ಕುಣಿಗಲ್: ಅಯೋಧ್ಯೆಯಲ್ಲಿ ಬಾಲರಾಮನ ಪ್ರತಿಷ್ಠಾಪನೆ ಕಾರ್ಯಕ್ರಮದ ಹಿನ್ನೆಲೆಯಲ್ಲಿ ತಾಲೂಕಿನಾದ್ಯಂತ ವಿವಿಧ ದೇವಾಲಯಗಳಲ್ಲಿ ಶ್ರೀರಾಮ ಸ್ಮರಣೆ ಕಾರ್ಯಕ್ರಮ ವಿಜೃಂಭಣೆಯಿಂದ ನೆರವೇರಿದ್ದು, ಸಾಮೂಹಿಕ ಭಜನೆ, ಹೋಮ, ನೀರು ಮಜ್ಜಿಗೆ, ಪಾನಕ, ಹೆಸರುಬೇಳೆ ವಿತರಣೆ ಶ್ರೀಸ್ವಾಮಿವರ ವೈಭವೋಪೇತ ಮೆರವಣಿಗೆ ನಡೆಸಲಾಯಿತು.
ಪಟ್ಟಣದಲ್ಲಿ ಶ್ರೀರಾಮೋತ್ಸವ ಅಚಣೆಗೆ ರಾಜಕೀಯ ಬೆರತ ಕಾರಣ ಪುರಸಭೆ ಬಸ್ ನಿಲ್ದಾಣದಲ್ಲಿ ಕೈಪಾಳೆಯದ ವತಿಯಿಂದ ಪರ್ವತಾಂಜನೇಯ ದೇವಾಲಯದಲ್ಲಿ ರಾಮತಾರಕ ಹೋಮ, ಸಾಮೂಹಿಕ ಅನ್ನಸಂತರ್ಪಣೆ ನೆರವೇರಿದ್ದು ಶಾಸಕ ಡಾ.ರಂಗನಾಥ್, ಪುರಸಭೆ ಮಾಜಿ ಅಧ್ಯಕ್ಷ ರಂಗಸ್ವಾಮಿ, ಪ್ರಮುಖರಾದ ಕೋಘಟ್ಟ ರಾಜಣ್ಣ, ಧನಂಜಯ, ಸುರೇಶ್ ಇತರರು ಹೋಮದಲ್ಲಿ ಪಾಲ್ಗೊಂಡು ಪೂಜೆ ಸಲ್ಲಿಸಿ, ಮಹಾ ಮಂಗಳಾರತಿ ನಂತರ ಪಟ್ಟಣದ ಪ್ರಮುಖ ಬೀದಿಯಲ್ಲಿ ಸ್ವಾಮಿಯ ಉತ್ಸವ ಮೂರ್ತಿ ಮೆರವಣಿಗೆ ನೆರವೇರಿಸಿದರು.
ಗ್ರಾಮ ದೇವತೆ ವೃತ್ತದಲ್ಲಿ ಹಿಂದೂ ಪರಸಂಘಟನೆಗಳು, ಕನ್ನಡಪರ ಸಂಘಟನೆಗಳು, ವರ್ತಕರ ಸಂಘ, ಬಿಜೆಪಿ, ಜೆಡಿಎಸ್ ಸೇರಿದಂತೆ ಇತರೆ ಕಾರ್ಯಕರ್ತರು ಶ್ರೀರಾಮ ಸೇವಾ ಸಮಿತಿ ಹೆಸರಲ್ಲಿ ರಾಮೋತ್ಸವ ಆಚರಿಸಿದ್ದು, ಬೆಳಗಿನಿಂದ ಅಖಂಡ ಭಜನೆ, ಅನ್ನ ಸಂತರ್ಪಣೆ, ನೀರು ಮಜ್ಜಿಗೆ, ಪಾನಕ, ಹೆಸರು ಬೇಳೆ, ಕೊಬ್ಬರಿ ಮಿಠಾಯಿ ವಿತರಣೆ ನೆರವೇರಿಸಲಾಯಿತು, ಮಾಜಿ ಸಚಿವ ಡಿ.ನಾಗರಾಜಯ್ಯ ದಂಪತಿ, ಜೆಡಿಎಸ್ ಅಧ್ಯಕ್ಷ ಜಗದೀಶ್, ಪ್ರಮುಖರಾದ ಹರೀಶ್, ಕೃಷ್ಣೇಗೌಡ, ನವೀನ್, ಬಿಜೆಪಿ ಅಧ್ಯಕ್ಷ ಬಲರಾಮ, ಮುಖಂಡ ರಾಜೇಶಗೌಡ, ಸತೀಶ್, ಕೃಷ್ಣ, ಆನಂದ ಕುಮಾರ್, ಕೋಟೆ ನಾಗಣ್ಣ, ರಮೇಶ, ರವೀಶ್, ಕನ್ನಡಪರ ಸಂಘಟನೆಯ ಮಂಜುನಾಥ, ಶ್ರೀನಿವಾಸ, ಬಜರಂಗ ದಳದ ಗಿರೀಶ್, ಕಾರ್ತಿಕ್, ಹೇಮಂತ ಇತರರು ಪಾಲ್ಗೊಂಡಿದ್ದರು, ಶ್ರೀರಾಮ ಪ್ರತಿಷ್ಠಾಪನೆ ಕಾರ್ಯಕ್ರಮದ ನೇರಪ್ರಸಾರದ ವ್ಯವಸ್ಥೆ ಮಾಡಲಾಗಿತ್ತು.
ಮೆರವಣಿಗೆಗೆ ಅನುಮತಿ ನಿರಾಕರಣೆ ಖಂಡಿಸಿ ಮೂರ್ತಿ ತಲೆ ಮೇಲೆ ಹೊತ್ತು ದಿಢೀರ್ ಮೆರವಣಿಗೆ ಮಾಡಿದ ಭಕ್ತರು.
ಮಧ್ಯಾಹ್ನ ಅಯೋಧ್ಯೆಯಲ್ಲಿ ಪ್ರತಿಷ್ಠಾಪನೆ ನಂತರ ಪಟಾಕಿ ಸಿಡಿಸಿ ಸಂಭ್ರಮಿಸಿದ ರಾಮಸೇವಾ ಸಮಿತಿ ಕಾರ್ಯಕರ್ತರು, ಸಾರ್ವಜನಿಕರಿಗೆ ಕೊಬ್ಬರಿ ಮೀಠಾಯಿ ಹಂಚಿ ಸಂಭ್ರಮಿಸಿ, ಜನಪದ ಕಲಾ ತಂಡಗಳೊಂದಿಗೆ ಮೆರವಣಿಗೆ ಹೊರಡಲು ಸಿದ್ಧರಾದರು. ಈ ವೇಳೆ ಮಧ್ಯ ಪ್ರವೇಶಿಸಿದ ಸಿಪಿಐ ನವೀನ್ಗೌಡ ಸಿಬ್ಬಂದಿ, ಮೆರವಣಿಗೆ ಅವಕಾಶ ಇಲ್ಲ ಎಂದಾಗ, ಮುಖಂಡರಾದ ಜಗದೀಶ್, ಬಲರಾಮ, ರಾಜೇಶ್ ಗೌಡ ಪೊಲೀಸರೊಂದಿಗೆ ವಾಗ್ವಾದ ನಡೆಸಿ ಶಾಸಕರ ಕಡೆಯವರಿಗೆ ಏಕೆ ಅನುಮತಿ ನೀಡಿದ್ದೀರಾ ಎಂದು ಪ್ರಶ್ನಿಸಿದರು.
ಪೊಲೀಸರು ಅವಕಾಶ ನೀಡೊಲ್ಲ ಎಂದಾಗ ಸ್ಥಳದಲ್ಲಿದ ಕೆಲ ಕಾರ್ಯಕರ್ತರು, ಉತ್ಸವ ಮೂರ್ತಿಯಾದ ಶ್ರೀ ಆಂಜನೇಯ ಮೂರ್ತಿಯನ್ನು ತಲೆ ಮೇಲೆ ಹೊತ್ತು ದಿಢೀರ್ ಮೆರವಣಿಗೆ ನಡೆಸಲು ಮುಂದಾದರು, ವಿಧಿಇಲ್ಲದೆ ಪೊಲೀಸರು ಭದ್ರತೆ ನೀಡಿದರು, ಮೆರವಣಿಗೆ ಸಾಗುವಾಗ ಮತ್ತೊಂದು ಬಣದ ಮೆರವಣಿಗೆಯೂ ಹುಚ್ಚಮಾಸ್ತಿಗೌಡ ಸರ್ಕಲ್ ನಲ್ಲಿ ಸಂಧಿಸಿದ್ದು ಎರಡೂ ಕಡೆಯಿಂದ ಜೈಶ್ರೀರಾಮ್ ಘೋಷಣೆ ಮುಳುಗಿದ್ದು ವಿಶೇಷವಾಗಿತ್ತು, ನಂತರ ಯಾವುದೇ ಅಹಿತಕರ ಘಟನೆ ನಡೆಯದೆ ಎರಡೂ ಬಣದ ಮೆರವಣಿಗೆ ಪೂರ್ಣಗೊಂಡಿತು.
ಬೀದಿಬದಿ ಕಬ್ಬಿನ ಹಾಲು ಮಾರಾಟಗಾರರು ಉಚಿತವಾಗಿವಾಗಿ ಕಬ್ಬಿನಹಾಲು ವಿತರಿಸಿದರೆ, ಜ್ಯುವೆಲ್ಲರ್ ಮಾಲೀಕರ ಸಂಘದ ವತಿಯಿಂದ ಹಾಗೂ ಕೆಲ ಮಳಿಗೆ ಮಾಲೀಕರು ಸ್ವ ಪ್ರೇರಣೆಯಿಂದ ಬಾಗಿಲು ಮುಚ್ಚಿ ರಾಮೋತ್ಸವದಲ್ಲಿ ಪಾಲ್ಗೊಂಡರು. ಕೆಲಹೋಟೆಲ್ ಮಾಲೀಕರು ಗ್ರಾಹಕರಿಗೆ ಉಚಿತವಾಗಿ ಲಾಡು ವಿತರಿಸಿದರು, ಪಟ್ಟಣದ ವಿವಿಧ ಬಡಾವಣೆಯಲ್ಲಿ ರಾಮೋತ್ಸವದ ಅಂಗವಾಗಿ ಅನ್ನ ಸಂತರ್ಪಣೆ ನೆರವೇರಿಸಲಾಯಿತು, ಕೋಟೆ ಪ್ರದೇಶ ಸೇರಿದಂತೆ ವಿವಿಧೆಡೆಯಲ್ಲಿ ಇಡೀ ಬೀದಿಗೆ ರಂಗೋಲಿ ಹಾಕಿ, ಕಂಬಗಳಿಗೆ ತಳೀರು ತೋರಣ ಕಟ್ಟಿದ್ದು ರಾಮೋತ್ಸವದ ಸಂಭ್ರಮದ ಮೆರಗು ಹೆಚ್ಚಿಸಿತು, ಶಾಲೆಗೆ ರಜೆ ನೀಡದ ಕಾರಣ ಬಹುತೇಕ ಹಿಂದೂ ಪೋಷಕರು ಮಕ್ಕಳನ್ನು ಶಾಲೆಗೆ ಕಳಿಸದೆ ರಾಮೋತ್ಸವ ಕಾರ್ಯದಲ್ಲಿ ಪಾಲ್ಗೊಂಡರು.
Comments are closed.