ಗ್ರಾಮೀಣ ಕಲೆ ಉಳಿವಿಗೆ ಗಿರಿಜನ ಉತ್ಸವ ಸಹಕಾರಿ

59

Get real time updates directly on you device, subscribe now.


ತುಮಕೂರು: ಸೋಮನ ಕುಣಿತ, ಮ್ಯಾಸಿಫ್ ಡೋಲು, ಗಾರುಡಿ ಗೊಂಬೆ, ಚಕ್ಕೆ ಭಜನೆ, ಸುಗಮ ಸಂಗೀತ, ಜನಪದ ಗೀತೆ, ರಂಗಗೀತೆ, ಪೌರಾಣಿಕ ನಾಟಕಗಳಂತಹ ಗ್ರಾಮೀಣ ಕಲೆಗಳು ನಶಿಸಿ ಹೋಗದಂತೆ ಜೀವಂತವಾಗಿಡಲು ಗಿರಿಜನ ಉತ್ಸವದಂತಹ ಕಾರ್ಯಕ್ರಮ ಸಹಕಾರಿ ಎಂದು ಗೃಹ ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರ ವಿಶೇಷಾಧಿಕಾರಿ ಡಾ.ನಾಗಣ್ಣ ತಿಳಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಕೊರಟಗೆರೆ ತಾಲ್ಲೂಕು ಹಂಚಿಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಮುಂಭಾಗದಲ್ಲಿ ಆಯೋಜಿಸಿದ್ದ ಗಿರಿಜನ ಉತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಗಿರಿಜನ ಉತ್ಸವ ಸರ್ಕಾರದ ಅತ್ಯುತ್ತಮ ಯೋಜನೆಯಾಗಿದ್ದು, ಜಿಲ್ಲೆಯ ಪ್ರತಿಭಾವಂತ ಪರಿಶಿಷ್ಟ ಪಂಗಡದ ಕಲಾವಿದರಿಗೆ ವೇದಿಕೆ ಒದಗಿಸುವ ಮೂಲಕ ಗ್ರಾಮೀಣ ಕಲೆಗಳ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಿರುವುದು ಶ್ಲಾಘನೀಯ ಎಂದು ತಿಳಿಸಿದರು.

ಹಂಚಿಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ.ಎಸ್.ಭೀಮರಾಜು ಮೆರವಣಿಗೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಇಂತಹ ಕಾರ್ಯಕ್ರಮಗಳನ್ನು ಗಡಿ ತಾಲ್ಲೂಕು ಮತ್ತು ಗ್ರಾಮದಲ್ಲಿ ನಡೆಸುತ್ತಿರುವುದು ಹೆಚ್ಚು ಅರ್ಥಪೂರ್ಣವಾಗಿದೆ, ಇಂದಿನ ದಿನಗಳಲ್ಲಿ ಟಿವಿ, ಮೊಬೈಲ್ಗಳಲ್ಲಿಯೇ ಕಾಲ ಕಳೆಯುವುದು ಗೀಳಾಗಿ ಮಾರ್ಪಟ್ಟಿದೆ, ಇದರ ಬದಲಾಗಿ ಗ್ರಾಮೀಣ ಸೊಗಡನ್ನು ಪಸರಿಸುವಂತಹ ಇಂತಹ ಕಾರ್ಯಕ್ರಮ ವೀಕ್ಷಿಸುವ ಮೂಲಕ ಕಲೆಯನ್ನು ಪ್ರೋತ್ಸಾಹಿಸಬೇಕು ಎಂದು ತಿಳಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಿ.ಎಂ.ರವಿಕುಮಾರ್ ಮಾತನಾಡಿ, ಇಲಾಖೆಯು ಪ್ರಸಕ್ತ ಸಾಲಿನ ಕ್ರಿಯಾ ಯೋಜನೆಯಲ್ಲಿ ಗಿರಿಜನ ಉಪ ಯೋಜನೆಯಡಿ ಈ ಕಾರ್ಯಕ್ರಮ ರೂಪಿಸಿದೆ, ಈ ಕಾರ್ಯಕ್ರಮದಲ್ಲಿ ಗ್ರಾಮೀಣ ಪ್ರದೇಶದ ಅದರಲ್ಲೂ ಕಾರ್ಯಕ್ರಮ ಪ್ರದರ್ಶನಕ್ಕೆ ವೇದಿಕೆ ಸಿಗದ ಹಲವು ಪ್ರತಿಭಾವಂತ ಕಲಾವಿದರಿಗೆ ಅವಕಾಶ ನೀಡಲಾಗಿದೆ ಎಂದು ತಿಳಿಸಿದರು.
ಕೊರಟಗೆರೆ ತಾಲ್ಲೂಕು ರಂಗಭೂಮಿ ಕಲಾವಿದರ ಸಂಘದ ಅಧ್ಯಕ್ಷರು ಹಾಗೂ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮೈಲಾರಪ್ಪ ಮಾತನಾಡಿ, ನಶಿಸಿ ಹೋಗುತ್ತಿರುವ ಕಾಲಘಟ್ಟದಲ್ಲಿ ಕಲೆಗಳನ್ನು ಇನ್ನು ಜೀವಂತವಾಗಿ ಉಳಿಸಿರುವುದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಸಾಧ್ಯವಾಗುತ್ತಿದೆ, ಇಂತಹ ಕಾರ್ಯಕ್ರಮಗಳಿಂದ ಗಿರಿಜನರ ಪ್ರತಿಭೆ ಹಾಗೂ ಅವರ ವೈವಿಧ್ಯಮಯ ಕಲೆ ಪ್ರದರ್ಶಿಸಲು ಹಾಗೂ ಪ್ರೋತ್ಸಾಹಿಸಲು ಸಾಧ್ಯವಾಗಿದೆ ಎಂದು ತಿಳಿಸಿದರು.

ಸ್ವರ ಸಿಂಚನ ಸುಗಮ ಸಂಗೀತ ಸಂಸ್ಥೆಯ ಅಧ್ಯಕ್ಷ ಕೆಂಕೆರೆ ಮಲ್ಲಿಕಾರ್ಜುನ್ ಮಾತನಾಡಿ, ಜಾನಪದ ಕಲಾ ಪ್ರಕಾರಗಳ ಉಳಿವು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ, ಸಾಂಸ್ಕೃತಿಕ ಆಚರಣೆಗಳ ಪುನರುಜ್ಜೀವನಕ್ಕಾಗಿ ಇಲಾಖೆಯು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಜೊತೆಗೆ ಹಲವಾರು ಕಾರ್ಯಕ್ರಮ ಹಮ್ಮಿಕೊಂಡಿದೆ, ಸಾಂಸ್ಕೃತಿಕ ಮತ್ತು ಸಾಂಪ್ರದಾಯಿಕ ಆಚರಣೆಗಳನ್ನು ಜನಪ್ರಿಯಗೊಳಿಸುವ ಮುಖೇನ ಅವುಗಳನ್ನು ಮುಖ್ಯ ವಾಹಿನಿಗೆ ತರಲು ಇಂತಹ ಕಾರ್ಯಕ್ರಮ ಹೆಚ್ಚು ಪೂರಕವಾಗಿವೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಹಂಚಿಹಳ್ಳಿ ಗ್ರಾಮ ಪಂಚಾಯಿತಿ ಪಿಡಿಓ ರಮೇಶ್, ಕೊರಟಗೆರೆ ತಾಲ್ಲೂಕಿನ ಭಾರತ್ ಸ್ಕೌಟ್ಸ್ ಗೈಡ್ಸ್ ಅಧ್ಯಕ್ಷ ಕೆ.ಆರ್.ಓಬಳರಾಜು, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಎಂ.ಎನ್.ರೇಣುಕಾ, ಮಹರ್ಷಿ ವಾಲ್ಮೀಕಿ ಕಲಾಸಂಘದ ಅಧ್ಯಕ್ಷ ಹನುಮಂತರಾಜು, ಹಿರಿಯ ಕಲಾವಿದ ರಾಮಕೃಷ್ಣಯ್ಯ ಚಿಕ್ಕಪಾಲನಹಳ್ಳಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೇಲ್ವಿಚಾರಕ ಡಿ.ವಿ.ಸುರೇಶ್ ಕುಮಾರ್ ಹಾಗೂ ಹಂಚಿಹಳ್ಳಿ ಗ್ರಾಮದ ಗ್ರಾಮ ಪಂಚಾಯತ್ ಸದಸ್ಯರುಗಳು ಭಾಗವಹಿಸಿದ್ದರು.

Get real time updates directly on you device, subscribe now.

Comments are closed.

error: Content is protected !!