ಹಿಟ್ ಅಂಡ್ ರನ್ ಕಾಯ್ದೆ ವಾಪಸ್ ಪಡೆಯಿರಿ

43

Get real time updates directly on you device, subscribe now.


ತುಮಕೂರು: ಕೇಂದ್ರ ಸರಕಾರ ಹೊಸದಾಗಿ ಜಾರಿಗೆ ತಂದಿರುವ ಭಾರತೀಯ ನ್ಯಾಯ ಸಂಹಿತೆ- 2023ರಲ್ಲಿ ಹಿಟ್ ಅಂಡ್ ರನ್ ಕೇಸಿಗೆ ಚಾಲಕರಿಗೆ 7 ಲಕ್ಷ ರೂ. ದಂಡ ಹಾಗೂ 10 ವರ್ಷ ಜೈಲು ಶಿಕ್ಷೆ ವಿಧಿಸಿರುವುದನ್ನು ಖಂಡಿಸಿ ಕಾಯ್ದೆ ವಾಪಸ್ ಪಡೆಯುವಂತೆ ಒತ್ತಾಯಿಸಿ ತುಮಕೂರು ಜಿಲ್ಲಾ ಲಾರಿ ಚಾಲಕರು ಮತ್ತು ಕ್ಲೀನರ್ ಗಳ ಸಂಘ ಹಾಗೂ ಜಿಲ್ಲಾ ಲಾರಿ ಮಾಲೀಕರ ಸಂಘ, ತುಮಕೂರು ತಾಲೂಕು ಲಾರಿ ಮಾಲೀಕರು ಮತ್ತು ಚಾಲಕರ ಸಂಘದ ವತಿಯಿಂದ ಬೃಹತ್ ಪಾದಯಾತ್ರೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ತುಮಕೂರು ಜಿಲ್ಲಾ ಲಾರಿ ಚಾಲಕರು ಮತ್ತು ಮಾಲೀಕರ ಸಂಘದ ಜಿಲ್ಲಾಧ್ಯಕ್ಷ ಚಂದ್ರಶೇಖರ್ ಮತ್ತು ಕಾರ್ಯದರ್ಶಿ ಮೆಹಬೂಬ್ ಪಾಷ ನೇತೃತ್ವದಲ್ಲಿ ಜಿಲ್ಲಾ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಪ್ರಸನ್ನಕುಮಾರ್, ಕಾರ್ಯದರ್ಶಿ ಶೌಕತ್, ತುಮಕೂರು ತಾಲೂಕು ಲಾರಿ ಚಾಲಕರು ಮತ್ತು ಮಾಲೀಕರ ಸಂಘ ಹಾಗೂ ವಿವಿಧ ಆಟೋ ಚಾಲಕರ ಸಂಘಗಳ ಸದಸ್ಯರು ಮತ್ತು ಆಟೋ ಮಾಲೀಕರು ನಗರದ ಟೌನ್ಹಾಲ್ ವೃತ್ತದಿಂದ ಅಶೋಕ ರಸ್ತೆಯ ಮೂಲಕ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಕೇಂದ್ರ ಸರಕಾರದ ವಿರುದ್ಧ ಘೋಷಣೆ ಕೂಗುತ್ತಾ ಕಾಯ್ದೆ ವಾಪಸ್ ಪಡೆಯಲು ಒತ್ತಾಯಿಸಿ ಪ್ರತಿಭಟನಾ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಈ ವೇಳೆ ತುಮಕೂರು ಜಿಲ್ಲಾ ಲಾರಿ ಚಾಲಕರು ಮತ್ತು ಕ್ಲೀನರ್ ಗಳ ಸಂಘದ ಜಿಲ್ಲಾ ಕಾರ್ಯದರ್ಶಿ ಮೆಹಬೂಬ್ ಪಾಷ ಮಾತನಾಡಿ, ಕೇಂದ್ರ ಸರಕಾರ ಹೊಸದಾಗಿ ತಂದಿರುವ ಹಿಟ್ ಅಂಡ್ ರನ್ ಕೇಸ್ ಕಾಯ್ದೆಯಿಂದ ಇಡೀ ಚಾಲಕರ ವಲಯದ ಮೇಲೆ ಗಂಭೀರ ಪರಿಣಾಮ ಬೀರಲಿದೆ, ಉದ್ದೇಶಪೂರ್ವಕವಾಗಿ ಅಪಘಾತ ಸಂಭವಿಸುವುದಿಲ್ಲ, ಒಂದು ವೇಳೆ ಚಾಲಕನ ನಿರ್ಲಕ್ಷತೆಯಿಂದ ಅಪಘಾತ ಸಂಭವಿಸಿದರೆ 7 ವರ್ಷ ಜೈಲು ಶಿಕ್ಷೆ, ಎರಡು ಲಕ್ಷ ರೂ. ದಂಡ ಹಾಗೂ ಅಪಘಾತ ಮಾಡಿಯೂ ವಾಹನ ನಿಲ್ಲಿಸಿದೆ ಹೋದರೆ 10 ವರ್ಷ ಜೈಲು, ಏಳು ಲಕ್ಷ ರೂ. ದಂಡ ವಿಧಿಸುವ ಹೊಸ ಕಾಯ್ದೆ ಚಾಲಕರಿಗೆ ಮರಣ ಶಾಸನವಾಗಿದೆ ಎಂದರು.
ಚಾಲಕರು ಉದ್ದೇಶ ಪೂರ್ವಕವಾಗಿ ಯಾರು ಅಪಘಾತ ಮಾಡಿ ಓಡಿ ಹೋಗುವುದಿಲ್ಲ, ಸಾರ್ವಜನಿಕರು ಮತ್ತು ಅಪಘಾತದಲ್ಲಿ ಗಾಯಗೊಂಡವರ, ಇಲ್ಲವೇ ಮೃತಪಟ್ಟವರು ಸಂಬಂಧಿಕರು ನಡೆಸುವ ಹಲ್ಲೆಗಳಿಂದ ಪ್ರಾಣ ಉಳಿಸಿಕೊಳ್ಳಲು ಅನಿವಾರ್ಯವಾಗಿ ಗಾಡಿ ಬಿಟ್ಟು ಓಡಿ ಹೋಗುವುದೋ, ಇಲ್ಲವೇ ಗಾಡಿಯೊಂದಿಗೆ ಓಡಿ ಹೋಗುತ್ತಾರೆ, ಪ್ರಾಣ ರಕ್ಷಣೆಯ ಉದ್ದೇಶದಿಂದ ಮಾಡುವ ಕೆಲಸ ಇದಾಗಿದೆ, ಹಾಗಾಗಿ ಕೇಂದ್ರ ಸರಕಾರ ಕೂಡಲೇ ಭಾರತೀಯ ದಂಡ ಸಂಹಿತೆ- 2023ರ ಕಲಂ 104 (1)(2) ನ್ನು ರದ್ದು ಪಡಿಸಿ ಈ ಹಿಂದಿನಂತೆ ಕಲಂ 304(ಎ) ಅಡಿಯಲ್ಲಿ ತಂದು ವಿಚಾರಣೆ ನಂತರ ಶಿಕ್ಷೆ ವಿಧಿಸುವ ಕಾಯ್ದೆ ಮರುಜಾರಿ ಮಾಡಬೇಕೆಂಬುದು ನಮ್ಮ ಆಗ್ರಹವಾಗಿದೆ, ಸರಕಾರ ಒಂದು ವೇಳೆ ನಮ್ಮ ಮನವಿಗೆ ಸ್ಪಂದಿಸದಿದ್ದರೆ ಮುಂದಿನ ದಿನಗಳಲ್ಲಿ ದ್ವಿಚಕ್ರ ವಾಹನ ಚಾಲಕರು ಸೇರಿದಂತೆ ಎಲ್ಲಾ ಬಗೆಯ ವಾಹನ ಚಾಲಕರು ಸೇರಿ ಬೀದಿಗಿಳಿದು ಉಗ್ರ ಪ್ರತಿಭಟನೆ ಕೈಗೊಳ್ಳುವುದಾಗಿ ಮೆಹಬೂಬ್ ಪಾಷ ಹೇಳಿದರು.

ಲಾರಿ ಚಾಲಕರು ಮತ್ತು ಮಾಲೀಕರ ಸಂಘದ ಜಿಲ್ಲಾಧ್ಯಕ್ಷ ಚಂದ್ರಶೇಖರ್ ಮಾತನಾಡಿ, ಕೇಂದ್ರ ಸರಕಾರ ಜಾರಿಗೆ ತಂದಿರುವ ಕಾಯ್ದೆಯ 104 12 ಎರಡು ಕಲಂಗಳು ಸಹ ಚಾಲಕರು ಮತ್ತು ಮಾಲೀಕರಿಗೆ ಅತ್ಯಂತ ಕರಾಳ ನಿಯಮಗಳಾಗಿದ್ದು, ಕೇಂದ್ರ ಸರಕಾರ ಕೂಡಲೇ ಈ ನಿಯಮ ವಾಪಸ್ ಪಡೆಯಬೇಕು ಎಂಬುದು ನಮ್ಮ ಬೇಡಿಕೆಯಾಗಿದೆ, ಈಗಾಗಲೇ ದೇಶಾದ್ಯಂತ ಲಾರಿ ಚಾಲಕರು ಮತ್ತು ಮಾಲೀಕರು ಪ್ರತಿಭಟನೆ ನಡೆಸುತ್ತಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಉಗ್ರ ಸ್ವರೂಪ ಪಡೆದುಕೊಳ್ಳಲಿದೆ ಎಂದರು.

ಲಾರಿ ಮಾಲೀಕರು ಮತ್ತು ಚಾಲಕರ ಸಂಘದ ಜಿಲ್ಲಾ ಕಾರ್ಯದರ್ಶಿ ಶೌಕತ್ ಮಾತನಾಡಿ, ಸರಕಾರದ ಹೊಸ ಕಾಯ್ದೆಯಿಂದ ಇದುವರೆಗೆ ವಾಹನದ ಮೇಲಿದ್ದ ಇನ್ಸೂರೆನ್ಸ್ನಿಂದ ಕಟಾವು ಆಗುತ್ತಿದ್ದ ಪರಿಹಾರದ ಹಣವನ್ನು ಚಾಲಕನೇ ಕಟ್ಟಬೇಕೆಂದಿರುವುದು ನಿಜಕ್ಕೂ ಚಾಲಕರನ್ನು ಸಂಕಷ್ಟಕ್ಕೀಡು ಮಾಡಿದೆ, ಹಾಗಾಗಿ ಸರಕಾರ ಈ ಕಾಯ್ದೆ ವಾಪಸ್ ಪಡೆಯಬೇಕು ಎಂದರು.
ನೂರಾರು ಲಾರಿ ಚಾಲಕರು, ಮಾಲೀಕರು, ಆಟೋ ಚಾಲಕರು ಮತ್ತು ಮಾಲೀಕರು ಪ್ರತಿಭಟನೆಯಲ್ಲಿ ಪಾಲ್ಗೊಂಡು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

Get real time updates directly on you device, subscribe now.

Comments are closed.

error: Content is protected !!