ಸ್ವಾಮಿ ವಿವೇಕಾನಂದ ಯುವಜನರ ಐಕಾನ್

65

Get real time updates directly on you device, subscribe now.


ಕುಣಿಗಲ್: ಸ್ವಾಮಿ ವಿವೇಕಾನಂದರು ಒಬ್ಬ ವ್ಯಕ್ತಿಯಲ್ಲ ಅವರೊಬ್ಬ ಶಕ್ತಿಯಾಗಿ ದೇಶದ ಯುವ ಜನರನ್ನು ಸದೃಢರಾಷ್ಟ್ರ ನಿರ್ಮಾಣಕ್ಕೆ ಪೂರಕವಾಗಿ ಉತ್ತೇಜಿಸಿ ತೊಡಗಿಸಿಕೊಳ್ಳುವಂತೆ ಮಾಡಿದ ಮಹಾನ್ ಸಂತ ಎಂದು ಬೆಂಗಳೂರು ಶಾರದ ಸೇವಾಶ್ರಮದ ಸಹೋದರಿ ಚಂದ್ರಿಕಾ ಹೇಳಿದರು.

ತಾಲೂಕಿನ ಹುಲಿಯೂರು ದುರ್ಗದ ಜ್ಞಾನ ಭಾರತಿ ಪಾಠಶಾಲೆ, ಸಂಸ್ಕಾರ ಭಾರತಿ, 28ನೇ ಜ್ಞಾನೋತ್ಸವ ಸಮಿತಿ ಸೇರಿದಂತೆ ವಿವಿಧ ಶಾಲೆ, ಸಮಿತಿ, ಸಂಘ, ಸಂಸ್ಥೆಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸ್ವಾಮಿ ವಿವೇಕಾನಂದರ 160ನೇ ಹಾಗೂ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ರವರ 139ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ವಿವೇಕಾನಂದರು ಯುವ ಜನರಲ್ಲಿ ಮಾನವೀಯ ಮೌಲ್ಯಗಳನ್ನು ವೃದ್ಧಿಸಿ ಮಾನವ ಕುಲದ ಉದ್ಧಾರಕ್ಕೆ ಶ್ರಮಿಸಿದರು, ಯುವ ಜನತೆ, ವಿದ್ಯಾರ್ಥಿಗಳು ಶಾರಿರಿಕ ಶಿಸ್ತು ರೂಪಿಸಿಕೊಂಡು ಒಳ್ಳೆಯತನದಿಂದಲೆ ದಿನ ಆರಂಭಿಸಿ, ಎಲ್ಲದರಲ್ಲೂ ಒಳ್ಳೆಯತನ ಹುಡುಕಿದಾಗ ಸುತ್ತಮುತ್ತಲ ಪರಿಸರವೂ ಒಳ್ಳೆಯ ಪರಿಸರವಾಗಿ ಎಲ್ಲೆಡೆ ಒಳ್ಳೆಯ ವಾತವರಣ ನಿರ್ಮಾಣವಾಗುತ್ತದೆ, ಇದನ್ನೆ ವಿವೇಕಾನಂದರು ಯದ್ಭಾವಂ ತದ್ಭವತಿ ಎಂದು ಹೇಳಿದ್ದರು, ದೇಶದ ಯುವ ಜನತೆ ಮಾನಸಿಕವಾಗಿ, ಶಾರೀರಿಕವಾಗಿ ಬಲಿಷ್ಠರಾದಾಗ ಮಾತ್ರ ಬಲಿಷ್ಠ ರಾಷ್ಟ್ರದ ನಿರ್ಮಾಣ ಸಾಧ್ಯ ಎಂದರು.

ಸಾಮಾಜಿಕ ಇತಿಹಾಸಕಾರ ಧರ್ಮೇಂದ್ರ ಕುಮಾರ್ ಮಾತನಾಡಿ, ಸ್ವಾಮಿ ವಿವೇಕಾನಂದರು, ನಾಲ್ವಡಿ ಕೃಷ್ಣರಾಜ ಒಡೆಯರ್ ಇಬ್ಬರು ಅಲ್ಪಕಾಲ ಬದುಕಿದ್ದರು ಅವರಿಗಿದ್ದ ಮಾನವ ಸಮಾಜದ ಕಲ್ಯಾಣ ಗುಣಗಳು ಅವರನ್ನು ಜನತೆ ಶತ ಶತಮಾನ ಕಳೆದರೂ ಸ್ಮರಿಸುವಂತೆ ಮಾಡಿದೆ, ನಾಲ್ವಡಿ ಅರಸರ ತಂದೆ ಚಾಮರಾಜ ಒಡೆಯರ್ ವಿವೇಕಾನಂದರ ನ್ಯೂಯಾರ್ಕ್ ಪ್ರವಾಸದ ಖರ್ಚನ್ನು ಭರಿಸಿದ್ದರು, ನಾಲ್ವಡಿ ಕೃಷ್ಣರಾಜ ಒಡೆಯರ್ ಇಡೀ ದೇಶದಲ್ಲೆ ಮೊದಲ ಬಾರಿಗೆ ಮೀಸಲಾತಿ ವ್ಯವಸ್ಥೆ, ಕಡ್ಡಾಯ ಶಿಕ್ಷಣ ನೀತಿ, ವಯಸ್ಕರ ಶಿಕ್ಷಣ, ಮುಸ್ಲಿಂ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಟಾಂಗಾ ಘೋಷ, ಹಿಂದೂ ಧರ್ಮಿಯ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಶಾಲಾ ಕಾಲೇಜು ನಿರ್ಮಿಸಿ ಮಕ್ಕಳು ಶಾಲೆಗೆ ಹೋದರೆ ಕೂಲಿಗೆ ಆಳು ಸಿಗೊಲ್ಲ ಎಂದ ಪೋಷಕರಿಗೆ ಕೂಲಿ ಹಣ ನೀಡುವ ವ್ಯವಸ್ಥೆ ಜಾರಿಗೊಳಿಸಿ ಶಿಕ್ಷಣದಿಂದಲೆ ಸಮಗ್ರ ಅಭಿವೃದ್ಧಿ ಎಂದು ಸಾರಿದ ರಾಜರ್ಷಿಗಳು, ಮಕ್ಕಳು ಉತ್ತಮ ಗುರಿ ಇಟ್ಟುಕೊಂಡು ಗುರಿ ಸಾಧಿಸುವ ಛಲ ಹೊಂದಿ, ಗುರಿ, ಛಲದ ಜೊತೆ ತ್ಯಾಗ ಮನೋಭಾವ ಹೊಂದಿದಾಗ ಎಂತಹ ಸಾಧನೆಯನ್ನೂ ಮಾಡಬಹುದು ಎಂದರು.

ಉದ್ಯಮಿಗಳಾದ ಶಶಿಕಾಂತ್, ಡಾ.ಹೆಚ್.ಬಿ.ನಾಗೇಶ್ ಕುಮಾರ್, ಟ್ರಸ್ಟ್ನ ಅಧ್ಯಕ್ಷೆ ಪದ್ಮಚರಣ್, ಗೌರವ ಅಧ್ಯಕ್ಷ ಹೆಚ್.ಎನ್.ನಟರಾಜ್ ಇತರರು ಇದ್ದರು. ಕಾರ್ಯಕ್ರಮ ಮುನ್ನ ವಿವಿಧ ಶಾಲಾ ಮಕ್ಕಳಿಂದ ಜನಪದ ಕಲಾ ತಂಡಗಳೊಂದಿಗೆ ಹುಲಿಯೂರು ದುರ್ಗದ ಮುಖ್ಯ ರಸ್ತೆಗಳಲ್ಲಿ ಇಬ್ಬರೂ ಮಹನೀಯರ ಭಾವಚಿತ್ರದ ಮೆರವಣಿಗೆ ನಡೆಸಲಾಯಿತು.

Get real time updates directly on you device, subscribe now.

Comments are closed.

error: Content is protected !!