ತುಮಕೂರು: ಜಿಲ್ಲೆಯ ಶಿರಾ ತಾಲ್ಲೂಕು ಪಟ್ಟನಾಯಕನ ಹಳ್ಳಿಯಲ್ಲಿ ಜನವರಿ 31 ರಿಂದ ಫೆಬ್ರವರಿ 6ರ ವರೆಗೆ ಹಾಗೂ ಶ್ರೀಸಿದ್ಧಗಂಗಾ ಮಠದಲ್ಲಿ ಫೆಬ್ರವರಿ 26 ರಿಂದ ಮಾರ್ಚ್ 11ರ ವರೆಗೆ ನಡೆಯಲಿರುವ ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನವನ್ನು ರೈತರು, ಸಾರ್ವಜನಿಕರು, ವಿದ್ಯಾರ್ಥಿಗಳು ಸೇರಿದಂತೆ ಸಾಮಾನ್ಯ ಜನರಿಗೂ ಮಾಹಿತಿ ತಲುಪುವಂತೆ ಆಯೋಜಿಸಬೇಕು ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜಿ. ಪ್ರಭು ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾ ಪಂಚಾಯತಿಯಲ್ಲಿ ವಿವಿಧ ಅಧಿಕಾರಿಗಳೊಂದಿಗೆ ಪೂರ್ವಭಾವಿ ಸಭೆ ನಡೆಸಿದ ಅವರು, ಶಿರಾ ತಾಲ್ಲೂಕು ಪಟ್ಟನಾಯಕನ ಹಳ್ಳಿ ಓಂಕಾರೇಶ್ವರಸ್ವಾಮಿ ಕಲ್ಲುಗಾಲಿ ಬ್ರಹ್ಮರಥೋತ್ಸವ ಹಾಗೂ ಶ್ರೀಸಿದ್ಧಲಿಂಗೇಶ್ವರ ಜಾತ್ರಾ ಮಹೋತ್ಸವ ಪ್ರಯುಕ್ತ ನಡೆಯಲಿರುವ ವಸ್ತು ಪ್ರದರ್ಶನ ವೀಕ್ಷಿಸಲು ಲಕ್ಷಾಂತರ ಭಕ್ತಾದಿಗಳು ಆಗಮಿಸುವುದರಿಂದ ಸ್ವಚ್ಛತೆ, ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ ಸೇರಿದಂತೆ ಅಗತ್ಯ ಮೂಲಭೂತ ಸೌಕರ್ಯ ಒದಗಿಸಲು ಕ್ರಮ ಕೈಗೊಳ್ಳಬೇಕು, ಸೊಳ್ಳೆ ಹೆಚ್ಚಾಗದಂತೆ ಕಾಲಕಾಲಕ್ಕೆ ಫಾಗಿಂಗ್ ಮಾಡಬೇಕು ಎಂದು ನಿರ್ದೇಶನ ನೀಡಿದರು.
ವಸ್ತು ಪ್ರದರ್ಶನದಲ್ಲಿ ಭಾಗವಹಿಸುವ ಜಿಲ್ಲಾ ಕೈಗಾರಿಕಾ ಕೇಂದ್ರ, ಜಲಾನಯನ ಅಭಿವೃದ್ಧಿ, ಕೃಷಿ, ತೋಟಗಾರಿಕೆ, ಅರಣ್ಯ, ಆರೋಗ್ಯ, ಪಶುವೈದ್ಯ, ಮೀನುಗಾರಿಕೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಶಿಕ್ಷಣ, ಜವಳಿ ಮತ್ತು ಕೈಮಗ್ಗ, ಪ್ರವಾಸೋದ್ಯಮ, ವಾರ್ತಾ, ರೇಷ್ಮೆ, ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಗಳು ಮಳಿಗೆ ತೆರೆದು, ಸರ್ಕಾರಿ ಯೋಜನೆಗಳಡಿ ಸೌಲಭ್ಯ ಪಡೆಯುವ ಬಗ್ಗೆ ಜನರಿಗೆ ಮಾಹಿತಿ ನೀಡಬೇಕು, ಸರ್ಕಾರದ 5 ಖಾತರಿ ಯೋಜನೆಗಳ ಬಗ್ಗೆ ಪ್ರತ್ಯೇಕ ಮಳಿಗೆಗಳನ್ನು ತೆರೆದು ಅಂಕಿ ಅಂಶ ಸಹಿತ ಪ್ರಗತಿ ಮಾಹಿತಿ ಪ್ರಚುರಪಡಿಸಬೇಕು, ಖಾತರಿ ಯೋಜನೆಗಳನ್ನು ಸದುಪಯೋಗ ಪಡೆದುಕೊಂಡ ಫಲಾನುಭವಿಗಳ ಮಾಹಿತಿ ಪ್ರದರ್ಶಿಸಬೇಕು ಎಂದು ಸೂಚಿಸಿದರು.
ವಸ್ತು ಪ್ರದರ್ಶನದಲ್ಲಿ ಸ್ವಸಹಾಯ ಗುಂಪು, ಸ್ತ್ರೀಶಕ್ತಿ ಗುಂಪುಗಳು ಖರೀದಿಸಿದ ಉತ್ಪನ್ನಗಳಿಗೆ ಅವಕಾಶ ನೀಡದೆ ತಾವೇ ತಯಾರಿಸಿದ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟಕ್ಕೆ ಮಾತ್ರ ಅವಕಾಶ ಕಲ್ಪಿಸಬೇಕು, ಕರಕುಶಲ ವಸ್ತುಗಳ ಪ್ರದರ್ಶನ, ಕೃಷಿ ಪರಿಕರಗಳ ಪ್ರದರ್ಶನ, ಮೀನುಗಳ ಅಕ್ವೇರಿಯಂ ಪ್ರದರ್ಶನ, ಪಶು ಆರೈಕೆ, ಗುಡಿ ಕೈಗಾರಿಕೆಗಳ ಪ್ರಾತ್ಯಕ್ಷಿಕೆಯೊಂದಿಗೆ ಪ್ರದರ್ಶನ ನೀಡಬೇಕು, ಕೃಷಿ ಇಲಾಖೆಯಿಂದ ಕಡಿಮೆ ನೀರಿನಲ್ಲಿ ಬೆಳೆಯಬಹುದಾದ ಸಿರಿಧಾನ್ಯಗಳ ಪ್ರಾತ್ಯಕ್ಷಿಕೆ ಹಾಗೂ ಜೈವಿಕ ಕೀಟ ನಾಶಕಗಳ ಬಗ್ಗೆ ರೈತರಲ್ಲಿ ಅರಿವು ಮೂಡಿಸಬೇಕು, ಆರೋಗ್ಯ ಇಲಾಖೆಯಿಂದ ಜನಸಾಮಾನ್ಯರಿಗಾಗಿ ಆರೋಗ್ಯ ಶಿಬಿರಗಳನ್ನು ಏರ್ಪಡಿಸಿ ಅಧಿಕ ರಕ್ತದೊತ್ತಡ ಹಾಗೂ ಮಧುಮೇಹ ರೋಗ ನಿಯಂತ್ರಣಕ್ಕೆ ವಹಿಸಬೇಕಾದ ಮುನ್ನೆಚ್ಚರಿಕೆಗಳ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ತಿಳಿಸಿದರು.
ವಸ್ತು ಪ್ರದರ್ಶನದಲ್ಲಿ ಹಲವಾರು ಗಣ್ಯರು ಭಾಗವಹಿಸುವುದರಿಂದ ಪ್ರತಿ ವರ್ಷಕ್ಕಿಂತ ಈ ಬಾರಿ ಅತ್ಯಾಕರ್ಷಕ ಹಾಗೂ ಅರ್ಥಪೂರ್ಣವಾಗಿ ಏರ್ಪಡಿಸಬೇಕು, ವಿದ್ಯಾರ್ಥಿಗಳ ಜ್ಞಾನ ಹೆಚ್ಚಿಸುವ ಹಾಗೂ ಕಲಿಕೆಗೆ ಉಪಯುಕ್ತವಾಗುವಂತಹ ವಸ್ತು ಪ್ರದರ್ಶನ ಆಯೋಜಿಸಬೇಕು ಎಂದು ಹೇಳಿದರು.
ಸಭೆಯಲ್ಲಿ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ಶ್ರೀಗುರುಗುಂಡ ಬ್ರಹ್ಮೇಶ್ವರ ಸ್ವಾಮಿ ಮಠ ಹಾಗೂ ಸಿದ್ಧಗಂಗಾ ಮಠದ ಪದಾಧಿಕಾರಿಗಳು ಹಾಜರಿದ್ದರು.
Comments are closed.