ಸಚಿವೆ ಶೋಭಾ ಕರಂದ್ಲಾಜೆಯಿಂದ ಕೊಬ್ಬರಿ ಖರೀದಿ ಕೇಂದ್ರ ಉದ್ಘಾಟನೆ

28

Get real time updates directly on you device, subscribe now.


ತುಮಕೂರು: ಜಿಲ್ಲೆಯಲ್ಲಿ ಕೊಬ್ಬರಿ ಖರೀದಿಗೆ 21 ನಾಫೆಡ್ ಖರೀದಿ ಕೇಂದ್ರಗಳನ್ನು ತೆರೆದಿದ್ದು, ಈ ತಿಂಗಳ 24 ರ ಬುಧವಾರ ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರು ತುಮಕೂರು ಎಪಿಎಂಸಿ ಯಲ್ಲಿ ಕೊಬ್ಬರಿ ಖರೀದಿ ಕೇಂದ್ರ ಉದ್ಘಾಟಿಸಲಿದ್ದಾರೆ ಎಂದು ತುಮಕೂರು ಗ್ರಾಮಾಂತರ ಕ್ಷೇತ್ರಶಾಸಕ ಬಿ.ಸುರೇಶ್ ಗೌಡ ಹೇಳಿದರು.
ಸೋಮವಾರ ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, 24 ರಂದು ಬೆಳಗ್ಗೆ 11 ಗಂಟೆಗೆ ಸಚಿವೆ ಶೋಭಾ ಕರಂದ್ಲಾಜೆ ನಗರದಲ್ಲಿ ಕೊಬ್ಬರಿ ಖರೀದಿ ಕೇಂದ್ರ ಉದ್ಘಾಟಿಸುವರು, ಕೇಂದ್ರ ಸರ್ಕಾರ ನಿಗದಿಪಡಿಸಿರುವ ಪ್ರತಿ ಕ್ವಿಂಟಾಲ್ ಕೊಬ್ಬರಿಗೆ 12 ಸಾವಿರ ರೂಪಾಯಿ ಬೆಂಬಲ ಬೆಲೆ ಯೋಜನೆಯಲ್ಲಿ ರೈತರಿಂದ ಕೊಬ್ಬರಿ ಖರೀದಿ ಮಾಡಲಾಗುತ್ತದೆ ಎಂದರು.

ಬೆಂಬಲ ಬೆಲೆ ಯೋಜನೆಯಡಿ ಉಂಡೆ ಕೊಬ್ಬರಿ ಖರೀದಿಸಲು ತುಮಕೂರು ನಗರ, ತಿಪಟೂರು, ಕೊನೇಹಳ್ಳಿ, ಕರಡಾಳು, ತುರುವೇಕೆರೆ, ಗುಬ್ಬಿ, ಚೇಳೂರು, ಕುಣಿಗಲ್, ಶಿರಾ, ಚಿಕ್ಕನಾಯಕನ ಹಳ್ಳಿ, ಹುಳಿಯಾರಿನಲ್ಲಿ ಖರೀದಿ ಕೇಂದ್ರಗಳನ್ನು ಆರಂಭಿಸಲಾಗಿದೆ, ಕೇಂದ್ರ ಸರ್ಕಾರ ನಿಗದಿಪಡಿಸಿರುವ 12 ಸಾವಿರ ರೂ. ಜೊತೆಗೆ ರಾಜ್ಯ ಸರ್ಕಾರ ಭರವಸೆ ನೀಡಿದಂತೆ ಪ್ರತಿ ಕ್ವಿಂಟಾಲ್ ಕೊಬ್ಬರಿಗೆ 1500 ರೂ. ಸೇರಿಸಿ ತಲಾ ಕ್ವಿಂಟಾಲ್ ಕೊಬ್ಬರಿಯನ್ನು 13,500 ರೂ. ಗೆ ಖರೀದಿಸಲು ಕ್ರಮ ತೆಗೆದುಕೊಳ್ಳಬೇಕು ಎಂದು ಶಾಸಕ ಸುರೇಶ್ ಗೌಡ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.
ಕೊಬ್ಬರಿ ಬೆಳೆಗಾರರು ಖರೀದಿ ಕೇಂದ್ರಗಳಲ್ಲಿ ನೋಂದಣಿ ಮಾಡಿಕೊಂಡು ನಿಗದಿತ ದಿನದಲ್ಲಿ ಕೊಬ್ಬರಿ ಮಾರಾಟ ಮಾಡಿದರೆ ಒಂದು ವಾರದೊಳಗೆ ರೈತರ ಬ್ಯಾಂಕ್ ಖಾತೆಗೆ ಕೊಬ್ಬರಿ ಹಣ ಜಮಾ ಆಗುತ್ತದೆ, ಬಯೋಮೆಟ್ರಿಕ್ ಪದ್ಧತಿಯಲ್ಲಿ ಕೊಬ್ಬರಿ ಖರೀದಿಗೆ ಕ್ರಮ ತೆಗೆದುಕೊಂಡಿರುವುದರಿಂದ ಮಧ್ಯವರ್ತಿಗಳ ಕಾಟ ಇರುವುದಿಲ್ಲ ಎಂದು ಹೇಳಿದರು.

ಸರ್ಕಾರದ ಆದೇಶದಂತೆ ರೈತರಿಗೆ ಪ್ರತಿ ಎಕರೆಗೆ ಆರು ಕ್ವಿಂಟಾಲ್ ಮತ್ತು ಗರಿಷ್ಠ 20 ಕ್ವಿಂಟಾಲ್ ಕೊಬ್ಬರಿ ಖರೀದಿಗೆ ಅವಕಾಶವಿದೆ, ಖರೀದಿಗೆ 3 ತಿಂಗಳ ಅವಕಾಶ ನೀಡಲಾಗಿದ್ದು, ಅಗತ್ಯವಿದ್ದರೆ ಖರೀದಿ ಅವಧಿ ವಿಸ್ತರಣೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡುವುದಾಗಿ ಹೇಳಿದರು.
ಸಂಸದ ಜಿ.ಎಸ್.ಬಸವರಾಜು, ಜಿಲ್ಲಾ ಬಿಜೆಪಿ ಅಧ್ಯಕ್ಷ ಹೆಬ್ಬಾಕ ರವಿಶಂಕರ್, ರಾಜ್ಯ ಬಿಜೆಪಿ ಕಾರ್ಯದರ್ಶಿ ಅಂಬಿಕಾ ಹುಲಿನಾಯ್ಕರ್, ಜಿಲ್ಲಾ ಮಾಧ್ಯಮ ಸಂಯೋಜಕ ಟಿ.ಆರ್.ಸದಾಶಿವಯ್ಯ, ಜಿಲ್ಲಾ ವಕ್ತಾರ ಜಗದೀಶ್ ಪತ್ರಿಕಾಗೋಷ್ಠಿಯಲ್ಲಿದ್ದರು.

Get real time updates directly on you device, subscribe now.

Comments are closed.

error: Content is protected !!