ತುಮಕೂರು: ಕಳೆದ ಐದು ದಿನಗಳಿಂದ ತುಮಕೂರು ಜಿಲ್ಲಾಧಿಕಾರಿ ಕಚೇರಿ ಎದುರು ರೈತರು ಬೆಂಬಲ ಬೆಲೆ ಕೊಬ್ಬರಿ ಖರೀದಿ ಕೇಂದ್ರ ತೆರೆಯುವಂತೆ ಆಗ್ರಹಿಸಿ ಆಹೋರಾತ್ರಿ ಧರಣಿ ನಡೆಸುತ್ತಿದ್ದರು ಜಿಲ್ಲೆಯಲ್ಲಿರುವ ಗೃಹ ಮಂತ್ರಿಗಳಾಗಲಿ, ಸಹಕಾರ ಸಚಿವರಾಗಲಿ ಇತ್ತ ತಿರುಗಿಯೂ ನೋಡಿಲ್ಲ, ಇದು ಸರಕಾರಕ್ಕೆ ರೈತರ ಬಗ್ಗೆ ಇರುವ ಕಾಳಜಿ ತೋರಿಸುತ್ತದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದ್ದಾರೆ.
ಜಿಲ್ಲಾಧಿಕಾರಿಗಳ ಕಚೇರಿಯ ಎದುರು ನಡೆಯುತ್ತಿರುವ ಆಹೋರಾತ್ರಿ ಧರಣಿಯಲ್ಲಿ ಪಾಲ್ಗೊಂಡು ಮಾತನಾಡಿ, ಕೇಂದ್ರ ಸರಕಾರ 11750 ರೂ. ಇದ್ದ ಉಂಡೆ ಕೊಬ್ಬರಿ ಬೆಂಬಲ ಬೆಲೆಯನ್ನು 250 ರೂ. ಹೆಚ್ಚಳ ಮಾಡಿ ಕ್ವಿಂಟಾಲ್ ಕೊಬ್ಬರಿಗೆ 12000 ರೂ. ನಿಗದಿ ಮಾಡಿ ಕೊಬ್ಬರಿ ಕೊಳ್ಳಲು ರಾಜ್ಯ ಸರಕಾರಗಳಿಗೆ ಅವಕಾಶ ಕಲ್ಪಿಸಿದೆ, ಆದರೆ ರಾಜ್ಯ ಸರಕಾರ ಮಾತ್ರ ಕೊಬ್ಬರಿ ಕೊಳ್ಳಲು ಮೀನಾಮೇಷ ಎಣಿಸುತ್ತಿದೆ, ಕೂಡಲೇ ನಾಫೆಡ್ ಕೇಂದ್ರಗಳನ್ನು ತೆರೆದು ಕೊಬ್ಬರಿ ಖರೀದಿ ಆರಂಭಿಸಬೇ ಕೆಂಬುದು ರೈತರ ಒತ್ತಾಯವಾಗಿದೆ ಎಂದರು.
ಚುನಾವಣಾ ಪೂರ್ವದಲ್ಲಿ ಇಂದಿನ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಕೊಬ್ಬರಿಗೆ ವೈಜ್ಞಾನಿಕ ಬೆಲೆಗಾಗಿ ಒತ್ತಾಯಿಸಿ ಧರಣಿ ನಡೆಸುತ್ತಿದ್ದ ರೈತರ ಬಳಿಗೆ ಬಂದು ನಮ್ಮ ಸರಕಾರ ಬಂದರೆ ಕ್ವಿಂಟಾಲ್ ಕೊಬ್ಬರಿಗೆ 15000 ರೂ. ನೀಡುವ ಭರವಸೆ ನೀಡಿದರು, ಆದರೆ ಅಧಿಕಾರಕ್ಕೆ ಬಂದ ನಂತರ ಕೇವಲ 1500 ರೂ. ಪ್ರೋತ್ಸಾಹ ಧನ ನೀಡಿ ಕೈತೊಳೆದುಕೊಳ್ಳಲು ಹೊರಟಿದೆ, ಕೊಟ್ಟ ಮಾತಿನಂತೆ ಸರಕಾರ ಕೇಂದ್ರದ 12 ಸಾವಿರ ಬೆಂಬಲ ಬೆಲೆ ಜೊತೆಗೆ ರಾಜ್ಯ ಸರಕಾರ 3000 ಪ್ರೋತ್ಸಾಹ ಧನ ನೀಡಿ ಒಟ್ಟು 15000 ರೂ. ಗಳಿಗೆ ಕ್ವಿಂಟಾಲ್ ಕೊಬ್ಬರಿ ಖರೀದಿಸಬೇಕೆಂಬುದು ನಮ್ಮ ಒತ್ತಾಯ, ಕೊಟ್ಟ ಮಾತಿನಂತೆ ಸರಕಾರ ನಡೆದುಕೊಳ್ಳಬೇಕು, ರಾಜಕೀಯ ಲಾಭಕೋಸ್ಕರ ಹಿಂದು, ಮುಂದು ನೋಡದೆ ಕೊಬ್ಬರಿ ಖರೀದಿಸಲಿ ಎಂದು ಕೋಡಿಹಳ್ಳಿ ಚಂದ್ರಶೇಖರ್ ಆಗ್ರಹಿಸಿದರು.
ಜಿಲ್ಲೆಯಲ್ಲಿ ಇಬ್ಬರು ಸಚಿವರಿದ್ದಾರೆ, ಸಹಕಾರ ಸಚಿವರು ಕೇಂದ್ರ ಸರಕಾರ 12 ಸಾವಿರ ನೀಡಿದರೆ ಖರೀದಿಸಲು ಸಿದ್ದ ಎಂದಿದ್ದಾರೆ, ಈಗಾಗಲೇ ಕೃಷಿ ಮಾರುಕಟ್ಟೆ ಅಧಿಕಾರಿಗಳಿಗೆ ಖರೀದಿ ಕೇಂದ್ರ ತೆರೆಯಲು ಗ್ರೀನ್ ಸಿಗ್ನಲ್ ದೊರೆತ್ತಿದೆ, ಹಾಗಾಗಿ ಗೃಹ ಮತ್ತು ಸಹಕಾರ ಸಚಿವರು ಮುಖ್ಯಮಂತ್ರಿಗಳ ಜೊತೆ ಮಾತನಾಡಿ ಕೊಬ್ಬರಿ ಬೆಳೆಗಾರರ ನೆರವಿಗೆ ಬರಲಿ ಎಂಬುದು ನಮ್ಮ ಒತ್ತಾಯವಾಗಿದೆ ಎಂದರು.
ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಧನಂಜಯ್ ಆರಾಧ್ಯ ಮಾತನಾಡಿ, ಕಳೆದ ಬಾರಿ ಬೆಂಬಲ ಬೆಲೆಯಲ್ಲಿ ಖರೀದಿಸಲು ನಾಫೆಡ್ ಕೇಂದ್ರ ತೆರೆದರೂ ನೆಪ ಮಾತ್ರಕ್ಕೆ ರೈತರಿಂದ ಕೊಬ್ಬರಿ ಖರೀದಿಸಿ ದಲ್ಲಾಳಿಗಳು, ವ್ಯಾಪಾರಸ್ಥರಿಗೆ ಹೆಚ್ಚು ಅನುಕೂಲ ವಾಗುವಂತೆ ನಡೆದುಕೊಂಡಿದೆ, ಇದರ ಫಲವಾಗಿ ರೈತರು ಲಕ್ಷಾಂತರ ರೂ. ನಷ್ಟ ಅನುಭವಿಸಿದರು, ಆದರೆ ಈ ಬಾರಿ ಹಾಗಾಗದಂತೆ ಜಿಲ್ಲಾಡಳಿತ ಎಚ್ಚರಿಕೆ ವಹಿಸಬೇಕು, ಕನಿಷ್ಠ 1.50 ಲಕ್ಷ ಮೆಟ್ರಿಕ್ ಟನ್ ಕೊಬ್ಬರಿ ಖರೀಸಬೇಕು, ಅಲ್ಲದೆ ಕೇರಳ, ತಮಿಳು ನಾಡು ಮತ್ತು ಆಂಧ್ರ ಪ್ರದೇಶದಲ್ಲಿ ಖರೀದಿಸುವಂತೆ ಕರ್ನಾಟಕದಲ್ಲಿಯೂ ಮಿಲ್ಲಿಂಗ್ ಕೊಬ್ಬರಿ ಖರೀದಿಸಬೇಕು ಎಂಬುದು ನಮ್ಮ ಒತ್ತಾಯವಾಗಿದೆ ಎಂದರು.
ಕರ್ನಾಟಕ ರಾಜ್ಯ ರೈತ ಸಂಘದ ಉಪಾಧ್ಯಕ್ಷ ಕೆಂಕೆರೆ ಸತೀಶ್ ಮಾತನಾಡಿ, ನಾಫೆಡ್ ಖರೀದಿ ಕೇಂದ್ರ ಆರಂಭ, ಕ್ವಿಂಟಾಲ್ ಕೊಬ್ಬರಿಗೆ 15 ಸಾವಿರ ರೂ ಬೆಲೆ ನಿಗದಿ, ರಾಗಿ ಖರೀದಿ ರೀತಿ, ಬಯೋಮೆಟ್ರಿಕ್ ಅಳವಡಿಕೆ ಸೇರಿದಂತೆ ಒಟ್ಟು 9 ಬೇಡಿಕೆ ಇಟ್ಟುಕೊಂಡು ಕಳೆದ ಐದು ದಿನಗಳಿಂದ ಆಹೋರಾತ್ರಿ ಧರಣಿ ನಡೆಸುತ್ತಿದ್ದೇವೆ, ಸರಕಾರ ಕಿವಿಗೊಡದಿದ್ದರೆ ಸಂಕ್ರಾಂತಿ ನಂತರ ಹೆದ್ದಾರಿ ತಡೆ, ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆಯಂತಹ ಉಗ್ರ ಸ್ವರೂಪದ ಹೋರಾಟ ಅನಿವಾರ್ಯವಾಗಲಿದೆ ಎಂದರು.
ಧರಣಿಯಲ್ಲಿ ರಾಜ್ಯ ಉಪಾಧ್ಯಕ್ಷ ಕೆಂಕೆರೆ ಸತೀಶ್, ರಾಜ್ಯ ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಭೈರೇಗೌಡ, ಜಿಲ್ಲಾ ಮಹಿಳಾ ಅಧ್ಯಕ್ಷೆ ಶಿವರತ್ನಮ್ಮ, ಜಿಲ್ಲಾ ಗೌರವಾಧ್ಯಕ್ಷ ಲೋಕೇಶ್.ಕೆ.ವಿ, ಜಿಲ್ಲಾ ಕಾರ್ಯದರ್ಶಿ ಸಂಪಿಗೆ ಕೀರ್ತಿ, ವಿವಿಧ ತಾಲೂಕು ಅಧ್ಯಕ್ಷರಾದ ಸಣ್ಣದ್ಯಾಮೇಗೌಡ, ಮಲ್ಲಿಕಾರ್ಜುನಯ್ಯ, ಸಿದ್ದರಾಜು, ನಾಗೇಂದ್ರ ಇತರರು ಹಾಜರಿದ್ದರು.
Comments are closed.