ನಾಫೆಡ್ ಕೇಂದ್ರ ತೆರೆದು ಕೊಬ್ಬರಿ ಖರೀದಿಗೆ ಒತ್ತಾಯ

ಡೀಸಿ ಕಚೇರಿ ಬಳಿ ರೈತ ಸಂಘ, ಹಸಿರು ಸೇನೆಯ ಆಹೋರಾತ್ರಿ ಧರಣಿ

44

Get real time updates directly on you device, subscribe now.


ತುಮಕೂರು: ಕೇಂದ್ರ ಸರ್ಕಾರ ನಿಗದಿಪಡಿಸಿರುವ 12 ಸಾವಿರ ರೂಪಾಯಿ ಜೊತೆಗೆ ರಾಜ್ಯ ಸರ್ಕಾರ 3 ಸಾವಿರ ರೂಪಾಯಿ ಸೇರಿಸಿ ಕೊಬ್ಬರಿ ಖರೀದಿಸಲು ನಾಫೆಡ್ ಮೂಲಕ ಖರೀದಿ ಕೇಂದ್ರ ತೆರೆಯಬೇಕು ಎಂದು ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಮುಖಂಡರು ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಆಹೋರಾತ್ರಿ ಧರಣಿ ಸತ್ಯಾಗ್ರಹ ಆರಂಭಿಸಿದರು.
ಸೋಮವಾರ ನಗರದ ಟೌನ್ ಹಾಲ್ ವೃತ್ತದಿಂದ ಮೆರವಣಿಗೆಯಲ್ಲಿ ಆಗಮಿಸಿದ ರೈತರು ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ಸತ್ಯಾಗ್ರಹ ಆರಂಭಿಸಿದರು, ಈ ವೇಳೆ ರಾಜ್ಯ ರೈತ ಸಂಘದ ಉಪಾಧ್ಯಕ್ಷ ಕೆಂಕೆರೆ ಸತೀಶ್ ಮಾತನಾಡಿ, ಕೇಂದ್ರ ಸರ್ಕಾರ ನಿಗದಿ ಮಾಡಿರುವ 12 ಸಾವಿರ ರೂ. ಗಳ ಜೊತೆಗೆ ರಾಜ್ಯ ಸರ್ಕಾರ 3 ಸಾವಿರ ರೂ. ಸೇರಿಸಿ ನಾಫೆಡ್ ಕೇಂದ್ರದ ಮೂಲಕ ಖರೀದಿಸಲು ಕ್ರಮ ತೆಗೆದುಕೊಳ್ಳಬೇಕು, ಅಲ್ಲಿಯವರೆಗೂ ಬಿಡದೆ ಹೋರಾಟ ಮಾಡುತ್ತೇವೆ ಎಂದು ಹೇಳಿದರು.

ರೈತರು, ಕಾರ್ಮಿಕರು, ಸೈನಿಕರು ಉಳಿದರೆ ಮಾತ್ರ ದೇಶದ ಅಭಿವೃದ್ಧಿ, ಹೀಗಿರುವಾಗ ಸರ್ಕಾರಗಳು ರೈತರನ್ನು ಕಡೆಗಣಿಸುತ್ತಲೇ ಬರುತ್ತಿವೆ, ಕೊಬ್ಬರಿಗೆ ಬೆಂಬಲ ಬೆಲೆ ಹೆಚ್ಚು ಮಾಡಬೇಕು ಎಂದು ನಿರಂತರವಾಗಿ ಹೋರಾಟ ಮಾಡುತ್ತಿದ್ದರೂ ಸರ್ಕಾರಗಳು ಸಕಾರಾತ್ಮಕವಾಗಿ ಸ್ಪಂದಿಸಲಿಲ್ಲ, ಸಮರ್ಪಕ ನಿರ್ಧಾರ ಪ್ರಕಟಿಸುವವರೆಗೂ ಹೋರಾಟ ನಿಲ್ಲಿಸುವುದಿಲ್ಲ ಎಂದು ಹೇಳಿದರು.
ವಿದೇಶಗಳಿಂದ ಕೊಬ್ಬರಿ ಎಣ್ಣೆ ಹಾಗೂ ಪೌಡರ್ ಆಮದನ್ನು ಸರ್ಕಾರ ನಿಲ್ಲಿಸದ ಕಾರಣ ಕೊಬ್ಬರಿ ಬೆಲೆ ಕುಸಿಯಲು ಕಾರಣವಾಗಿದೆ, ಸರ್ಕಾರಗಳಿಗೆ ತೆಂಗು ಬೆಳೆಗಾರರ ಹಿತ ಕಾಯುವ ಕಾಳಜಿಯಿಲ್ಲ, ಅರಸೀಕೆರೆಯಿಂದ ಬೆಂಗಳೂರಿಗೆ ಪಾದಯಾತ್ರೆ ಮಾಡಿ ತೆಂಗು ಬೆಳೆಗಾರರು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು, ಆದರೆ ತೆಂಗು ಬೆಳೆಗಾರರ ಪರವಾಗಿ ಜಿಲ್ಲೆಯ ಯಾವೊಬ್ಬ ಶಾಸಕರೂ ಅಧಿವೇಶನದಲ್ಲಿ ಧ್ವನಿ ಎತ್ತಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಕೆ.ಎಸ್.ಧನಂಜಯಾರಾಧ್ಯ ಮಾತನಾಡಿ, ಕೊಬ್ಬರಿಗೆ ವೈಜ್ಞಾನಿಕ ಬೆಲೆ ನಿಗದಿಮಾಡಿ ಸರ್ಕಾರ ಖರೀದಿ ಮಾಡಿ ತೆಂಗು ಬೆಳೆಗಾರರಿಗೆ ನ್ಯಾಯ ಒದಗಿಸದಿದ್ದರೆ ಆಹೋರಾತ್ರಿ ಧರಣಿ ಸತ್ಯಾಗ್ರಹ ಮಡುವುದಾಗಿ ಎಚ್ಚರಿಕೆ ನೀಡಿದರು.
ಈ ಮೊದಲಿದ್ದ ಕ್ವಿಂಟಾಲ್ ಕೊಬ್ಬರಿಯ 11750 ರೂ. ದರವನ್ನು 250 ರೂ. ಸೇರಿಸಿ 12 ಸಾವಿರ ರೂ.ಗೆ ಹೆಚ್ಚಿಸಿದ್ದು ತೆಂಗು ಬೆಳೆಗಾರರಿಗೆ ಯಾವುದೇ ಪ್ರಯೋಜನವಾಗಿಲ್ಲ, ಈಗ ಎಲ್ಲಾ ದಿನಬಳಕೆ ಪದಾರ್ಥಗಳ ಬೆಲೆ ಶೇಕಡ 30 ರಷ್ಟು ಹೆಚ್ಚಾಗಿದೆ, ಹೀಗಿರುವಾಗ ಅದೇ ಪ್ರಮಾಣದಲ್ಲಿ ಕೊಬ್ಬರಿಗೂ ಶೇಕಡ 30 ರಷ್ಟು ಬೆಲೆ ಹೆಚ್ಚಿಸಿದರೆ ಕ್ವಿಂಟಾಲ್ ಗೆ 16 ಸಾವಿರ ರೂ. ನೀಡಬೇಕಾಗುತ್ತದೆ, ಸಾಲ ಬಾಧೆಯಿಂದ ರೈತರು ಕಷ್ಟಕ್ಕೆ ಸಿಲುಕಿದ್ದಾರೆ, ತೆಂಗು ಬೆಳೆಗಾರರು ಕೊಬ್ಬರಿ ಬೆಲೆ ಕುಸಿತದಿಂದ ನಷ್ಟ ಅನುಭವಿಸುತ್ತಿದ್ದಾರೆ, ಕೇಂದ್ರ ಸರ್ಕಾರ ನಿಗದಿಪಡಿಸಿರುವ 12 ಸಾವಿರ ರೂ. ಗಳಿಗೆ ರಾಜ್ಯ ಸರ್ಕಾರ 3 ಸಾವಿರ ರೂ. ಸೇರಿಸಿ ತುರ್ತಾಗಿ ನಾಫೆಡ್ ಕೇಂದ್ರ ತೆರೆದು ಖರೀದಿಸಬೇಕು ಎಂದು ಒತ್ತಾಯಿಸಿದರು.

ರೈತ ಸಂಘದ ಜಿಲ್ಲಾ ಗೌರವಾಧ್ಯಕ್ಷ ಕೆ.ವಿ.ಲೋಕೇಶ್, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಶಿವರತ್ನಮ್ಮ, ಮುಖಂಡರಾದ ಸಣ್ಣ ದ್ಯಾಮೇಗೌಡ, ಮಲ್ಲಿಕಾರ್ಜುನಯ್ಯ, ಸಿದ್ದರಾಜು, ಸರ್ವಮಂಗಳ, ಶಾಂತಕ್ಕ, ದೇವಮ್ಮ, ರೇಣುಕಮ್ಮ, ನಾಗೇಂದ್ರ, ರಾಜಣ್ಣ ಮೊದಲಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Get real time updates directly on you device, subscribe now.

Comments are closed.

error: Content is protected !!