ಜ.26ರಿಂದ ಗ್ರಾಪಂಗಳಲ್ಲಿ ಸಂವಿಧಾನ ಜಾಗೃತಿ ಜಾಥಾ: ಡೀಸಿ

51

Get real time updates directly on you device, subscribe now.


ತುಮಕೂರು: ಸಮಾಜದಲ್ಲಿ ಎಲ್ಲರಿಗೂ ಭಾರತ ಸಂವಿಧಾನದ ಮಹತ್ವದ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಜಿಲ್ಲೆಯ ಪ್ರತಿ ಗ್ರಾಮ ಪಂಚಾಯತಿಗಳಲ್ಲಿಯೂ ಜನವರಿ 26 ರಿಂದ ಭಾರತ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಅಧಿಕಾರಿಗಳೊಂದಿಗೆ ಪೂರ್ವಭಾವಿ ಸಭೆ ನಡೆಸಿ ಮಾತನಾಡಿ, ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮದಡಿ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತಿಗಳಲ್ಲಿ ಸ್ಥಬ್ದಚಿತ್ರ ವಾಹನದ ಮೂಲಕ ಮೆರವಣಿಗೆ ನಡೆಸಿ ಜನರಿಗೆ ಸಂವಿಧಾನ ಪರಿಕಲ್ಪನೆಗಳ ಬಗ್ಗೆ ಅರಿವು ಮೂಡಿಸಲಾಗುವುದು ಎಂದು ತಿಳಿಸಿದರು.

ಜಾಥಾ ಕಾರ್ಯಕ್ರಮದ ಸ್ಥಬ್ದಚಿತ್ರ ಮೆರವಣಿಗೆಗೆ ಜಿಲ್ಲಾ ಉಸ್ತುವಾರಿ ಸಚಿವರು ಜನವರಿ 26 ರಂದು ಚಾಲನೆ ನೀಡಲಿದ್ದಾರೆ, ಸಂವಿಧಾನದ ಮಹತ್ವ, ಆಶಯ, ಸಮಾನತೆಯ ತತ್ವಗಳ ಬಗ್ಗೆ ಜನ ಸಾಮಾನ್ಯರು ಅರಿವು ಹೊಂದಿರಬೇಕು, ಈ ನಿಟ್ಟಿನಲ್ಲಿ ಜನವರಿ 26 ರಿಂದ ಫೆಬ್ರವರಿ 23ರ ವರೆಗೆ ಜಿಲ್ಲೆಯ ಎಲ್ಲಾ ನಗರ ಸಭೆ, ಪುರಸಭೆ, ಪಟ್ಟಣ ಪಂಚಾಯತಿ ಹಾಗೂ 330 ಗ್ರಾಮ ಪಂಚಾಯತಿಗಳಿಗೆ ಜಾಗೃತಿ ಜಾಥಾ ಸಂಚರಿಸಿ ಸಂವಿಧಾನದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲಿದೆ, ಜಾಗೃತಿ ಜಾಥಾ ಅಭಿಯಾನ ಗ್ರಾಮ ಪಂಚಾಯತಿ ಕೇಂದ್ರ ಸ್ಥಾನಕ್ಕೆ ತಲುಪಿದಾಗ ಸ್ಥಳೀಯ ಗ್ರಾಮ ಪಂಚಾಯತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಮಾಜಿ ಸದಸ್ಯರು, ಶಾಸಕರು, ಎಲ್ಲಾ ಜನಪ್ರತಿನಿಧಿಗಳು, ಹೋರಾಟಗಾರರು, ನಾಗರಿಕರು, ಸಂಘಟನೆಗಳು, ಕಲಾವಿದರು, ಮಹಿಳೆಯರು ಪಾಲ್ಗೊಳ್ಳುವಂತೆ ಮುಂಚಿತವಾಗಿ ಮಾಹಿತಿ ನೀಡಬೇಕೆಂದು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಂವಿಧಾನ ಜಾಥಾ ಕಾರ್ಯಕ್ರಮದಲ್ಲಿ ಯಾವುದೇ ಆಕ್ಷೇಪಣೆ ಮತ್ತು ಗೊಂದಲಗಳಿಗೆ ಅವಕಾಶ ನೀಡಬಾರದು, ಗ್ರಾಮ ಪಂಚಾಯತಿ ವ್ಯಾಪ್ತಿಯ ಸ್ಥಳೀಯ ಅಧಿಕಾರಿಗಳು ಜವಾಬ್ದಾರಿ ವಹಿಸಿಕೊಂಡು ಸಮನ್ವಯತೆಯಿಂದ ಪರಿಣಾಮಕಾರಿಯಾಗಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಸಂವಿಧಾನವು ಸರ್ವರಿಗೂ ಸಮಪಾಲು- ಸರ್ವರಿಗೂ ಸಮಬಾಳು ಎನ್ನುವಂತೆ ಪ್ರತಿಯೊಬ್ಬರಿಗೂ ಸಮಾನತೆ, ಬ್ರಾತೃತ್ವ, ಸ್ವಾತಂತ್ರ್ಯದಿಂದ ಬದುಕಲು ಹಕ್ಕು ಮತ್ತು ಕರ್ತವ್ಯಗಳನ್ನು ಸಮಾನವಾಗಿ ನೀಡಿರುವ ಕಾರಣ ಯಾವುದೇ ಜಾತಿ- ಧರ್ಮ ಭೇದವಿಲ್ಲದಂತೆ ಸಮಾನತೆಯಿಂದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಕ್ರಮ ವಹಿಸಬೇಕೆಂದು ಸೂಚಿಸಿದರು.
ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜಿ.ಪ್ರಭು ಮಾತನಾಡಿ, ಜಾಗೃತಿ ಜಾಥಾ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಎಲ್ಲಾ ಗ್ರಾಮ ಪಂಚಾಯತಿ ಮಟ್ಟದಲ್ಲಿ ವಿಶೇಷ ಸಭೆ ನಡೆಸಿ ಸಾರ್ವಜನಿಕರ ಗಮನಕ್ಕೆ ತರಬೇಕು, ಪ್ರತಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಸಂವಿಧಾನ ಜಾಗೃತಿ ಜಾಥಾ ಕುರಿತು ಬ್ಯಾನರ್, ಪೋಸ್ಟರ್ಗಳನ್ನು ಅಳವಡಿಸಬೇಕು, ಕಸ ವಿಲೇವಾರಿ ಮಾಡುವ ವಾಹನಗಳಲ್ಲಿ ಜಾಗೃತಿ ಜಾಥಾ ಅಭಿಯಾನವು ಗ್ರಾಮ ಪಂಚಾಯತಿಗೆ ಆಗಮಿಸುವ ದಿನದ ಬಗ್ಗೆ ಧ್ವನಿ ಮುದ್ರಿಕೆ ಮೂಲಕ ಜನರಿಗೆ ಮಾಹಿತಿ ನೀಡಬೇಕು, ಇದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸಿ ಸಂವಿಧಾನದ ಬಗ್ಗೆ ಅರಿಯಲು ಸಾಧ್ಯವಾಗುತ್ತದೆ, ಸಂವಿಧಾನ ಜಾಗೃತಿ ಜಾಥಾ ಅಭಿಯಾನ ಗ್ರಾಮ ಪಂಚಾಯತಿಗೆ ಭೇಟಿ ನೀಡಿದಾಗ ಪಂಚಾಯತಿ ಅಧಿಕಾರಿ, ನೌಕರರು ಅತ್ಯಂತ ಗೌರವ ಮತ್ತು ಪ್ರೀತಿಯಿಂದ ಬರಮಾಡಿಕೊಳ್ಳಬೇಕು, ಸಿದ್ಧಪಡಿಸಿರುವ ಮಾರ್ಗ ನಕ್ಷೆಯಂತೆ ಮುಂದಿನ ಗ್ರಾಮ ಪಂಚಾಯತಿಗೆ ಗೌರವ ಮತ್ತು ಮನ್ನಣೆಯಿಂದ ಬೀಳ್ಕೊಡಬೇಕು ಎಂದು ನಿರ್ದೇಶಿಸಿದರು.

ಸಭೆಯಲ್ಲಿ ಪಾಲಿಕೆ ಆಯುಕ್ತರಾದ ಬಿ.ವಿ.ಅಶ್ವಿಜ, ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ.ಕರಾಳೆ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮರಿಯಪ್ಪ, ತಹಶೀಲ್ದಾರ್ ಸಿದ್ದೇಶ್, ಉಪ ವಿಭಾಗಾಧಿಕಾರಿ ಗೌರವ್ ಕುಮಾರ್ ಶೆಟ್ಟಿ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಕೃಷ್ಣಪ್ಪ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಅಂಜಿನಪ್ಪ ಸೇರಿದಂತೆ ವಿವಿಧ ಅಧಿಕಾರಿಗಳು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!