ಯುವ ಜನರಲ್ಲಿ ಸಂಗೀತಾಸಕ್ತಿ ಬೆಳೆಯಲಿ: ಡಾ.ಲಕ್ಷ್ಮಣದಾಸ್

59

Get real time updates directly on you device, subscribe now.


ತುಮಕೂರು: ನಮ್ಮ ಮೂಲ ಸಂಸ್ಕೃತಿಯ ಜಾನಪದ ಗೀತೆ, ರಂಗಗೀತೆ, ತತ್ವಪದಗಳ ಗಾಯನ, ಜಾನಪದ ನೃತ್ಯದಂತಹ ಕಲೆಯನ್ನು ಯುವ ಜನರು ಕಲಿತು ಮುಂದಿನ ತಲೆಮಾರಿಗೆ ಇಂತಹ ಕಲಾರಸ ಕೊಂಡೊಯ್ಯಬೇಕು ಎಂದು ಕೇಂದ್ರ ನಾಟಕ ಮತ್ತು ಸಂಗೀತ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಹಿರಿಯ ಕಲಾವಿದ ಡಾ.ಲಕ್ಷ್ಮಣದಾಸ್ ಹೇಳಿದರು.
ನಗರದ ಸ್ವರ ಸಿಂಚನ ಸುಗಮ ಸಂಗೀತ ಜಾನಪದ ಕಲಾ ಸಂಸ್ಥೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಅನನ್ಯ ಮ್ಯಾನೇಜ್ಮೆಂಟ್ ಆಫ್ ಕಾಮರ್ಸ್ ಶಿಕ್ಷಣ ಸಂಸ್ಥೆ ಸಹಯೋಗದಲ್ಲಿ ನಗರದ ಶಿವಮೂರ್ತಿ ಮುರುಘ ರಾಜೇಂದ್ರ ಸಭಾಂಗಣದಲ್ಲಿ ನಡೆದ ಕನ್ನಡ ಪದ ಹಾಡೋಣ, ಕನ್ನಡ ಪದ ಕೇಳೋಣ ಎಂಬ ಸಂಗೀತ, ನೃತ್ಯ ಕಾರ್ಯಕ್ರಮದಲ್ಲಿ ಮಾತನಾಡಿದರು.

ಜಿಲ್ಲೆಯಲ್ಲಿ ಹಲವಾರು ಸಾಧಕ ಕಲಾವಿದರಿದ್ದಾರೆ, ಅವರನ್ನು ಗುರುತಿಸಿ, ಪ್ರೋತ್ಸಾಹಿಸುವ ವೇದಿಕೆ ಮಾಡಿಕೊಟ್ಟು ಅವರ ಕಲಾ ಪ್ರತಿಭೆ ಸವಿಯುವ ಅವಕಾಶ ಮಾಡಿಕೊಡಬೇಕಾದ ಅಗತ್ಯವಿದೆ, ಕಲಾವಿದರು, ಗಾಯಕರು, ಸಾಹಿತಿಗಳು ನಮ್ಮ ಸಂಸ್ಕೃತಿಯ ರಾಯಭಾರಿಗಳಂತಿರುವ ಅವರನ್ನು ಬೆಳೆಸಿ ಗೌರವಿಸುವ ಕೆಲಸ ಸಮಾಜದಿಂದ ಆಗಬೇಕು ಎಂದು ಡಾ.ಲಕ್ಷ್ಮಣದಾಸ್ ಆಶಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಿ.ಎಂ.ರವಿಕುಮಾರ್ ಮಾತನಾಡಿ, ವಿದ್ಯಾರ್ಥಿಗಳು ಜಾನಪದ ಗಾಯನ, ರಂಗಗೀತೆ, ನೃತ್ಯದಂತಹ ಮೂಲ ಸಂಗೀತ ಕಲೆ ಕಲಿತು ಅದರ ಮಹತ್ವ ಸಾರಬೇಕು, ವಿದ್ಯಾರ್ಥಿಗಳು ಕಲೆ ಸಾಹಿತ್ಯ, ಸಂಗೀತ ವೃತ್ತಿ ಹವ್ಯಾಸವಾಗಿ ರೂಢಿಸಿಕೊಳ್ಳಬೇಕು ಎಂದು ಹೇಳಿದರು.
ಅನನ್ಯ ಮ್ಯಾನೇಜ್ ಮೆಂಟ್ ಆಫ್ ಕಾಮರ್ಸ್ ಸಂಸ್ಥೆ ಅಧ್ಯಕ್ಷ ಸಿ.ಎ.ವಿಶ್ವನಾಥ್ ಮಾತನಾಡಿ, ಆಧುನಿಕತೆ ಬೆಳೆದಂತೆ ನಮ್ಮ ನೆಲದ ಕಲೆ ಕಣ್ಮರೆಯಾಗುತ್ತಿವೆ, ಅವುಗಳ ಪುನಶ್ಚೇತನ ಆಗಬೇಕು, ಜಾನಪದ, ತತ್ವಪದ, ರಂಗಗೀತೆ ಗಾಯನ ಹೊಸ ತಲೆಮಾರಿನವರು ಕಲಿತು ಬೆಳೆಸಬೇಕು ಎಂದರು.

ಸ್ವರಸಿಂಚನ ಸುಗಮ ಸಂಗೀತ ಜಾನಪದ ಕಲಾ ಸಂಸ್ಥೆ ಅಧ್ಯಕ್ಷ ಕೆಂಕೆರೆ ಮಲ್ಲಿಕಾರ್ಜುನ್, ಅನನ್ಯ ಸಂಸ್ಥೆ ಕಾರ್ಯದರ್ಶಿ ಬಿ.ಆರ್.ಉಮೇಶ್, ಕೃಷಿ ಉತ್ಪನ್ನ ಮಾರಾಟ ಸಂಸ್ಥೆ ಮಾಜಿ ಅಧ್ಯಕ್ಷ ಕೊಂಡಜ್ಜಿ ವಿಶ್ವನಾಥ್, ಪತ್ರಕರ್ತ ಸಾ.ಚಿ.ರಾಜಕುಮಾರ್, ಜಯದೇವ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ರಾಮಕೃಷ್ಣಯ್ಯ, ಸಂಶೋಧಕ ಡಾ.ನಂಜುಂಡ ಸ್ವಾಮಿ, ಚಿಂತನಾ ಉಪನ್ಯಾಸಕ ಸಿ.ಸಿ.ಪಾವಟೆ, ಡಾ.ಮನು ಪಾಟೀಲ್ ಭಾಗವಹಿಸಿದ್ದರು.
ಈ ವೇಳೆ ಹೆಸರಾಂತ ಕಲಾವಿದರು ರಂಗಗೀತೆ, ಜಾನಪದ ಗೀತೆ, ತತ್ವಪದ ಗಾಯನ, ಕೊಳಲು, ಮ್ಯಾಂಡೋಲಿನ್ ವಾದನ, ಜಾನಪದ ನೃತ್ಯ, ಭರತನಾಟ್ಯ ಪ್ರದರ್ಶನ ಏರ್ಪಡಿಸಲಾಗಿತ್ತು.

Get real time updates directly on you device, subscribe now.

Comments are closed.

error: Content is protected !!