ಹಿಂದುಳಿದ ವರ್ಗಕ್ಕೆ ಶೈಕ್ಷಣಿಕ, ರಾಜಕೀಯ ಪ್ರಜ್ಞೆ ಅಗತ್ಯ

ಹಿಂದುಳಿದ ವರ್ಗಗಳ ಒಕ್ಕೂಟದ ದಶಮಾನೋತ್ಸವದಲ್ಲಿ ಕೆ ಎನ್ ಆರ್ ಸಲಹೆ

62

Get real time updates directly on you device, subscribe now.


ತುಮಕೂರು: ಕಾಂಗ್ರೆಸ್ ಪಕ್ಷ ಯಾವತ್ತು ಜಾತಿ ಜನಸಂಖ್ಯೆ ನೋಡಿ ಅಧಿಕಾರ ನೀಡಿಲ್ಲ, ದೇವರಾಜ ಅರಸು, ಧರ್ಮಸಿಂಗ್, ವೀರಪ್ಪ ಮೊಹಿಲಿ ಅವರೆಲ್ಲಾ ಯೋಗ್ಯತೆಯಿಂದ ಅಧಿಕಾರ ಪಡೆದವರೇ ಹೊರತು ಜಾತಿಯ ಬಲದಿಂದ್ದಲ್ಲ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ತಿಳಿಸಿದ್ದಾರೆ.
ನಗರದ ಡಾ.ಗುಬ್ಬಿ ವೀರಣ್ಣ ಕಲಾ ಕ್ಷೇತ್ರದಲ್ಲಿ ಹಿಂದುಳಿದ ವರ್ಗಗಳ ಒಕ್ಕೂಟ- ತುಮಕೂರು ಜಿಲ್ಲೆ ಇವರು ಆಯೋಜಿಸಿದ್ದ ಹಿಂದುಳಿದ ವರ್ಗಗಳ ಒಕ್ಕೂಟದ ದಶಮಾನೋತ್ಸವ ಕಾರ್ಯಕ್ರಮ ಹಾಗೂ ಕೆ ಎನ್ ಆರ್ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿ, ಕಾಂಗ್ರೆಸ್ ಗೆ ದಲಿತರು, ಹಿಂದುಳಿದ ವರ್ಗದವರು, ಅಲ್ಪಸಂಖ್ಯಾತರು ಎಲ್ಲರಿಗೂ ರಾಜಕೀಯ ಅಧಿಕಾರ ನೀಡಿದೆ, ಆದರೆ ಬಿಜೆಪಿ, ಜೆಡಿಎಸ್ ಪಕ್ಷದಿಂದ ಇದು ಸಾಧ್ಯವೇ ಎಂದು ಪ್ರಶ್ನಿಸಿದರು.

ದೇವರಾಜ ಅರಸು ಅವರು ಮುಖ್ಯಮಂತ್ರಿಯಾಗುವ ಸಮಯದಲ್ಲಿ ಅವರು ಜನಪ್ರತಿನಿಧಿಯಲ್ಲ, ಅಂದಿನ ಎಐಸಿಸಿ ಕಾರ್ಯಕಾರಿ ಮಂಡಳಿ ಸದಸ್ಯರಾಗಿದ್ದ ಕೊಲ್ಲೂರು ಮಲ್ಲಪ್ಪ ಅವರ ಸಲಹೆಯಂತೆ ಇಂದಿರಾಗಾಂಧಿ ಅವರು ಅರಸು ಅವರನ್ನು ಮುಖ್ಯಮಂತ್ರಿ ಮಾಡಿದರು, ಆದರೆ ಅವರು ಜಾರಿಗೆ ತಂದ ಭೂ ಸುಧಾರಣಾ ಕಾಯ್ದೆ, ಜೀತ ವಿಮುಕ್ತಿ ಸೇರಿದಂತೆ ಹಲವಾರು ಯೋಜನೆಗಳು ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹೆಸರು ತಂದುಕೊಟ್ಟವು, ಹಾಗೆಯೇ ಬಂಗಾರಪ್ಪ ಅವರು ಸಹ ಜಾರಿಗೆ ತಂದ ವಿಶ್ವ, ಆರಾಧನಾ, ಆಶ್ರಯ, ಕನ್ನಡ ಮಾಧ್ಯಮ ಕೃಪಾಂಕ ಇವುಗಳು ಬಡವರ ಪರವಾಗಿ ಹೆಚ್ಚು ಜನಪ್ರಿಯತೆ ಪಡೆದವು, ಈ ಎಲ್ಲಾ ನಾಯಕರು ಜನರೊಂದಿಗೆ ಬೆರತು ಕೆಲಸ ಮಾಡಿದರು, ಜನರಿಂದ ಅಂತರ ಕಾಯ್ದು ಕೊಳ್ಳಲಿಲ್ಲ, ಜನರಿಂದ ದೂರ ಇದ್ದವ ಜನನಾಯಕನಾಗಲು ಸಾಧ್ಯವೇ ಇಲ್ಲ ಎಂದು ಕೆ.ಎನ್.ರಾಜಣ್ಣ ನುಡಿದರು.
ಸಂಘಟನೆ ಎಂಬುದು ಒಂದು ನಿರಂತರ ಪ್ರಕ್ರಿಯೆ, ಹಾಗಾಗಿ ಎಲ್ಲಾ ಹಿಂದುಳಿದ ವರ್ಗಗಳ ದಾರ್ಶನಿಕ ಜಯಂತಿಗಳನ್ನು ಹಿಂದುಳಿದ ವರ್ಗಗಳ ಒಕ್ಕೂಟದಿಂದ ಆಗಸ್ಟ್ 20ರ ದೇವರಾಜು ಅರಸು ಜಯಂತಿಯಂದು ದಾರ್ಶನಿಕರ ದಿನವಾಗಿ ಆಚರಿಸುವುದರಿಂದ ಎಲ್ಲಾ ಹಿಂದುಳಿದ ವರ್ಗಗಳನ್ನು ಒಂದು ವೇದಿಕೆಯಲ್ಲಿ ತರಲು ಸಾಧ್ಯವಾಗುತ್ತದೆ ಎಂದು ಸಲಹೆ ನೀಡಿದ ಸಚಿವ ಕೆ.ಎನ್.ರಾಜಣ್ಣ, ಮೊದಲು ಹಿಂದುಳಿದ ವರ್ಗಗಳಲ್ಲಿ ಶೈಕ್ಷಣಿಕ ಪ್ರಜ್ಞೆಯ ಜೊತೆಗೆ, ರಾಜಕೀಯ ಪ್ರಜ್ಞೆ ಮೂಡಿಸಲು ಇದರಿಂದ ಸಾಧ್ಯ ಎಂದರು.

ನನ್ನದು ಬಡವರ ಜಾತಿ, ನಾನು ಎಲ್ಲಾ ವರ್ಗದ ಬಡವರ ಪ್ರತಿನಿಧಿ ಎಂದ ಅವರು ಇಂದಿಗೂ ಚಿಕ್ಕಪೇಟೆಯಲ್ಲಿ ಒಂದೊತ್ತಿನ ಊಟ ಮಾಡುವ ಬಡ ಬ್ರಾಹ್ಮಣರಿದ್ದಾರೆ, ಚುನಾವಣೆಗೋಸ್ಕರ ಶ್ರೀರಾಮನ ಜಪ ಮಾಡುತ್ತಿರುವ ಪಕ್ಷದ ಕಣ್ಣಿಗೆ ಇದು ಕಾಣುವುದಿಲ್ಲವೇ?, ಇಷ್ಟೊಂದು ಅಬ್ಬರದಲ್ಲಿ ನಡೆಯುತ್ತಿರುವ ಶ್ರೀರಾಮ ಮಂದಿರದ ಬಿಜೆಪಿಯದ್ದೋ, ಇಲ್ಲ ಮೋದಿ ಅವರದ್ದೋ ಎಂಬುದು ಐದಾರು ತಿಂಗಳಲ್ಲಿ ಗೊತ್ತಾಗಲಿದೆ, ಜನರ ಭಾವನೆಗಳೊಂದಿಗೆ ಆಟ ಆಡುವುದನ್ನು ನಿಲ್ಲಿಸಿದಷ್ಟು ಒಳ್ಳೆಯದು ಎಂದು ತಿಳಿಸಿದರು.
ನಾವೆಲ್ಲರೂ ಹಿಂದುಗಳೇ, ಆದರೆ ನಮ್ಮದು ಗಾಂಧಿಯ ಹಿಂದುತ್ವ, ಬಿಜೆಪಿಯವರದ್ದು ಗೂಡ್ಸೆ ಹಿಂದುತ್ವ, ಗೂಡ್ಸೆ ಹಿಂದುತ್ವವದಲ್ಲಿ ಕೊಲೆ, ಸುಲಿಗೆಗಳಿಲ್ಲದೆ ಇನ್ನೇನು ಇರಲು ಸಾಧ್ಯ ಎಂದು ಪ್ರಶ್ನಿಸಿದ ಅವರು ಮರಾಠರ ಹಿಂದು ಪೇಶ್ವೆಗಳು ಕರ್ನಾಟಕದ ಪ್ರಮುಖ ದೇವಾಲಯಗಳ ಮೇಲೆ ದಾಳಿ ನಡೆಸಿದಾಗ ಅವರನ್ನು ಹಿಮ್ಮೆಟ್ಟಿಸಿದವ ಮೈಸೂರು ಹುಲಿ ಟಿಪ್ಪು ಸುಲ್ತಾನ್, ಆತನನ್ನು ದೇಶದ್ರೋಹಿ ಎನ್ನುತ್ತಾರೆ, ಟಿಪ್ಪು ಸುಲ್ತಾನ್ ಆರಂಭಿಸಿದ ಕನ್ನಂಬಾಡಿ ಕಟ್ಟೆಯನ್ನು ನಾಲ್ವಡಿ ಕೃಷ್ಣರಾಜ ಒಡೆಯರ್ ಪೂರ್ಣಗೊಳಿಸಿದರು, ಟಿಪ್ಪು ಬಳಕೆ ಮಾಡುತ್ತಿದ್ದ ರಾಕೇಟ್ ತಂತ್ರಜ್ಞಾನವನ್ನು ಇಂದು ಇಸ್ರೋಗೆ ಬಳಕೆ ಮಾಡಲಾಗುತ್ತಿದೆ, ಇತಿಹಾಸ ತಿರುಚುವುದರಿಂದ ಕೆಲ ಕಾಲ ಸತ್ಯ ಮರೆ ಮಾಚಬಹುದು, ಹಾಗಾಗಿ ಹಿಂದುಳಿದ ವರ್ಗಗಳು ರಾಜಕೀಯ ಪ್ರಜ್ಞೆಯ ಜೊತೆಗೆ, ಇತಿಹಾಸ ಪ್ರಜ್ಞೆ ಬೆಳೆಸಿಕೊಂಡು ಮುನ್ನೆಡೆಯುವುದು ಸೂಕ್ತ ಎಂದು ಕೆಎನ್.ರಾಜಣ್ಣ ನುಡಿದರು.

ವಿಧಾನಪರಿಷತ್ ಸದಸ್ಯ ವೇಣುಗೋಪಾಲ್ ಮಾತನಾಡಿ, ಕೊಟ್ಟ ಮಾತಿಗೆ ತಪ್ಪದ, ಇಟ್ಟ ಹೆಜ್ಜೆಯನ್ನು ಹಿಂದಿಡದೆ, ನೇರ, ನಿಷ್ಠೂರ ನಡೆಯ ಕೆ.ಎನ್.ರಾಜಣ್ಣ ಹಿಂದುಳಿದ ವರ್ಗಗಳಿಗೆ ಹೊಸ ಆಶಾಕಿರಣವಾಗಿದ್ದಾರೆ, ಬಿಹಾರ ಸರಕಾರಕ್ಕಿಂತ ಮೊದಲೇ 2016ರಲ್ಲಿ ಸಿದ್ದರಾಮಯ್ಯ ಅವರು ಕಾಂತರಾಜು ಆಯೋಗ ರಚಿಸಿ ಆರ್ಥಿಕ, ಸಾಮಾಜಿಕ ಸಮೀಕ್ಷೆ ನಡೆಸಿದ್ದರೂ ಇದುವರೆಗೂ ಸರಕಾರ ವರದಿ ಸ್ವೀಕರಿಸಿಲ್ಲ, ಸರಕಾರ ಕೂಡಲೇ ಕಾಂತರಾಜು ವರದಿ ಸ್ವೀಕರಿಸಿ ಸಾರ್ವಜನಿಕ ಅಭಿಪ್ರಾಯಕ್ಕೆ ಬಿಡಬೇಕು, ಸಂಸದ ಅನಂತ್ ಕುಮಾರ್ ಹೆಗಡೆ ಹೇಳಿಕೆ ನೋವುಂಟು ಮಾಡಿದ್ದು, ಜಿಲ್ಲಾ ಹಿಂದುಳಿದ ವರ್ಗಗಳ ಒಕ್ಕೂಟದಿಂದ ಕೇಸು ದಾಖಲಿಸುವಂತೆ ಸಲಹೆ ಮಾಡಿದರು.
ಪತ್ರಕರ್ತ ಎಸ್.ನಾಗಣ್ಣ ಮಾತನಾಡಿ, ರಾಜಕೀಯವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಬಹಳ ಹಿಂದುಳಿದಿರುವ ಹಿಂದುಳಿದ ಸಮುದಾಯಗಳು ಕೆ.ಎನ್.ರಾಜಣ್ಣ ಅವರ ಆಶಯದಂತೆ ಒಗ್ಗೂಡಿ ಒಂದು ವೇದಿಕೆಗೆ ಸೇರುತ್ತಿರುವುದು ಒಳ್ಳೆಯ ಬೆಳೆವಣಿಗೆ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಹಿಂದುಳಿದ ವರ್ಗಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಧನಿಯಕುಮಾರ್, ಜಿಲ್ಲೆಯ ಹಿಂದುಳಿದ ವರ್ಗಗಳಿಗೆ ಬೆನ್ನೆಲುಬಾಗಿ ನಿಂತು, ರಾಜಕೀಯವಾಗಿ, ಆರ್ಥಿಕವಾಗಿ ಶಕ್ತಿ ತುಂಬುವ ಕೆಲಸವನ್ನು ಸಚಿವರಾದ ಕೆ.ಎನ್.ರಾಜಣ್ಣ ಮಾಡುತಿದ್ದಾರೆ, ಅಂತಹವರ ಹೆಸರಿನಲ್ಲಿ ಪ್ರಶಸ್ತಿ ಸ್ಥಾಪಿಸಿ ಹಿಂದುಳಿದ ವರ್ಗಗಳ ಶ್ರೇಯೋಭಿವೃದ್ಧಿಗೆ ಶ್ರಮಿಸಿದವರಿಗೆ ನೀಡಿ ಗೌರವಿಸಲಾಗುತ್ತಿದೆ ಎಂದರು.
ವಿವಿಧ ಸಮಾಜದ ಮುಖಂಡರಾದ ಆಡಿಟರ್ ಆಂಜನಪ್ಪ, ಡಾ.ಪಾಪಣ್ಣ, ಗುರುಪ್ರಸಾದ್, ಟಿ.ಎನ್.ಮಧುಕರ್, ಪಿ.ಮೂರ್ತಿ, ವೆಂಕಟಸ್ವಾಮಿ, ಚಿ.ನಿ.ಪುರಷೋತ್ತಮ್, ಡಿ.ಎಂ.ಸತೀಶ್, ಎಂ.ಜಿ.ಶ್ರೀನಿವಾಸ ಮೂರ್ತಿ, ಎ.ಡಿ.ಬಲರಾಮಯ್ಯ, ಕೊಟ್ಟ ಶಂಕರ್, ಪಿ.ಎನ್.ರಾಮಯ್ಯ, ಮೈಲಪ್ಪ, ಡಾ.ಕೆ.ವಿ.ಕೃಷ್ಣಮೂರ್ತಿ, ಮಲ್ಲಸಂದ್ರ ಶಿವಣ್ಣ, ಶಾಂತಕುಮಾರ್, ಮಂಜೇಶ್, ರೂಪೇಶ್ ಕೃಷ್ಣಯ್ಯ, ನಯಾಜ್ ಅಹಮದ್, ಗುರು.ಡಿ., ರಾಜು ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!