ಕುಣಿಗಲ್: ತಾಲೂಕಿನಲ್ಲಿ ಮುಂದಿನ ಫೆಬ್ರವರಿ ತಿಂಗಳಲ್ಲಿ ಎರಡುವರೆ ಸಾವಿರ ಮನೆಗಳ ಹಂಚಿಕೆಗೆ ಅಗತ್ಯ ಕ್ರಮ ಕೈಗೊಳ್ಳ ಲಾಗುವುದು ಎಂದು ಸಂಸದ ಡಿ.ಕೆ.ಸುರೇಶ್ ಹೇಳಿದರು.
ತಾಲೂಕಿನ ಸಂತೇಮಾವತ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಂತೇಮಾವತ್ತೂರಿನಲ್ಲಿ ಜನಸಂಪರ್ಕ ಸಭೆಯಲ್ಲಿ ಮಾತನಾಡಿ, ಕಳೆದ ಹಲವಾರು ವರ್ಷಗಳಿಂದ ಮನೆ ವಿತರಣೆ ಸಮಸ್ಯೆಯಾಗಿದ್ದು ಈಗಾಗಲೆ ಒಂದು ಸಾವಿರ ಮನೆ ಮಂಜೂರಾಗಿದ್ದು ಇನ್ನು ಒಂದುವರೆ ಸಾವಿರ ಮನೆಗಳ ಮಂಜೂರಾತಿಯಾಗಿದ್ದು, ಮುಂದಿನ ತಿಂಗಳಲ್ಲೆ ವಿತರಿಸಲಾಗುವುದು, ತಾಲೂಕಿನಾದ್ಯಂತ ಅರ್ಹ ನಿವೇಶನ ರಹಿತರಿಗೆ ನಿವೇಶನ ವಿತರಣೆಗೆ ಒಟ್ಟು 269 ಎಕರೆ ಪ್ರದೇಶ ಗುರುತಿಸಿದ್ದು ಜಿಲ್ಲಾಧಿಕಾರಿಗಳಿಂದ ಈಗಾಗಲೆ ನೂರು ಎಕರೆ ಅನುಮೋದನೆ ಪಡೆದಿದ್ದು ಬಾಕಿ 169 ಎಕರೆ ಪ್ರದೇಶದ ಅನುಮೋದನೆ ಪ್ರಕ್ರಿಯೆ ಜಾರಿಯಲ್ಲಿದ್ದು ಪೂರ್ಣಗೊಂಡ ನಂತರ ವಿತರಿಸಲಾಗುವುದು ಎಂದರು.
ತಾಲೂಕಿನಾದ್ಯಂತ ವಿದ್ಯುತ್ ಸಮಸ್ಯೆ ನಿವಾರಣೆಗೆ 64 ಮೆಗಾವ್ಯಾಟ್ ಸೋಲಾರ್ ಉತ್ಪಾದನೆಗೆ ಅಗತ್ಯ ಕ್ರಮ ವಹಿಸಿದ್ದು ಟೆಂಡರ್ ಪ್ರಕ್ರಿಯೆ ಜಾರಿಯಲ್ಲಿದೆ, ಹಿಂದೆ ಡಿ.ಕೆ.ಶಿವಕುಮಾರ್ ಇಂಧನ ಸಚಿವರಾಗಿದ್ದಾಗ 20 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆಗೆ ಸೋಲಾರ್ ಪಾರ್ಕ್ ಮಾಡಲಾಗಿದ್ದು ಒಂದುವರೆ ವರ್ಷದೊಳಗೆ ಎಲ್ಲಾ ಕಾಮಗಾರಿ ಪೂರ್ಣಗೊಂಡು ತಾಲೂಕಿನ ರೈತರಿಗೆ ಹಗಲಿನಲ್ಲಿ ನಿರಂತರ ಸೋಲಾರ್ ವಿದ್ಯುತ್ ಲಭ್ಯವಾಗಲಿದೆ, ಹುಲಿಯೂರು ದುರ್ಗ ಸಮೀಪ ಮೂರು ತಾಲೂಕಿಗೆ ವಿದ್ಯುತ್ ವಿತರಣೆಗೆ 450 ಕೋಟಿ ವೆಚ್ಚದಲ್ಲಿ ಹೈ ಪವರ್ ಸ್ಟೇಷನ್ ಸ್ಥಾಪಿಸಲಾಗುತ್ತಿದೆ, ಶೀಘ್ರದಲ್ಲೆ ಟೆಂಡರ್ ಪ್ರಕ್ರಿಯೆ ನಡೆಸಲಾಗುವುದು, ತಾಲೂಕಿನ ರೈತರಿಗೆ ಎಚ್ ವಿ ಡಿ ಎಸ್ ಯೋಜನೆ ಯಡಿಯಲ್ಲಿ ಟಿಸಿ ವಿತರಿಸಲು ಒಟ್ಟಾರೆ 21 ಕೋಟಿ ವೆಚ್ಚದಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗಿದ್ದು ವಿತರಣೆಗೆ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ, ಬಗರ್ ಹುಕುಂ ಸಮಿತಿ ಶೀಘ್ರವಾಗಿ ರಚಿಸಿ ಅರ್ಹರಿಗೆ ಒಮ್ಮೆಲೆ ಸ್ಕೆಚ್ ಗುರುತಿಸಿ ಜಾಗ ನೀಡಲು ಅಗತ್ಯ ಪ್ರಕ್ರಿಯೆ ನಡೆಸಲಾಗುತ್ತಿದೆ, ಮೋದೂರು, ಹೊಸೂರು ಅರಣ್ಯ ಜಾಗ ಗುರುತಿಸಲು ಮೈಸೂರು ಅರಣ್ಯ ಸರ್ವೆ ಇಲಾಖೆಯ ಗಮನಕ್ಕೆ ತಂದು ಸರ್ವೇ ನಡೆಸಿ ಅಗತ್ಯ ಕ್ರಮಕ್ಕೆ ಡಿಸಿಎಫ್ ಅವರೊಂದಿಗೆ ಮಾತನಾಡುವುದಾಗಿ ಹೇಳಿದರು.
ತಾಲೂಕಿನ ಜನರ, ಮಹಿಳೆಯರ, ಯುವಕರು ಸಮಗ್ರ ಅಭಿವೃದ್ಧಿ ನಿಟ್ಟಿನಲ್ಲಿ ಮಾಡುವ ಕೆಲಸವಾದರೆ ವಿರೋಧ ಪಕ್ಷಗಳಾದ ಜೆಡಿಎಸ್, ಬಿಜೆಪಿಯವರು ಕುದುರೆ ಫಾರಂ ವಿಷಯವಾಗಿ ಜನರ ದಿಕ್ಕು ತಪ್ಪಿಸಿ ಅಪಪ್ರಚಾರದಲ್ಲೆ ತೊಡಗಿದ್ದಾರೆ, ಅವರು ಅಪಪ್ರಚಾರದಲ್ಲೆ ತೊಡಗಲಿ ನಮ್ಮ ಅಭಿವೃದ್ಧಿ ಕೆಲಸ ನಾವು ಮಾಡುತ್ತಾ ಸಾಗುತ್ತೇವೆ ಎಂದರು.
ಶಾಸಕ ಡಾ.ರಂಗನಾಥ್ ಮಾತನಾಡಿ, ತಾಲೂಕಿನ ನೀರಾವರಿಗೆ ಪೂರಕವಾದ ಲಿಂಕ್ ಕೆನಾಲ್ ಕಾಮಗಾರಿಗೆ 950 ಕೋಟಿ ವೆಚ್ಚದಲ್ಲಿ ಎಲ್ಲಾ ಪ್ರಕ್ರಿಯೆ ಪೂರ್ಣಗೊಂಡಿದ್ದು ಶೀಘ್ರದಲ್ಲೆ ಪೂಜೆ ನೆರವೇರಿಸಲಾಗುವುದು, ರಸ್ತೆ ಅಭಿವೃದ್ಧಿಗೆ ಮೊದಲಿಗೆ ನೂರು ಕೋಟಿ ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲಿದ್ದು ಎರಡನೇ ಹಂತದಲ್ಲಿ 150 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಮಾಡಲಾಗುವುದು, ಮಾರ್ಕೋನಹಳ್ಳಿ ಜಲಾಶಯದಿಂದ ಬಹು ಗ್ರಾಮ ಕುಡಿಯುವ ನೀರು ಯೋಜನೆ, ಕೊತ್ತಗೆರೆ, ಕುಣಿಗಲ್ ಕೆರೆಗಳಿಂದಲೂ ಕುಡಿಯುವ ನೀರು ಯೋಜನೆ ರೂಪಿಸಲಾಗುತ್ತಿದ್ದು, ಗ್ರಾಮಾಂತರ ಪ್ರದೇಶದ ಜನರ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಿ, ಸದಾ ಅಭಿವೃದ್ಧಿ ಪರ ಚಿಂತನೆ ನಡೆಸಿ ಕೆಲಸ ಮಾಡಲಾಗುವುದು ಎಂದರು.
ಗ್ರಾಪಂ ಅಧ್ಯಕ್ಷ ಹೇಮಾ ಬಾಯಿ ಬಾಲಾ ನಾಯಕ್, ಉಪಾಧ್ಯಕ್ಷ ಬಸವರಾಜು, ಸದಸ್ಯರಾದ ಮಂಜುನಾಥ, ರಂಗಸ್ವಾಮಿ, ಸುರೇಶ, ದಾಸೇಗೌಡ, ದೀಪಕ್, ಶೇಖರ್, ಪಿಡಿಒ ವತ್ಸಲಾ, ತಹಶೀಲ್ದಾರ್ ವಿಶ್ವನಾಥ, ತಾಪಂ ಇಒ ಜೋಸೆಫ್, ಬೆಸ್ಕಾಂ ಇಇ ಪರಮೇಶ್ವರ್ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.
Comments are closed.