ತಮಿಳುನಾಡು ರೀತಿ ಕೊಬ್ಬರಿ ಖರೀದಿಸಿ

ರಾಜ್ಯದ ಸಂಸದರು ಕೊಬ್ಬರಿ ಬೆಳೆಗಾರರ ಹಿತ ಮರೆತಿದ್ದಾರೆ: ಕೋಡಿಹಳ್ಳಿ

65

Get real time updates directly on you device, subscribe now.


ತುಮಕೂರು: ಕರ್ನಾಟಕದಿಂದ ಆಯ್ಕೆಯಾಗಿ ಹೋಗಿರುವ ಸಂಸದರ ನಿರ್ಲಕ್ಷದಿಂದಾಗಿ ಕರ್ನಾಟಕದಲ್ಲಿ ಕೇಂದ್ರ ಸರಕಾರವೇ ತಮಿಳುನಾಡು ರೀತಿ ಕೊಬ್ಬರಿ ಖರೀದಿ ಕೇಂದ್ರ ತೆರೆಯಲು ನಿರ್ಲಕ್ಷ ತೋರಿದ್ದು, ರಾಜ್ಯದಿಂದ ಆಯ್ಕೆಯಾಗಿ ಹೋಗಿರುವ 28 ಜನ ಸಂಸದರು ಕೊಬ್ಬರಿ ಬೆಳೆಗಾರರ ಹಿತ ಮರೆತ್ತಿದ್ದಾರೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಮುಂಭಾಗ ರೈತ ಸಂಘ ಮತ್ತು ಹಸಿರುಸೇನೆ ಕೊಬ್ಬರಿ ಕೊಳ್ಳಲು ನಾಫೆಡ್ ಕೇಂದ್ರ ತೆರೆಯುವುದು ಸೇರಿದಂತೆ ಹಲವು ಬೇಡಿಕೆ ಮುಂದಿಟ್ಟುಕೊಂಡು ಆಯೋಜಿಸಿರುವ ಅಹೋರಾತ್ರಿ ಧರಣಿ 11ನೇ ದಿನ ನಡೆದ ಟ್ರಾಕ್ಟರ್ ರ್ಯಾಲಿಯಲ್ಲಿ ಪಾಲ್ಗೊಂಡು, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸುವ ವೇಳೆ ಮಾತನಾಡಿ, ತಮಿಳು ನಾಡಿನ ಸಂಸದ ಒತ್ತಾಸೆಯ ಮೇರೆಗೆ ಕೇಂದ್ರ ಸರಕಾರವೇ ನೇರವಾಗಿ ಬೆಂಬಲ ಬೆಲೆ ಖರೀದಿ ಕೇಂದ್ರಗಳನ್ನು ತೆರೆದು 88 ಸಾವಿರ ಮೆಟ್ರಿಕ್ ಟನ್ ಕೊಬ್ಬರಿ ಖರೀದಿಸಲು ಮುಂದಾಗಿದೆ, ಆದರೆ ಕರ್ನಾಟಕಕ್ಕೆ ಮಾತ್ರ ಈ ಅವಕಾಶ ದೊರೆತ್ತಿಲ್ಲ, ಕೊಬ್ಬರಿ ಬೆಂಬಲ ಬೆಲೆ ಕುರಿತು ನಮ್ಮ ರಾಜ್ಯದ ಒಬ್ಬನೇ ಒಬ್ಬ ಸಂಸದ ಸಹ ಮಾತನಾಡಿಲ್ಲ, ಇದು ರಾಜ್ಯದ ದುರಂತ ಎಂದರು.

ತಮಿಳುನಾಡಿನಲ್ಲಿ ಶೇ.30 ರಷ್ಟು ಮಿಲ್ಲಿಂಗ್ ಕೊಬ್ಬರಿ ಖರೀದಿಸಲು ಅವಕಾಶ ನೀಡಿದೆ, ಆದರೆ ಕರ್ನಾಟಕಕ್ಕೆ ಮಾತ್ರ ಈ ಅವಕಾಶ ಲಭ್ಯವಾಗಿಲ್ಲ, ಈ ನಿಟ್ಟಿನಲ್ಲಿ ರಾಜ್ಯ ಸರಕಾರ ನಿಷ್ಕ್ರೀಯವಾಗಿದೆ, ಹಾಗೆಯೇ ಸಂಸದರ ಬಾಯಿಗಳ ಬಂದ್ ಆಗಿವೆ, ಹೊಳು ಕೊಬ್ಬರಿ ಖರೀದಿಗೆ ಅವಕಾಶ ನೀಡಿದರೆ ಕರ್ನಾಟಕದಲ್ಲಿ ಇರುವ ಸಣ್ಣದು ಮತ್ತು ಸುಕ್ಕು ಕೊಬ್ಬರಿ ಎಲ್ಲವೂ ಮಾರಾಟವಾಗುತ್ತದೆ, ಈ ಅವಕಾಶ ಕಲ್ಪಿಸುವುದು ಸಂಸದರ ಜವಾಬ್ದಾರಿ, ಆದರೆ ನಮ್ಮ ಸಂಸದರೇನು ಕತ್ತೆ ಕಾಯುತ್ತಿದ್ದಾರಾ ಎಂದು ಪ್ರಶ್ನಿಸಿದ ಕೋಡಿಹಳ್ಳಿ ಚಂದ್ರಶೇಖರ್, ಕರ್ನಾಟಕಕ್ಕೆ ಕೇವಲ 62.50 ಸಾವಿರ ಮೆಟ್ರಿಕ್ ಟನ್ ಕೊಬ್ಬರಿ ಕೊಳ್ಳಲು ಮಾತ್ರ ಕೇಂದ್ರ ಅವಕಾಶ ನೀಡಿದೆ, ಆದರೆ ರಾಜ್ಯದಲ್ಲಿ ಒಂದು ವರ್ಷಕ್ಕೆ ಸುಮಾರು 11 ಲಕ್ಷ ಮೆ. ಟನ್ ಕೊಬ್ಬರಿ ಉತ್ಪಾದನೆಯಾಗುತ್ತದೆ, ಇದರಲ್ಲಿ 62.50 ಸಾವಿರ ಮೆಟ್ರಿಕ್ ಟನ್ ಖರೀದಿಸಿದರೆ ರೈತರು ಉಳಿದ ಕೊಬ್ಬರಿಯನ್ನು ಏನು ಮಾಡಬೇಕು, ಹಾಗಾಗಿ ಕನಿಷ್ಠ ವಾರ್ಷಿಕ 1.50 ಲಕ್ಷ ಮೆಟ್ರಿಕ್ ಟನ್ ಖರೀದಿ ಮಾಡಿದರೆ ಹೆಚ್ಚಿನ ಅನುಕೂಲವಾಗಲಿದೆ ಎಂದರು.

ಈಗಾಗಲೇ ಕೇಂದ್ರ ಸರಕಾರ ಕ್ವಿಂಟಾಲ್ ಕೊಬ್ಬರಿಗೆ 12000 ರೂ. ಬೆಂಬಲ ಬೆಲೆ ನಿಗದಿ ಮಾಡಿದೆ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ನೀಡಿದ ಭರವಸೆಯಂತೆ ಕ್ವಿಂಟಾಲ್ ಗೆ 15000 ರೂ. ನೀಡಬೇಕು, ಹಾಗಾಗಿ ಕೇಂದ್ರದ 12 ಸಾವಿರದ ಜೊತೆಗೆ ಉಳಿದ 3 ಸಾವಿರ ರೂ. ಗಳನ್ನು ರಾಜ್ಯ ಸರಕಾರ ಪ್ರೋತ್ಸಾಹ ಧನದ ರೂಪದಲ್ಲಿ ನೀಡಿ ಕೊಬ್ಬರಿ ಖರೀದಿ ಮಾಡಬೇಕು, ಇಲ್ಲದಿದ್ದಲ್ಲಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕೊಬ್ಬರಿ ಬೆಳೆಯುವ 20 ಜಿಲ್ಲೆಗಳ ರೈತರು ನಿಮಗೆ ಸರಿಯಾದ ಪಾಠ ಕಲಿಸಲಿದ್ದಾರೆ, ಬಜೆಟ್ ಮಂಡಿಸುವ ಮುಂಚೆ ರೈತರ ಸಮಸ್ಯೆ ಬಗೆಹರಿಸಬೇಕು ಎಂದು ಎಚ್ಚರಿಸಿದರು.
ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ರಾಜ್ಯ ಉಪಾಧ್ಯಕ್ಷ ಕೆಂಕೆರೆ ಸತೀಶ್ ಮಾತನಾಡಿ, ಇಡೀ ನಾಡಿಗೆ ನಾಡೇ ಸಂಕ್ರಾತಿ ಹಬ್ಬ ಮಾಡುವಾಗ ರೈತ ಸಂಘದ ಸದಸ್ಯರು ಬೀದಿಯಲ್ಲಿ ಹೋರಾಟದಲ್ಲಿ ನಿರತರಾಗಿದ್ದೆವು, ಸೌಜನ್ಯಕ್ಕೂ ಜಿಲ್ಲೆಯ ಶಾಸಕರಾಗಲಿ, ಸಚಿವರಾಗಲಿ ಮಾತನಾಡಿಸಲಿಲ್ಲ, ಅವರಲ್ಲಿ ಮನುಷ್ಯತ್ವ ಸತ್ತು ಹೋಗಿದೆ, ಜಾತಿವಾರು ಕಾರ್ಯಕ್ರಮಗಳಾದರೆ ದಂಡನ್ನೇ ಕರೆದುಕೊಂಡು ಹೋಗುವ ಸಚಿವರು, ಸಂಸದರು, ಶಾಸಕರು ಕಳೆದ 11 ದಿನಗಳಿಂದ ರೈತರು ಬೀದಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದರೂ ತಿರುಗಿಯೂ ನೋಡಿಲ್ಲ, ಇಂತಹವರಿಗೆ ರೈತರು ಸರಿಯಾದ ಪಾಠ ಕಲಿಸಬೇಕು, ಕಳೆದ ಎರಡು ವರ್ಷಗಳ ನಿರಂತರ ಹೋರಾಟದ ಫಲವಾಗಿ ಕೇಂದ್ರ ಸರಕಾರ ಬೆಂಬಲ ಬೆಲೆಯಲ್ಲಿ ಖರೀದಿಸಲು ಅವಕಾಶ ನೀಡಿದೆ, ರಾಜ್ಯ ಸರಕಾರ ಪ್ರತಿ ಕ್ವಿಂಟಾಲ್ ಗೆ 3 ಸಾವಿರ ರೂ. ನೀಡಿ ಖರೀದಿ ಮಾಡಲಿ ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಜಿಲ್ಲಾಧ್ಯಕ್ಷ ಧನಂಜಯ್ ಆರಾಧ್ಯ, ತಿಪಟೂರಿನ ಕೆ.ಟಿ.ಶಾಂತಕುಮಾರ್, ಹಾಸನ ಜಿಲ್ಲಾಧ್ಯಕ್ಷ ಬಾಬು, ಆನೆಕೆರೆ ಬಾಬು, ಮಲ್ಲಿಕಾರ್ಜುನಯ್ಯ, ನಾಗೇಂದ್ರ, ಶಿವರತ್ನಮ್ಮ, ಪ್ರಕಾಶ್, ಶಶಿಕಲಾ, ರಾಜಣ್ಣ, ಕೊರಟಗೆರೆ ಸಿದ್ದರಾಜು ಸೇರಿದಂತೆ ಸಾವಿರಾರು ರೈತರು ತಮ್ಮ ಟ್ರಾಕ್ಟರ್ ಮತ್ತಿತರರ ವಾಹನಗಳ ಮೂಲಕ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ನಗರದ ಸ್ವಾತಂತ್ರ ಚೌಕದಿಂದ ಹೊರಟ ರೈತರ ಮೆರವಣಿಗೆ ಮಂಡಿಪೇಟೆ ರಸ್ತೆ, ಜೆಸಿ ರಸ್ತೆ ಮೂಲಕ ಟೌನ್ ಹಾಲ್ ತಲುಪಿ ಕೆಲ ಕಾಲ ಧರಣಿ ನಡೆಸಿದರು, ನಂತರ ಶಿವಕುಮಾರ ಸ್ವಾಮೀಜಿ ಸರ್ಕಲ್, ಬಟವಾಡಿ ತಲುಪಿ, ತದನಂತರ ಕೋತಿ ತೋಪು ರಸ್ತೆಯ ಮೂಲಕ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಸಮಾವೇಶಗೊಂಡು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸುವ ಮೂಲಕ ಮುಕ್ತಾಯಗೊಂಡಿದ್ದು, ಆಹೋರಾತ್ರಿ ಧರಣಿ ಮುಂದುವರೆದಿದೆ.

Get real time updates directly on you device, subscribe now.

Comments are closed.

error: Content is protected !!