮಾಣವಾಗುತ್ತಿರುವ ವಿಶ್ವ ವಿದ್ಯಾಲಯದ ನೂತನ ಕ್ಯಾಂಪಸ್ ನಲ್ಲಿ ಪ್ರಕೃತಿಯೊಂದಿಗೆ ಜ್ಞಾನ ಪರಿಕಲ್ಪನೆಯಲ್ಲಿ ಹಸಿರು ಗ್ರಂಥಾಲಯ ನಿರ್ಮಿಸುವ ಯೋಜನೆ ಪ್ರಗತಿಯಲ್ಲಿದೆ ಎಂದು ತುಮಕೂರು ವಿಶ್ವ ವಿದ್ಯಾಲಯದ ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು ತಿಳಿಸಿದರು.
ತುಮಕೂರು ವಿಶ್ವ ವಿದ್ಯಾಲಯದ ಗ್ರಂಥಾಲಯ ಬುಧವಾರ ಆಯೋಜಿಸಿದ್ದ ಗ್ರಂಥಾಲಯ ಪರಿಚಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಡೈನಿಂಗ್ ಹಾಲ್, ಕೆಫೆಟೇರಿಯಾ, ಹಾಸ್ಟೆಲ್, ಕ್ಯಾಂಟೀನ್, ಹೀಗೆ ಕ್ಯಾಂಪಸ್ ನ ಹಲವು ಭಾಗಗಳಲ್ಲಿ ವಿದ್ಯಾರ್ಥಿಗಳಿಗೆ ಪುಸ್ತಕ ಒದಗಿಸುವ ಸೌಲಭ್ಯ ಮಾಡಲಾಗುತ್ತಿದೆ, ವಿದ್ಯಾರ್ಥಿಗಳು ಮೊಬೈಲ್ ನಲ್ಲಿ ಕಾಲ ಕಳೆಯುವ ಬದಲು ಪುಸ್ತಕಗಳೊಂದಿಗೆ ಸಮಯ ಸದುಪಯೋಗ ಪಡಿಸಿಕೊಳ್ಳುವ ಯೋಜನೆ ಇದಾಗಿದೆ ಎಂದರು.
ಮೊಬೈಲ್ ನಲ್ಲಿ ಸಿಗುವುದು ಕೇವಲ ಮಾಹಿತಿ, ಜ್ಞಾನವಲ್ಲ, ಪುಸ್ತಕಗಳೊಂದಿಗೆ ಸ್ನೇಹ ಬೆಳೆಸಿದಾಗ ಮಾತ್ರ ಮಾಹಿತಿ ಜ್ಞಾನವಾಗಿ ಬದಲಾಗುತ್ತದೆ, ಓದಿನ ಹವ್ಯಾಸ ನಿತ್ಯಾಭ್ಯಾಸವಾಗಬೇಕು, ಗ್ರಂಥಾಲಯದ ಬಳಕೆ ನಿರಂತರವಾದಾಗ ಪಡೆಯುವ ಪದವಿಗೆ ನ್ಯಾಯ ಒದಗಿಸಿದಂತಾಗುತ್ತದೆ, ನಿರ್ದಿಷ್ಟ ವಿಷಯದಲ್ಲಿ ಪರಿಪೂರ್ಣರಾಗಲು ಸಹಕಾರಿಯಾಗಲಿದೆ ಎಂದರು ತಿಳಿಸಿದರು.
ವಿವಿಯ ಗ್ರಂಥಪಾಲಕ ಡಾ.ಬಿ.ರವಿವೆಂಕಟ್ ಮಾತನಾಡಿ, ವಿವಿಯ ಗ್ರಂಥಾಲಯದಲ್ಲಿ 49387 ಪುಸ್ತಕಗಳು, 36 ನಿಯತ ಕಾಲಿಕೆಗಳು ಲಭ್ಯವಿವೆ, ಇವುಗಳ ಪೈಕಿ 8481 ಅನುದಾನಿತ ಪುಸ್ತಕಗಳು, 3089 ರೂಸಾ ಪುಸ್ತಕಗಳು, 734 ಎಸ್ಸಿ, ಎಸ್ಟಿ ಅನುದಾನದ ಪುಸ್ತಕಗಳು, 5123 ಎಸ್ ಸಿ ಪಿ, ಟಿ ಎಸ್ ಪಿ ಯೋಜನೆಯ ಪುಸ್ತಕಗಳು ಸೇರಿವೆ, ಒಟ್ಟು 151 ಇ-ಪುಸ್ತಕಗಳು ಹಾಗೂ 13100 ಇ- ಜರ್ನಲ್ ಗಳು ಇಲ್ಲಿ ಲಭ್ಯವಿವೆ ಎಂದು ತಿಳಿಸಿದರು. ವಿವಿ ಕಲಾ ನಿಕಾಯದ ಡೀನ್ ಪ್ರೊ.ಎಚ್.ಕೆ.ಶಿವಲಿಂಗ ಸ್ವಾಮಿ ಭಾಗವಹಿಸಿದ್ದರು.
Comments are closed.