ತುಮಕೂರು: ಭಾರತದ ಸಂವಿಧಾನ ದೇಶದ ಪ್ರತಿಯೊಬ್ಬ ಪ್ರಜೆಗೆ ಚುನಾವಣೆಯಲ್ಲಿ ಸಕ್ರಿಯವಾಗಿ ಭಾಗವಹಿಸಲು ಮತ್ತು ಮತದಾನ ಮಾಡಲು ಅಗತ್ಯ ಸೌಲಭ್ಯ ಒದಗಿಸಿದ್ದು, ಅದರಂತೆ 18 ವರ್ಷ ತುಂಬಿದ ಪ್ರತಿಯೊಬ್ಬ ಪ್ರಜೆಯೂ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ನೋಂದಾಯಿಸಿ ಕೊಳ್ಳಬೇಕಾದದ್ದು ಆ ಪ್ರಜೆಯ ಹಕ್ಕು ಮತ್ತು ಕರ್ತವ್ಯವಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಬಿ.ಜಯಂತ್ ಕುಮಾರ್ ತಿಳಿಸಿದರು.
ಭಾರತ ಚುನಾವಣಾ ಆಯೋಗ, ಜಿಲ್ಲಾಡಳಿತ, ಜಿಲ್ಲಾ ಸ್ವೀಪ್ ಸಮಿತಿ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ವತಿಯಿಂದ ರಾಷ್ಟ್ರೀಯ ಮತದಾರರ ದಿನಾಚರಣೆ ಅಂಗವಾಗಿ ಡಾ.ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಭಾರತ ಚುನಾವಣಾ ಆಯೋಗವು 25-1- 1950ರಲ್ಲಿ ಅಸ್ತಿತ್ವಕ್ಕೆ ಬಂದಿದ್ದು, ಇದರ ವಜ್ರ ಮಹೋತ್ಸವ ಅಂಗವಾಗಿ ರಾಷ್ಟ್ರೀಯ ಮತದಾರರ ದಿನವನ್ನಾಗಿ ಆಚರಿಸಲಾಗುತ್ತಿದೆ, ಅದರಂತೆ 25-1- 2011 ರಿಂದ ಪ್ರತಿ ವರ್ಷ ರಾಷ್ಟ್ರೀಯ ಮತದಾರರ ದಿನಾಚರಣೆ ಆಚರಿಸಿಕೊಂಡು ಬರಲಾಗುತ್ತಿದೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಶುಭ ಕಲ್ಯಾಣ್ ಮಾತನಾಡಿ, ಪ್ರಜಾ ಪ್ರಭುತ್ವ ವ್ಯವಸ್ಥೆಗೆ ಇಡೀ ವಿಶ್ವದಲ್ಲಿ ಮನ್ನಣೆ ಇದೆ, ಅದರಲ್ಲಿ ಪ್ರಮುಖವಾಗಿ ಭಾರತದ ಸಂವಿಧಾನ ವಿಶ್ವದಲ್ಲಿಯೇ ಶ್ರೇಷ್ಠ ಸಂವಿಧಾನವಾಗಿದೆ, ನಮ್ಮ ದೇಶದ ಭವಿಷ್ಯ ಯುವ ಜನತೆ ಕೈಯಲ್ಲಿ ಇದೆ, ಆದುದರಿಂದ ಯುವ ಜನತೆ ಚುನಾವಣೆಯಲ್ಲಿ ತಪ್ಪದೇ ಭಾಗವಹಿಸಿ ಮತದಾನ ಮಾಡಬೇಕು, ವೃದ್ಧರಿಗೆ ಮನೆಯಿಂದಲೇ ಚುನಾವಣೆಯಲ್ಲಿ ಮತ ಚಲಾಯಿಸಲು ಅವಕಾಶ ಮಾಡಿಕೊಡಲಾಗಿದೆ, ಅಪ್ಲಿಕೇಶನ್ ಮೂಲಕ ಭ್ರಷ್ಟಾಚಾರ, ಲಂಚಗಳ ಬಗ್ಗೆ ದೂರು ದಾಖಲೆ ಮಾಡಿದರೆ ಕೆಲವೇ ಕ್ಷಣಗಳಲ್ಲಿ ಸೂಕ್ತ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.
ಜಿಲ್ಲಾ ಪಂಚಾಯತ್, ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಜಿ.ಪ್ರಭು ಮಾತನಾಡಿ, ಭಾರತದ ಚುನಾವಣಾ ಆಯೋಗ ಸಂವಿಧಾನಾತ್ಮಕ ಸಂಸ್ಥೆ ಎಂದು ಕರೆಯುತ್ತೇವೆ, ನಮ್ಮ ದೇಶದ ವ್ಯವಸ್ಥೆ ಬಗ್ಗೆ ನಮಗೆ ಹೆಮ್ಮೆ ಇರಬೇಕು, 14ನೇ ರಾಷ್ಟ್ರೀಯ ಮತದಾರರ ದಿನಾಚರಣೆ ಆಚರಿಸುತಿದ್ದೇವೆ, ಆತ್ಮವಿಶ್ವಾಸದಿಂದ ನಿಮ್ಮ ಭವ್ಯ ಭವಿಷ್ಯಕ್ಕಾಗಿ ಮತದಾನ ಮಾಡಿ, ಈ ವರ್ಷ ಮತದಾನಕ್ಕಿಂತ ಇನ್ನೊಂದಿಲ್ಲ, ನಾನು ಖಚಿತವಾಗಿ ಮತದಾನ ಮಾಡುವೆ ಎಂಬ ಘೋಷ ವಾಕ್ಯವಾಗಿದೆ, ನಮ್ಮ ದೇಶದ ಸದೃಢ ಮತದಾನ ವ್ಯವಸ್ಥೆಯನ್ನು ಸಾಮೂಹಿಕ ಮತದಾನದಲ್ಲಿ ನಾವು ಕಾಣಬಹುದು, ದೇಶದ ಎಲ್ಲಾ ಮತಗಳಿಗೂ ಒಂದೇ ಮೌಲ್ಯ ಇದೆ, 2011ರಲ್ಲಿ ಭಾರತ ಸಂವಿಧಾನವು ಯುವ ಮತದಾನರಿಗೆ ಅರಿವು ಜಾಗೃತಿ ಮೂಡಿಸಿ ಇವತ್ತಿಗೆ 14 ವಷರ್ ಪೂರ್ಣಗೊಂಡಿದೆ, ವಿಶ್ವದಲ್ಲಿ ಶೇ.50% ಆಡಳಿತ ದೇಶಗಳು ಪ್ರಜಾಪ್ರಭುತ್ವವನ್ನು ಆಯ್ಕೆ ಮಾಡಿಕೊಂಡಿವೆ, ಜಿಲ್ಲೆಯಲ್ಲಿ ಮತದಾರರ ಸಂಖ್ಯೆ 22,67,153 ಇದ್ದು, 41,658 ಯುವ ಮತದಾರರು ಇದ್ದಾರೆ ಎಂದು ತಿಳಿಸಿದರು.
ಈ ಸಂದರ್ಭ ನೂತನವಾಗಿ ಸೇರ್ಪಡೆಗೊಂಡ ನೋಂದಾಯಿತ ಗುರುತಿನ ಚೀಟಿ ವಿತರಣೆ ಮಾಡಲಾಯಿತು, ಜಿಲ್ಲಾ ಮಟ್ಟದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಜಿಲ್ಲಾಡಳಿತ ವತಿಯಿಂದ ಬಹುಮಾನವನ್ನು ವಿದ್ಯಾರ್ಥಿಗಳಿಗೆ ನೀಡಿ ಪ್ರೋತ್ಸಾಹಿಸಲಾಯಿತು, ಉತ್ತಮ ಸೇವೆ ಸಲ್ಲಿಸಿರುವ ಶಿಕ್ಷಕರಿಗೆ, ಅಂಗನವಾಡಿ ಕಾರ್ಯಕರ್ತರಿಗೆ ಪ್ರಶಸ್ತಿ ಪ್ರಮಾಣ ಪತ್ರಗಳನ್ನು ನೀಡಲಾಯಿತು.
ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ನೂರುನ್ನೀಸ, ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ. ಕರಾಳೆ, ಉಪ ವಿಭಾಗಾಧಿಕಾರಿ ಗೌರವ್ ಕುಮಾರ್ ಶೆಟ್ಟಿ ಹಾಗೂ ಜಿಲ್ಲೆಯ ಪದಾಧಿಕಾರಿಗಳು, ಶಿಕ್ಷಕರು, ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.
Comments are closed.