ಕುಣಿಗಲ್: ಪುರಸಭೆ ವ್ಯಾಪ್ತಿಯಲ್ಲಿರುವ ವಿವಿಧ ಸರ್ಕಾರಿ ಸಂಸ್ಥೆಯ ಸ್ವತ್ತುಗಳಿಗೆ ಸಂಬಂಧಿಸಿದಂತೆ ಎರಡುವರೆ ಕೋಟಿ ರೂ. ಗೂ ಹೆಚ್ಚು ಆಸ್ತಿ ತೆರಿಗೆ ವ್ಯಾಪಕವಾಗಿ ಬಾಕಿ ಉಳಿದಿದ್ದು ಸದರಿ ಸಂಸ್ಥೆಯವರು ನಿಗದಿತ ಅವಧಿಯೊಳಗೆ ಆಸ್ತಿ ತೆರಿಗೆ ಪಾವತಿ ಮಾಡದೆ ಇದ್ದಲ್ಲಿ ನಿಯಮಾನುಸಾರ ಕ್ರಮ ಜರುಗಿಸಲು ನೋಟೀಸ್ ಜಾರಿ ಮಾಡಲಾಗಿದೆ ಎಂದು ಮುಖ್ಯಾಧಿಕಾರಿ ಶಿವಪ್ರಸಾದ್ ಹೇಳಿದರು.
ಪುರಸಭೆ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿಯಲ್ಲಿ ವಿವರ ನೀಡಿ, ಪುರಸಭೆ ವ್ಯಾಪ್ತಿಯ ಕುದುರೆ ಫಾರಂನಲ್ಲಿ 22 ಆಸ್ತಿ ತೆರಿಗೆ ಇದ್ದು ಈ ಆಸ್ತಿಗೆ ತೆರಿಗೆ ಪಾವತಿ 2002- 03 ರಿಂದಲೂ ಪಾವತಿಸುವಂತೆ ಸೂಚಿಸಿ ವಿವಿಧ ದಿನಾಂಕಗಳಲ್ಲಿ ಒಂಬತ್ತು ನೋಟಿಸ್ ಜಾರಿ ಮಾಡಲಾಗಿದೆ, ಡಿಸೆಂಬರ್ ಮಾಹೆಗೆ ಒಟ್ಟಾರೆ 2.25 ಕೋಟಿ ರೂ. ಆಸ್ತಿ ತೆರಿಗೆ ಬಾಕಿ ಇದ್ದು ಪಾವತಿಸುವಂತೆ ಪಶುಪಾಲನೆ ಇಲಾಖೆಯ ತುಮಕೂರು ಉಪ ನಿರ್ದೇಶಕರಿಗೆ ನೋಟಿಸ್ ಜಾರಿ ಮಾಡಲಾಗಿದೆ, ಲೋಕೋಪಯೋಗಿ ಇಲಾಖೆಯ ಎಂಟು ವಿವಿಧ ಆಸ್ತಿಗೆ ಸಂಬಂಧಿಸಿದಂತೆ 2015- 16ರಿಂದ ಆಸ್ತಿ ತೆರಿಗೆ ಒಟ್ಟು 4.81 ಲಕ್ಷ ರೂ ಬಾಕಿ ಇದ್ದು ಪಾವತಿ ಮಾಡುವಂತೆ ಎಇಇ ಯವರಿಗೆ ನೋಟಿಸ್ ಜಾರಿ ಮಾಡಲಾಗಿದೆ, ಪೊಲೀಸ್ ಇಲಾಖೆಗೆ ಸೇರಿದ 18 ವಿವಿಧ ಆಸ್ತಿಯ 2020- 21 ರಿಂದ ಒಟ್ಟಾರೆ 5.64 ಲಕ್ಷ ರೂ. ಬಾಕಿ ಇದ್ದು ಪಾವತಿಸುವಂತೆ ಜಿಲ್ಲಾ ಎಸ್ಪಿಯವರಿಗೆ ತಿಳುವಳಿಕೆ ನೋಟಿಸ್ ಜಾರಿ ಮಾಡಲಾಗಿದೆ, ಬೆಸ್ಕಾಂ ಇಲಾಖೆಯ ಮೂರು ಆಸ್ತಿಯಿಂದ 4.59 ಲಕ್ಷ ರೂ. ಆಸ್ತಿ ತೆರಿಗೆ ಬಾಕಿ ಇದ್ದು ಪಾವತಿಸುವಂತೆ ಬೆಸ್ಕಾಂ ಇಇಗೆ ನೋಟಿಸ್ ಜಾರಿ ಮಾಡಲಾಗಿದೆ, ಪಿ ಎಲ್ ಡಿ ಬ್ಯಾಂಕ್ ಗೆ ಸೇರಿದ ಆಸ್ತಿಗೆ 2002- 03ರಿಂದ 2022- 23ರ ವರೆಗೂ ಒಟ್ಟಾರೆ 14.38 ಲಕ್ಷ ರೂ. ಬಾಕಿ ಇದ್ದು ಪಾವತಿ ಮಾಡುವಂತೆ ಬ್ಯಾಂಕ್ ಅಧ್ಯಕ್ಷರಿಗೆ ನೋಟಿಸ್ ಜಾರಿ ಮಾಡಲಾಗಿದೆ, ವಿವಿಧ ಖಾಸಗಿ ಶಾಲೆಗಳು, ಕಲ್ಯಾಣ ಮಂಟಪಗಳ ಆಸ್ತಿ ತೆರಿಗೆ ಬಾಕಿ ಇದ್ದು ಪಾವತಿಸುವಂತೆ ನೋಟಿಸ್ ನೀಡಲಾಗಿದ್ದು ನಿಗದಿತ ಅವಧಿಯಲ್ಲಿ ಆಸ್ತಿ ತೆರಿಗೆ ಪಾವತಿ ಮಾಡದೆ ಇದ್ದಲ್ಲಿ ಪುರಸಭೆ ನಿಯಮಾವಳಿಯ ಪ್ರಕಾರ ಆಸ್ತಿ ಜಪ್ತಿ ಮಾಡಲು ಮುಂದಿನ ಕ್ರಮ ಜರುಗಿಸಲಾಗುವುದು ಎಂದ ಅವರು ಪಟ್ಟಣದಲ್ಲಿ ವಾಣಿಜ್ಯ, ವಸತಿ ಸೇರಿದಂತೆ ವಿವಿಧ ವರ್ಗಗಳ ಆಸ್ತಿಗಳನ್ನು ಸ್ವಯಂ ಘೋಷಿತ ಆಸ್ತಿ ತೆರಿಗೆ ಪದ್ಧತಿಯಡಿ ಮಾಲೀಕರು ಘೋಷಣೆ ಮಾಡಿದ್ದು ಕೆಲವಾರು ವ್ಯತ್ಯಾಸ ಇರುವುದರಿಂದ ಪಟ್ಟಣ ವ್ಯಾಪ್ತಿಯಲ್ಲಿ ಆಸ್ತಿಗಳ ಡಿಜಿಟಲಿಕರಣ ಕಾರ್ಯಕ್ಕೆ ಅಗತ್ಯ ಪ್ರಕ್ರಿಯೆಯನ್ನು ಶೀಘ್ರದಲ್ಲಿ ನಡೆಸಲಾಗುವುದು ಎಂದರು. ಪರಿಸರ ಅಭಿಯಂತರ ಚಂದ್ರಶೇಖರ್, ವ್ಯವಸ್ಥಾಪಕಿ ಗೀತಾ, ಕಂದಾಯಾಧಿಕಾರಿ ಚಂದ್ರಶೇಖರ್ ಇದ್ದರು.
Comments are closed.