ವಿವಿಗಳಲ್ಲಿ ಮೂಲ ಸೌಕರ್ಯಕ್ಕೆ ಆದ್ಯತೆ ಸಿಗಲಿ

61

Get real time updates directly on you device, subscribe now.


ತುಮಕೂರು: ವಿಶ್ವ ವಿದ್ಯಾಲಯಗಳ ಮೂಲ ಸೌಕರ್ಯಗಳ ಅಭಿವೃದ್ಧಿ ಸರ್ಕಾರದ ಆದ್ಯತೆಯಾಗಬೇಕು ಎಂದು ಕರ್ನಾಟಕ ವಿಧಾನ ಪರಿಷತ್ತಿನ ಮಾಜಿ ಸಭಾಧ್ಯಕ್ಷವಿ.ಆರ್.ಸುದರ್ಶನ್ ತಿಳಿಸಿದರು.
ತುಮಕೂರು ವಿಶ್ವ ವಿದ್ಯಾಲಯ ಆವರಣದಲ್ಲಿ ಆಯೋಜಿಸಿದ್ದ 75ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ಪ್ರಸ್ತುತ ಇರುವಂತಹ ವಿಶ್ವ ವಿದ್ಯಾಲಯಗಳ ಮೇಲೆ ಗಮನ ವಹಿಸಿ ಮೂಲಭೂತ ಸೌಕರ್ಯ ಕಲ್ಪಿಸಿ, ಸಂಶೋಧನೆ, ಅಭಿವೃದ್ಧಿಗೆ ಒತ್ತು ನೀಡಿದರೆ ಉನ್ನತ ಶಿಕ್ಷಣದ ಗುಣಮಟ್ಟ ಹೆಚ್ಚಾಗುತ್ತದೆ ಎಂದರು.
ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಉನ್ನತ ಶಿಕ್ಷಣಕ್ಕೆ ತನ್ನದೇ ಆದ ಗೌರವವಿದೆ, ಗುಣಮಟ್ಟದ ಪದವೀಧರರನ್ನು ಹೊರ ತರುವ ಕಾರ್ಯ ವಿಶ್ವ ವಿದ್ಯಾಲಯಗಳದ್ದಾಗಬೇಕು, ದೇಶದ ಅಭಿವೃದ್ಧಿಗೆ ಪೂರಕವಾದ ಕೆಲಸವಿದು, ಸಂವಿಧಾನದ ಆಶಯವೂ ಹೌದು ಎಂದರು.

ಶಿಕ್ಷಣ ಕ್ಷೇತ್ರದ ಪಾತ್ರ ಮಹತ್ವದ್ದು, ವಿದ್ಯಾರ್ಥಿಗಳಿಗೆ ಸಂವಿಧಾನದ ಅರಿವು ಮೂಡಿಸಬೇಕು, ದೇಶದ ಏಕತೆ ಮತ್ತು ಪ್ರಗತಿಗಾಗಿ ಸಂವಿಧಾನವಿರುವುದು, ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಕ್ಷತೆಯ 14 ಪ್ರಮುಖರ ಸಮಿತಿಯಲ್ಲಿ 2 ವರ್ಷ 11 ತಿಂಗಳು 18 ದಿನಗಳಲ್ಲಿ ತಯಾರಾದ ಆಸಕ್ತಿ, ಶ್ರದ್ಧೆ, ದೂರದೃಷ್ಟಿಯುಳ್ಳ ಉತ್ಕೃಷ್ಟವಾದ ಬಹುದೊಡ್ಡ ಲಿಖಿತ ಸಂವಿಧಾನ ನಮ್ಮದು, ಸಾಂಸ್ಕೃತಿಕ ನಾಯಕ ಬಸವಣ್ಣಅವರ 12ನೇ ಶತಮಾನದ ಕಲ್ಪನೆಯೇ ನಮ್ಮ ಸಂವಿಧಾನವಾಗಿದೆ ಎಂದು ತಿಳಿಸಿದರು.
ಆಡಳಿತಾತ್ಮಕ ಮತ್ತು ಜನರ ಹಿತದೃಷ್ಟಿಯಿಂದ ಮಧುಗಿರಿಯನ್ನು ಪ್ರತ್ಯೇಕ ಜಿಲ್ಲೆಯನ್ನಾಗಿ ಘೋಷಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.

ಈ ನಾಡನ್ನು, ನಾಡಿನ ವೈವಿಧ್ಯತೆ ಅರ್ಥ ಮಾಡಿಕೊಂಡವರಿಗೆ ಸಂವಿಧಾನದ ಮಹತ್ವ ತಿಳಿಯುತ್ತದೆ, ಪ್ರಸ್ತುತ ಕಾಲಮಾನದಲ್ಲಿ ವಸ್ತು ಸ್ಥಿತಿಯಲ್ಲಿ ಎಲ್ಲಿ ತಲುಪಿದ್ದೇವೆ ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ, ಬಹುತ್ವ ಭಾರತವೆಂದು ಅರ್ಥ ಮಾಡಿಕೊಂಡರೆ ಅಭಿವೃದ್ಧಿ ಸಾಧ್ಯ, ಪರೋಪಕಾರಿ ಮನೋಭಾವ ಅರಳಬೇಕು, ಕಾನೂನು ರೂಪಿಸುವಾಗ, ಅಭಿವೃದ್ಧಿ ಕಾರ್ಯ ನಡೆಯುವಾಗ, ಅಳವಡಿಸಿದ ಯೋಜನೆಗಳ ಗುಣಮಟ್ಟ ಪ್ರಶ್ನಿಸುವಾಗ, ಜನರ ಧ್ವನಿಯಾಗಿ ಮಾಧ್ಯಮ ತನ್ನ ಕರ್ತವ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸುವಾಗ ಸಮಾಜದ ಆಶಯಗಳನ್ನು ಅರಿಯಬೇಕು ಎಂದರು.

ಧ್ವಜಾರೋಹಣ ನೆರವೇರಿಸಿದ ತುಮಕೂರು ವಿಶ್ವ ವಿದ್ಯಾಲಯದ ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು ಮಾತನಾಡಿ, ಗಣರಾಜ್ಯೋತ್ಸವ ಮತ್ತು ಸ್ವಾತಂತ್ರ್ಯೋತ್ಸವ ದೇಶದ ಹಬ್ಬಗಳು, ಸಮಾನತೆ, ಭ್ರಾತೃತ್ವ, ಸಾಮಾಜಿಕ ನ್ಯಾಯ, ಆರ್ಥಿಕ ನ್ಯಾಯ ಕೇವಲ ಉಚ್ಚಾರಣೆ ಆಗಬಾರದು, ಆಚರಣೆಯಾಗಬೇಕು, ಉನ್ನತ ಶಿಕ್ಷಣಕ್ಕೆ ಸರ್ಕಾರ ವಿಶ್ವ ವಿದ್ಯಾಲಯಗಳ ಸವಲತ್ತುಗಳನ್ನು ಇನ್ನಷ್ಟು ಬಲಿಷ್ಠಗೊಳಿಸಬೇಕು ಎಂದು ಹೇಳಿದರು.
ತುಮಕೂರು ವಿಶ್ವ ವಿದ್ಯಾಲಯ ಪರೀಕ್ಷಾಂಗ ಕುಲಸಚಿವ ಡಾ.ಪ್ರಸನ್ನಕುಮಾರ್.ಕೆ, ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಸಂಯೋಜಕ ಡಾ.ಎ.ಎಂ.ಮಂಜುನಾಥ್, ಸಹಾಯಕ ಪ್ರಾಧ್ಯಾಪಕ ಡಾ.ಸಿಬಂತಿ ಪದ್ಮನಾಭ.ಕೆ.ವಿ. ಭಾಗವಹಿಸಿದ್ದರು.

Get real time updates directly on you device, subscribe now.

Comments are closed.

error: Content is protected !!