ಮಾರ್ಚ್ 9 ಕ್ಕೆ ರಾಷ್ಟ್ರೀಯ ಲೋಕ ಅದಾಲತ್

ಕಾರ್ಯಕ್ರಮ ಸದುಪಯೋಗಕ್ಕೆ ನ್ಯಾ.ಜಯಂತ್ ಕುಮಾರ್ ಕರೆ

47

Get real time updates directly on you device, subscribe now.


ತುಮಕೂರು: ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದ ಪ್ರತಿ 3 ತಿಂಗಳಿಗೊಮ್ಮೆ ನಡೆಸಲಾಗುವ ಲೋಕ್ ಆದಾಲತ್ ಅಥವಾ ಜನತಾ ನ್ಯಾಯಾಲಯದಲ್ಲಿ ಜನರು ತಮ್ಮ ಪ್ರಕರಣ ಇತ್ಯರ್ಥ ಪಡಿಸಿಕೊಳ್ಳಬಹುದಾಗಿದ್ದು, ಜನರು ಮನಸ್ಸು ಮಾಡಿ ಪರಸ್ಪರ ವ್ಯಾಜ್ಯ ಬಗೆಹರಿಸಿಕೊಳ್ಳಲು ಮುಂದಾದಲ್ಲಿ ಎಂತಹ ಸಮಸ್ಯೆಗಳಿದ್ದರೂ ಇತ್ಯರ್ಥಪಡಿಸಿಕೊಳ್ಳಬಹುದು ಎಂದು ಗೌರವಾನ್ವಿತ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಬಿ.ಜಯಂತ್ ಕುಮಾರ್ ಹೇಳಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಲೋಕ ಆದಾಲತ್ ಮೂಲಕ ಕಕ್ಷಿದಾರರು ರಾಜಿ ಅಥವಾ ಸಂಧಾನದ ಮೂಲಕ ತಮ್ಮ ಪ್ರಕರಣ ಸುಲಭವಾಗಿ ಮತ್ತು ಶೀಘ್ರವಾಗಿ ಯಾವುದೇ ಶುಲ್ಕವಿಲ್ಲದೇ ಇತ್ಯರ್ಥ ಪಡಿಸಿಕೊಳ್ಳಬಹುದು, ಇದರಿಂದ ನ್ಯಾಯಾಲಯದಲ್ಲಿ ಹೆಚ್ಚುತ್ತಿರುವ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿ ನ್ಯಾಯಾಧೀಶರು ಹೆಚ್ಚು ಅವಶ್ಯಕತೆ ಇರುವಂತಹ, ಕಾನೂನಿನ ಸಂಕಿರ್ಣತೆ ಇರುವಂತಹ ಪ್ರಕರಣಗಳಿಗೆ ಹೆಚ್ಚು ಒತ್ತು ನೀಡಲು ಸಾಧ್ಯವಾಗುತ್ತದೆ ಎಂದರು.

ಲೋಕ್ ಅದಾಲತ್ನಲ್ಲಿ ರಾಜಿಯಾದ ಪ್ರಕರಣಗಳ ಆದೇಶ ಅಂತಿಮವಾಗಿರುತ್ತದೆ, ಪ್ರಕರಣವು ಇತ್ಯರ್ಥವಾದ ಬಳಿಕ ಮೇಲ್ಮನವಿಗೆ ಅವಕಾಶ ಇರುವುದಿಲ್ಲ, ಸ್ವಪ್ರೇರಣೆಯಿಂದ ಮುಂದೆ ಬಂದು ತಮ್ಮ ವಿವಾದ ಬಗೆಹರಿಸಿಕೊಂಡಲ್ಲಿ ಸೌಹಾರ್ದಯುತವಾಗಿ ಜೀವನ ನಡೆಸಬಹುದಾಗಿದ್ದು, ಸಾರ್ವಜನಿಕರು ಮುಂಚಿತವಾಗಿ ಹತ್ತಿರದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಅಥವಾ ತಾಲೂಕು ಕಾನೂನು ಸೇವೆಗಳ ಸಮಿತಿಗೆ ಭೇಟಿ ನೀಡಿ, ತಮ್ಮ ಸಿವಿಲ್ ಪ್ರಕರಣ ಇತ್ಯರ್ಥ ಪಡಿಸಿಕೊಳ್ಳಬಹುದು, ಪ್ರಕರಣ ಇತ್ಯರ್ಥವಾದಲ್ಲಿ ನ್ಯಾಯಾಲಯಕ್ಕೆ ಪಾವತಿಸಲಾದ ಶುಲ್ಕವನ್ನು ಪೂರ್ಣ ಮರು ಪಾವತಿಸಲಾಗುವುದು, ಕಡಿಮೆ ಖರ್ಚಿನಲ್ಲಿ ಶೀಘ್ರ ತೀರ್ಮಾನಕ್ಕಾಗಿ ಇಂದೊಂದು ವಿಶೇಷ ಅವಕಾಶವಾಗಿದೆ ಎಂದರು.

ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ನೂರುನ್ನೀಸ ಮಾತನಾಡಿ, ಸಾರ್ವಜನಿಕರು ತಮ್ಮ ವ್ಯಾಜ್ಯ ಪೂರ್ವ ಹಾಗೂ ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳನ್ನು ರಾಷ್ಟ್ರೀಯ ಲೋಕ್ ಅದಾಲತ್ ಮೂಲಕ ಅತೀ ಶೀಘ್ರವಾಗಿ ಪರಿಹಾರ ಪಡೆದುಕೊಳ್ಳಲು ಇದೊಂದು ಸುವರ್ಣಾವಕಾಶವಾಗಿದ್ದು, ಕಳೆದ ವರ್ಷದಲ್ಲಿ ಒಟ್ಟು 84 ವಿಚ್ಚೇದನ ಪ್ರಕರಣಗಳನ್ನು ರಾಜಿ ಸಂಧಾನ ಮೂಲಕ ಒಂದುಗೂಡಿಸಲಾಗಿರುತ್ತದೆ ಎಂದು ತಿಳಿಸಿದರು.

ಲೋಕ ಆದಾಲತ್ ಸಾಧನೆ: ಕಳೆದ ಡಿಸೆಂಬರ್ 09 ರಂದು ಆಯೋಜಿಸಲಾಗಿದ್ದ ಲೋಕ ಅದಾಲತ್ನಲ್ಲಿ ಜೆಲ್ಲೆಯಾದ್ಯಂತ ಎಲ್ಲಾ ನ್ಯಾಯಾಲಯಗಳಲ್ಲಿ ಬಾಕಿ ಇದ್ದ 92059 ಪ್ರಕರಣಗಳಲ್ಲಿ 9258 ಪ್ರಕರಣ ಹಾಗೂ ವ್ಯಾಜ್ಯ ಪೂರ್ವ ಪ್ರಕರಣಗಳಲ್ಲಿ 138192 ಪ್ರಕರಣ ವಿಲೇವಾರಿ ಮಾಡಲಾಗಿದೆ, ನ್ಯಾಯಾಲಯದಲ್ಲಿ ಬಾಕಿ ಇದ್ದ ಪ್ರಕರಣ ಮತ್ತು ವ್ಯಾಜ್ಯ ಪೂರ್ವ ಪ್ರಕರಣ ಸೇರಿ ಒಟ್ಟು 147450 ಪ್ರಕರಣ ಇತ್ಯರ್ಥವಾಗಿವೆ.
ರಾಜಿಗಾಗಿ ಗುರುತಿಸಲಾದ ಪ್ರಕರಣಗಳು: ಸಿವಿಲ್ ಪ್ರಕರಣಗಳಾದ ಜಮೀನುಗಳಿಗೆ ಸಂಬಂಧಪಟ್ಟ ವ್ಯಾಜ್ಯಗಳು ಮನೆ ಹಾಗೂ ನಿವೇಶನಗಳಿಗೆ ಸಂಬಂಧಪಟ್ಟ ವ್ಯಾಜ್ಯಗಳು, ಭೂಸ್ವಾಧೀನ ಪ್ರಕರಣಗಳು, ಬ್ಯಾಂಕ್ ವಸೂಲಾತಿ ಪ್ರಕರಣಗಳು, ದರಖಾಸ್ತು ಅರ್ಜಿಗಳು, ಕಾರ್ಮಿಕ ಪ್ರಕರಣಗಳು, ಚೆಕ್ ಬೌನ್ಸ್ ಪ್ರಕರಣಗಳು, ಮೋಟಾರ್ ಕಾಯ್ದೆ ಪರಿಹಾರ ಪ್ರಕರಣಗಳು, ವೈವಾಹಿಕ ಪ್ರಕರಣಗಳು, ಹಣಕಾಸಿನ ವ್ಯಾಜ್ಯಗಳು, ಹಾಗೂ ಎರಡು ವರ್ಷಕ್ಕಿಂತ ಕಡಿಮೆ ಶಿಕ್ಷೆಯುಳ್ಳ ಪ್ರಕರಣ, ರಾಜಿಯಾಗಬಲ್ಲ ಎಲ್ಲಾ ಕ್ರಿಮಿನಲ್ ಪ್ರಕರಣ, ದೌರ್ಜನ್ಯ ತಡೆ ಪ್ರಕರಣ, ಜೀವನಾಂಶ ಪ್ರಕರಣ, ವ್ಯಾಜ್ಯ ಪೂರ್ವ ಪ್ರಕರಣ ಸೇರಿದಂತೆ ಹಲವಾರು ಪ್ರಕರಣ ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಬಹುದು.

ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯವರ ಕಚೇರಿ ದೂರವಾಣಿ 0816- 2255133 ಮತ್ತು ಮೊ.9141193959 ನ್ನು ಸಂಪರ್ಕಿಸಬಹುದು.

Get real time updates directly on you device, subscribe now.

Comments are closed.

error: Content is protected !!