ತುಮಕೂರು ಜಿಲ್ಲಾ ಸಹಕಾರಿ ಬ್ಯಾಂಕ್ ರೈತರಿಗೆ ಹೆಚ್ಚು ಸಾಲ ನೀಡಿದೆ: ಆರ್.ರಾಜೇಂದ್ರ

180

Get real time updates directly on you device, subscribe now.

ಶಿರಾ: ದೇಶದಲ್ಲಿಯೇ ಸಹಕಾರ ಬ್ಯಾಂಕಿನಿಂದ ರೈತರಿಗೆ ಕೆಸಿಸಿ ಸಾಲವನ್ನು ಹೆಚ್ಚು ವಿತರಿಸಿದ್ದರೆ ಅದು ತುಮಕೂರು ಜಿಲ್ಲಾ ಸಹಕಾರ ಬ್ಯಾಂಕ್ ಮಾತ್ರ, ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಬೆಳೆ ಸಾಲ ನೀಡಲಾಗುತ್ತಿದೆ, ಶಿರಾ ತಾಲ್ಲೂಕಿಗೆ ಇದುವರೆಗೂ ಸುಮಾರು 80 ಕೋಟಿಗಿಂತ ಹೆಚ್ಚು ಸಾಲ ನೀಡಲಾಗಿದೆ, ಮುಂದಿನ ದಿನಗಳಲ್ಲಿ ಇನ್ನೂ 20 ಕೋಟಿ ಸಾಲ ವಿತರಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಸಹಕಾರ ಬ್ಯಾಂಕ್ ನಿರ್ದೇಶಕ ಹಾಗೂ ಕೇಂದ್ರ ಕ್ರಿಬ್ಕೋ ಬ್ಯಾಂಕ್ ನಿರ್ದೇಶಕ ಆರ್.ರಾಜೇಂದ್ರ ತಿಳಿಸಿದರು.
ತಾಲ್ಲೂಕಿನ ಮದಲೂರು ಗ್ರಾಮದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಸಂಘದ ಉದ್ಘಾಟನೆ ಮತ್ತು ಕೆಸಿಸಿ ಸಾಲ ವಿತರಣಾ ಸಮಾರಂಭ ಉದ್ಘಾಟಿಸಿ ಮಾತನಾಡಿ, ಯಾವುದೇ ರಾಷ್ಟ್ರೀಕೃತ ಬ್ಯಾಂಕ್ಗಿಂತಲೂ ಕಡಿಮೆ ಇಲ್ಲದಂತೆ ಡಿಸಿಸಿ ಬ್ಯಾಂಕ್ ಸಾಲ ನೀಡುತ್ತಿದೆ, ಪ್ರತಿಯೊಬ್ಬ ರೈತರಿಗೂ ಸಾಲ ಕೊಡಬೇಕು ಎಂಬುದು ಜಿಲ್ಲಾ ಸಹಕಾರ ಬ್ಯಾಂಕಿನ ಅಧ್ಯಕ್ಷರಾದ ಕೆ.ಎನ್.ರಾಜಣ್ಣ ಅವರ ಆಶಯವಾಗಿದೆ, ಹಾಗಾಗಿ ಯಾವ ರೈತರು ಸಾಲ ಪಡೆದಿಲ್ಲ, ಅವರಿಗೂ ಸಾಲ ನೀಡಲಾಗುತ್ತಿದೆ, ಯಾವುದೇ ಪಕ್ಷ ಜಾತಿ ಭೇದ ಬಿಟ್ಟು ಸಾಲ ಪಡೆಯಿರಿ, ಸಾಲ ನೀಡುವ ವಿಚಾರದಲ್ಲಿ ಯಾವುದೇ ತಾರತಮ್ಯ ಮಾಡುವುದಿಲ್ಲ, ಇಂದು ಸಾಲ ಪಡೆದ ರೈತರು ಆ ಹಣವನ್ನು ವ್ಯವಸಾಯದ ಉದ್ದೇಶಕ್ಕೆ ಸದ್ವಿನಿಯೋಗ ಮಾಡಿಕೊಂಡು ಆರ್ಥಿಕ ಮಟ್ಟ ಹೆಚ್ಚಿಸಿಕೊಳ್ಳಿ ಹಾಗೂ ಸಾಲವನ್ನು ಸರಿಯಾದ ರೀತಿಯಲ್ಲಿ ಮರುಪಾವತಿ ಮಾಡಿ, ಇದರಿಂದ ಮುಂದಿನ ದಿನಗಳಲ್ಲಿ ಬ್ಯಾಂಕ್ನಿಂದ ಹೆಚ್ಚು ಸಾಲ ವಿತರಿಸಲು ಸಾಧ್ಯವಾಗುತ್ತದೆ ಎಂದರು.
ಮಾಜಿ ಸಚಿವ ಟಿ.ಬಿ.ಜಯಚಂದ್ರ ಮಾತನಾಡಿ, ರೈತರಿಗೆ ಶೂನ್ಯ ಬಡ್ಡಿದರದಲ್ಲಿ ಸಾಲ ನೀಡುವುದು ಡಿಸಿಸಿ ಬ್ಯಾಂಕ್ನಿಂದ ಮಾತ್ರ ಸಾಧ್ಯ, ಇದು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಸಾಧ್ಯವಿಲ್ಲ, ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ದುಬಾರಿ ಬಡ್ಡಿ, ಅದನ್ನು ಯಾವ ರೈತರು ತೀರಿಸಲು ಸಾಧ್ಯವಾಗುತ್ತಿಲ್ಲ, ಇಂದು ಬ್ಯಾಂಕುಗಳು ತೀವ್ರ ನಷ್ಟದಲ್ಲಿ ನಡೆಯುತ್ತಿವೆ, ಇಂತಹ ಸಂದರ್ಭಲ್ಲಿ ತುಮಕೂರು ಜಿಲ್ಲೆಯಲ್ಲಿ ಡಿಸಿಸಿ ಬ್ಯಾಂಕ್ ವತಿಯಿಂದ ಇಷ್ಟು ದೊಡ್ಡಮಟ್ಟದ ಸಾಲ ನೀಡುತ್ತಿರುವುದು ಮೆಚ್ಚುವಂತಹದ್ದು ಎಂದರು.
ಶಾಸಕ ಡಾ.ಸಿ.ಎಂ.ರಾಜೇಶ್ ಗೌಡ ಮಾತನಾಡಿ, ಜನಸಾಮಾನ್ಯರ, ಈ ದೇಶದ ದೀನ ದಲಿತರ ಬಡವರ ಪರ ಇರುವ ಕ್ಷೇತ್ರವೆಂದರೆ ಅದು ಸಹಕಾರಿ ಕ್ಷೇತ್ರ. ಸ್ವತಂತ್ರಪೂರ್ವ ಕಾಲದಿಂದಲೂ ರೈತರ ಆಶಾಕಿರಣವಾಗಿ ಸಹಕಾರ ಬ್ಯಾಂಕುಗಳು ಕೆಲಸ ಮಾಡುತ್ತಿವೆ, ದೇಶದಾಂದ್ಯ ರೈತರ ನೆರವಿಗೆ ಬರುವ ಕೆಲಸ ಮಾಡುತ್ತಿರುವುದು ಸಹಕಾರ ಬ್ಯಾಂಕುಗಳು, ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಸಹಕಾರ ಬ್ಯಾಂಕುಗಳು ಸಾಲ ನೀಡುತ್ತಿವೆ, ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಸಾಲ ನೀಡಲು ಹಲವಾರು ದಾಖಲಾತಿಗಳನ್ನು ನೀಡಬೇಕು, ಆದರೆ ಸಹಕಾರ ಬ್ಯಾಂಕುಗಳಲ್ಲಿ ಕೇವಲ ಒಂದು ಪಹಣಿ ನೀಡಿದರೆ ಸಾಕು ಸಾಲ ನೀಡಲಾಗುತ್ತದೆ, ಇಂತಹ ಕಾರ್ಯವನ್ನು ತುಮಕೂರು ಜಿಲ್ಲೆಯ ಸಹಕಾರ ಬ್ಯಾಂಕ್ ಮಾಡುತ್ತಿದೆ, ಇದಕ್ಕೆ ಕಾರಣೀಭೂತರಾದ ತುಮಕೂರು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ ಅವರ ಕಾರ್ಯ ಶ್ಲಾಘನೀಯ, ಕೆ.ಎನ್.ರಾಜಣ್ಣ ಅವರು ಸಹಕಾರಿ ಕ್ಷೇತ್ರದ ಕಾಮಧೇನು ಆಗಿದ್ದಾರೆ ಎಂದರು.
ರಾಜ್ಯ ರೇಷ್ಮೆ ಉದ್ಯಮಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ತುಮಕೂರು ಹಾಲು ಒಕ್ಕೂಟದ ನಿರ್ದೇಶಕ ಎಸ್.ಆರ್.ಗೌಡ ಮಾತನಾಡಿ ರಾಜ್ಯದಲ್ಲಿಯೇ ಮಾದರಿ ಬ್ಯಾಂಕ್ ಆಗಿ ತುಮಕೂರು ಡಿಸಿಸಿ ಬ್ಯಾಂಕ್ ಕಾರ್ಯ ಮಾಡಲು ಕೆ.ಎನ್.ರಾಜಣ್ಣ ಅವರು ಶ್ರಮಿಸಿದ್ದಾರೆ. ಶಿರಾ ತಾಲ್ಲೂಕಿಗೆ 80 ಕೋಟಿಗೂ ಹೆಚ್ಚು ಸಾಲ ವಿತರಿಸಿದ್ದಾರೆ. ಶಿರಾ ತಾಲ್ಲೂಕು ಬಯಲುಸೀಮೆ ಪ್ರದೇಶವಾಗಿರುವುದರಿಂದ ಈ ಪ್ರದೇಶಕ್ಕೆ ಮುಂದಿನ ದಿನಗಳಲ್ಲಿ ಹೆಚ್ಚು ಸಾಲ ವಿತರಣೆ ಮಾಡಬೇಕು ಎಂದು ತಿಳಿಸಿದರು.
ಈ ಸಂದ‘ರ್ದಲ್ಲಿ ಡಿಸಿಸಿ ಬ್ಯಾಂಕ್ನ ಮಾಜಿ ಅಧ್ಯಕ್ಷ ಮರುಗಪ್ಪಗೌಡ, ಡಿಸಿಸಿ ಬ್ಯಾಂಕ್ ನಿರ್ದೇಶಕ ಜಿ.ಎಸ್.ರವಿ, ಜಿ.ಎನ್.ಮೂರ್ತಿ, ಸಿ.ಜೆ.ರಾಜಣ್ಣ, ಸಹಕಾರಿ ಸಂಘದ ಅಧ್ಯಕ್ಷ ನಾಗೇಗೌಡ, ಕಾರ್ಯದರ್ಶಿ ಶ್ರೀನಿವಾಸ್, ಶಶಿಧರ ಗೌಡ, ರಾಮಚಂದ್ರಯ್ಯ, ಡಿ.ವೈ.ಗೋಪಾಲ್, ಜಿ.ಜೆ.ರಾಜಣ್ಣ, ಚಂಗಾವರ ಮಾರಣ್ಣ, ಶಿವಕುಮಾರ್, ನಟರಾಜ್, ನಾಗೇಂದ್ರಪ್ಪ, ನಾಗರಾಜು ಸೇರಿದಂತೆ ಹಲವರು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!