ಕೊರಟಗೆರೆ: ತಾಲೂಕಿನ ಕ್ಯಾಮೇನಹಳ್ಳಿ ಆಂಜನೇಯ ಸ್ವಾಮಿಯ ರಾಸುಗಳ ಜಾತ್ರೆಗೆ ನೀರು, ಬೆಳಕು ಸೇರಿದಂತೆ ಸಕಲ ಸಿದ್ಧತೆ ಮಾಡಲಾಗಿದೆ ಎಂದು ತಹಶೀಲ್ದಾರ್ ಕೆ.ಮಂಜುನಾಥ್ ತಿಳಿಸಿದರು.
ಕೊರಟಗೆರೆ ತಾಲೂಕಿನ ಹೊಳವನಹಳ್ಳಿ ಹೋಬಳಿಯ ಕ್ಯಾಮೇನಹಳ್ಳಿ ಜಾತ್ರಾ ಸ್ಥಳಕ್ಕೆ ಭೇಟಿ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿ, ಇತಿಹಾಸ ಪ್ರಸಿದ್ದ ಪುಣ್ಯ ಕ್ಷೇತ್ರವಾದ ಕ್ಯಾಮೇನಹಳ್ಳಿ ಆಂಜನೇಯ ಸ್ವಾಮಿಯ ರಾಸು ಜಾತ್ರೆ ಹಾಗೂ ರಥಸಪ್ತಮಿ ಇರುವುದರಿಂದ ರೈತರಿಗೆ ಹಾಗೂ ಅಂಗಡಿ ವ್ಯಾಪಾರ ಮಾಡುವವರಿಗೆ ತೊಟ್ಟಿಗಳಿಗೆ ನೀರು ಬಿಡಲಾಗುವುದು, ಜೊತೆಗೆ ನೀರಿನ ಸಮಸ್ಯೆ ಎಲ್ಲಿ ಇರುತ್ತೋ ಅಲ್ಲಿಗೆ ಟ್ಯಾಂಕರ್ ಮೂಲಕ ನೀರು ಬಿಡಲು ವ್ಯವಸ್ಥೆ ಮಾಡಲಾಗಿದೆ ಎಂದರು.
ಜಾತ್ರಾ ಆವರಣದಲ್ಲಿರುವ ಕಂಬಗಳಿಗೆ ವಿದ್ಯುತ್ ಬಲ್ಪ್ ಅಳವಡಿಸುವಂತೆ ತಿಳಿಸಲಾಗಿದ್ದು, ರೈತರಿಗೆ ಯಾವುದೆ ತೊಂದರೆ ಆಗದಂತೆ ಮೂಲ ಸೌಕರ್ಯ ನೀಡಲು ಗ್ರಾಪಂ ಹಾಗೂ ನಮ್ಮ ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಹೇಳಿದರು.
2024ರಲ್ಲಿ ನಡೆಯುವ ಜಾತ್ರೆಗೆ ಈಗಾಗಲೇ ರಾಸುಗಳ ಸುಂಕ, ಅಂಗಡಿಗಳ ಸುಂಕದ ಹರಾಜು ಪ್ರಕ್ರಿಯೆ ಮುಗಿಸಲಾಗಿದ್ದು, ಜಾತ್ರೆಗೆ ಬರುವ ರಾಸುಗಳಿಗೆ ಯಾವುದೇ ಕಾಯಿಲೆ ಬಂದರೂ ಸೂಕ್ತ ಚಿಕಿತ್ಸೆ ನೀಡಿ ಜಾತ್ರಾ ಆವರಣದಲ್ಲಿ ಇರುವಂತೆ ಪಶು ವೈದ್ಯರಿಗೆ ಸೂಚನೆ ನೀಡಲಾಗಿದ್ದು, ರೈತರಿಗೆ, ವ್ಯಾಪಾರಸ್ಥರಿಗೆ ಯಾವುದೇ ತೊಂದರೆ ಉಂಟಾಗದಂತೆ ನೋಡಿಕೊಳ್ಳಲಾಗುವುದು, ರಾಸುಗಳ ಜಾತ್ರೆ ಹಾಗೂ ಬ್ರಹ್ಮ ರಥೋತ್ಸವ ಮುಗಿಯುವವರೆಗೂ ಪೊಲೀಸ್ ಇಲಾಖೆ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಸ್ಥಳದಲ್ಲಿಯೇ ಇರುವಂತೆ ತಿಳಿಸಲಾಗಿದೆ ಎಂದು ಹೇಳಿದರು.
ಆಟೋ ಗೋವಿಂದರಾಜು ಮಾತನಾಡಿ, ಇತಿಹಾಸ ಪ್ರಸಿದ್ದ ಪುಣ್ಯಕ್ಷೇತ್ರವಾದ ಕ್ಯಾಮೇನಹಳ್ಳಿ ಆಂಜನೇಯ ಸ್ವಾಮಿ ಸನ್ನಿಧಾನದಲ್ಲಿ ರಾಸುಗಳ ಜಾತ್ರೆ ನಡೆಯಲಿದ್ದು, ಜಾತ್ರೆಗೆ ಬರುವ ರಾಸುಗಳಿಗೆ ಹಾಗೂ ಅಂಗಡಿ ಮಾಲೀಕರಿಗೆ ಕುಡಿಯಲು ನೀರು ಹಾಗೂ ಬೆಳಕನ್ನ ಕಂದಾಯ ಅಧಿಕಾರಿಗಳು ಹಾಗೂ ಗ್ರಾಪಂ ಅಧಿಕಾರಿಗಳು ಸಮರ್ಪಕವಾಗಿ ಒದಗಿಸಬೇಕು, ಈಗಾಗಲೇ ಜಾತ್ರೆಗೆ ಅಂಗಡಿಗಳು, ರಾಸುಗಳು, ವ್ಯಾಪಾರಸ್ಥರು ಆಗಮಿಸುತ್ತಿದ್ದು, ಅಧಿಕಾರಿಗಳು ಮೂಲ ಸೌಕರ್ಯ ಕಲ್ಪಿಸಿ ಎಂದು ಮನವಿ ಮಾಡಿದರು.
Comments are closed.