ತುಮಕೂರು: ಗುಬ್ಬಿ ತಾಲೂಕು ನಿಟ್ಟೂರು ಹೋಬಳಿ ಹಂಡನಹಳ್ಳಿ ಗ್ರಾಮದ ಸರ್ವೆ93/10 ಮತ್ತು 93/11ಎ1 ಹಾಗೂ ಇತರೆ ಸರ್ವೆಗಳಲ್ಲಿ ದಲಿತರ ಕಾಲೋನಿಗೆಂದು 1964ರಲ್ಲಿ ವಶಪಡಿಸಿಕೊಂಡ ಭೂಮಿಯನ್ನು ಗ್ರಾಮದ ಕೆಲ ಸವರ್ಣಿಯರು ಒತ್ತುವರಿ ಮಾಡಿ ದಲಿತರಿಗೆ ತೊಂದರೆ ನೀಡುತ್ತಿದ್ದು, ಜಿಲ್ಲಾಡಳಿತ ಸದರಿ ಜಾಗವನ್ನು ಕೂಲಂಕುಷವಾಗಿ ಪರಿಶೀಲಿಸಿ, ಅಗತ್ಯ ಕ್ರಮ ಕೈಗೊಳ್ಳದಿದ್ದರೆ ಜಿಲ್ಲಾಧಿಕಾರಿಗಳ ಕಚೇರಿ ಎದುರು ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಕರ್ನಾಟಕ ಮಾದಿಗ ಸಮಾಜ ಸಂಘಟನೆ ರಾಜ್ಯಾಧ್ಯಕ್ಷ ಮಂಜುನಾಥ್ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 1964 ರಲ್ಲಿಯೇ ಹಂಡನಹಳ್ಳಿ ದಲಿತರಿಗಾಗಿ ಗ್ರಾಮದ ಸರ್ವೆ ನಂ.93/10ರಲ್ಲಿ 01-03- 00 ಮತ್ತು 93/ 11ಎ1ರಲ್ಲಿ 00-30- 00 ಗುಂಟೆ ಸೇರಿದಂತೆ ಗ್ರಾಮದ ವಿವಿಧ ಸರ್ವೆನಂಬರ್ ಗಳಿಂದ ಒಟ್ಟು 04-02-00 ಎಕರೆ ಭೂಮಿ ಮೀಸಲಿರಿಸಿತ್ತು, ಇದರಲ್ಲಿ ಸವರ್ಣಿಯರಿಗೆ ಸೇರಿದ 01-03- 00 ಮತ್ತು 00- 30- 00 ಭೂಮಿ ಸ್ವಾಧೀನ ಪಡಿಸಿಕೊಂಡು, ಕ್ರಮವಾಗಿ 3800 ಮತ್ತು 2800 ರೂ. ಪರಿಹಾರ ನೀಡಿತ್ತು, ಸದರಿ ಜಾಗದಲ್ಲಿ ದಲಿತರು 1.03 ಎಕರೆ ಭೂಮಿ ಮಾತ್ರ ಬಳಕೆ ಮಾಡಿಕೊಂಡು ಉಳಿದ ಜಮೀನಿನನ್ನು ಭವಿಷ್ಯದ ದೃಷ್ಟಿಯಿಂದ ಹಾಗೆಯೇ ಉಳಿಸಿಕೊಂಡಿದ್ದರು, ಆದರೆ ಜಮೀನನ್ನು ಸರಕಾರಕ್ಕೆ ಮಾರಾಟ ಮಾಡಿದವರೇ ದಲಿತರು ಮನೆ ಕಟ್ಟಿಕೊಂಡು ಉಳಿದ ಜಮೀನನ್ನು ಒತ್ತುವರಿ ಮಾಡಿಕೊಂಡು, ಪ್ರಶ್ನಿದ ದಲಿತರ ಮೇಲೆ ದೌರ್ಜನ್ಯ ಎಸಗುತ್ತಿದ್ದಾರೆ ಎಂದು ಆರೋಪಿಸಿದರು.
ದಲಿತರಿಗೆ ಮೀಸಲಿಟ್ಟ ಜಾಗ ಒತ್ತುವರಿ ಮಾಡಿಕೊಂಡು ಮಣ್ಣು ತುಂಬಿಸಿ ತೋಟ, ತುಡಿಕೆ ಮಾಡಿದ ಪರಿಣಾಮ 2019 ರಲ್ಲಿ ಜಿಲ್ಲೆಯಲ್ಲಿ ಸುರಿದ ಬಾರಿ ಮಳೆಯಿಂದ ದಲಿತರ ಮನೆಗಳಿಗೆ ನೀರು ನುಗ್ಗಿ, ನಾಲ್ಕಾರು ಮನೆಗಳು ಬಿದ್ದು ಹೋಗಿದ್ದು, ಈ ವೇಳೆ ಜಿಲ್ಲಾಡಳಿತ ಸ್ಥಳ ಪರಿಶೀಲನೆ ನಡೆಸಿ, ಬಿದ್ದ ಮನೆಗಳಿಗೆ ಪರಿಹಾರ ನೀಡಿದ್ದಲ್ಲದೆ, ಒತ್ತುವರಿ ಜಾಗ ತೆರವುಗೊಳಿಸುವಂತೆ 02-11- 2019 ರಲ್ಲಿ ಜಿಲ್ಲಾಧಿಕಾರಿ ಉಪ ವಿಭಾಗಾಧಿಕಾರಿಗಳಿಗೆ ಆದೇಶ ಮಾಡಿದ್ದರು, ಆದರೆ ಅಧಿಕಾರಿಗಳು ಸರ್ವೆಗೆ ಹೋದಾಗ ವಿವಾದಿತ ಭೂಮಿಯ ಸರ್ವೆಗೆ ಅಡ್ಡಿ ಪಡಿಸಿದ್ದು, ಈ ಬಗ್ಗೆ ಕೂಡಲೇ ಸವರ್ಣಿಯರ ವಿರುದ್ಧ ದೂರು ದಾಖಲಾಗಿತ್ತು, ಆದರೆ ಯಾವುದರಲ್ಲಿಯೂ ದಲಿತರಿಗೆ ನ್ಯಾಯ ಸಿಕ್ಕಿಲ್ಲ, ಹಾಗಾಗಿ ಜಿಲ್ಲಾಡಳಿತ ಕೂಡಲೇ ಕ್ರಮ ಕೈಗೊಂಡು ಒತ್ತುವರಿಯಾಗಿರುವ ದಲಿತ ಕಾಲೋನಿಯ ಜಾಗ ಬಿಡಿಸಿಕೊಡುವುದಲ್ಲದೆ, ದೌರ್ಜನ್ಯ ನಡೆಸುತ್ತಿರುವ ಕೆಲವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ಮಂಜುನಾಥ್ ಆಗ್ರಹಿಸಿದರು.
ಜಿಲ್ಲಾಧ್ಯಕ್ಷ ಹೆಚ್.ಬಿ.ಮಂಜುನಾಥ್ ಮಾತನಾಡಿ, ಹಂಡನಹಳ್ಳಿ ಸರ್ವೆ ನಂ.93/10 ಮತ್ತು 93/11ಎ1ರಲ್ಲಿ 4.02 ಎಕರೆ ಜಮೀನಿನನ್ನು ದಲಿತರ ಕಾಲೋನಿಗಾಗಿ ವಶಪಡಿಸಿಕೊಂಡಿರುವ ಬಗ್ಗೆ 9-02-1961ರಲ್ಲಿ ಮೈಸೂರು ಗೆಜೆಟೀಯರ್ ನಲ್ಲಿ ಹೊರಡಿಸಲಾಗಿದೆ, ಸುಮಾರು 60 ಕುಟುಂಬ ಅಂದಿನಿಂದಲೂ ಮನೆ ನಿರ್ಮಾಣ ಮಾಡಿಕೊಂಡು ಬದುಕು ನಡೆಸುತ್ತಿವೆ, ಆದರೆ ದಲಿತರಿಗೆ ಮೀಸಲಿಟ್ಟ ಜಾಗದಲ್ಲಿಯೇ ಕೆಲ ಪ್ರಭಾವಿಗಳು ತೆಂಗು ಇನ್ನಿತರ ಗಿಡ ಹಾಕಿಕೊಂಡು ಕೇಳಲು ಹೋದವರೆ ಮೇಲೆ ದೌರ್ಜನ್ಯ ಎಸಗುತಿದ್ದಾರೆ, ಈ ಬಗ್ಗೆ ಹಲವು ದೂರು ಚೇಳೂರು ಪೊಲೀಸ್ ಠಾಣೆಯಲ್ಲಿ ಮತ್ತು ಜಿಲ್ಲಾಡಳಿತಕ್ಕೆ ಸಲ್ಲಿಕೆಯಾಗಿದ್ದರೂ ಸೂಕ್ತ ಕ್ರಮ ವಹಿಸದ ಕಾರಣ ಪದೇ ಪದೇ ದಲಿತರ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆ, ಹಾಗಾಗಿ ಜಿಲ್ಲಾಡಳಿತ ಅಗತ್ಯ ಕ್ರಮ ವಹಿಸಿ, ದಲಿತರಿಗೆ ಆಗುತ್ತಿರುವ ಕಿರುಕುಳ ತಪ್ಪಿಸಬೇಕೆಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ವಿವಿಧ ದಲಿತಪರ ಸಂಘಟನೆಗಳ ಮುಖಂಡ ಚಂದ್ರಣ್ಣ, ಅಂಬೇಡ್ಕರ್ ದಂಡು ಸಂಘಟನೆಯ ಜಿಲ್ಲಾಧ್ಯಕ್ಷ ಕುಮಾರ್, ಕರ್ನಾಟಕ ಮಾದಿಗ ಸಮಾಜ ಸಂಘಟನೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರು ಪ್ರಸಾದ್, ಅಂಬೇಡ್ಕರ್ ಸೇನೆಯ ಕೆಂಪರಾಜು, ವೆಂಕಟೇಶ್ ಇತರರು ಇದ್ದರು.
Comments are closed.