ಕುಣಿಗಲ್: ಸಂವಿಧಾನ ಅಳವಡಿಸಿಕೊಂಡು 75 ವರ್ಷ ಕಳೆಯುತ್ತಾ ಬಂದರೂ ನಿರುದ್ಯೋಗ, ಬಾಲ್ಯ ವಿವಾಹ, ಅನರಕ್ಷತೆ, ಬಡತನ ನಿರ್ಮೂಲನೆ ಆಗಿಲ್ಲ ಸಂವಿಧಾನದ ಆಶಯದಂತೆ ಮುಂದಿನ ದಿನಗಳಲ್ಲಿ ಈ ಸಮಸ್ಯೆ ನಿರ್ಮೂಲನೆ ನಿಟ್ಟಿನಲ್ಲಿ ಭಾರತೀಯರು ಸಂಘಟಿತರಾಗಿ ಶ್ರಮಿಸಬೇಕೆಂದು ಶಾಸಕ ಡಾ.ರಂಗನಾಥ ಹೇಳಿದರು.
ಪಟ್ಟಣದ ಜಿಕೆಬಿಎಂಎಸ್ ಮೈದಾನದಲ್ಲಿ ತಾಲೂಕು ಆಡಳಿತ ಹಮ್ಮಿಕೊಂಡಿದ್ದ 75ನೇ ಗಣರಾಜ್ಯೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಸಂವಿಧಾನ ಪೀಠಿಕೆ ವಾಚನ ಮಾಡಿ ಮಾತನಾಡಿ, ದೇಶ ಸ್ವಾತಂತ್ರಗೊಂಡ ನಂತರ ಎರಡುವರೆ ವರ್ಷಗಳ ಕಾಲ ಹಲವು ಮಹನೀಯರ ಶ್ರಮದಿಂದ ಸದೃಢ ಭಾರತ ನಿರ್ಮಾಣಕ್ಕೆ ಸಂವಿಧಾನ ರಚಿಸಿ ಅರ್ಪಿಸಿಕೊಳ್ಳಲಾಯಿತು, ಆದರೂ ಕೆಲ ಸಮಸ್ಯೆ ದೇಶವನ್ನು ಕಾಡುತ್ತಿವೆ, ಸಂವಿಧಾನದ ಆಶಯದಂತೆ ಜಾತಿ, ವರ್ಗ, ಧರ್ಮ, ವರ್ಣ ರಹಿತವಾಗಿ ಭಾರತೀಯರೆಲ್ಲರೂ ಒಂದೆ ಎಂಬ ಮನೋಭಾವದಿಂದ ಎಲ್ಲರಿಗೂ ಸಮಾನ ಹಕ್ಕು, ಸಮಾನ ಅವಕಾಶಗಳಿವೆ ಎಂದು ಮನಗಂಡು ಸದೃಢ, ಸಮೃದ್ಧ ಭಾರತ ನಿರ್ಮಾಣಕ್ಕೆ ಶ್ರಮಿಸಬೇಕೆಂದರು.
ಧ್ವಜಾರೋಹಣ ನೆರವೇರಿಸಿದ ತಹಶೀಲ್ದಾರ್ ವಿಶ್ವನಾಥ್ ಮಾತನಾಡಿ, ಹಲವು ಮಹನೀಯರ ಸತತ ಶ್ರಮದ ಫಲವಾಗಿ ಇಡೀ ವಿಶ್ವದಲ್ಲೆ ಉತ್ಕೃಷ್ಟ ಸಂವಿಧಾನ ನಮ್ಮ ದೇಶದ್ದಾಗಿದೆ, ಮೂಲಭೂತ ಹಕ್ಕುಗಳನ್ನು ನೀಡಿದ ಸಂವಿಧಾನ ಮೂಲಭೂತ ಕರ್ತವ್ಯಗಳನ್ನು ನಾಗರಿಕರಿಗೆ ನೀಡಿದೆ, ಪ್ರಸ್ತುತ ಜನರಲ್ಲಿ ಸಂವಿಧಾನದ ಆಶಯದ ಬಗ್ಗೆ ಅರಿವು ಮೂಡಿಸಲು ಸಂವಿಧಾನ ಜಾಗೃತಿ ಜಾಥಾ ಫೆಬ್ರವರಿ ಎರಡನೇ ತಾರೀಕಿನಂದು ತಾಲೂಕಿನಲ್ಲಿ ನಡೆಯಲಿದ್ದು ಎಲ್ಲರೂ ಜಾಥಾದಲ್ಲಿ ಪಾಲ್ಗೊಂಡು ಜಾಥ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.
ವಿವಿಧ ರಂಗಗಳಲ್ಲಿ ಸೇವೆ ಸಲ್ಲಿಸಿದವರನ್ನು ಸನ್ಮಾನಿಸಲಾಯಿತು, ಸಂತ ರೀತಮ್ಮನ ಶಾಲೆಯ ಮಕ್ಕಳು ದೇಶದ ಒಕ್ಕೂಟ ವ್ಯವಸ್ಥೆ ರಚನೆ ಬಗ್ಗೆ ನೃತ್ಯರೂಪಕ ಪ್ರದರ್ಶಿಸಿದರೆ, ಜಿಕೆಬಿಎಂಎಸ್ ಶಾಲಾ ಮಕ್ಕಳು ಪರಿಸರ ಸಂರಕ್ಷಣೆಯ ಬಗ್ಗೆ ನೃತ್ಯರೂಪಕ ಪ್ರದರ್ಶಿಸಿ ಮೆಚ್ಚುಗೆಗೆ ಪಾತ್ರರಾದರು. ತಾಪಂ ಇಒ ಜೋಸೆಫ್, ಡಿವೈಎಸ್ಪಿ ಲಕ್ಷ್ಮೀಕಾಂತ, ಸಿಪಿಐಗಳಾದ ನವೀನಗೌಡ, ಎಂ.ನಾಯಕ್, ಬಿಇಒ ಬೋರೇಗೌಡ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು, ಪುರಸಭೆ ಸದಸ್ಯರು ಉಪಸ್ಥಿತರಿದ್ದು ಸರ್ಕಾರದ ಐದು ಗ್ಯಾರಂಟಿಗಳಿಗೆ ಸಂಬಂಧಿಸಿದಂತೆ ಸ್ಥಬ್ದಚಿತ್ರ ಪ್ರದರ್ಶನ ಆಯೋಜಿಸಲಾಗಿತ್ತು.
Comments are closed.