ಕೊರಟಗೆರೆ: ಲಂಬಾಣಿ ತಾಂಡ ಕಂದಾಯ ಗ್ರಾಮವಾದಾಗ ಮಾತ್ರ ನಮ್ಮ ಬುಡಕಟ್ಟು ಜನರ ಅಭಿವೃದ್ಧಿ ಸಾಧ್ಯ, ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ರಾಜ್ಯ ಸರಕಾರ ತಾವು ನೀಡಿರುವ ಭರವಸೆಯನ್ನು 2022ನೇ ವರ್ಷದ ಸೇವಾಲಾಲ್ ಜಯಂತಿಯೊಳಗೆ ಈಡೇರಿಸುವ ಪ್ರಯತ್ನ ಮಾಡಬೇಕಾಗಿದೆ ಎಂದು ಬೆಂಗಳೂರು ತಾಂಡ ಅಭಿವೃದ್ಧಿ ನಿಗಮದ ನಿರ್ದೇಶಕಿ ಲೋಹಿತಬಾಯಿ ಆಗ್ರಹ ಮಾಡಿದರು.
ಕೊರಟಗೆರೆ ತಾಲೂಕು ಹೊಳವನಹಳ್ಳಿ ಹೋಬಳಿ ಅಕ್ಕಿರಾಂಪುರ ಗ್ರಾಮದಲ್ಲಿ ಕೊರಟಗೆರೆ ಬಂಜಾರ ಸೇವಾ ಸಂಘ ಮತ್ತು ಜನಜಾಗೃತಿ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯಿಂದ ಶನಿವಾರ ಏರ್ಪಡಿಸಲಾಗಿದ್ದ ಜಗದ್ಗುರು ಸಂತ ಸೇವಾಲಾಲ್ 282ನೇ ಜಯಂತ್ಯೋತ್ಸವ ಹಾಗೂ ಲಂಬಾಣಿ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
ಕೇಂದ್ರ ಮತ್ತು ರಾಜ್ಯ ಸರಕಾರದ ಅನುದಾನ ಪಡೆಯುವಲ್ಲಿ ಲಂಬಾಣಿ ತಾಂಡಗಳು ವಂಚಿತವಾಗಿವೆ, ಲಂಬಾಣಿ ತಾಂಡದ ಯುವಕರಿಗೆ ಉದ್ಯೋಗವಿಲ್ಲದೆ ಪ್ರತಿವರ್ಷ ವಿವಿಧ ರಾಜ್ಯಗಳಿಗೆ ವಲಸೆ ತೆರಳುವ ಪರಿಸ್ಥಿತಿ ಎದುರಾಗಿದೆ, ರಾಜ್ಯ ಸರಕಾರ ಲಂಬಾಣಿ ತಾಂಡಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡುವುದರ ಜೊತೆಯಲ್ಲಿ ಮೂಲ ಸೌಕರ್ಯ ಕಲ್ಪಿಸಲು ವಿಶೇಷ ಆದ್ಯತೆ ನೀಡಬೇಕಾಗಿದೆ ಎಂದು ಮನವಿ ಮಾಡಿದರು.
ಮಧುಗಿರಿ ತಾಪಂ ಅಧ್ಯಕ್ಷೆ ಇಂದಿರಾ ದೇನಾಯ್ಕ ಮಾತನಾಡಿ ಲಂಬಾಣಿ ತಾಂಡದಲ್ಲಿ ಬಾಲ್ಯ ವಿವಾಹಕ್ಕೆ ಕಡಿವಾಣ ಹಾಕಿ ಮಹಿಳೆಗೆ ವಿಶೇಷ ಆದ್ಯತೆ ನೀಡಬೇಕು, ಲಂಬಾಣಿ ಗ್ರಾಮಗಳಲ್ಲಿ ಮದ್ಯದ ಅಂಗಡಿ ತೆರೆಯದಂತೆ ಪ್ರತಿಯೊಬ್ಬರು ಒಟ್ಟಾಗಿ ಕುಡಿತದ ಚಟದಿಂದ ದೂರವಿರಬೇಕು, ತಮ್ಮ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಆದ್ಯತೆ ನೀಡಿ ಭವಿಷ್ಯದ ನಾಯಕರನ್ನಾಗಿ ಮಾಡಬೇಕಾಗಿದೆ ಎಂದು ತಿಳಿಸಿದರು.
ಕೊರಟಗೆರೆ ಬಂಜಾರ ಸಂಘದ ಅಧ್ಯಕ್ಷ ಶ್ರೀರಾಮುಲುನಾಯ್ಕ ಮಾತನಾಡಿ ನಮ್ಮ ಕೊರಟಗೆರೆಯ ಲಂಬಾಣಿ ಸೇವಾಸಂಘ ಸದೃಢವಾಗಿದೆ, 24ಲಂಬಾಣಿ ತಾಂಡದಲ್ಲಿನ ಯುವಕರಿಂದ ಸಂಘಟನೆ ನಡೆಯುತ್ತಿದೆ, ಕೊರೊನಾ ರೋಗದ ಹಿನ್ನಲೆ ಸರಕಾರದ ಆದೇಶದಂತೆ ಜಯಂತಿ ಸರಳವಾಗಿ ನಡೆದಿದೆ, ಮುಂದಿನ ವರ್ಷದ ಸೇವಾಲಾಲ್ ಜಯಂತಿ ಅದ್ದೂರಿಯಿಂದ ಜರುಗಲಿದೆ ಎಂದು ತಿಳಿಸಿದರು.
ಕೊರಟಗೆರೆ ತಾಲೂಕಿನ ಆರೋಗ್ಯ, ಶಿಕ್ಷಣ, ಕಂದಾಯ, ಪೊಲೀಸ್, ಸೈನಿಕ, ಅರಣ್ಯ, ತಾಪಂ, ಗ್ರಾಪಂ ಕೃಷಿ ಮತ್ತು ಪ್ರತಿಕೋದ್ಯಮ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಅಧಿಕಾರಿಗಳಿಗೆ ಸಂತ ಸೇವಾಲಾಲ್ ಪ್ರಶಸ್ತಿ ವಿತರಣೆ ಮಾಡಲಾಯಿತು. ನಂತರ ಗ್ರಾಪಂನಿಂದ ಚುನಾಯಿತರಾದ ಸದಸ್ಯರಿಗೆ ಅಭಿನಂದನಾ ಪ್ರಶಸ್ತಿ ನೀಡಿ ಕೊರಟಗೆರೆ ಲಂಬಾಣಿ ಸೇವಾ ಸಂಘದ ಅಧ್ಯಕ್ಷ ಶ್ರೀರಾಮುಲು ನಾಯ್ಕ ಗೌರವಿಸಿ ಸನ್ಮಾನಿಸಿದರು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಸುಧಾಕರಲಾಲ್, ಜಿಪಂ ಸದಸ್ಯೆ ಪ್ರೇಮಾ ಮಹಾಲಿಂಗಪ್ಪ, ಚೆನ್ನಗಿರಿ ತಾಪಂ ಉಪಾಧ್ಯಕ್ಷ ಕುಮಾರನಾಯ್ಕ, ವೆಂಕಟೇಶ್ಚೌಹಾನ್, ಸೈನಿಕರಾದ ಕೃಷ್ಣನಾಯ್ಕ, ಮೂರ್ತಿ, ವೈದ್ಯರಾದ ಪುರುಷೋತ್ತಮ್ನಾಯ್ಕ, ಲಂಬಾಣಿ ಸಂಘದ ಗೌರವಧ್ಯಕ್ಷ ಮೀಸೆಲಕ್ಷ್ಮನಾಯ್ಕ, ಅಧ್ಯಕ್ಷ ಶ್ರೀರಾಮುಲುನಾಯ್ಕ, ಉಪಾಧ್ಯಕ್ಷ ಪುಟ್ಟರಾಜು, ಲಕ್ಷ್ಮಣನಾಯ್ಕ, ಪ್ರಧಾನ ಕಾರ್ಯದರ್ಶಿ ಶಂಕರ್.ಬಿ, ಖಜಾಂಚಿ ಕಾಳಿಚರಣ್, ನಿರ್ದೇಶಕ ವಿ.ಎನ್.ಮೂರ್ತಿ, ಕಾವೇರಿನಾಯ್ಕ, ಮುರುಳಿನಾಯ್ಕ, ಮುಖಂಡ ಕಿಶೋರ್ ಇತರರು ಇದ್ದರು.
ಲಂಬಾಣಿ ತಾಂಡ ಕಂದಾಯ ಗ್ರಾಮವಾದರೆ ಅಭಿವೃದ್ಧಿ ಸಾಧ್ಯ
Get real time updates directly on you device, subscribe now.
Next Post
Comments are closed.