ತುಮಕೂರು: ಶಿವಕುಮಾರ ಮಹಾ ಸ್ವಾಮೀಜಿಗಳ ತ್ರಿವಿಧ ದಾಸೋಹಕ್ಕೆ ಚತುರ್ವಿಧ ಸೇವೆಯಾಗಿ ಆರೋಗ್ಯ ಸೇವೆಯೂ ಸೇರಿಕೊಂಡಿರುವುದು ಬಡವರ ದೀನ ದಲಿತರ ಪಾಲಿಗೆ ವರವಾಗಿದೆ ಎಂದು ಕಾರದೇಶ್ವರ ಮಠದ ಕಾರದ ವೀರಬಸವ ಸ್ವಾಮೀಜಿ ತಿಳಿಸಿದರು.
ತುಮಕೂರು ಗ್ರಾಮಾಂತರ ತಾಲೂಕಿನ ಬೆಳ್ಳಾವಿಯಲ್ಲಿ ಡಾ.ಎಸ್.ಪರಮೇಶ್ ಹಿತೈಷಿಗಳ ಬಳಗ ಹಾಗೂ ಸಿದ್ಧಗಂಗಾ ವೈದ್ಯಕೀಯ ಮಹಾ ವಿದ್ಯಾಲಯ ಹಾಗೂ ಸಂಶೋಧನಾ ಸಂಸ್ಥೆ ವತಿಯಿಂದ ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಮಾತನಾಡಿ ಸ್ವಾಮೀಜಿಯವರ ಅತಃಕರಣ ಅವರ ವಾತ್ಸಲ್ಯ ಸಿದ್ಧಗಂಗಾ ಆಸ್ಪತ್ರೆ ವೈದ್ಯರಲ್ಲಿಯೂ ನಾವು ಕಾಣುತ್ತಿದ್ದೇವೆ, ಹಳ್ಳಿ ಹಳ್ಳಿಗಳನ್ನು ಸುತ್ತಿ ಆರೋಗ್ಯ ಕಾಳಜಿ ಮಾಡುತ್ತಿರುವ ಉಚಿತ ಆರೋಗ್ಯ ಸೇವೆ ಸಾರ್ವಜನಿಕರು ಉಪಯೋಗಿಸಿಕೊಳ್ಳಬೇಕು ಎಂದರು.
ಸಿದ್ಧಗಂಗಾ ಆಸ್ಪತ್ರೆ ನಿರ್ದೇಶಕ ಡಾ.ಎಸ್.ಪರಮೇಶ್ ಮಾತನಾಡಿ ಸಿದ್ಧಗಂಗಾ ವೈದ್ಯಕೀಯ ಮಹಾ ವಿದ್ಯಾಲಯ ಇದೀಗ ಶಿವಕುಮಾರ ಸ್ವಾಮೀಜಿಗಳ ಹೆಸರಲ್ಲಿ ನೂತನ ಆಸ್ಪತ್ರೆ ಬ್ಲಾಕ್ ತೆರೆದಿದ್ದು 24 ಗಂಟೆಗಳ ಕಾಲ ಸ್ಪೆಷಾಲಿಟಿ ವಿಭಾಗದ ಎಲ್ಲಾ ಸೇವೆಗಳು ಉಚಿತವಾಗಿ ದೊರೆಯುತ್ತಿವೆ, ವೈದ್ಯರ ಸಂದರ್ಶನ, ಹಾಸಿಗೆ ಹಾಗೂ ಉಚಿತ ಆಹಾರ ಕೂಡ ನೀಡುತ್ತಿದ್ದು ನುರಿತ ವೈದ್ಯರ ತಂಡವೇ ಕಾರ್ಯ ನಿರ್ವಹಿಸುತ್ತಿದೆ, ಗ್ರಾಮೀಣ ಭಾಗದ ಜನರು ದುಬಾರಿ ದರ ಎಂದು ಆತಂಕ ಪಡದೇ ಭರವಸೆಯಿಟ್ಟು ಆಸ್ಪತ್ರೆಗೆ ಆಗಮಿಸಿ ಚಿಕಿತ್ಸೆ ಪಡೆಯಬೇಕು ಎಂದು ಮನವಿ ಮಾಡಿದರು.
ಶಿಬಿರದಲ್ಲಿ 500 ಕ್ಕೂ ಹೆಚ್ಚು ಜನರಿಗೆ 15 ಕ್ಕೂ ಹೆಚ್ಚು ವಿಭಾಗದಲ್ಲಿ ಉಚಿತ ಆರೋಗ್ಯ ತಪಾಸಣೆ ನಡೆಸಲಾಯಿತು. ಅಗತ್ಯವುಳ್ಳವರಿಗೆ ಕನ್ನಡಕ ಕೂಡ ವಿತರಿಸಲಾಯಿತು. ಪಿಡಿಓ ಓಬಳಯ್ಯ, ಗ್ರಾಮ ಪಂಚಾಯ್ತಿ ಅಧ್ಯಕ್ಷ ಮಲ್ಲಿಕಾರ್ಜುನ್, ಸಬ್ ಇನ್ಸ್ಪೆಕ್ಟರ್ ಭಾಗ್ಯಲಕ್ಷ್ಮಿ, ವೈದ್ಯರಾದ ಡಾ.ಅನುಪಮಾ, ಡಾ.ಶುಭಾಂಗಿ, ಡಾ.ಸುಮುಖ, ಡಾ.ಚೇತನ್, ಡಾ.ಮೋನಿಕಾ, ಡಾ.ಪ್ರಿಯಾ, ಡಾ.ಮಧು ಹಾಗೂ ಆಸ್ಪತ್ರೆ ಪಿಆರ್ಓ ಕಾಂತರಾಜು, ಆಶಾ ಕಾರ್ಯಕರ್ತೆಯರು ಹಾಗೂ ಗ್ರಾಪಂ ಸದಸ್ಯರು, ಸಿದ್ಧಗಂಗಾ ಆಸ್ಪತ್ರೆ ಕಾರ್ಯಾಚರಣೆ ಮುಖ್ಯಸ್ಥೆ ಡಾ.ರೂಪ ಈಶ್ವರ್ ಹಾಜರಿದ್ದರು.
Comments are closed.