ಜನರ ಸಮಸ್ಯೆಗೆ ಅಧಿಕಾರಿಗಳು ಸ್ಪಂದಿಸಲಿ

ಶೀಘ್ರ ರೈತರ ಖಾತೆಗೆ ಬೆಳೆ ಪರಿಹಾರ- ಜಿಲ್ಲಾಧಿಕಾರಿ ಶುಭ ಕಲ್ಯಾಣ್

73

Get real time updates directly on you device, subscribe now.


ಪಾವಗಡ: ಬರಪೀಡಿತ ಜಿಲ್ಲೆಯೆಂದು ಘೋಷಿಸಲಾಗಿರುವ ತುಮಕೂರು ಜಿಲ್ಲೆಯ ಬರ ನಿರ್ವಹಣೆಗೆ ಬಿಡುಗಡೆಯಾಗಿರುವ ಪರಿಹಾರವನ್ನು ರೈತರ ಖಾತೆಗಳಿಗೆ ತ್ವರಿತಗತಿಯಲ್ಲಿ ವರ್ಗಾಯಿಸಲು ಮುಖ್ಯಮಂತ್ರಿಗಳ ನಿರ್ದೇಶನವಿದ್ದು, ಅದರಂತೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತಿಳಿಸಿದರು.
ತುಮಕೂರು ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ಸಹಯೋಗದಲ್ಲಿ ಪಾವಗಡದ ಎಸ್.ಕೆ.ರಂಗ ಮಂದಿರದಲ್ಲಿ ನಡೆದ ಕರ್ನಾಟಕ ಸರ್ಕಾರದ ಮಹತ್ವದ ಕಾರ್ಯಕ್ರಮ ಜನತಾ ದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಂಕ್ರಾಂತಿ ಹಬ್ಬಕ್ಕೆ ಮುಂಚಿತವಾಗಿ ರೈತರಿಗೆ ಬರಪರಿಹಾರ ತಲುಪಿಸಬೇಕು ಎಂದು ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಸೂಚಿಸಿರುತ್ತಾರೆ, ಈ ನಿಟ್ಟಿನಲ್ಲಿ ರೈತರ ದಾಖಲಾತಿ ಪಡೆದು ಫ್ರೂಟ್ ತಂತ್ರಾಂಶದಲ್ಲಿ ನೋಂದಣಿ ಮಾಡುವ ಪ್ರಕ್ರಿಯೆ ಬಹುತೇಕ ಪೂರ್ಣಗೊಂಡಿದೆ ಎಂದು ತಿಳಿಸಿದರು.

ಪ್ರಜಾ ಪ್ರಭುತ್ವ ವ್ಯವಸ್ಥೆ ಸಾಕಾರಗೊಳ್ಳಬೇಕೆಂದರೆ ಇಂತಹ ಕಾರ್ಯಕ್ರಮ ನಡೆಯಬೇಕು, ತುಮಕೂರು ಜಿಲ್ಲೆಯಲ್ಲಿ ಯಶಸ್ವಿಯಾಗಿ 8 ಜನತಾ ದರ್ಶನ ಕಾರ್ಯಕ್ರಮ ಮಾಡಲಾಗಿದೆ, ಪಾವಗಡ ತಾಲ್ಲೂಕು ಜಿಲ್ಲಾ ಕೇಂದ್ರದಿಂದ ಸ್ವಲ್ಪ ದೂರದಲ್ಲಿ ಇರುವುದರಿಂದ ಜನ ಸಾಮಾನ್ಯರು ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸುವುದೇ ನಮ್ಮ ಉದ್ದೇಶ, ಸ್ಥಳದಲ್ಲೇ ಜನರ ಸಮಸ್ಯೆ ಕೇಳಿ ಪರಿಹರಿಸಬಹುದಾದಂತಹ ಸಮಸ್ಯೆ ಅಲ್ಲೇ ಪರಿಹರಿಸಲಾಗುವುದು ಎಂದು ತಿಳಿಸಿದರು.
ಅಧಿಕಾರಿಗಳು ಜನರ ಎಲ್ಲಾ ಸಮಸ್ಯೆಗಳಿಗೂ ಸ್ಪಂದಿಸಿ ಎಷ್ಟು ಸಾಧ್ಯವೋ ಅಷ್ಟು ಶೀಘ್ರವಾಗಿ ಸಮಸ್ಯೆ ಬಗೆಹರಿಸಿ ಜನರ ದೃಷ್ಟಿಯಲ್ಲಿ ಉತ್ತಮ ಅಧಿಕಾರಿಗಳಾಗಿ ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕಿವಿಮಾತು ಹೇಳಿದರು.
ಕಂದಾಯ ಸಚಿವರು ಕೂಡ ಪ್ರತಿ ತಿಂಗಳು ಪ್ರಗತಿ ಪರಿಶೀಲನೆ ಮಾಡುತ್ತಿದ್ದಾರೆ, ಜಮೀನಿನ ಸಮಸ್ಯೆ, ಆರ್ ಟಿ ಸಿ ಮಿಸ್ ಮ್ಯಾಚ್, ಕೋರ್ಟ್ ಪೆಂಡೆಸ್ಸಿ ಬಗ್ಗೆ ಪರಿಶೀಲಿಸುತ್ತಿದ್ದಾರೆ ಎಂದು ತಿಳಿಸಿದರು.
ಸರ್ಕಾರದ ಐದು ಗ್ಯಾರಂಟಿ ಯೋಜನೆ ಜಾರಿಗೊಳಿಸಲು ನಾವು ಹಗಲಿರುಳು ಕೆಲಸ ಮಾಡುತ್ತಿದ್ದೇವೆ, ಈ ಐದು ಗ್ಯಾರಂಟಿ ಯೋಜನೆಗಳು ಇನ್ನೂ ಯಾರು ಯಾರಿಗೆ ಸಿಕ್ಕಿಲ್ಲ ಅವರು ಇವತ್ತು ತಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು, ಆಧಾರ್ ಜೋಡಣೆ ಅಥವಾ ಅಕೌಂಟ್ ಸಮಸ್ಯೆ ಸೇರಿದಂತೆ ಎಲ್ಲಾ ಸಮಸ್ಯೆಗಳಿಗೂ ಅಧಿಕಾರಿಗಳು ಇಲ್ಲೇ ಇರುವುದರಿಂದ ಇದರ ಸದುಪಯೋಗವನ್ನು ಅರ್ಹ ಫಲಾನುಭವಿಗಳು ಪಡೆಯಬೇಕು ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ವಿವಿಧ ಇಲಾಖೆಗಳ ಫಲಾನುಭವಿಗಳಿಗೆ ಸ್ಥಳದಲ್ಲೇ ಅನೇಕ ಸವಲತ್ತು ವಿತರಿಸಿ ತಾಲ್ಲೂಕಿನ ಅನೇಕ ಭಾಗಗಳಿಂದ ಬಂದ ಜನರ ಅಹವಾಲು ಸ್ವೀಕರಿಸಿ ಕೆಲವು ಸಮಸ್ಯೆಗಳಿಗೆ ಸಂಭಂದಪಟ್ಟ ಅಧಿಕಾರಿಗಳಿಂದ ಸ್ಥಳದಲ್ಲೇ ಸಮಸ್ಯೆ ಪರಿಹರಿಸಿದರು.
ಪಾವಗಡ ಶಾಸಕ ಹೆಚ್.ವಿ.ವೆಂಕಟೇಶ್ ಮಾತನಾಡಿ, ನನ್ನ ಕ್ಷೇತ್ರ ವ್ಯಾಪ್ತಿಯಲ್ಲಿ ವಾರದಲ್ಲಿ 2 ಪಂಚಾಯ್ತಿಗಳಲ್ಲಿ ಜನತಾ ದರ್ಶನ ಮಾಡುತ್ತಿದ್ದು, ಜನರ ಅನೇಕ ಸಮಸ್ಯೆ ಪರಿಹರಿಸಲಾಗುತ್ತಿದೆ, ನಮ್ಮ ಸರ್ಕಾರದ ಮಹತ್ವದ ಕಾರ್ಯಕ್ರಮ ಇದಾಗಿದ್ದು, ಜನರು ಕಚೇರಿಗಳಿಗೆ ಓಡಾಡುವುದನ್ನು ತಪ್ಪಿಸಲು ಮುಖ್ಯಮಂತ್ರಿಗಳು ಪ್ರತಿ ಜಿಲ್ಲಾ ಕೇಂದ್ರ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ಜನತಾ ದರ್ಶನ ಮಾಡಲು ಸೂಚಿಸಿದ್ದಾರೆ, ಅದರಂತೆ ಅಧಿಕಾರಿಗಳು ಬಹಳ ನಿಷ್ಠೆಯಿಂದ ಈ ಕಾರ್ಯ ಅನುಷ್ಠಾನಗೊಳಿಸುತ್ತಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಪಾವಗಡ ತಾಲ್ಲೂಕಿನಲ್ಲಿ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳು ಜನರ ಬಳಿ ಹೋಗಬೇಕು, ಪಿಡಿಒಗಳು ಪಂಚಾಯ್ತಿ ಹೆಡ್ ಕ್ವಾಟ್ರಸ್ ನಲ್ಲಿ ಉಳಿಯದೆ ನಗರ ಪ್ರದೇಶದಲ್ಲಿ ಇರುವುದರಿಂದ ಜನರಿಗೆ ಬಹಳಷ್ಟು ಸಮಸ್ಯೆ ಆಗುತ್ತಿವೆ, ಈ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳುವಂತೆ ಪಾವಗಡ ಶಾಸಕ ಹೆಚ್.ವಿ.ವೆಂಕಟೇಶ್ ಜಿಲ್ಲಾಧಿಕಾರಿ ಮತ್ತು ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಿಗೆ ಮನವಿ ಮಾಡಿದರು.
ಪಾವಗಡದಲ್ಲಿ ಅಧಿಕಾರಿಗಳು ಜನರ ಕೈಗೆ ಸಿಗುವುದಿಲ್ಲ ಎಂಬ ಅನೇಕ ದೂರು ಕೇಳಿದ್ದೇನೆ, ಅಧಿಕಾರಿಗಳು ನಿಗದಿತ ಸಮಯಕ್ಕೆ ಜನರಿಗೆ ಲಭ್ಯವಿದ್ದು, ಜನರು ಅಲೆದಾಡುವುದನ್ನು ತಪ್ಪಿಸಿ ಜನಮಾನಸದಲ್ಲಿ ಉಳಿಯುವಂತೆ ಕೆಲಸ ಮಾಡಬೇಕು, ಜನರ ಬಳಿ ಆಡಳಿತ ಹೋಗಬೇಕು ಎಂಬುದೇ ಜನತಾ ದರ್ಶನದ ಉದ್ದೇಶ, ಜಿಲ್ಲೆಯಲ್ಲಿ ಒಟ್ಟು 2800 ಅರ್ಜಿಗಳು ಸಲ್ಲಿಕೆಯಾಗಿದ್ದು, ಅದರಲ್ಲಿ 2400 ಅರ್ಜಿಗಳಿಗೆ ಈಗಾಗಲೇ ಪರಿಹಾರ ರೂಪಿಸಲಾಗಿದೆ ಎಂದು ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜಿ.ಪ್ರಭು ತಿಳಿಸಿದರು.

ಪ್ರಮುಖವಾಗಿ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ, ಕೃಷಿ ಇಲಾಖೆಯಿಂದ ತುಂತುರು ನೀರಾವರಿ ಘಟಕ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯಿಂದ ಅಂತರ ಜಾತಿ ವಿವಾಹ ಪ್ರೋತ್ಸಾಹ ಧನ, ಪಿಂಚಣಿ ಮತ್ತು ಆರ್ ಕೆವಿವೈ ಮುಖ್ಯಮಂತ್ರಿಗಳ ಅಮೃತ ಜೀವನ ಯೋಜನೆ ಸೇರಿದಂತೆ ವಿವಿಧ ಇಲಾಖೆಗಳ ಫಲಾನುಭವಿಗಳಿಗೆ ಸವಲತ್ತು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ವಿಶೇಷ ಭೂ ಸ್ವಾಧೀನ ಅಧಿಕಾರಿ ಮಂಜುನಾಥ್, ಉಪ ವಿಭಾಗಾಧಿಕಾರಿ ರಿಷಿ ಆನಂದ್, ಡಿಸಿಎಫ್ ಅನುಪಮ, ಪಾವಗಡ ತಾಲ್ಲೂಕಿನ ತಹಶೀಲ್ದಾರ್ ವರದರಾಜ್ ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!