100 ಮಕ್ಕಳ ಕರ್ನಾಟಕ ದರ್ಶನ ಪ್ರವಾಸ

62

Get real time updates directly on you device, subscribe now.


ತುಮಕೂರು: ಶಾಲಾ ಶಿಕ್ಷಣ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆಯ ಸಹಯೋಗದಲ್ಲಿ ಹಮ್ಮಿಕೊಂಡಿರುವ ತಾಲ್ಲೂಕಿನ ವಿವಿಧ ಸರ್ಕಾರಿ ಶಾಲೆಗಳ 100 ಮಕ್ಕಳ ಕರ್ನಾಟಕ ದರ್ಶನ ಪ್ರವಾಸಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿ ಡಾ.ಸೂರ್ಯಕಲಾ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.
ನಗರದ ಎಂಪ್ರೆಸ್ ಕರ್ನಾಟಕ ಪಬ್ಲಿಕ್ ಶಾಲೆ ಆವರಣದಿಂದ ಎರಡು ಕೆಎಸ್ ಆರ್ ಟಿ ಸಿ ಬಸ್ ಗಳಲ್ಲಿ ಹೊರಟ ಶಾಲಾ ಮಕ್ಕಳ ಕರ್ನಾಟಕ ದರ್ಶನ ಪ್ರವಾಸಕ್ಕೆ ಚಾಲನೆ ನೀಡಿದ ನಂತರ ಮಾತನಾಡಿ, ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಕರ್ನಾಟಕ ದರ್ಶನ ಪ್ರವಾಸ ಕಾರ್ಯಕ್ರಮ ಹಮ್ಮಿಕೊಂಡಿರುವುದು ಬಹಳ ಉತ್ತಮ ಕಾರ್ಯಕ್ರಮವಾಗಿದೆ ಎಂದರು.

ಮಕ್ಕಳಿಗೆ ಪ್ರಾಚ್ಯ ಪ್ರಜ್ಞೆ ಜಾಗೃತಿ ಮೂಡಿಸುವ ಸಲುವಾಗಿ ಶಾಲಾ ಶಿಕ್ಷಣ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆ ಸಹಯೋಗದಲ್ಲಿ ಕರ್ನಾಟಕ ದರ್ಶನ ಪ್ರವಾಸ ಕಾರ್ಯಕ್ರಮ ಜಾರಿಗೊಳಿಸಲಾಗಿದೆ, ಮಕ್ಕಳು ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಕಾರ್ಯಕ್ರಮ ಸಹಕಾರಿಯಾಗಿದೆ, ಪ್ರಾಯೋಗಿಕವಾಗಿ ಕಣ್ಣಲ್ಲಿ ನೋಡಿ ಕಲಿತಂತಹ ಅಂಶಗಳು ಮನದಟ್ಟಾಗಬೇಕು ಎಂಬ ಉದ್ದೇಶದಿಂದ ಶಾಲಾ ಶಿಕ್ಷಣ ಇಲಾಖೆ ಈ ಕಾರ್ಯಕ್ರಮ ರೂಪಿಸಿರುವುದು ಸಂತಸದ ವಿಷಯ ಎಂದರು.

ಎಷ್ಟೇ ಮಕ್ಕಳಿಗೆ ಪ್ರಾಚೀನತೆ ಬಗ್ಗೆ ಅರಿವು ಇರುವುದಿಲ್ಲ, ಅದರಲ್ಲೂ ಬಡ ಮಕ್ಕಳಿಗೆ ಈ ಕರ್ನಾಟಕ ದರ್ಶನ ಪ್ರವಾಸ ಕಾರ್ಯಕ್ರಮದಲ್ಲಿ ಅವಕಾಶ ಮಾಡಿಕೊಟ್ಟಿರುವುದು ಬಹಳ ಉಪಯುಕ್ತವಾಗಿದೆ, ಈ ಪ್ರವಾಸದಲ್ಲಿ ಎಲ್ಲಾ ಮಕ್ಕಳು ಸೇರುವುದರಿಂದ ಸಂವಿಧಾನದ ತತ್ವಗಳಾದ ಸಹೋದರೆ, ಸಹಕಾರ, ನಾಯಕ್ವ ಗುಣ ಅವರಲ್ಲಿ ಬೆಳೆಯಲು ಸಹಕಾರಿಯಾಗುತ್ತದೆ ಎಂದರು.

ಕರ್ನಾಟಕ ದರ್ಶನ ಪ್ರವಾಸದಲ್ಲಿ ಚಿತ್ರದುರ್ಗ, ಹಂಪಿ, ಬಾದಾಮಿ, ಪಟ್ಟದಕಲ್ಲು, ಐಹೊಳೆ ಸೇರಿದಂತೆ ಶಿಲ್ಪಕಲೆ ಪ್ರತಿಬಿಂಬಿಸುವ ಸ್ಥಳಗಳಿಗೆ ಮಕ್ಕಳನ್ನು ಕರೆದೊಯ್ಯುತ್ತಿರುವುದು ಅವರ ಕಲಿಕೆಗೆ ಪೂರಕವಾಗಿದೆ ಎಂದರು.
ಶಾಲಾ ಶಿಕ್ಷಣ ಇಲಾಖೆ ಜಾರಿಗೆ ತಂದಿರುವ ಈ ಉಪಯುಕ್ತ ಕಾರ್ಯಕ್ರಮ ಮಕ್ಕಳು ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಲಹೆ ಮಾಡಿದರು.
ಪ್ರಾಚ್ಯಪ್ರಜ್ಞೆ ಮೂಡಿಸುವಂತಹ ಸ್ಥಳಗಳಿಗೆ ಪ್ರವಾಸ ಕೈಗೊಂಡಿರುವುದರಿಂದ ಅಲ್ಲಿ ಕಲಿತಂತಹ ಅಂಶಗಳನ್ನು ಮಕ್ಕಳು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದ ಅವರು ಪ್ರವಾಸದ ಸ್ಥಳಗಳಲ್ಲಿನ ನಿಜವಾದ ಚಿತ್ರಣ ಬಂದಾಗ ಮಕ್ಕಳ ಮನಸ್ಸಿನಲ್ಲಿ ಪಾಠ ಕಲಿಕೆ ಮನದಟ್ಟಾಗುತ್ತದೆ, ನೋಡುವ ಮೂಲಕ ಕಲಿಯುವುದು ಬೋಧನಾ ತಂತ್ರದ ಪ್ರಮುಖ ಭಾಗವಾಗಿದೆ ಎಂದರು.

ಈ ಸಂದರ್ಭದಲ್ಲಿ ಇಸಿಓ ಮಂಜುನಾಥ್, ಶಿವರಾಜು, ಚಂದ್ರಶೇಖರ್, ವಿವಿಧ ಶಾಲೆಗಳ ಮುಖ್ಯ ಶಿಕ್ಷಕ ರಾಜಕುಮಾರ್, ಸಿಆರ್ಪಿಗಳು, ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳು ಹಾಗೂ ಮೇಲ್ವಿಚಾರಕರು ಭಾಗವಹಿಸಿದ್ದರು.

Get real time updates directly on you device, subscribe now.

Comments are closed.

error: Content is protected !!