ತುಮಕೂರು: ಉದ್ಯಮ ಕ್ಷೇತ್ರ ಬಯಸುವುದು ನವೀನ ಕಲ್ಪನೆಗಳು, ತಂತ್ರಜ್ಞಾನದ ಸಮ್ಮಿಲನದೊಂದಿಗೆ ಮಾರುಕಟ್ಟೆಯ ಪ್ರವೃತ್ತಿಗೆ ಅನುಗುಣವಾದ ಉತ್ಪನ್ನಗಳು ಹಾಗೂ ಸ್ಥಿರತೆ, ಈ ಎಲ್ಲದರ ಪರಿಚಯ ಸಂಪರ್ಕಿಸಿ ಗ್ರಾಮೀಣ ಮಟ್ಟದಿಂದ ಜಾಗತಿಕ ಮಟ್ಟಕ್ಕೆ ವಿದ್ಯಾರ್ಥಿಗಳನ್ನು ಉದ್ಯೋಗಶೀಲರನ್ನಾಗಿ ಮಾಡಲು ಸಾಧ್ಯವಿರುವುದು ವಿಶ್ವ ವಿದ್ಯಾಲಯಗಳಿಗೆ ಎಂದು ಉದ್ಯಮಿ ಎಚ್. ಜಿ.ಚಂದ್ರಶೇಖರ್ ಹೇಳಿದರು.
ತುಮಕೂರು ವಿಶ್ವ ವಿದ್ಯಾಲಯದ ಪಿಜಿ ಡಿಪ್ಲೋಮಾ ಇನ್ ಕೊಕೊನಟ್ ಪ್ಲಾಂಟೇಷನ್ ಮ್ಯಾನೇಜ್ಮೆಂಟ್ ಅಂಡ್ ಪ್ರೊಸೆಸ್ಸಿಂಗ್ ವಿಭಾಗವು ವಿವಿಯ ಜೈವಿಕ ತಂತ್ರಜ್ಞಾನ ವಿಭಾಗ, ಸೂಕ್ಷ್ಮ ಜೀವಶಾಸ್ತ್ರ ವಿಭಾಗದ ಸಹಯೋಗದಲ್ಲಿ ಆಯೋಜಿಸಿದ್ದ ನಾವೀನ್ಯತೆಯ ಸವಾಲುಗಳಡಿಯಲ್ಲಿ ತೆಂಗಿನ ಮೌಲ್ಯವರ್ಧನೆಗಾಗಿ ಸಾವಯವ ಕೃಷಿ, ಆಹಾರ ಮತ್ತು ಪೌಷ್ಠಿಕಾಂಶಕ್ಕಾಗಿ ಉತ್ತಮ ಪರಿಹಾರಗಳು ಕುರಿತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಹತ್ತಾರು ನವೀನ ವಿಷಯಗಳಿಗೆ ಹೊಸದೊಂದು ಶೈಕ್ಷಣಿಕ ಬಾಗಿಲನ್ನು ತೆರೆದಿರುವ ತುಮಕೂರು ವಿವಿಯು ಅಧ್ಯಯನ, ಸಂಶೋಧನೆಗಳಿಗೆ ಗರಿಷ್ಠ ಪ್ರಾಮುಖ್ಯತೆ ನೀಡುತ್ತಿದೆ, ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗಾಗಿ ಬಿಸಿಯೂಟ ಯೋಜನೆ, ಸಂಶೋಧನೆಗಾಗಿ ವಿಶ್ವ ವಿದ್ಯಾಲಯ ವಿದ್ಯಾರ್ಥಿಗಳ ಪರಸ್ಪರ ವಿನಿಮಯ ಆಧಾರಿತ ಪದ್ಧತಿ ಅನುಸರಿಸಲು ಮುಂದಾಗಿರುವುದು ರಾಷ್ಟ್ರ ಮಟ್ಟದಲ್ಲಿ ಗಮನಾರ್ಹ ವಿಷಯವಾಗಿದೆ ಎಂದರು.
ತುಮಕೂರು ವಿವಿ ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು ಮಾತನಾಡಿ, ಅವಕಾಶಗಳು ಅರಸಿ ಬಂದಾಗ ಧನಾತ್ಮಕವಾಗಿ ಅವುಗಳನ್ನು ಸ್ವೀಕರಿಸಬೇಕು, ಅವುಗಳ ಉಪಯೋಗವನ್ನು ಸರ್ವತೋಮುಖವಾಗಿ ಯೋಚಿಸಿ ಯೋಜಿಸಬೇಕು, ಕೈಗಾರಿಕೆಗಳು ನವೀನ ಆಲೋಚನೆಗಳನ್ನು ನಿರೀಕ್ಷಿಸುತ್ತವೆ, ಪ್ರಾದೇಶಿಕ ಪ್ರಾಮುಖ್ಯತೆಯನ್ನು ವಿದ್ಯಾರ್ಥಿಗಳಿಗೆ ತಿಳಿಸಬೇಕು ಮತ್ತು ಅದನ್ನು ಮಾರುಕಟ್ಟೆಯಲ್ಲಿ ಅಳವಡಿಸಿಕೊಳ್ಳುವ ಚಾಣಾಕ್ಷತನ ಕಲಿಸಬೇಕು ಎಂದು ತಿಳಿಸಿದರು.
ವಾಣಿಜ್ಯೋದ್ಯಮಿ ಸುರೇಂದ್ರ ಷಾ ಮಾತನಾಡಿ, ಕೃಷಿಯನ್ನು ಆಧಾರವಾಗಿ ಬಳಸಿಕೊಂಡು ದೇಶವು 5 ಟ್ರಿಲಿಯನ್ ಆರ್ಥಿಕತೆ ತಲುಪಬೇಕು, ನಾವು ಪ್ರಪಂಚದಾದ್ಯಂತ ತೆಂಗಿನ ಕಾಯಿಯನ್ನು ರಫ್ತು ಮಾಡುತ್ತೇವೆ, ತೆಂಗಿನ ಉತ್ಪನ್ನಗಳಿಂದ ಆದಾಯ ಹೆಚ್ಚಿದೆ, ತೆಂಗಿನ ಕ್ಷೇತ್ರದಲ್ಲಿ ಯಶಸ್ವಿಯಾಗಲು ಉತ್ತಮ ತಂತ್ರಜ್ಞಾನದ ಆಲೋಚನೆಗಳೊಂದಿಗೆ ಹೊರಬರಬೇಕು ಎಂದರು.
ಇಂಟರ್ ನ್ಯಾಷನಲ್ ಫೆಡರೇಶನ್ ಆಫ್ ಇನ್ವೆಂಟರ್ಸ್ ಅಸೋಸಿಯೇಷನ್ಸ್ನ ತುಮಕೂರು ಶಾಖೆ ಉದ್ಘಾಟಿಸಲಾಯಿತು.
ಬೆಂಗಳೂರಿನ ಆಲ್ ಟೈಮ್ ಮೆಟೀರಿಯಲ್ಸ್ ಇನೋವೇಶನ್ಸ್ ಪ್ರೈ.ಲಿ.ನ ಸಂಶೋಧನೆ ಮತ್ತುಅಭಿವೃದ್ಧಿ ಉಪಾಧ್ಯಾಕ್ಷ ಡಾ.ಹರ್ಷದ್ ವೇಲಂಕರ್, ಇಂಟರ್ ನ್ಯಾಷನಲ್ ಫೆಡರೇಶನ್ ಆಫ್ ಇನ್ವೆಂಟರ್ಸ್ ಅಸೋಸಿಯೇಷನ್ಸ್ ಜಾಗತಿಕ ನಿರ್ದೇಶಕ ಆನಂದ್ ಕಣ್ಣನ್, ವಿವಿ ಜೈವಿಕ ತಂತ್ರಜ್ಞಾನ ವಿಭಾಗದ ಮುಖ್ಯಸ್ಥ ಡಾ.ಶರತ್ಚಂದ್ರ.ಆರ್.ಜಿ, ಉಪ ಕುಲಸಚಿವೆ ಡಾ.ಮಂಗಳಾ ಗೌರಿ.ಎಂ. ಹಾಜರಿದ್ದರು.
Comments are closed.