ಪುಷ್ಪನಮನ ಸಲ್ಲಿಸಿ ನೇತಾಜಿ ಜನ್ಮ ದಿನೋತ್ಸವ ಆಚರಣೆ

37

Get real time updates directly on you device, subscribe now.


ತುಮಕೂರು: ಅಖಿಲ ಭಾರತ ಡಾ.ಅಂಬೇಡ್ಕರ್ ಪ್ರಚಾರ ಸಮಿತಿ ತುಮಕೂರು ಜಿಲ್ಲಾ ಕಚೇರಿಯಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ರವರ 127 ನೇ ಜನ್ಮ ದಿನೋತ್ಸವವನ್ನು ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಪುಷ್ಪ ನಮನ ಸಲ್ಲಿಸುವುದರ ಮೂಲಕ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಎನ್.ಕೆ.ನಿಧಿಕುಮಾರ್ ಮಾತನಾಡಿ, ಸುಭಾಷ್ ಚಂದ್ರ ಬೋಸ್ ಭಾರತದ ಸ್ವಾತಂತ್ರ್ಯ ಹೋರಾಟದ ದಿಕ್ಕನ್ನು ಬದಲಿಸಿ ಸೂರ್ಯ ಮುಳುಗದ ಸಾಮ್ರಾಜ್ಯದ ಅಧಿಪತಿಯಾಗಿದ್ದ ಬ್ರಿಟಿಷರಿಗೆ ಭೀತಿ ಮೂಡಿಸಿದ ಅಸಾಧಾರಣ ನಾಯಕ, ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಮೂಲಕ ಚರಿತ್ರೆ ಸೃಷ್ಟಿಸಿದರು ಎಂದರು.

ಶಾಂತಿಯುತವಾಗಿ ನಡೆಯುತ್ತಿದ್ದ ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕ್ರಾಂತಿ ಸೃಷ್ಟಿಸಿ ಬ್ರಿಟಿಷ್ ಅಧಿಕಾರಿಗಳಿಗೆ ಸಿಂಹ ಸ್ವಪ್ನವಾಗಿ ಕಾಡಿದ ಧೀರ ಸುಭಾಷ್ ಚಂದ್ರ ಬೋಸ್, ಭಾರತದ ಪ್ರಜೆಗಳಿಗೆ ನೀವು ನನಗೆ ರಕ್ತ ಕೊಡಿ, ನಾನು ನಿಮಗೆ ಸ್ವಾತಂತ್ರ್ಯ ಕೊಡಿಸುತ್ತೇನೆ ಎಂದು ಘೋಷಿಸುವ ಮೂಲಕ ಸ್ವಾತಂತ್ರ್ಯ ಹೋರಾಟದಲ್ಲಿಯೇ ಸಂಚಲನ ಸೃಷ್ಟಿಸಿದರು ಎಂದು ತಿಳಿಸಿದರು.
ಯುವ ಘಟಕದ ಜಿಲ್ಲಾ ಕಾರ್ಯ ಅಧ್ಯಕ್ಷ ನಾರಾಯಣ್.ಎಸ್. ಮಾತನಾಡಿ, ಸುಭಾಷ್ ಚಂದ್ರ ಬೋಸ್ ಅವರಿಗೆ ಬ್ರಿಟಿಷರು ಹೆದರಿದಷ್ಟು ಇನ್ಯಾವ ಸ್ವಾತಂತ್ರ್ಯ ಹೋರಾಟಗಾರರಿಗೆ ಹೆದರಲಿಲ್ಲ, ಮಹಿಳೆಯರಿಗೂ ಶಸ್ತ್ರ ತರಬೇತಿ ನೀಡುವ ಮೂಲಕ ಪ್ರತ್ಯೇಕ ಭಾರತೀಯ ಸೇನೆ ಪ್ರಾರಂಭಿಸಿದ ಸುಭಾಷ್ ಚಂದ್ರಬೋಸ್ ಅವರಿಗೆ ಭಾರತೀಯರ ಸಹಕಾರ ಇನ್ನಷ್ಟು ಸಿಕ್ಕಿದ್ದರೆ ದೇಶಕ್ಕೆ ಸ್ವಾತಂತ್ರ್ಯ ಬೇಗ ಸಿಗುತ್ತಿತ್ತು ಎನ್ನುವಂತೆ ಘರ್ಜಿಸಿದ ಭಾರತದ ಹುಲಿ ಎಂದರು.

ಹಿಂದುಳಿದ ವರ್ಗದ ಜಿಲ್ಲಾಧ್ಯಕ್ಷ ಎಸ್.ರಾಮಚಂದ್ರರಾವ್ ಮಾತನಾಡಿ, ಸ್ವಾತಂತ್ರ್ಯ ಹೋರಾಟಕ್ಕಾಗಿ ದೇಶದ ಮೂಲೆ ಮೂಲೆಯಲ್ಲಿಯೂ ಪ್ರತ್ಯೇಕ ಸೇನೆ, ಸೈನಿಕರನ್ನು ಹುಟ್ಟು ಹಾಕಿದ ಸುಭಾಷ್ ಚಂದ್ರ ಬೋಸ್ ಅವರು ಭಾರತೀಯರ ಸ್ವಾಭಿಮಾನದ ಪ್ರತೀಕವಾಗಿ ಇಂದಿಗೂ ಉಳಿದಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ಶಬ್ಬೀರ್ ಅಹ್ಮದ್, ಹಿಂದುಳಿದ ವರ್ಗಗಳ ಜಿಲ್ಲಾ ಗೌರವಾಧ್ಯಕ್ಷ ಎನ್.ಶ್ರೀನಿವಾಸ್, ಜಿಲ್ಲಾ ಉಪಾಧ್ಯಕ್ಷ ಇಂದ್ರ ಕುಮಾರ್.ಡಿ.ಕೆ, ಅಲ್ಪಸಂಖ್ಯಾತ ಘಟಕದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಫೀಕ್ ಅಹಮದ್, ಜಿಲ್ಲಾ ಕಾರ್ಯದರ್ಧ್ಯಕ್ಷ ಗೋವಿಂದರಾಜು, ಯುವ ಘಟಕದ ಜಿಲ್ಲಾ ಉಪಾಧ್ಯಕ್ಷ ಶ್ರೀನಿವಾಸ್.ಎನ್.ವಿ, ಕಾರ್ಮಿಕ ಘಟಕದ ತಾಲೂಕು ಅಧ್ಯಕ್ಷ ಶಿವಣ್ಣ, ತಾಲೂಕು ಅಧ್ಯಕ್ಷ ರಂಗಸ್ವಾಮಯ್ಯ.ಕೆ.ಎಸ್, ತಾಲೂಕು ಗೌರವಾಧ್ಯಕ್ಷ ಗಂಗಾಧರ್.ಜಿ.ಆರ್, ಜಿಲ್ಲಾ ಪದಾಧಿಕಾರಿ ಕೇಶವಮೂರ್ತಿ, ನಾಗರಾಜು, ಹನುಮಂತು, ಕಿರಣ್ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!