ತುಮಕೂರು: ಬಿಜೆಪಿಯವರು ನನಗೆ ರಾವಣ ಎಂದು ಕರೆದಿದ್ದಾರೆ, ಇದರಿಂದ ಬೇಜಾರಿಲ್ಲ, ರಾವಣ ಎಂದು ಕರೆಸಿಕೊಳ್ಳಲು ಸಿದ್ಧನಿದ್ದೇನೆ, ಅವನಂತಹ ದೈವ ಭಕ್ತ ಮತ್ತೊಬ್ಬ ಇರಲಿಲ್ಲ, ಬಿಜೆಪಿಯವರು ಡೋಂಗಿ ದೈವ ಭಕ್ತರು ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ವಾಗ್ದಾಳಿ ನಡೆಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಬಾಬ್ರಿ ಮಸೀದಿ ಗಲಾಟೆಯ ಸಮಯದಲ್ಲಿ ಅಯೋಧ್ಯೆಗೆ ಭೇಟಿ ನೀಡಿದ್ದೆ, ಒಂದು ಟೆಂಟ್ ನಲ್ಲಿ ಎರಡು ಬೊಂಬೆ ತಂದಿಟ್ಟು ಶ್ರೀರಾಮ ಎಂದು ಹೇಳುತ್ತಿದ್ದರು, ಅದು ಟೂರಿಂಗ್ ಟಾಕಿಸ್ ನ ಬೊಂಬೆಗಳಂತೆ ಕಂಡಿದ್ದವು ಎಂದು ರಾಜಣ್ಣ ಸಮಾರಂಭವೊದರಲ್ಲಿ ಹೇಳಿದ್ದರು, ಈ ವಿಚಾರ ಮುಂದಿಟ್ಟುಕೊಂಡು ಬಿಜೆಪಿಯವರು ರಾವಣ ಎಂದು ಕರೆದಿರುವುದಕ್ಕೆ ಪ್ರತಿಕ್ರಿಯೆ ನೀಡಿದರು.
ಬೊಂಬೆಯನ್ನು ದೇವರು ಎಂದು ಕರೆದರೆ ತಪ್ಪೇನಿದೆ? ಬೊಂಬೆಯಲ್ಲಿ ದೈವತ್ವ ಇಲ್ಲವೆ? ಹೊಲದಲ್ಲಿ ಸಗಣಿ ಮೂರ್ತಿ ಮಾಡಿ ಗರಿಕೆ ಹುಲ್ಲು ಇಟ್ಟು ಪೂಜೆ ಮಾಡುತ್ತೇವೆ, ಹೊಲದಲ್ಲಿ ಸಿಕ್ಕ ಬೆಣಚು ಕಲ್ಲಿಗೂ ಪೂಜೆ ಮಾಡುತ್ತಾರೆ, ಅದು ನಮ್ಮ ನಂಬಿಕೆ ಎಂದು ತಮ್ಮ ಹೇಳಿಕೆ ಸಮರ್ಥಿಸಿಕೊಂಡರು.
ಹಿಂದೆ ಅಣ್ಣಾದೊರೈ ರಾಮಾಯಣಕ್ಕೆ ಬದಲಾಗಿ ರಾವಣಾಯಣ ನಾಟಕ ಮಾಡಿದ್ದರು, ಆ ನಾಟಕದಲ್ಲಿ ಸೀತೆ ಮೇಲೆ ರಾವಣ ಬಲಾತ್ಕಾರ ಮಾಡುವುದಿಲ್ಲ, ಇದು ರಾವಣನ ದೊಡ್ಡ ಗುಣ ಅಲ್ಲವೆ? ರಾವಣ ಶಿವನ ಭಕ್ತ, ರಾವಣನಿಗೆ ಶಿವ ಆತ್ಮಲಿಂಗ ಕೊಟ್ಟಿದ್ದು, ಹಾಗಾಗಿ ನಾನು ಶ್ರೀರಾಮ ಹಾಗೂ ರಾವಣ ಇಬ್ಬರ ಪರ ಇದ್ದೇನೆ ಎಂದು ಹೇಳಿದರು.
Comments are closed.