ತುಮಕೂರು: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿವಿಧ ಜನಪರ ಯೋಜನೆಗಳ ಪರಿಣಾಮದಿಂದಾಗಿ ನಮಗೆ ಬೇಕಾದಷ್ಟು ಆಹಾರ ಬೆಳೆಯುವಷ್ಟು ನಮ್ಮ ರೈತರು ಶಕ್ತರಾಗಿದ್ದಾರೆ, ರೈತರು ಸಕಾಲಕ್ಕೆ ಮಳೆ ಇಲ್ಲದೆ, ಹವಾಮಾನ ವೈಪರಿತ್ಯದ ನಡುವೆಯೂ ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗದೆ, ಅನೇಕ ಕಷ್ಟ ನಷ್ಟ ಅನುಭವಿಸಿಕೊಂಡು ಬರುತ್ತಿದ್ದಾರೆ, ರೈತರು ಬೆಳೆದ ಬೆಳೆಗೆ ಉತ್ತಮ ಬೆಲೆ ಸಿಗಬೇಕು ಎಂಬುದು ಸರ್ಕಾರದ ಆಶಯವಾಗಿದೆ ಎಂದು ಕೃಷಿ ಮತ್ತು ರೈತರ ಕಲ್ಯಾಣ, ಆಹಾರ ಸಂಸ್ಕರಣಾ, ಕೈಗಾರಿಕೆಗಳ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.
ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ, ನಾಫೆಡ್ ಕರ್ನಾಟಕ, ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ಸಹಯೋಗದಲ್ಲಿ ಏರ್ಪಡಿಸಿದ್ದ ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಉಂಡೆ ಕೊಬ್ಬರಿ ಖರೀದಿ ಕೇಂದ್ರದ ಉದ್ಘಾಟನೆ ನೆರವೇರಿಸಿ ಮಾತನಾಡಿ, ಎಲ್ಲಾ ರಾಜ್ಯಗಳು ಅಭಿವೃದ್ಧಿಯಾದರೆ ಮಾತ್ರ ದೇಶ ಅಭಿವೃದ್ಧಿಯಾಗುತ್ತದೆ, ರೈಲ್ವೆ, ಹೆದ್ದಾರಿ, ಸೇರಿದಂತೆ ಯಾವುದೇ ಯೋಜನೆಯಾದರೂ ಸರಿ ರಾಜ್ಯ ಸರ್ಕಾರಗಳಿಗೆ ಕೇಂದ್ರ ಸರ್ಕಾರದ ಸಹಕಾರ ಇದ್ದೇ ಇರುತ್ತದೆ ಅಭಿವೃದ್ಧಿ ವಿಷಯದಲ್ಲಿ ಕೇಂದ್ರದ ನೆರವು ಸದಾ ಇರುತ್ತದೆ ಎಂದರು.
ಕೇಂದ್ರ ಸರ್ಕಾರವು ಕೊಬ್ಬರಿಗೆ ಬೆಂಬಲ ಬೆಲೆಯಾಗಿ ಪ್ರತಿ ಕ್ವಿಂಟಾಲ್ ಗೆ 12,000 ರೂ. ನಿಗದಿ ಮಾಡಿದ್ದು, ರಾಜ್ಯ ಸರ್ಕಾರ 1,500 ರೂ. ನಿಗದಿ ಮಾಡಿದೆ, ರಾಜ್ಯದ ಎಲ್ಲಾ ಭಾಗಗಳಲ್ಲೂ ಉಂಡೆ ಕೊಬ್ಬರಿ ಖರೀದಿ ಕೇಂದ್ರಗಳನ್ನು ರೈತರ ಅನುಕೂಲಕ್ಕಾಗಿ ತೆರೆಯಲಾಗಿದೆ, ಖರೀದಿ ಕೇಂದ್ರದಲ್ಲಿ ಫೆಬ್ರವರಿಯಿಂದ ಏಪ್ರಿಲ್ ವರೆಗೆ ಒಟ್ಟು 90 ದಿನ ಕೊಬ್ಬರಿ ಖರೀದಿ ಮಾಡಲಾಗುವುದು, ಅಗತ್ಯವಿದ್ದರೆ ಖರೀದಿಯ ಕಾಲಾವಕಾಶ ವಿಸ್ತರಿಸಲಾಗುವುದು, ಕಳೆದ ಬಾರಿ ನಿರೀಕ್ಷೆಯ ಮಟ್ಟದಲ್ಲಿ ಕೊಬ್ಬರಿ ಖರೀದಿ ಆಗಿಲ್ಲ, ಈ ಬಾರಿ ಹೆಚ್ಚು ಖರೀದಿ ಆಗುವ ನಿರೀಕ್ಷೆ ಇದೆ, ರೈತರು ಯಾವುದೇ ಕಾರಣಕ್ಕೂ ಮಧ್ಯವರ್ತಿಗಳಿಗೆ ತಮ್ಮ ಪಹಣಿ ಕೊಡಬಾರದು, ರೈತರೇ ಖುದ್ದಾಗಿ ನೋಂದಣಿ ಮಾಡಿಕೊಳ್ಳಬೇಕು,, ಮಧ್ಯವರ್ತಿಗಳ ಹಾವಳಿ ತಪ್ಪಿಸಿ ರೈತರಿಗೆ ಸರ್ಕಾರದ ಯೋಜನೆ ತಲುಪಿಸಲು ಡಿಬಿಟಿ ಅನುಷ್ಠಾನಗೊಳಿಸಿದೆ, ಜಿಲ್ಲಾಧಿಕಾರಿಗಳು ಮತ್ತು ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು ಈ ಬಗ್ಗೆ ಗಮನ ವಹಿಸಿ ರೈತರಲ್ಲಿ ಜಾಗೃತಿ ಮೂಡಿಸಬೇಕು ಎಂದರು.
ನಮ್ಮ ದೇಶದಲ್ಲಿ ಕೇವಲ ಶೇ.20% ಖಾದ್ಯ ತೈಲ ಉತ್ಪಾದನೆ ಆಗುತ್ತಿದೆ, ಇದರಿಂದ ಹೊರ ದೇಶಗಳಿಂದ ಖಾದ್ಯ ಎಣ್ಣೆ ತರಿಸುತ್ತಿದ್ದೇವೆ, ನಮ್ಮ ರೈತರು ಸಹ ಆಧುನಿಕ ತಾಂತ್ರಿಕತೆ ಬಳಸಿಕೊಂಡು ಸರ್ಕಾರದ ಯೋಜನೆಗಳಲ್ಲಿ ಚಿಕ್ಕ ಚಿಕ್ಕ ಕೈಗಾರಿಕೆ ಸ್ಥಾಪಿಸಿ ಆ ಮೂಲಕ ಕೊಬ್ಬರಿ ಎಣ್ಣೆ, ತೆಂಗಿನ ಹಾಲು, ಇನ್ನೂ ಅನೇಕ ತೆಂಗಿನ ಉತ್ಪನ್ನ ತಯಾರಿಸಿ ಮಾರಾಟ ಮಾಡಬೇಕು, ತೆಂಗಿನ ಚಿಪ್ಪು, ಪುಡಿ ಸೇರಿದಂತೆ ಎಲ್ಲಾ ಉತ್ಪನ್ನಗಳೂ ಉಪಯೋಗಕರವಾಗಿದ್ದು, ವಿದೇಶಗಳಲ್ಲಿ ಇಂತಹ ಉತ್ಪನ್ನಗಳಿಗೆ ಸಾಕಷ್ಟು ಬೇಡಿಕೆ ಇದೆ ಎಂದು ತಿಳಿಸಿದರು.
ಗೃಹ ಸಚಿವ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ಮಾತನಾಡಿ, ಕೃಷಿಗಾಗಿ ರೈತ ತನ್ನೆಲ್ಲಾ ಸಂಪನ್ಮೂಲ ಹಾಕಿ ಬದುಕನ್ನು ಕಟ್ಟಿಕೊಳ್ಳುವ ಪರಿಸ್ಥಿತಿ ಎದುರಾಗಿದೆ, ಜಿಲ್ಲೆಯಲ್ಲಿ ತೆಂಗು ಬೆಳೆಯನ್ನು ಹೆಚ್ಚಾಗಿ ಬೆಳೆಯುವ ರೈತರು ಇದ್ದಾರೆ, ಈ ನಾಡಿನ ಕೊಬ್ಬರಿಗೆ ದೇಶದಾದ್ಯಂತ ಬೇಡಿಕೆ ಹೆಚ್ಚಾಗಿದೆ, ಗುಜರಾತಿನಲ್ಲಿ ಹೆಚ್ಚು ಬೇಡಿಕೆ ಇದೆ, ರಾಜ್ಯದಲ್ಲಿ 60,500 ಸಾವಿರ ಮೆಟ್ರಿಕ್ ಟನ್ ಕೊಬ್ಬರಿ ಉತ್ಪತ್ತಿಯಾಗುತ್ತಿದೆ ಎಂದು ತಿಳಿಸಿದರಲ್ಲದೆ, ಕೇಂದ್ರ ಸರ್ಕಾರವು ಉಂಡೆ ಕೊಬ್ಬರಿಗೆ 15 ಸಾವಿರ ರೂ. ಬೆಂಬಲ ಬೆಲೆ ನೀಡಬೇಕು, ರಾಜ್ಯ ಸರ್ಕಾರದಿಂದ 2 ಸಾವಿರ ರೂ. ಬೆಂಬಲ ಬೆಲೆ ನೀಡುವಂತೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗುವುದು, ಇದರಿಂದ ಕೊಬ್ಬರಿ ಬೆಳೆಗಾರರಿಗೆ ಅನುಕೂಲವಾಗುತ್ತದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರಿಗೆ ತಿಳಿಸಿದರು.
ಮುಖ್ಯ ಅತಿಥಿಗಳಾಗಿದ್ದ ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿಯ ಅಧ್ಯಕ್ಷರು ಹಾಗೂ ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ, ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಎಸ್. ಪಾಟೀಲ್ ಮಾತನಾಡಿ, ದೇಶದಲ್ಲಿ ಅತೀ ಹೆಚ್ಚು ಕೊಬ್ಬರಿ ಬೆಳೆಯುವ ರಾಜ್ಯಗಳಲ್ಲಿ ನಮ್ಮ ರಾಜ್ಯ ಎರಡನೇ ಸ್ಥಾನದಲ್ಲಿದೆ, ಚಪ್ಪಲಿ, ಬಟ್ಟೆ, ಹೀಗೆ ಎಲ್ಲಾ ಉತ್ಪನಗಳಿಗೂ ನಿಖರ ಬೆಲೆ ಇದೆ, ಆದರೆ ರೈತ ಬೆಳೆದ ಬೆಳೆಗಳಿಗೆ ನಿಗದಿತ ಬೆಲೆ ಇಲ್ಲ, ಸರ್ಕಾರಗಳು ರೈತರು ಬೆಳೆದ ಬೆಳೆಗೆ ನಿರ್ಧಿಷ್ಟ ಬೆಲೆ ನಿಗದಿ ಪಡಿಸಬೇಕು, ಸ್ಥಿರವಾದ ಬೆಲೆ ಬಿಟ್ಟು ರೈತರಿಗೆ ನೀಡಿದರೆ ಆತ ಬೇರೆ ಏನು ಕೇಳುವುದಿಲ್ಲ ಎಂದು ತಿಳಿಸಿದರು.
ಸಂಸದ ಜಿ.ಎಸ್.ಬಸವರಾಜು, ತುಮಕೂರು ಗ್ರಾಮಾಂತರ ಶಾಸಕ ಬಿ.ಸುರೇಶ್ ಗೌಡ, ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್, ಮಹಾಪೌರರಾದ ಪ್ರಭಾವತಿ.ಎಂ, ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಲ್ಲಾ ಪಂಚಾಯತ್ ಸಿಇಒ ಪ್ರಭು.ಜಿ, ಕೃಷಿ ಮಾರಾಟ ಇಲಾಖೆ ಹಾಗೂ ಕೃಷಿ ಮಾರಾಟ ಮಂಡಳಿಯ ನಿರ್ದೇಶಕ ಗಂಗಾಧರ ಸ್ವಾಮಿ, ಪ್ರಧಾನ ವ್ಯವಸ್ಥಾಪಕ ಸಿ.ಪಿಳ್ಳೇಗೌಡ, ನಾಫೆಡ್ ನಿರ್ದೇಶಕ ಗುರುನಾಥ ರೆಡ್ಡಿ ಪೋ ಪಾಟೀಲ ಇತರರು ಹಾಜರಿದ್ದರು.
Comments are closed.