ಜ.20 ರೊಳಗೆ ಸಾಲ ಅರ್ಜಿಗಳ ವಿಲೇವಾರಿ ಮಾಡಿ: ಸಿಇಓ

55

Get real time updates directly on you device, subscribe now.


ತುಮಕೂರು: ಜಿಲ್ಲೆಯಲ್ಲಿ ವಿವಿಧ ಇಲಾಖೆಗಳ ಯೋಜನೆಗಳಡಿ ಸಾಲ ಸೌಲಭ್ಯಕ್ಕಾಗಿ ಸಲ್ಲಿಸಿರುವ ಎಲ್ಲಾ ಅರ್ಜಿಗಳನ್ನು ಜನವರಿ 20ರೊಳಗಾಗಿ ತಪ್ಪದೇ ವಿಲೇವಾರಿ ಮಾಡಬೇಕೆಂದು ಜಿಲ್ಲಾ ಪಂಚಾಯತ್ ಸಿಇಒ ಜಿ.ಪ್ರಭು ಎಲ್ಲಾ ಬ್ಯಾಂಕ್ ಗಳಿಗೂ ಸೂಚನೆ ನೀಡಿದರು.
ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಜರುಗಿದ ಜಿಲ್ಲಾ ಮಟ್ಟದ ಪರಿಶೀಲನಾ ಸಭೆ ಹಾಗೂ ಜಿಲ್ಲಾ ಸಮಾಲೋಚನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿವಿಧ ಇಲಾಖೆ ಹಾಗೂ ನಿಗಮಗಳಡಿ ಅನುಷ್ಠಾನವಾಗುವ ಯೋಜನೆಗಳಡಿ ಸಾಲ ಸೌಲಭ್ಯಕ್ಕಾಗಿ ಫಲಾನುಭವಿಗಳು ಬ್ಯಾಂಕುಗಳಿಗೆ ಸಲ್ಲಿಸಿರುವ ಅರ್ಜಿಗಳನ್ನು ವಿನಾಕಾರಣ ತಿರಸ್ಕರಿಸಬಾರದು, ಸರ್ಕಾರದಿಂದ ಶೇ.25 ರಿಂದ ಶೇ. 90ರ ವರೆಗೂ ಸಹಾಯಧನ ಸೌಲಭ್ಯ ನೀಡಿದ್ದರೂ ಸಾಲ ನೀಡದೆ ಫಲಾನುಭವಿಗಳನ್ನು ಕಾಯಿಸುವುದು ಸರಿಯಲ್ಲ, ಬರಗಾಲ ಪರಿಸ್ಥಿತಿಯಿಂದ ಕಂಗಾಲಾಗಿರುವ ರೈತರು, ಬಡವರು, ಮಹಿಳೆಯರು, ನಿರ್ಗತಿಕರ ಅರ್ಜಿಗಳಿಗೆ ಆದ್ಯತೆ ಮೇಲೆ ಸಾಲ ಮಂಜೂರಾತಿ ನೀಡಬೇಕು ಎಂದು ಸೂಚಿಸಿದರು.

ಕೆಲವು ರೈತರಿಗೆ ಸಾಲದ ಅರ್ಜಿಯೊಂದಿಗೆ ಬ್ಯಾಂಕ್ ಗೆ ಸಲ್ಲಿಸುವ ದಾಖಲೆಗಳ ಬಗ್ಗೆ ತಿಳುವಳಿಕೆ ಇರುವುದಿಲ್ಲ, ಅಂತಹ ಮುಗ್ಧ ರೈತರಿಗೆ ದಾಖಲೆಗಳ ಸಲ್ಲಿಕೆ ಬಗ್ಗೆ ಇಲಾಖಾಧಿಕಾರಿಗಳು ಮಾರ್ಗದರ್ಶನ ನೀಡಬೇಕು, ಇದರಿಂದ ದಾಖಲೆಗಳ ಕೊರತೆಯಿಂದ ಅರ್ಜಿ ತಿರಸ್ಕೃತವಾಗುವುದನ್ನು ತಡೆಯಬಹುದು, ಬ್ಯಾಂಕ್ ಗಳಲ್ಲಿ ತಿರಸ್ಕೃತವಾದ ಸಾಲದ ಅರ್ಜಿಗಳನ್ನು ಮತ್ತೊಮ್ಮೆ ಪರಿಶೀಲಿಸಿ ಅರ್ಜಿಯನ್ನು ಮರು ಸಲ್ಲಿಕೆ ಮಾಡಲು ಸಂಬಂಧಿತ ಇಲಾಖೆಗಳು ಫಲಾನುಭವಿಗಳಿಗೆ ಸೂಚಿಸಬೇಕು, ಸಾಲದ ಅರ್ಜಿಗಳನ್ನು ವಿಲೇವಾರಿ ಮಾಡದೆ 3 ತಿಂಗಳಿಗೂ ಹೆಚ್ಚಿನ ಕಾಲಾವಧಿ ತೆಗೆದುಕೊಳ್ಳುವ ಬ್ಯಾಂಕುಗಳ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಖಾಸಗಿಯವರಿಗೆ ಮಾತ್ರ ಸಾಲ ನೀಡಲು ಆಸಕ್ತಿ ತೋರುವ ಬ್ಯಾಂಕುಗಳಿಗೆ ಸಾಮಾಜಿಕ ಜವಾಬ್ದಾರಿ ಇರಬೇಕು, ಕಳೆದ ನವೆಂಬರ್ ಮಾಹೆಯಲ್ಲಿ ನಗರದಲ್ಲಿ ಒಂದೇ ಕುಟುಂಬದ 5 ಮಂದಿ ಸಾಲದ ಬಡ್ಡಿ ಹಣ ತೀರಿಸಲಾಗದೆ ಆತ್ಮಹತ್ಯೆಗೆ ಶರಣಾಗಿದ್ದರು. ಬ್ಯಾಂಕಿನಿಂದ ಸಕಾಲದಲ್ಲಿ ಸಾಲ ದೊರೆತಿದ್ದರೆ ಇಂತಹ ದುರ್ಘಟನೆ ಸಂಭವಿಸುತ್ತಿರಲಿಲ್ಲ, ಈ ನಿಟ್ಟಿನಲ್ಲಿ ಬ್ಯಾಂಕ್ ಗಳು ಯಾವುದೇ ಸಾಲದ ಅರ್ಜಿಗಳನ್ನು ಬಾಕಿ ಉಳಿಸಿಕೊಳ್ಳದೆ ವಿಲೇವಾರಿ ಮಾಡಬೇಕು, ಮುಂದಿನ ಸಭೆಯೊಳಗೆ ಬ್ಯಾಂಕುಗಳು ಸುಧಾರಿಸಿಕೊಳ್ಳದಿದ್ದರೆ ಶಿಸ್ತು ಕ್ರಮಕ್ಕೆ ಗುರಿಯಾಬೇಕಾಗುತ್ತದೆ, ಇದು ಅಂತಿಮ ಎಚ್ಚರಿಕೆ ಎಂದು ತಿಳಿಸಿದರಲ್ಲದೆ ಸಾಲ ಮಂಜೂರಾತಿಯಲ್ಲಿ ಶೂನ್ಯ ಸಾಧನೆ ಮಾಡಿರುವ ಹೆಚ್ ಡಿ ಎಫ್ ಸಿ ಬ್ಯಾಂಕ್ ನ ವಿರುದ್ಧ ಶಿಸ್ತು ಕ್ರಮಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ನಿರ್ದೇಶಿಸಿದರು.

ಆರ್ಥಿಕ ವರ್ಷಾಂತ್ಯ ಹಾಗೂ ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದು, ನೀತಿ ಸಂಹಿತೆ ಜಾರಿಯಾಗುವ ಮುನ್ನ ಅರ್ಹ ಫಲಾನುಭವಿಗಳಿಗೆ ಸಾಲ ಮಂಜೂರಾಗಬೇಕು, ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ, ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ, ಆದಿ ಜಾಂಬವಂತ ಅಭಿವೃದ್ಧಿ ನಿಗಮ ಸೇರಿದಂತೆ ವಿವಿಧ ನಿಗಮಗಳಡಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಫಲಾನುಭವಿಗಳಿಗೆ ಸಾಲ ಮಂಜೂರಾತಿ ನೀಡುವಲ್ಲಿ ಹಿನ್ನಡೆ ತೋರುವ ಬ್ಯಾಂಕುಗಳ ವಿರುದ್ಧ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಲು ಅವಕಾಶವಿದೆ ಎಂದು ತಿಳಿಸಿದರಲ್ಲದೆ ಸಭೆಗೆ ಗೈರು ಹಾಜರಾದ ಬ್ಯಾಂಕ್ ನ ಅಧಿಕಾರಿಗಳಿಗೆ ನೋಟಿಸ್ ನೀಡಲಾಗುವುದೆಂದು ಎಚ್ಚರಿಸಿದರು.
ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ ನ ವ್ಯವಸ್ಥಾಪಕ ಪ್ರಕಾಶ್ ಮಾತನಾಡಿ, ಜಿಲ್ಲೆಯಲ್ಲಿ 2023- 24ನೇ ಸಾಲಿನಲ್ಲಿ ಸೆಪ್ಟೆಂಬರ್ ಮಾಹೆಯ ಅಂತ್ಯಕ್ಕೆ ವಾರ್ಷಿಕ ಸಾಲ ಯೋಜನೆಯಡಿ 4388.30 ಕೋಟಿ ರೂ. ಸಾಲ ನೀಡಲು ಗುರಿ ಹೊಂದಲಾಗಿತ್ತು, ಇದರಲ್ಲಿ 2718.19 ಕೋಟಿ ರೂ. ಗಳ ಕೃಷಿ ಸಾಲ, ಕೃಷಿಗೆ ಪೂರಕವಾದ ಚಟುವಟಿಕೆಗಳಿಗಾಗಿ 315.32 ಕೋಟಿ ರೂ, ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳಿಗಾಗಿ 1366.73 ಕೋಟಿ ರೂ. ಹಾಗೂ ವ್ಯಾಪಾರ ಮತ್ತು ಸೇವೆಗಳಿಗಾಗಿ 260.96 ಕೋಟಿ ರೂ. ಸೇರಿದಂತೆ 4661.20 ಕೋಟಿ ರೂ. ಸಾಲ ಒದಗಿಸಲಾಗಿದೆ, ಈ ಪೈಕಿ 4661.20ಕೋಟಿ ರೂ. ಸಾಲ ನೀಡುವ ಮೂಲಕ ಶೇ.106ರಷ್ಟು ಗುರಿ ಮೀರಿ ಸಾಧನೆ ಮಾಡಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.

ಸಭೆಯಲ್ಲಿ ನಬಾರ್ಡ್ನ ಕೀರ್ತಿಪ್ರಭ, ಜಿಲ್ಲಾ ಪಂಚಾಯತಿ ಉಪ ಕಾರ್ಯದರ್ಶಿ ಹಾಲಸಿದ್ಧಪ್ಪ ಪೂಜೇರಿ, ಜಿಲ್ಲಾ ಮಟ್ಟದ ಅಧಿಕಾರಿಗಳು, ವಿವಿಧ ಬ್ಯಾಂಕ್ ನ ಅಧಿಕಾರಿಗಳು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!