ಮಧುಗಿರಿ: ಪಟ್ಟಣದ ಸರ್ಕಾರಿ ಮೆಟ್ರಿಕ್ ನಂತರದ ಹಾಸ್ಟೆಲ್ ನಲ್ಲಿ ವ್ಯಾಸಂಗ ಮಾಡುತ್ತಿದ್ದ 14 ವರ್ಷದ ಬಾಲಕಿಯೊಬ್ಬಳು ಬಾಗೇಪಲ್ಲಿಯ ಖಾಸಗಿ ಆಸ್ಪತ್ರೆಯಲ್ಲಿ ಹೊಟ್ಟೆ ನೋವೆಂದು ಚಿಕಿತ್ಸೆಗೆ ದಾಖಲಾಗಿ ಗಂಡು ಮಗುವಿಗೆ ಜನ್ಮ ನೀಡಿದ್ದು, ಪ್ರಕರಣದಲ್ಲಿ ಹಾಸ್ಟೆಲ್ ವಾರ್ಡನ್ ಜಿ.ನಿವೇದಿತಾ ಅವರ ನಿರ್ಲಕ್ಷ್ಯ ಕಂಡು ಬಂದ ಹಿನ್ನೆಲೆಯಲ್ಲಿ ಜಿಪಂ ಸಿಇಓ ಪ್ರಭು ಅಮಾನತು ಮಾಡಿ ಆದೇಶಿಸಿದ್ದಾರೆ
ಏನಿದು ಪ್ರಕರಣ: ಮಧುಗಿರಿ ಪಟ್ಟಣದ ಸರ್ಕಾರಿ ಮೆಟ್ರಿಕ್ ನಂತರದ ಪೂರ್ವ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿದ್ದ 9ನೇ ತರಗತಿ ವಿದ್ಯಾರ್ಥಿನಿ ಗಂಡು ಮಗುವಿಗೆ ಜನ್ಮ ನೀಡಿದ್ದು, ಆಕೆಯ ತಾಯಿ ಬಾಗೇಪಲ್ಲಿ ತಾಲೂಕಿನ ಗ್ರಾಮವೊಂದರಲ್ಲಿ ಅಂಗನವಾಡಿ ಶಿಕ್ಷಕಿ, ತಂದೆ ಕೃಷಿಕ, ಮಗಳು ಚೆನ್ನಾಗಿ ಓದಲಿ ಎಂದು ದೂರದ ಮಧುಗಿರಿ ತಾಲೂಕಿನ ವಿದ್ಯಾರ್ಥಿ ನಿಲಯಕ್ಕೆ ಸೇರಿಸಿ ಇಲ್ಲಿಂದ ಶಾಲೆಗೆ ಕಳುಹಿಸಿದ್ದರು, ಕೆಲ ದಿನಗಳ ಹಿಂದೆ ಬಾಲಕಿ ಸ್ವ ಗ್ರಾಮಕ್ಕೆ ಹೋಗಿದ್ದು, ಜ.9 ರಂದು
ಬಾಗೇಪಲ್ಲಿಯಲ್ಲಿನ ಖಾಸಗಿ ಆಸ್ಪತ್ರೆಗೆ ಹೊಟ್ಟೆ ನೋವಿನ ಕಾರಣ ಪೋಷಕರೊಂದಿಗೆ ಆಸ್ಪತ್ರೆಗೆ ಚಿಕಿತ್ಸೆಗೆಂದು ಹೋಗಿರುತ್ತಾರೆ, ಸದರಿ ಸಮಯದಲ್ಲಿ ಸ್ಕ್ಯಾನಿಂಗ್ ಮಾಡಿಸಲಾಗಿ ವಿದ್ಯಾರ್ಥಿನಿ ಗರ್ಭಾವಸ್ಥೆಯಲ್ಲಿರುವುದು ದೃಢಪಟ್ಟಿರುತ್ತದೆ, ತದ ನಂತರ ಸದರಿ ವಿದ್ಯಾರ್ಥಿನಿಯು ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ವಿದ್ಯಾರ್ಥಿಯೊಬ್ಬ ನನಗೆ ಒತ್ತಾಯ ಪೂರ್ವಕವಾಗಿ ದೈಹಿಕ ಸಂಪರ್ಕ ಮಾಡಿರುತ್ತಾನೆ ಎಂದು ಹೇಳಿಕೆ ನೀಡಿರುತ್ತಾಳೆ, ಬಾಲಕಿ ಗರ್ಭಿಣಿಯಾಗಿ ಹೆರಿಗೆಯಾಗುವ ತನಕವೂ ಪೋಷಕರು, ವಿದ್ಯಾರ್ಥಿ ನಿಲಯದ ಮೇಲ್ವಿಚಾರಕಿ ಬಾಲಕಿಯ ದೇಹದಲ್ಲಾಗುತ್ತಿರುವ ಬದಲಾವಣೆ ಗಮನಿಸಲಿಲ್ಲವೇ ಎಂಬ ಪ್ರಶ್ನೆ ಸಹಜವಾಗಿ ಮೂಡಿದೆ.
ವಿದ್ಯಾರ್ಥಿನಿಯು ಕಳೆದ ಜೂನ್ ಮಾಹೆಯಿಂದ ಇಲ್ಲಿಯವರೆಗೂ ನಿಲಯದಲ್ಲಿ 8 ತಿಂಗಳ ಕಾಲ ವಾಸ್ತವ್ಯವಿದ್ದರೂ ನಿಲಯ ಪಾಲಕರು ಈ ವಿದ್ಯಾರ್ಥಿನಿಯು ಗರ್ಭಾವಸ್ಥೆ ಹೊಂದಿರುವ ಬಗ್ಗೆ ಮಾಹಿತಿ ತಿಳಿಯುವಲ್ಲಿ ಸಂಪೂರ್ಣವಾಗಿ ವಿಫಲರಾಗಿರುತ್ತಾರೆ, ವಾರ್ಡನ್ ಆದವರು ಪ್ರತಿ ದಿನ ವಿದ್ಯಾರ್ಥಿನಿಯರೊಂದಿಗೆ ನಿಲಯಾರ್ಥಿಗಳ ಚಲವಲನಗಳ ಬಗ್ಗೆ ನಿಗಾ ವಹಿಸಬೇಕಾಗಿರುವುದು ನಿಲಯಪಾಲಕರ ಜವಾಬ್ದಾರಿಯಾಗಿರುತ್ತದೆ, ಆದರೆ ನಿಲಯಪಾಲಕರಾದ ಜಿ. ನಿವೇದಿತ ಕರ್ತವ್ಯದ ನಿರ್ಲಕ್ಷ್ಯತೆ ಮತ್ತು ಬೇಜವಾಬ್ದಾರಿತನ ತೋರಿರುವುದು ಮೇಲ್ನೋಟಕ್ಕೆ ಕಂಡು ಬಂದಿದ್ದು, ಈ ಹಿನ್ನೆಲೆಯಲ್ಲಿ ಅಮಾನತು ಮಾಡಲಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
Comments are closed.