ಬೀದಿ ನಾಯಿಗಳ ಹಾವಳಿ ತಪ್ಪಿಸಲು ಆಗ್ರಹ

95

Get real time updates directly on you device, subscribe now.


ತುಮಕೂರು: ಬೀದಿ ನಾಯಿಗಳ ಹಾವಳಿಯಿಂದ ನೊಂದ ನಗರದ 3ನೇ ವಾರ್ಡ್ ನಾಗರಿಕರು ನಾಯಿಗಳ ಉಪಟಳ ನಿವಾರಣೆ ಮಾಡಬೇಕು ಎಂದು ಒತ್ತಾಯಿಸಿ ನಗರ ಪಾಲಿಕೆಯ ಆಯುಕ್ತೆ ಅಶ್ವಿಜ ಅವರಿಗೆ ಮನವಿ ಸಲ್ಲಿಸಿದರು.
ನಗರದ ಶಿರಾ ಗೇಟ್ ನ 3ನೇ ವಾರ್ಡ್ನ ನಾಗರಿಕರು ನಗರ ಪಾಲಿಕೆ ಕಚೇರಿಗೆ ಬಂದು ಬೀದಿ ನಾಯಿಗಳಿಂದ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಆಯುಕ್ತರ ಗಮನಕ್ಕೆ ತಂದು ನಾಯಿ ಹಾವಳಿ ನಿಯಂತ್ರಿಸಲು ಒತ್ತಾಯಿಸಿದರು.
ಮಕ್ಕಳ ಮೇಲೆ ದಾಳಿ ಮಾಡುವ ಬೀದಿ ನಾಯಿಗಳು ಅವರನ್ನು ಕಚ್ಚಿ ಗಾಯಗೊಳಿಸುತ್ತವೆ, ಪ್ರತಿದಿನ ನಾಯಿ ಕಚ್ಚಿದ ಪ್ರಕರಣ ನಡೆಯುತ್ತಲೇ ಇವೆ, ಈ ಪ್ರದೇಶದಲ್ಲಿ ಬೀದಿ ನಾಯಿಗಳ ಸಂಖ್ಯೆ ದಿನ ದಿನಕ್ಕೂ ಹೆಚ್ಚಾಗುತ್ತಲೇ ಇದೆ, ನಾಯಿಗಳ ಭೀತಿಯಿಂದ ನಾಗರಿಕರು ರಸ್ತೆಯಲ್ಲಿ ಓಡಾಡಲು ಹೆದರುವಂತಾಗಿದೆ, ರಾತ್ರಿ ವೇಳೆ ಬೀದಿ ನಾಯಿಗಳ ಗಲಾಟೆಗೆ ಜನರ ನಿದ್ರೆ, ನೆಮ್ಮದಿ ಹಾಳಾಗಿದೆ, ಈ ಬಡಾವಣೆಯನ್ನು ಬೀದಿ ನಾಯಿಗಳಿಂದ ಮುಕ್ತಗೊಳಿಸುವಂತೆ ಆಯುಕ್ತರಿಗೆ ಕೋರಿದರು.

3ನೇ ವಾರ್ಡ್ನ ನಗರ ಪಾಲಿಕೆ ಸದಸ್ಯ ಲಕ್ಷ್ಮೀ ನರಸಿಂಹರಾಜು ನಾಗರಿಕರ ಜೊತೆ ಆಗಮಿಸಿ, ಬೀದಿ ನಾಯಿಗಳ ಸಮಸ್ಯೆ ಬಗ್ಗೆ ಆಯುಕ್ತರ ಗಮನ ಸೆಳೆದರು, ಬೀದಿ ನಾಯಿಗಳು ಮಕ್ಕಳ ಮೇಲೆ ದಾಳಿ ಮಾಡಿ ಕಚ್ಚುತ್ತವೆ, ದಿನನಿತ್ಯ ನಾಯಿ ಕಡಿತ ಪ್ರಕರಣದ ಬಗ್ಗೆ ದೂರುಗಳು ದಾಖಲಾಗುತ್ತಿವೆ, ಮಕ್ಕಳು ಮನೆಯಿಂದ ಹೊರಬರಲು ಹೆದರುವಂತಾಗಿದೆ, ಬೀದಿ ನಾಯಿಗಳನ್ನು ಊರಿನಿಂದ ಹೊರಗೆ ಸಾಗಿಸಿ ನಾಗರಿಕರು ಸುರಕ್ಷಿತವಾಗಿ ಬಾಳಲು ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದರು.

ಬೀದಿ ನಾಯಿಗಳ ವಿಚಾರದಲ್ಲಿ ಪ್ರಾಣಿ ದಯಾ ಸಂಘದವರೂ ಸಹಕಾರ ನೀಡಿ ಬೀದಿ ನಾಯಿಗಳ ಹಾವಳಿಯಿಂದ ಮುಕ್ತಗೊಳಿಸಬೇಕು, ಪಾಲಿಕೆಯಿಂದ ಮಾಡುವ ಬೀದಿ ನಾಯಿಗಳ ಸಂತಾನ ಹರಣ ಶಸ್ತ್ರ ಚಿಕಿತ್ಸಾ ಕಾರ್ಯಾಚರಣೆಯಿಂದ ನಾಯಿಗಳ ನಿಯಂತ್ರಣ ಸಾಧ್ಯವಾಗಿಲ್ಲ, ನಾಯಿಗಳನ್ನು ಊರಿನಿಂದ ಹೊರಗೆ ಸಾಗಿಸುವುದೇ ಈ ಸಮಸ್ಯೆಗೆ ಪರಿಹಾರ, ಹಿಂದೆ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಅಜ್ಜಗೊಂಡನಹಳ್ಳಿ ಕಸ ವಿಲೇವಾರಿ ಘಟಕದ ಬಳಿ ಬೀದಿ ನಾಯಿಗಳ ಸಾಗಿಸಿ ಸಾಕಾಣಿಕೆ ಮಾಡಿ ಆಹಾರದ ವ್ಯವಸ್ಥೆ ಮಾಡಲು ತೀರ್ಮಾನಿಸಲಾಗಿತ್ತು, ಆ ಕಾರ್ಯ ಇದುವರೆಗೂ ಅನುಷ್ಠಾನಕ್ಕೆ ಬಂದಿಲ್ಲ ಎಂದು ಹೇಳಿದರು.
ಮನವಿ ಸ್ವೀಕರಿಸಿದ ಆಯುಕ್ತೆ ಅಶ್ವಿಜ ಅವರು ಈ ಸಮಸ್ಯೆ ಪರಿಹಾರ ಮಾಡುವ ಭರವಸೆ ನೀಡಿದರು.

Get real time updates directly on you device, subscribe now.

Comments are closed.

error: Content is protected !!