ತುಮಕೂರು: ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಗುಣಮಟ್ಟದ ಉಂಡೆ ಕೊಬ್ಬರಿ ಖರೀದಿಗಾಗಿ ಜನವರಿ 20 ರಿಂದಲೇ ಜಿಲ್ಲೆಯ ತುಮಕೂರು, ಗುಬ್ಬಿ, ತುರುವೇಕೆರೆ, ತಿಪಟೂರು, ಕುಣಿಗಲ್, ಶಿರಾ, ಚಿಕ್ಕನಾಯಕನ ಹಳ್ಳಿ ತಾಲೂಕುಗಳಲ್ಲಿ 21 ಖರೀದಿ ಕೇಂದ್ರ ತೆರೆಯಲು ನಿರ್ಣಯಿಸಲಾಯಿತು.
ನಗರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ ಕರಾಳೆ ಅಧ್ಯಕ್ಷತೆಯಲ್ಲಿ ಜರುಗಿದ ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು.
ಈ ವೇಳೆ ಮಾತನಾಡಿದ ಅಪರ ಜಿಲ್ಲಾಧಿಕಾರಿ ಜಿಲ್ಲೆಯಲ್ಲಿ ಜನವರಿ 20 ರಿಂದಲೇ ಖರೀದಿ ಕೇಂದ್ರ ಪ್ರಾರಂಭಿಸಬೇಕು, ಖರೀದಿ ಕೇಂದ್ರಗಳಲ್ಲಿ ಗೊಂದಲಗಳಾಗದಂತೆ ಅಧಿಕಾರಿಗಳು ಮುನ್ನೆಚ್ಚರಿಕೆ ವಹಿಸಬೇಕು, ಈಗಾಗಲೇ ನಿರ್ಣಯಿಸಿರುವಂತೆ ಜಿಲ್ಲೆಯ ತಿಪಟೂರು ಹಾಗೂ ತುರುವೇಕೆರೆಯಲ್ಲಿ ತಲಾ 6 ಖರೀದಿ ಕೇಂದ್ರ, ಗುಬ್ಬಿ, ಚಿಕ್ಕನಾಯಕನ ಹಳ್ಳಿ ಹಾಗೂ ಹುಳಿಯಾರಿನಲ್ಲಿ ತಲಾ 2, ತುಮಕೂರು, ಕುಣಿಗಲ್ ಹಾಗೂ ಶಿರಾ ತಾಲೂಕಿನಲ್ಲಿ ತಲಾ 1 ಸೇರಿ ಒಟ್ಟು 21 ಖರೀದಿ ಕೇಂದ್ರ ತೆರೆಯಲು ಅಗತ್ಯ ಸಿದ್ಧತೆ ಕೈಗೊಳ್ಳಬೇಕೆಂದು ಸೂಚಿಸಿದರು.
ಪ್ರತೀ ದಿನ ಅಧಿಕಾರಿಗಳು ಖರೀದಿ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಬೇಕೆಂದು ನಿರ್ದೇಶಿಸಿದರಲ್ಲದೆ ಖರೀದಿ ಕೇಂದ್ರದಲ್ಲಿ ಮೂಲಭೂತ ಸೌಕರ್ಯ ಕಲ್ಪಿಸಬೇಕು ಹಾಗೂ ರೈತರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ನಿಗಾ ವಹಿಸಬೇಕು ಎಂದು ಸೂಚನೆ ನೀಡಿದರು.
ಸರ್ಕಾರದ ನಿರ್ದೇಶನದ ಅನ್ವಯ ಪ್ರತಿ ಕ್ವಿಂಟಾಲ್ ಗುಣಮಟ್ಟದ ಉಂಡೆ ಕೊಬ್ಬರಿಗೆ 12,000 ರೂ. ನಿಗದಿಪಡಿಸಲಾಗಿದೆ, ಕೊಬ್ಬರಿ ಖರೀದಿಸಲು ಕೇಂದ್ರ ಸರ್ಕಾರದ ಖರೀದಿ ಸಂಸ್ಥೆಯನ್ನಾಗಿ ನಾಫೆಡ್ ಹಾಗೂ ರಾಜ್ಯ ಸರ್ಕಾರದ ಖರೀದಿ ಸಂಸ್ಥೆಯನ್ನಾಗಿ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳವನ್ನು ನೇಮಿಸಲಾಗಿದೆ, ಖರೀದಿ ಸಂಸ್ಥೆಗಳು ಖರೀದಿ ಪ್ರಕ್ರಿಯೆಗೆ ಅಗತ್ಯ ಸಿದ್ಧತೆ ಕೈಗೊಂಡು ಜನವರಿ 20 ರಿಂದ ಅನ್ವಯವಾಗುವಂತೆ 45 ದಿನಗಳವರೆಗೆ ರೈತರ ನೋಂದಣಿ ಕಾರ್ಯದ ಜೊತೆಗೆ ಖರೀದಿ ಪ್ರಾರಂಭಿಸಬೇಕು ಎಂದು ನಿರ್ದೇಶನ ನೀಡಿದರು.
ಖರೀದಿ ಸಂಸ್ಥೆಗಳು ಕೊಬ್ಬರಿ ಖರೀದಿ ಪ್ರಕ್ರಿಯೆಯಲ್ಲಿ ಗ್ರಾಮೀಣ ಭಾಗದ ರೈತರಿಗೆ ಅನುಕೂಲವಾಗುವಂತೆ ನಾಫೆಡ್ ಮಾರ್ಗಸೂಚಿ ಅನುಸರಿಸಬೇಕು, ಖರೀದಿಸಿದ ಕೊಬ್ಬರಿಯನ್ನು ತಾಂತ್ರಿಕ ಮತ್ತು ವೈಜ್ಞಾನಿಕ ಸೌಲಭ್ಯದಿಂದ ಕೂಡಿರುವ ಗೋದಾಮುಗಳಲ್ಲಿ ದಾಸ್ತಾನು ಮಾಡಬೇಕು ಎಂದರಲ್ಲದೆ ಕೊಬ್ಬರಿ ಖರೀದಿಸುವಾಗ ಪ್ರತಿ ಎಕರೆಗೆ ಗರಿಷ್ಠ 6 ಕ್ವಿಂಟಾಲ್ ಹಾಗೂ ಪ್ರತಿ ರೈತರಿಂದ 20 ಕ್ವಿಂಟಾಲ್ ಖರೀದಿ ಪ್ರಮಾಣ ನಿಗದಿಪಡಿಸಬೇಕೆಂದು ನಿರ್ದೇಶನ ನೀಡಿದರು.
ಖರೀದಿ ಕೇಂದ್ರಗಳಲ್ಲಿ ರೈತರಿಂದ ಮಾತ್ರ ಉಂಡೆ ಕೊಬ್ಬರಿ ಖರೀದಿಸಬೇಕು, ರೈತರ ಹೆಸರಿನಲ್ಲಿ ವರ್ತಕರು ತರುವ ಕೊಬ್ಬರಿ ಖರೀದಿಸದಂತೆ ಹಾಗೂ ಖರೀದಿಯಲ್ಲಿ ಯಾವುದೇ ರೀತಿ ಲೋಪವಾಗದಂತೆ ಕಟ್ಟೆಚ್ಚರ ವಹಿಸಬೇಕು, ರೈತರ ಹೆಸರಿನ ಆಧಾರ್ ಸಂಖ್ಯೆ ಜೋಡಣೆಗೊಂಡ ಬ್ಯಾಂಕ್ ಖಾತೆಗೆ ಮಾತ್ರ ಉತ್ಪನ್ನದ ಮೌಲ್ಯವನ್ನು ಡಿಬಿಟಿ ಮೂಲಕ ಜಮೆಯಾಗುವಂತೆ ಪಾವತಿ ಮಾಡಬೇಕು ಎಂದು ಸೂಚನೆ ನೀಡಿದರು.
ಸಭೆಯಲ್ಲಿ ಕೃಷಿ ಮಾರಾಟ ಇಲಾಖೆ ಉಪ ನಿರ್ದೇಶಕ ರಾಜಣ್ಣ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಜಂಟಿ ನಿರ್ದೇಶಕ ಮಂಟೇಸ್ವಾಮಿ, ಕೃಷಿ ಜಂಟಿ ನಿರ್ದೇಶಕ ರಮೇಶ್, ತೋಟಗಾರಿಕೆ ಉಪ ನಿರ್ದೇಶಕ ಶಾರದಮ್ಮ ,ಮಾಪನ ಶಾಸ್ತ್ರ ಇಲಾಖೆ, ರಾಜ್ಯ ಸಹಕಾರ ಮಾರಾಟ ಮಂಡಳ, ನಾಫೆಡ್, ರಾಜ್ಯ ಉಗ್ರಾಣ ನಿಗಮ, ಮಾರ್ಕೆಟಿಂಗ್ ಫೆಡರೇಷನ್, ಎಪಿಎಂಸಿ, ಕೇಂದ್ರ ಉಗ್ರಾಣ ನಿಗಮದ ಅಧಿಕಾರಿಗಳು ಹಾಜರಿದ್ದರು.
Comments are closed.