ಸ್ವಾಭಿಮಾನದ ಬದುಕಿಗೆ ಕೇಂದ್ರದ ಯೋಜನೆ ಸಹಕಾರಿ

ವಿಕಸಿತ ಭಾರತ ಸಂಕಲ್ಪ ಯಾತ್ರೆ ಉದ್ಘಾಟಿಸಿ ಸಂಸದ ಜಿ.ಎಸ್.ಬಸವರಾಜು ಶ್ಲಾಘನೆ

72

Get real time updates directly on you device, subscribe now.


ತುಮಕೂರು:ದೇಶದ ಎಲ್ಲಾ ವರ್ಗದ ಜನರು ಸ್ವಾಭಿಮಾನದಿಂದ ಸ್ವಾವಲಂಬಿಯಾಗಲು ಪ್ರಧಾನಿ ನರೇಂದ್ರ ಮೋದಿಯವರು ಜಾರಿಗೆ ತಂದಿರುವ 150ಕ್ಕೂ ಹೆಚ್ಚು ಕಾರ್ಯಕ್ರಮಗಳು ಸಹಕಾರಿಯಾಗಿವೆ. ಈ ಯೋಜನೆಗಳು ಪ್ರತಿಯೊಬ್ಬರಿಗೂ ತಲುಪಿ ಎಲ್ಲರೂ ಅವುಗಳ ಪ್ರಯೋಜನ ಪಡೆಯಬೇಕು. ಮೋದಿಯವರು ಕೊಟ್ಟಿರುವ ಯೋಜನೆಗಳೇ ದೇಶದ ಪ್ರಗತಿಯನ್ನು ಸಾರಿಹೇಳುತ್ತವೆ ಎಂದು ಸಂಸದ ಜಿ.ಎಸ್.ಬಸವರಾಜು ಹೇಳಿದರು.
ಶನಿವಾರ ನಗರದ ನಗರಪಾಲಿಕೆ ಆವರಣದಲ್ಲಿ ಲೀಡ್ ಬ್ಯಾಂಕ್ ಹಾಗೂ ಕೆನರಾ ಬ್ಯಾಂಕ್ ಸಹಯೋಗದಲ್ಲಿ ನಡೆದ ವಿಕಸಿತ ಭಾರತ ಸಂಕಲ್ಪ ಯಾತ್ರೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಂಸದರು, ದೇಶದ ಜನರ ಸರ್ವತೋಮುಖ ಬೆಳವಣಿಗೆಗೆ ಪ್ರಧಾನಿ ಮೋದಿ ಅವರ ಯೋಜನೆ ಸಹಕಾರಿಯಾಗಿವೆ. ಜನಸಾಮಾನ್ಯರಿಗೆ ಉತ್ತಮ ಬದುಕು, ಶಿಕ್ಷಣ, ಆರೋಗ್ಯ, ಸುರಕ್ಷತೆ ಹೀಗೆ ಎಲ್ಲಾ ರೀತಿಯಲ್ಲೂ ಯೋಜನೆಗಳು ಅನುಕೂಲವಾಗಿವೆ. ಪ್ರಧಾನಿ ಮೋದಿ ಅವರ ಕಾರ್ಯಕ್ರಮಗಳು ದೇಶದ 140 ಕೋಟಿ ಜನರಿಗೂ ತಲುಪಿ ಅವರು ಯೋಜನೆಗಳ ಪ್ರಯೋಜನ ಪಡೆಯಬೇಕು ಎಂದು ಹೇಳಿದರು.

ಮಹಿಳೆಯರಿಗೆ ರಾಜಕೀಯ ಸ್ಥಾನಮಾನ ನೀಡಬೇಕು ಎಂದು ಮೋದಿ ಸರ್ಕಾರ ಮಹತ್ವದ ತೀರ್ಮಾನ ತೆಗೆದುಕೊಂಡಿದೆ. ಅದರಂತೆ ಮುಂಬರುವ ಲೋಕಸಭಾ ಚುನಾವಣೆಗಳಲ್ಲಿ ಶೇಕಡ 33ರಷ್ಟು ಮಹಿಳೆಯರಿಗೆ ಲೋಕಸಭಾ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಲು ರಾಜಕೀಯ ಮೀಸಲಾತಿ ದೊರೆಯುತ್ತದೆ. ಹೆಣ್ಣುಮಕ್ಕಳ ಶಿಕ್ಷಣ, ಸುರಕ್ಷಿತ, ಸುಭದ್ರ ಬದುಕಿಗೆ ಮೋದಿಯವರು ಅನೇಕ ಕಾರ್ಯಕ್ರಮಗಳನ್ನು ಕೊಟ್ಟಿದ್ದಾರೆ. ಮಧ್ಯವರ್ತಿಗಳ ಹಾವಳಿ, ಲಂಚ ತಪ್ಪಿಸಲು ಡಿಜಿಟಲ್ ಪೇಮೆಂಟ್ ವ್ಯವಸ್ಥೆಗೆ ಆದ್ಯತೆ ನೀಡಿ ಸರ್ಕಾರದ ಸವಲತ್ತುಗಳು ನೇರ ಫಲಾನುಭವಿಗಳ ಬ್ಯಾಂಕ್ ಖಾತೆಗೆ ತಲುಪುವಂತೆ ಮಾಡಿದ್ದಾರೆ ಎಂದರು.

1984ರಿಂದ ಹಲವು ಬಾರಿ ಲೋಕಸಭಾ ಸದಸ್ಯನಾಗಿದ್ದೆ, ಆಗ ಕೇಂದ್ರ ಸರ್ಕಾರದಲ್ಲಿ ಭ್ರಷ್ಟಾಚಾರ, ಸ್ಕ್ಯಾಂಡಲ್ ಸುದ್ದಿಗಳೇ ಹೆಚ್ಚು ಪ್ರಚಲಿತವಾಗಿದ್ದವು. ಮೋದಿಯವರು 2014ರಿಂದ ಪ್ರಧಾನಿಯಾದ ಮೇಲೆ ಭ್ರಷ್ಟಾಚಾರಕ್ಕೆ ಅವಕಾಶವಾಗಿಲ್ಲ, ದೇಶದ ಅಭಿವೃದ್ಧಿಯೇ ಮೋದಿಯವರ ಮಂತ್ರವಾಗಿದೆ ಎಂದು ಸಂಸದ ಜಿ.ಎಸ್.ಬಸವರಾಜು ಹೇಳಿದರು.

ಶಾಶ್ವತ ಯೋಜನೆ ಮೋದಿ ಸರ್ಕಾರ ನೀಡಿದೆ..
ಶಾಸಕ ಜಿ.ಬಿ.ಜ್ಯೋತಿಗಣೇಶ್ ಮಾತನಾಡಿ, ದೇಶದ ಜನ, ಕುಟುಂಬ ಸ್ವಾಭಿಮಾನಿಯಾಗಿ ಸಮಾಜದಲ್ಲಿ ತಲೆಯೆತ್ತಿ ಬಾಳಲು ಬೇಕಾದ ಆಹಾರ, ಅರೋಗ್ಯ, ವಿದ್ಯೆ, ಸಾಮಾಜಿಕ ಭದ್ರತೆ, ರೈತರು, ಕಾರ್ಮಿಕರ ಸುರಕ್ಷತೆಗೆ ಪೂರಕವಾದ 150ಕ್ಕೂ ಹೆಚ್ಚು ಮಹತ್ತರವಾದ ಯೋಜನೆಗಳನ್ನು ಪ್ರಧಾನಿ ನರೇಂದ್ರ ಮೋದಿ ಜಾರಿಗೆ ತಂದಿದ್ದಾರೆ. ಜಾತಿಭೇದವಿಲ್ಲದೆ ಎಲ್ಲಾ ವರ್ಗದವರಿಗೂ ಅನುಕೂಲವಾಗವ ಈ ಯೋಜನೆಗಳೇ ನರೇಂದ್ರ ಮೋದಿಯವರ ಗ್ಯಾರಂಟಿ. ಎಲ್ಲರೂ ಈ ಯೋಜನೆಗಳ ಪ್ರಯೋಜನ ಪಡೆದು ಪ್ರಗತಿಯಾದರೆ ಭಾರತ ವಿಕಸಿತವಾಗುತ್ತದೆ ಎಂದು ಹೇಳಿದರು.

ಸ್ವಾತಂತ್ರ ಬಂದು 75 ವರ್ಷ ಕಳೆದರೂ ದೇಶದ ಪ್ರಗತಿ ಕಾಣದಿದ್ದ ಸಮಯದಲ್ಲಿ 2014ರಲ್ಲಿ ಮೋದಿಯವರು ಪ್ರಧಾನ ಮಂತ್ರಿಯಾಗಿ ದೇಶದ ಅಭಿವೃದ್ಧಿಪಥವನ್ನು ಹೊಸ ದಿಕ್ಕಿನತ್ತ ಕೊಂಡೊಯ್ಯುತ್ತಿದ್ದಾರೆ. ಜನಸಾಮಾನ್ಯರ ಆರ್ಥಿಕ ಪರಿಸ್ಥಿತಿ ಉತ್ತಮಗೊಂಡು ಅವರು ಸ್ವಾಭಿಮಾನದಿಂದ ಬಾಳಲು ಮೋದಿಯವರ ಯೋಜನೆಗಳು ಸಹಕಾರಿಯಾಗಿವೆ. ಸಮಾಜದ ಕಟ್ಟಕಡೆಯ ವ್ಯಕ್ತಿಯೂ ಯೋಜನೆಗಳ ಪ್ರಯೋಜನ ಪಡೆದು ಸಮಾಜದ ಮುಖ್ಯವಾಹಿನಿಗೆ ಬರಲು ನೆರವಾಗಿವೆ ಎಂದು ತಿಳಿಸಿದರು.

ಲೀಡ್ ಬ್ಯಾಂಕ್ ವ್ಯವಸ್ಥಾಪಕ ಪ್ರಕಾಶ್ ಮಾತನಾಡಿ, ವಿಕಸಿತ ಭಾರತ ಸಂಕಲ್ಪ ಯಾತ್ರೆ ಮೂಲಕ ದೇಶದ ಎಲ್ಲಾ ಜನರಿಗೆ ಪ್ರಧಾನ ಮಂತ್ರಿಯವರ ಯೋಜನೆಗಳನ್ನು ಪರಿಚಯ ಮಾಡಿಸಿ, ಅವರನ್ನು ಯೋಜನೆ ವ್ಯಾಪ್ತಿಗೆ ತರುವ ಪ್ರಯತ್ನ ನಡೆಯುತ್ತಿದೆ. ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯ್ತಿ, ಸ್ಥಳೀಯ ಸಂಸ್ಥೆಗಳ ಎಲ್ಲಾ ವಾರ್ಡ್ಗಳಲ್ಲೂ ಈ ಯಾತ್ರೆ ಸಂಚಾರ ಮಾಡಿ ಜನರಿಗೆ ಯೋಜನೆಗಳನ್ನು ತಲುಪಿಸಲಾಗುತ್ತದೆ ಎಂದರು.
ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಗೆ ರಾಜ್ಯದಲ್ಲೇ ಅತಿ ಹೆಚ್ಚು ಎನ್ನುವಂತೆ ನಮ್ಮ ಜಿಲ್ಲೆಯಲ್ಲಿ 1.7 ಲಕ್ಷ ಜನ ಅರ್ಜಿ ಸಲ್ಲಿಸಿದ್ದಾರೆ. ದೇಶದಲ್ಲೇ ಕರ್ನಾಟಕದಲ್ಲಿ ಹೆಚ್ಚು ಜನ ಈ ಯೋಜನೆ ಫಲ ಪಡೆಯಲು ಅರ್ಜಿ ಸಲ್ಲಿಕೆ ಮಾಡಿದ್ದಾರೆ ಎಂದರು.

Get real time updates directly on you device, subscribe now.

Comments are closed.

error: Content is protected !!