ಅಮರಶಿಲ್ಪಿ ಜಕಣಾಚಾರಿ ಜಯಂತಿ ಆಚರಣೆ

43

Get real time updates directly on you device, subscribe now.


ತುಮಕೂರು: ಜಿಲ್ಲಾ ಹಿಂದುಳಿದ ಸಮುದಾಯಗಳ ಒಕ್ಕೂಟದ ವತಿಯಿಂದ ಅಮರಶಿಲ್ಪಿ ಜಕಣಾಚಾರಿ ಜಯಂತಿಯನ್ನು ನಗರದ ಕಾಳಿದಾಸ ಹಾಸ್ಟೆಲ್ ಸಭಾಂಗಣದಲ್ಲಿ ಹಿಂದುಳಿದ ವರ್ಗಗಳ ಒಕ್ಕೂಟದ ಅಧ್ಯಕ್ಷ ಧನಿಯಕುಮಾರ್ ನೇತೃತ್ವದಲ್ಲಿ ಆಚರಿಸಲಾಯಿತು.
ಹಿಂದುಳಿದ ವರ್ಗಗಳ ಒಕ್ಕೂಟದ ಅಧ್ಯಕ್ಷ ಧನಿಯಕುಮಾರ್, ಜಿಲ್ಲಾ ಜಾತ್ಯಾತೀತ ಮಾನವ ವೇದಿಕೆಯ ಟಿ.ಆರ್.ಅಂಜನಪ್ಪ, ಸರಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಜಿ.ಎಂ.ಸಣ್ಣಮುದ್ದಯ್ಯ, ಜಿಲ್ಲಾ ಹಿಂದುಳಿದ ವರ್ಗಗಳ ಒಕ್ಕೂಟದ ಪದಾಧಿಕಾರಿಗಳಾದ ಕೆಂಪರಾಜು, ಹೆಬ್ಬೂರು ಶ್ರೀನಿವಾಸಮೂರ್ತಿ, ಶಾಂತಕುಮಾರ್, ಟಿ.ಎನ್.ಮಧುಕರ್, ಪಿ.ಮೂರ್ತಿ, ಸಾಹಿತಿ ಡಾ.ಕೃಷ್ಣಮೂರ್ತಿ, ಪತ್ರಕರ್ತರ ಸಂಘದ ಅಧ್ಯಕ್ಷ ಚಿ.ನಿ.ಪುರುಷೋತ್ತಮ್, ಹರೀಶ್ ಆಚಾರ್ಯ, ರಾಜೇಶ್ ದೊಡ್ಡಮನೆ ಮತ್ತಿತರರು ಅಮರಶಿಲ್ಪಿ ಜಕಣಾಚಾರಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು, ಅಲ್ಲದೆ ವಿಶ್ವ ಸಮುದಾಯದ ಏಳಿಗೆಗೆ ದುಡಿದ ಹಿರಿಯರಾದ ಕಾಳಿಕಾಂಬ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಿ.ವಿ.ಗಂಗಾಚಾರ್, ಚಿನ್ನಬೆಳ್ಳಿ ಕೆಲಸಗಾರರಾದ ಶಶಿಧರ್, ಟಿ.ಸಿ.ಡಮರುಗೇಶ್ ಅವರನ್ನು ಸನ್ಮಾನಿಸಲಾಯಿತು.

ಈ ವೇಳೆ ಮಾತನಾಡಿದ ಜಿಲ್ಲಾ ಹಿಂದುಳಿದ ವರ್ಗಗಳ ಒಕ್ಕೂಟದ ಅಧ್ಯಕ್ಷ ಧನಿಯಕುಮಾರ್, ಅಮರಶಿಲ್ಪಿ ಜಕಣಾಚಾರಿ ತುಮಕೂರು ಜಿಲ್ಲೆಯ ಕೈದಾಳ ಗ್ರಾಮದವರೆಂಬುದು ಹೆಮ್ಮೆಯ ವಿಚಾರ, ಅವರ ಕೆತ್ತನೆಯಿಂದ ಮೂಡಿ ಬಂದ ಬೇಲೂರು, ಹಳೇಬೀಡು, ಸೋಮನಾಥಪುರ, ತುಮಕೂರು ಜಿಲ್ಲೆಯ ಅರಳಗುಪ್ಪೆ, ಕೈದಾಳದ ಚನ್ನಕೇಶವ ಸ್ವಾಮಿ ದೇವಾಲಯಗಳು ವಿಶ್ವದ ಪಾರಂಪರಿಕ ಪಟ್ಟಿಗೆ ಸೇರಿವೆ, ಇಂತಹ ಭವ್ಯ ಇತಿಹಾಸವುಳ್ಳ ಸಮುದಾಯದ ಐದು ಕುಲ ಕಸುಬುಗಳನ್ನು ಅಧ್ಯಯನ ಮಾಡಲು ಸರಕಾರ ವಿಶ್ವಕರ್ಮ ವಿಶ್ವ ವಿದ್ಯಾಲಯವೊಂದನ್ನ ತೆರೆಯಬೇಕು, ಹಾಗೆಯೇ ಶಾಲಾ ಮಕ್ಕಳಿಗೆ ಜಕಣಾಚಾರಿಯವರ ಬಗ್ಗೆ ತಿಳುವಳಿಕೆ ನೀಡಲು ಪಠ್ಯದಲ್ಲಿ ಸೇರ್ಪಡೆ ಮಾಡಬೇಕೆಂದು ಸರಕಾರವನ್ನು ಒತ್ತಾಯಿಸುವುದಾಗಿ ತಿಳಿಸಿದರು.

ಇತ್ತೀಚಿನ ದಿನಗಳಲ್ಲಿ ಕೆಲ ಸಮುದಾಯಗಳ ರಾಜ್ಯದ ದಲಿತರು, ಹಿಂದುಳಿದ ವರ್ಗಗಳಿಗೆ ಹೆಚ್ಚಿನ ಅನುಕೂಲವಾಗುವ ಕಾಂತರಾಜು ಅವರ ವರದಿ ಸ್ವೀಕರಿಸದಂತೆ ಸರಕಾರದ ಮೇಲೆ ಒತ್ತಡ ಹೇರುತ್ತಿರುವುದು ಸರಿಯಲ್ಲ, ಆಧುನಿಕ ತಂತ್ರಜ್ಞಾನದ ಫಲವಾಗಿ ಕುಲ ಕಸುಬು ನಂಬಿ ಬದುಕುತಿದ್ದ ಕಂಬಾರ, ನೇಕಾರ, ಮಡಿವಾಳ, ಸವಿತಾ, ಕುಂಬಾರ, ಮೋಚಿ, ಅಕ್ಕಸಾಲಿಗ, ಶಿಲ್ಪಿಗಳಿಗೆ ಕೆಲಸವಿದಲ್ಲದಂತಾಗಿ ನೆಲ ಕಚ್ಚಿವೆ, 185 ಕೋಟಿ ರೂ. ಖರ್ಚು ಮಾಡಿ ಅತ್ಯಂತ ವ್ಯವಸ್ಥಿತವಾಗಿ 44 ಪ್ರಶ್ನೆ ಮುಂದಿಟ್ಟುಕೊಂಡು ಮಾಡಿರುವ ಕಾಂತರಾಜು ವರದಿಯನ್ನು ಸರಕಾರ ಸ್ವೀಕರಿಸಬೇಕೆಂಬುದು ಹಿಂದುಳಿದ ವರ್ಗಗಳ ಒಕ್ಕೂಟದ ಆಗ್ರಹವಾಗಿದೆ, ಅಲ್ಲದೆ ಹಿಂದುಳಿದ ವರ್ಗಗಳ ಮಕ್ಕಳುಗಳು ಹಾಸ್ಟೆಲ್ ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ, ಇರುವ ಹಾಸ್ಟೆಲ್ಗಳು ಸಹ ಮೂಲಭೂತ ಸೌಕರ್ಯಗಳ ಕೊರತೆ ಎದುರಿಸುತ್ತಿದ್ದು, ಸರಕಾರ ಹಾಗೂ ಜಿಲ್ಲಾಡಳಿತ ಕೂಡಲೇ ಎಚ್ಚೆತ್ತುಕೊಂಡು ಸಮಸ್ಯೆಗೆ ಪರಿಹಾರ ಒದಗಿಸಬೇಕೆಂದು ಧನಿಯಕುಮಾರ್ ಆಗ್ರಹಿಸಿದರು.

ಪತ್ರಕರ್ತ ಟಿ.ಎನ್.ಮಧುಕರ್ ಮಾತನಾಡಿ, ಸರಕಾರ ಜನವರಿ 01 ತಾರೀಖನ್ನು ಅಮರ ಶಿಲ್ಪಿ ಜಕಣಾಚಾರಿಗಳ ದಿನವನ್ನಾಗಿ ಘೋಷಿಸಿ ಆಚರಿಸಿಕೊಂಡು ಬರುತ್ತಿದೆ, ವಿಶ್ವಕರ್ಮರ ಪ್ರೇರಣೆಯಿಂದ ಹಲವಾರು ಕಲಾಕೃತಿಗಳನ್ನು ಜಕಣಾಚಾರಿಗಳು ರಚಿಸಿದ್ದು, ನಾಡಿನಾದ್ಯಂತ ನೋಡಲು ಸಿಗುತ್ತವೆ, ಜನವರಿ 22ಕ್ಕೆ ಉದ್ಘಾಟನೆಯಾಗಲಿರುವ ರಾಮ ಮಂದಿರದಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಬಲರಾಮನ ವಿಗ್ರಹ ಸಹ ಕರ್ನಾಟಕದ ಶಿಲ್ಪಿಗಳೇ ತಯಾರಿಸುರುವುದು ಹೆಮ್ಮೆಯ ವಿಚಾರ, ಇಂತಹ ಶ್ರೀಮಂತ ಪರಂಪರೆ ಇರುವ ಸಮುದಾಯ ಸ್ವಾಭಿಮಾನದಿಂದ ಬದುಕುವಂತಹ ಅವಕಾಶವನ್ನು ಸರಕಾರ ಕಲ್ಪಿಸಬೇಕೆಂದರು.

ಸಾಹಿತಿ ಡಾ.ಕೆ.ವಿ.ಕೃಷ್ಣಮೂರ್ತಿ ಮಾತನಾಡಿ, ಹಿಂದುಳಿದ ವರ್ಗಗಳ ಒಕ್ಕೂಟದಿಂದ ಓಬಿಸಿ ಸಮುದಾಯದ ಹಿರಿಯ ಜಯಂತಿಯನ್ನು ಎಲ್ಲಾ ಸಮುದಾಯಗಳನ್ನು ಒಳಗೊಂಡಂತೆ ಆಚರಿಸುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ, ಇದೇ ರೀತಿಯ ಒಗ್ಗಟ್ಟು ಮುಂದುವರೆದರೆ ಸಮುದಾಯ ಸರಕಾರದಿಂದ ಏನನ್ನಾದರೂ ನಿರೀಕ್ಷಿಸಲು ಸಾಧ್ಯ, ಬಹುಸಂಖ್ಯಾತರೆಲ್ಲಾ ಪ್ರವರ್ಗ 2ಎ ಮೀಸಲಾತಿ ಕೇಳುತ್ತಿರುವ ಈ ದಿನಗಳಲ್ಲಿ ಹಿಂದುಳಿದ ವರ್ಗಗಳು ಮತ್ತಷ್ಟು ನಿರ್ಲಕ್ಷಕ್ಕೆ ಒಳಗಾಗುತ್ತಿವೆ, ಶಿಕ್ಷಣದಿಂದ ವಂಚಿತರಾಗದಂತೆ ಎಚ್ಚರಿಕೆ ವಹಿಸುವ ಅಗತ್ಯವಿದೆ ಎಂದರು.
ಪತ್ರಕರ್ತರ ಸಂಘದ ಅಧ್ಯಕ್ಷ ಚಿ.ನಿ.ಪುರುಷೋತ್ತಮ್, ಜಾತ್ಯಾತೀತ ಮಾನವ ವೇದಿಕೆಯ ಟಿ.ಆರ್.ಅಂಜನಪ್ಪ ಹಾಗೂ ಬಿ.ವಿ.ಗಂಗಾಚಾರ್ ಮಾತನಾಡಿದರು.

Get real time updates directly on you device, subscribe now.

Comments are closed.

error: Content is protected !!